ಬೆಂಗಳೂರು ಹೆಬ್ಬಾಳ ಸುರಂಗ ರಸ್ತೆಗೆ ಹಣಕಾಸು ಇಲಾಖೆ Red ಸಿಗ್ನಲ್: ಯೋಜನೆ ಸದ್ಯಕ್ಕೆ ಬೇಡ ಎಂದ ಇಲಾಖೆ..!

ಹಿಂದೆ ವ್ಯಕ್ತಪಡಿಸಿದ್ದ ಆಕ್ಷೇಪಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಸ್ತಾವನೆಯಲ್ಲಿ ಪ್ರಯತ್ನಿಸಲಾಗಿದೆ ಎಂದು ಹಣಕಾಸು ಇಲಾಖೆ ಗಮನಿಸಿದ್ದರೂ, ಈ ಸುರಂಗ ರಸ್ತೆಯನ್ನು ಪ್ರಸ್ತಾವಿತ ಉತ್ತರ-ದಕ್ಷಿಣ ಸುರಂಗ ಮಾರ್ಗದೊಂದಿಗೆ ಹೇಗೆ ಸಂಯೋಜಿಸಲಾಗುತ್ತದೆ.
File photo
ಸಂಗ್ರಹ ಚಿತ್ರ
Updated on: 

ಬೆಂಗಳೂರು: ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲು ರಾಜ್ಯ ಸರ್ಕಾರ ಮುಂದಿಟ್ಟಿದ್ದ ಮಹತ್ವಾಕಾಂಕ್ಷಿ ಹೆಬ್ಬಾಳ ಕಿರು ಸುರಂಗ ರಸ್ತೆ (Hebbal Short Tunnel Road) ಯೋಜನೆಗೆ ಈಗ ರಾಜ್ಯ ಹಣಕಾಸು ಇಲಾಖೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಎಸ್ಟೀಮ್ ಮಾಲ್‌ನಿಂದ ಪಶುವೈದ್ಯಕೀಯ ಕಾಲೇಜಿನವರೆಗೆ ನಿರ್ಮಿಸಲು ಉದ್ದೇಶಿಸಿರುವ 2.2 ಕಿ.ಮೀ ಉದ್ದದ ಹೆಬ್ಬಾಳ ಅಲ್ಪ ಸುರಂಗ ರಸ್ತೆ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಹಣಕಾಸು ಇಲಾಖೆ ಹಲವು ಆರ್ಥಿಕ, ಗುತ್ತಿಗೆ ಮತ್ತು ಸಂಚಾರ ಯೋಜನೆಗಳ ಕುರಿತ ಆತಂಕಗಳನ್ನು ವ್ಯಕ್ತಪಡಿಸಿದ್ದು, ಸಮಗ್ರ ಸಂಚಾರ ಯೋಜನೆಯ ಆಧಾರದ ಮೇಲೆ ಹೊಸ ಪ್ರಸ್ತಾವನೆ ಸಲ್ಲಿಸುವವರೆಗೆ ಯೋಜನೆಯನ್ನು ಮುಂದೂಡುವಂತೆ ಇಲಾಖೆ ಶಿಫಾರಸು ಮಾಡಿದೆ.

ಲಭ್ಯವಾದ ದಾಖಲೆಯ ಪ್ರಕಾರ, 2025ರಲ್ಲಿ ಪರಿಷ್ಕೃತ ಕರಡು ಸಚಿವ ಸಂಪುಟ ಟಿಪ್ಪಣಿಯನ್ನು ಪರಿಶೀಲಿಸಿದ ಬಳಿಕ ಹಣಕಾಸು ಇಲಾಖೆ ಹಲವು ಆಕ್ಷೇಪಗಳನ್ನು ಎತ್ತಿತ್ತು. ಆದರೆ, ಈ ಆತಂಕಗಳನ್ನು ಪರಿಗಣಿಸದೆಯೇ ಸಚಿವ ಸಂಪುಟ ಯೋಜನೆಗೆ ಮುಂದುವರಿದಿದ್ದು, 2025ರ ಡಿಸೆಂಬರ್ 8ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು (BDA) ಯೋಜನೆಯ ಅನುಷ್ಠಾನ ಸಂಸ್ಥೆಯನ್ನಾಗಿ ನೇಮಿಸಿ ಸರ್ಕಾರದ ಆದೇಶ ಹೊರಡಿಸಿತ್ತು.

ಹಿಂದೆ ವ್ಯಕ್ತಪಡಿಸಿದ್ದ ಆಕ್ಷೇಪಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಸ್ತಾವನೆಯಲ್ಲಿ ಪ್ರಯತ್ನಿಸಲಾಗಿದೆ ಎಂದು ಹಣಕಾಸು ಇಲಾಖೆ ಗಮನಿಸಿದ್ದರೂ, ಈ ಸುರಂಗ ರಸ್ತೆಯನ್ನು ಪ್ರಸ್ತಾವಿತ ಉತ್ತರ-ದಕ್ಷಿಣ ಸುರಂಗ ಮಾರ್ಗದೊಂದಿಗೆ ಹೇಗೆ ಸಂಯೋಜಿಸಲಾಗುತ್ತದೆ. ಬಿಡಿಎ ಮೇಲೆ ಎಷ್ಟು ಆರ್ಥಿಕ ಹೊರೆ ಬೀಳಲಿದೆ ಹಾಗೂ ಪರ್ಯಾಯ ಸಂಚಾರ ವ್ಯವಸ್ಥೆಗಳ ಸ್ವತಂತ್ರ ಮೌಲ್ಯಮಾಪನ ಏಕೆ ನಡೆದಿಲ್ಲ ಎಂಬ ಪ್ರಶ್ನೆಗಳನ್ನು ಎತ್ತಿದೆ.

ಉತ್ತರ-ದಕ್ಷಿಣ ಸುರಂಗ ಮಾರ್ಗಕ್ಕಾಗಿ ಬಿ-ಸ್ಮೈಲ್ (B-SMILE) ಸಂಸ್ಥೆ ನಡೆಸುತ್ತಿರುವ ಟೆಂಡರ್‌ನಲ್ಲಿ ಬದಲಾವಣೆ ಮಾಡುವ ಪ್ರಸ್ತಾವನೆ ಹಣಕಾಸು ಇಲಾಖೆಯ ಪ್ರಮುಖ ಆಕ್ಷೇಪಗಳಲ್ಲಿ ಒಂದಾಗಿತ್ತು. ಅಲ್ಪ ಸುರಂಗ ರಸ್ತೆಗೆ ಅವಕಾಶ ಕಲ್ಪಿಸಲು ಮೆಹ್ಕ್ರಿ ವೃತ್ತದಲ್ಲಿನ ಪ್ರಮುಖ ರ‍್ಯಾಂಪ್‌ಗಳ ವಿನ್ಯಾಸ ಬದಲಿಸುವುದು ಅಥವಾ ಅವುಗಳನ್ನು ಕೈಬಿಡುವುದು ಸೇರಿದಂತೆ ಈಗಿರುವ ಟೆಂಡರ್‌ಗೆ ಪೂರಕ ತಿದ್ದುಪಡಿ ತರಲು ಉದ್ದೇಶಿಸಲಾಗಿತ್ತು.

ಟೆಂಡರ್ ಪ್ರಕಟಿಸಿದ ಬಳಿಕ ಅದರ ವ್ಯಾಪ್ತಿಯಲ್ಲಿ ಬದಲಾವಣೆ ಮಾಡಿದರೆ ಯೋಜನೆಯು ಕಾನೂನು ಸವಾಲುಗಳನ್ನು ಎದುರಿಸಬಹುದು, ಪರಿಹಾರ ಮೊತ್ತದ ಬೇಡಿಕೆಗಳು ಎದುರಾಗಬಹುದು ಹಾಗೂ ಮೂಲ ಯೋಜನೆಯ ವಿನ್ಯಾಸವನ್ನು ಆಧರಿಸಿ ಬಿಡ್ ಸಲ್ಲಿಸಿದ್ದ ಅಂತರರಾಷ್ಟ್ರೀಯ ಗುತ್ತಿಗೆದಾರರ ಭಾಗವಹಿಸುವಿಕೆ ಕಡಿಮೆಯಾಗಬಹುದು ಎಂದು ಇಲಾಖೆ ಎಚ್ಚರಿಸಿತ್ತು.

File photo
ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ಉತ್ತರ-ದಕ್ಷಿಣ ಸುರಂಗ ಮಾರ್ಗದ ಪರಿಷ್ಕೃತ ಉಪಯುಕ್ತತೆ ಮತ್ತು ಆರ್ಥಿಕ ಮಾದರಿಯನ್ನು ಸಮಗ್ರವಾಗಿ ಮರುಪರಿಶೀಲಿಸದೆ, ಕೇವಲ ಕಾರ್ಯವಿಧಾನದ ತಿದ್ದುಪಡಿಯ ಮೂಲಕ ಬದಲಾವಣೆಗಳನ್ನು ಸಮರ್ಥಿಸಿರುವುದನ್ನೂ ಇಲಾಖೆ ಪ್ರಶ್ನಿಸಿತ್ತು.

2,215 ಕೋಟಿ ರೂ. ವೆಚ್ಚಕ್ಕೆ BDA ಆಂತರಿಕ ಸಂಪನ್ಮೂಲ ಬಳಕೆ

2,215 ಕೋಟಿ ರೂ. ವೆಚ್ಚದ ಯೋಜನೆಗೆ ಸಂಪೂರ್ಣವಾಗಿ ಬಿಡಿಎಯ ಆಂತರಿಕ ಸಂಪನ್ಮೂಲಗಳಿಂದ ಹಣ ಹೊಂದಿಸುವ ನಿರ್ಧಾರದ ಬಗ್ಗೆಯೂ ಹಣಕಾಸು ಇಲಾಖೆ ಕಳವಳ ವ್ಯಕ್ತಪಡಿಸಿತ್ತು.

2026ರ ಮಾರ್ಚ್ ವೇಳೆಗೆ ಆಸ್ತಿ ನಗದೀಕರಣದ ಮೂಲಕ 10,000 ಕೋಟಿ ರೂ. ಆದಾಯ ಸಂಗ್ರಹಿಸುವ ನಿರೀಕ್ಷೆಯನ್ನು ಈ ಪ್ರಸ್ತಾವನೆ ಆಧರಿಸಿತ್ತು. ಇದರಲ್ಲಿ ಇ-ಹರಾಜು ಹಾಗೂ ಡಾ. ಕೆ. ಶಿವರಾಮ ಕಾರಂತ ಬಡಾವಣೆಗೆ ಸಂಬಂಧಿಸಿದ ಠೇವಣಿಗಳೂ ಸೇರಿವೆ ಎಂದು ವರದಿಯಾಗಿದೆ.

ಆದರೆ, ಮಾರುಕಟ್ಟೆಯ ಏರಿಳಿತಗಳು ಹಾಗೂ ಕಾನೂನು ಅಥವಾ ನಿಯಂತ್ರಣಾತ್ಮಕ ವಿಳಂಬಗಳಿಂದ ಈ ಆದಾಯದ ನಿರೀಕ್ಷೆಗಳಿಗೆ ಧಕ್ಕೆಯಾಗಬಹುದು ಎಂದು ಇಲಾಖೆ ಎಚ್ಚರಿಸಿತ್ತು.

ನಿರೀಕ್ಷಿತ ಒಂದು ಬಾರಿಯ ಆದಾಯದ ಶೇಕಡಾ 20ಕ್ಕಿಂತ ಹೆಚ್ಚಿನ ಮೊತ್ತವನ್ನು ಸುರಂಗ ರಸ್ತೆ ಯೋಜನೆಗೆ ಬಳಸುವುದರಿಂದ ಬಿಡಿಎಯ ಮೂಲ ಜವಾಬ್ದಾರಿಗಳ ಮೇಲೆ ಪರಿಣಾಮ ಬೀರಬಹುದು ಎಂದೂ ತಿಳಿಸಿತ್ತು.

ಬಡಾವಣೆಗಳ ಅಭಿವೃದ್ಧಿ, ನೀರು ಪೂರೈಕೆ, ಒಳಚರಂಡಿ ವ್ಯವಸ್ಥೆ ಮತ್ತು ಉದ್ಯಾನವನಗಳಂತಹ ಮೂಲಸೌಕರ್ಯಗಳನ್ನು ಕಲ್ಪಿಸುವ ಕಾರ್ಯಗಳಿಗೆ ಹಣಕಾಸಿನ ಕೊರತೆ ಉಂಟಾಗುವ ಸಾಧ್ಯತೆಯಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿತ್ತು.

ಸಮಗ್ರ ಸಂಚಾರ ಯೋಜನೆ ಇಲ್ಲವೆಂಬ ಆಕ್ಷೇಪ

ಸಂಚಾರ ಯೋಜನೆಗೆ ಸಂಬಂಧಿಸಿದಂತೆ ಸಮಗ್ರ ಕಾರ್ಯಸಾಧ್ಯತಾ ವರದಿ ಅಥವಾ ಹೆಸರಾಂತ ತಜ್ಞರಿಂದ ಸಿದ್ಧಪಡಿಸಲಾದ ಸ್ವತಂತ್ರ ವಿವರವಾದ ಯೋಜನಾ ವರದಿ (DPR) ಇಲ್ಲದಿರುವುದನ್ನೂ ಹಣಕಾಸು ಇಲಾಖೆ ಪ್ರಶ್ನಿಸಿತ್ತು. ಉತ್ತರ-ದಕ್ಷಿಣ ಸುರಂಗ ಮಾರ್ಗವನ್ನು ಅನುಷ್ಠಾನಗೊಳಿಸುತ್ತಿರುವ ಬಿ-ಸ್ಮೈಲ್ ಸಂಸ್ಥೆಯೇ ಸಿದ್ಧಪಡಿಸಿದ ಡಿಪಿಆರ್ ಅನ್ನು ಅವಲಂಬಿಸಿರುವುದರ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿತ್ತು.

ಈ ಪ್ರಸ್ತಾವನೆಯು ಮುಖ್ಯವಾಗಿ ಖಾಸಗಿ ವಾಹನಗಳ ಸಂಚಾರಕ್ಕೆ ಆದ್ಯತೆ ನೀಡಿದ್ದು, ಮೆಟ್ರೋ ಎರಡನೇ ಹಂತದ ಬಿ (ವಿಮಾನ ನಿಲ್ದಾಣ ಮಾರ್ಗ), ಉಪನಗರ ರೈಲು ಅಥವಾ ಇತರ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳೊಂದಿಗೆ ಯೋಜನೆಯನ್ನು ಹೇಗೆ ಸಂಯೋಜಿಸಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ ಎಂದು ಇಲಾಖೆ ಹೇಳಿತ್ತು.

ಹೀಗಾಗಿ, ಸಮಗ್ರ ಸಂಚಾರ ಯೋಜನೆಯ ಆಧಾರದ ಮೇಲೆ ಪರಿಷ್ಕೃತ ಪ್ರಸ್ತಾವನೆ ಸಿದ್ಧಪಡಿಸುವ ಅಗತ್ಯವನ್ನು ಹಣಕಾಸು ಇಲಾಖೆ ಒತ್ತಿ ಹೇಳಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com