ಬೆಂಗಳೂರಿಗರಿಗೆ ಬಿಗ್ ಶಾಕ್: ಮುಕ್ತ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ವಿದ್ಯುತ್ ಖರೀದಿ; ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ BESCOM..!

ಸೆಪ್ಟೆಂಬರ್ ತಿಂಗಳಿನಲ್ಲಿ ಉಂಟಾದ ಅತಿಯಾದ ವಿದ್ಯುತ್ ಬೇಡಿಕೆಯನ್ನು ಸರಿದೂಗಿಸಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮುಕ್ತ ಮಾರುಕಟ್ಟೆಯಿಂದ ದುಬಾರಿ ದರಕ್ಕೆ ವಿದ್ಯುತ್ ಖರೀದಿಸಿದೆ.
File photo
ಸಂಗ್ರಹ ಚಿತ್ರ
Updated on: 

ಬೆಂಗಳೂರು: ಸಿಲಿಕಾನ್ ಸಿಟಿ ಜನತೆಗೆ ಇಂಧನ ಇಲಾಖೆ ಬಿಗ್ ಶಾಕ್ ನೀಡಿದೆ. ಮುಂಬರುವ ಮೂರು ತಿಂಗಳುಗಳ ಕಾಲ ವಿದ್ಯುತ್ ದರ ಹೆಚ್ಚಳವಾಗಲಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿಯಾಗಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಉಂಟಾದ ಅತಿಯಾದ ವಿದ್ಯುತ್ ಬೇಡಿಕೆಯನ್ನು ಸರಿದೂಗಿಸಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಮುಕ್ತ ಮಾರುಕಟ್ಟೆಯಿಂದ ದುಬಾರಿ ದರಕ್ಕೆ ವಿದ್ಯುತ್ ಖರೀದಿಸಿದೆ. ಈ ನಷ್ಟ ಮತ್ತು ವೆಚ್ಚವನ್ನು ಸರಿದೂಗಿಸಲು ಇಂಧನ ಇಲಾಖೆಯು ಹೆಚ್ಚುವರಿ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಲು ನಿರ್ಧರಿಸಿದೆ.

ಇಂಧನ ಖರೀದಿ ಬೆಲೆ ಹೊಂದಾಣಿಕೆ ಶುಲ್ಕ (ಎಫ್‌ಪಿಪಿಸಿಎ) ಹೆಚ್ಚಳ ದೊಡ್ಡ ಮೊತ್ತದ್ದಲ್ಲ. ಪ್ರತಿ ಯೂನಿಟ್‌ಗೆ ಸುಮಾರು 0.5 ಪೈಸೆಯಷ್ಟು ಶುಲ್ಕ ವಿಧಿಸಲಾಗುತ್ತಿದ್ದು, ಇದು ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗಿನ ಅವಧಿಗೆ ಅನ್ವಯಿಸುತ್ತದೆ ಎಂದು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತದ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕ ಎನ್‌. ಶಿವಶಂಕರ ತಿಳಿಸಿದ್ದಾರೆ.

ಈ ಶುಲ್ಕವನ್ನು ವಿದ್ಯುತ್‌ ಬಿಲ್‌ನಲ್ಲಿ ಪ್ರತ್ಯೇಕ ಕಾಲಂನಲ್ಲಿ ನಮೂದಿಸಲಾಗಿದ್ದು, ಗ್ರಾಹಕರು ಅದನ್ನು ಪರಿಶೀಲಿಸಬಹುದು ಎಂದಿದ್ದಾರೆ. ಸೆಪ್ಟೆಂಬರ್‌ನಲ್ಲಿ ವಿದ್ಯುತ್‌ ಖರೀದಿ ವೆಚ್ಚ ಹೆಚ್ಚಾಗಿದ್ದರಿಂದ ಈ ಶುಲ್ಕ ವಿಧಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಸಾಮಾನ್ಯವಾಗಿ ಪ್ರತಿ ಯೂನಿಟ್‌ಗೆ 6ರಿಂದ 6.15 ರೂಪಾಯಿ ವೆಚ್ಚದಲ್ಲಿ ವಿದ್ಯುತ್‌ ಖರೀದಿಸಲಾಗುತ್ತದೆ. ಆದರೆ, ದೇಶಾದ್ಯಂತ ವಿದ್ಯುತ್‌ ಬೇಡಿಕೆ ಹೆಚ್ಚಳದಿಂದ ಉಂಟಾದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮುಕ್ತ ಮಾರುಕಟ್ಟೆಯಿಂದ ಪ್ರತಿ ಯೂನಿಟ್‌ಗೆ 10 ರೂಪಾಯಿ ನೀಡಿ ವಿದ್ಯುತ್‌ ಖರೀದಿಸಬೇಕಾಯಿತು. ಈ ಹೆಚ್ಚುವರಿ ವೆಚ್ಚವನ್ನು ಈಗ ಹಂತ ಹಂತವಾಗಿ ಗ್ರಾಹಕರಿಂದ ವಸೂಲಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ, ಹೆಚ್ಚುತ್ತಿರುವ ವಿದ್ಯುತ್‌ ಬೇಡಿಕೆಯನ್ನು ನಿರ್ವಹಿಸಲು ಇಂಧನ ಇಲಾಖೆಯು ಸಾರ್ವಜನಿಕರಿಗೆ ಸಲಹಾವಳಿಯೊಂದನ್ನು ಹೊರಡಿಸಲು ಮುಂದಾಗಿದೆ. ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ವಿದ್ಯುತ್‌ ಬಳಕೆ ಗರಿಷ್ಠ ಮಟ್ಟ ತಲುಪುತ್ತಿರುವುದರಿಂದ ಬೇಡಿಕೆಯನ್ನು ದಿನದ ಇತರ ಸಮಯಗಳಿಗೆ ಹಂಚಿಕೆ ಮಾಡುವುದು ಅಗತ್ಯವಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಾಷಿಂಗ್‌ ಮಷಿನ್‌, ಹವಾನಿಯಂತ್ರಕ ಸೇರಿದಂತೆ ಹೆಚ್ಚಿನ ವಿದ್ಯುತ್‌ ಬಳಸುವ ಉಪಕರಣಗಳನ್ನು ಗರಿಷ್ಠ ಬೇಡಿಕೆಯ ಸಮಯದ ಬದಲು ಬೇಡಿಕೆ ಕಡಿಮೆ ಇರುವ ಸಮಯದಲ್ಲಿ ಬಳಸುವಂತೆ ಜನರಿಗೆ ಸಲಹೆ ನೀಡಲಾಗುತ್ತದೆ. ಇದರಿಂದ ದಿನವಿಡೀ ವಿದ್ಯುತ್‌ ಬಳಕೆಯನ್ನು ಸಮಾನವಾಗಿ ಹಂಚಿಕೆ ಮಾಡಲು ಸಾಧ್ಯವಾಗುತ್ತದೆ.

File photo
ಗೃಹಜ್ಯೋತಿ ಫಲಾನುಭವಿಗಳಿಗೆ ಶಾಕಿಂಗ್ ನ್ಯೂಸ್; ಜೀರೋ ಬಿಲ್ ಬದಲು ಬಂತು ₹5 ಸಾವಿರ ಬಿಲ್! ಬೆಸ್ಕಾಂ ವಿರುದ್ಧ ಆಕ್ರೋಶ

ಪರಿಸ್ಥಿತಿ ಸುಧಾರಿಸುವವರೆಗೆ ಬೇಸಿಗೆಯಲ್ಲಿ ಹೆಚ್ಚು ನೀರು ಅಗತ್ಯವಿರುವ ಬೆಳೆಗಳನ್ನು ಬೆಳೆಯದಂತೆ ರೈತರಿಗೆ ಮನವಿ ಮಾಡುವ ಕುರಿತು ಕೃಷಿ ಇಲಾಖೆಯೊಂದಿಗೂ ಚರ್ಚೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

2026-27ನೇ ಸಾಲಿನಲ್ಲಿ ಸೆಪ್ಟೆಂಬರ್‌ 11ರಂದು ಗರಿಷ್ಠ ವಿದ್ಯುತ್‌ ಬೇಡಿಕೆ 20 ಗಿಗಾವ್ಯಾಟ್‌ (20,000 ಮೆಗಾವ್ಯಾಟ್‌) ದಾಖಲಾಗಿದೆ. ಕಳೆದ ವರ್ಷ ಬೇಸಿಗೆಯ ಅವಧಿಯಲ್ಲಿ ಗರಿಷ್ಠ ಬೇಡಿಕೆ 18,650 ಮೆಗಾವ್ಯಾಟ್‌ ಇತ್ತು.

20,000 ಮೆಗಾವ್ಯಾಟ್‌ ಗರಿಷ್ಠ ಬೇಡಿಕೆಯ ಜೊತೆಗೆ ಹೆಚ್ಚುವರಿಯಾಗಿ 2,000 ಮೆಗಾವ್ಯಾಟ್‌ ವಿದ್ಯುತ್‌ ಬೇಡಿಕೆಯನ್ನೂ ನಿರ್ವಹಿಸಲು ಸಾಧ್ಯವಿದೆ ಎಂದು ಶಿವಶಂಕರ ತಿಳಿಸಿದ್ದಾರೆ. ಆದರೆ, ಅದಕ್ಕಿಂತ ಹೆಚ್ಚಿನ ಬೇಡಿಕೆ ಎದುರಾದರೆ ಪರಿಸ್ಥಿತಿ ಕಷ್ಟಕರವಾಗಬಹುದು. ಆಗ ವಿದ್ಯುತ್‌ ನಿರ್ವಹಣೆ ಲಭ್ಯತೆಯನ್ನು ಅವಲಂಬಿಸಿರುತ್ತದೆ ಎಂದು ಹೇಳಿದ್ದಾರೆ.

ಅಕ್ಟೋಬರ್‌ನಲ್ಲಿಯೂ ವಿದ್ಯುತ್‌ ಬಳಕೆ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ದೈನಂದಿನ ಬಳಕೆ 340ರಿಂದ 360 ಮಿಲಿಯನ್‌ ಯೂನಿಟ್‌ಗಳ (ಎಂಯು) ನಡುವೆ ದಾಖಲಾಗಿದೆ. ಅಕ್ಟೋಬರ್‌ 17ರ ಶನಿವಾರ 339 ಎಂಯು ಹಾಗೂ ಅಕ್ಟೋಬರ್‌ 16ರ ಶುಕ್ರವಾರ 362 ಎಂಯು ವಿದ್ಯುತ್‌ ಬಳಕೆಯಾಗಿತ್ತು. ಅಕ್ಟೋಬರ್‌ 18ರ ಭಾನುವಾರ ಬಳಕೆ ಇಳಿಕೆಯಾಗಿದ್ದು, 282 ಎಂಯು ದಾಖಲಾಗಿದೆ.

ಇಂಧನ ಇಲಾಖೆಯ ಅಂಕಿಅಂಶಗಳ ಪ್ರಕಾರ, ರಾಜ್ಯದ ಒಟ್ಟು 1.65 ಕೋಟಿ ಫಲಾನುಭವಿಗಳ ಪೈಕಿ ಸುಮಾರು 1.3 ಲಕ್ಷ ಗ್ರಾಹಕರು ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ಯೋಜನೆಯ ನೋಂದಣಿ ಪರಿಶೀಲನೆ ಅಕ್ಟೋಬರ್‌ 31ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಸರ್ಕಾರದ ಮತ್ತೊಬ್ಬ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಇನ್ನೂ ನೋಂದಣಿ ಪೂರ್ಣಗೊಳಿಸದವರು ಹಾಗೂ ಯೋಜನೆಯಿಂದ ಹೊರಗುಳಿದಿರುವವರು, ಹೊಸ ಗ್ರಾಹಕರ ನೋಂದಣಿ ಆರಂಭವಾದ ಬಳಿಕ ಯೋಜನೆಗೆ ಸೇರ್ಪಡೆಯಾಗಲು ಸಾಧ್ಯವಾಗುವುದಿಲ್ಲ. ಕರ್ನಾಟಕದ ಮತದಾರರಲ್ಲದವರು ಈ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ. ಈ ಕಾರಣದಿಂದಲೇ ಮತದಾರರ ಗುರುತಿನ ಚೀಟಿಯ ವಿವರಗಳನ್ನು ಕೇಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com