ಕಲೆಗೆ ಧರ್ಮದ ಬೇಲಿ ಇಲ್ಲ: 6 ತಿಂಗಳು ವ್ರತ ಆಚರಿಸಿ, ಕದ್ರಿ ದೇವಸ್ಥಾನದ ರಂಗಸ್ಥಳದಲ್ಲಿ ಮಹಿಷಮರ್ದಿನಿಯಾದ ಮುಸ್ಲಿಂ ಮಹಿಳೆ ಅರ್ಷಿಯಾ ಖಾನ್‌..!

ಈ ನಡುವೆ ಈ ಪಾತ್ರಕ್ಕಾಗಿ ಕಳೆದ ಆರು ತಿಂಗಳಿಂದ ಸಿದ್ಧತೆ ನಡೆಸಿದ್ದಾಗಿ ಅರ್ಷಿಯಾ ತಿಳಿಸಿದ್ದಾರೆ. ಉಪವಾಸ ಆಚರಿಸುವುದು, ಸಾತ್ವಿಕ ಆಹಾರ ಸೇವಿಸುವುದು, ನಿಯಮಿತವಾಗಿ ದೇವಸ್ಥಾನಗಳಿಗೆ ಭೇಟಿ ನೀಡುವುದು ಹಾಗೂ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು.
Arshiya Khan
ಅರ್ಷಿಯಾ ಖಾನ್
Updated on: 

ಮಂಗಳೂರು: ಕೋಮು ಸೌಹಾರ್ದತೆ ಮತ್ತು ಸಾಂಸ್ಕೃತಿಕ ಏಕತೆಗೆ ಸಾಕ್ಷಿಯಾಗುವಂತಹ ಅಪರೂಪದ ಘಟನೆಯೊಂದು ಕರಾವಳಿ ಜಿಲ್ಲೆಯಲ್ಲಿ ನಡೆದಿದೆ.

ಮುಸ್ಲಿಂ ಸಮುದಾಯಕ್ಕೆ ಸೇರಿದ ಅರ್ಷಿಯಾ ಖಾನ್ (ರಂಗನಾಮ: ತನು ವಿಟ್ಲ) ಎಂಬ 33 ವರ್ಷದ ಮಹಿಳೆಯೊಬ್ಬರು, ಮಂಗಳೂರಿನ ಐತಿಹಾಸಿಕ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ರಂಗಸ್ಥಳದಲ್ಲಿ ದೇವತೆ ಮಹಿಷಮರ್ದಿನಿಯ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಎಲ್ಲರ ಗನ ಸೆಳೆದಿದ್ದಾರೆ.

ಬಂಟ್ವಾಳ ತಾಲೂಕಿನ ವಿಟ್ಲದ ಅರ್ಷಿಯಾ ಖಾನ್ (33), ‘ತನು ವಿಟ್ಲ’ ಎಂಬ ಹೆಸರಿನಿಂದ ಪರಿಚಿತರಾಗಿದ್ದು, ದೇವಸ್ಥಾನದ ರಂಗಸ್ಥಳದಲ್ಲಿ ದೇವಿಯ ರೂಪದಲ್ಲಿ ಪ್ರವೇಶಿಸಿದರು.

ದಸರಾ ಸಂಭ್ರಮದ ಅಂಗವಾಗಿ ಕದಳಿಯ ಕಲಾ ಕೇಂದ್ರ ಆಯೋಜಿಸಿದ್ದ ಹತ್ತು ದಿನಗಳ ಯಕ್ಷಗಾನ ಉತ್ಸವಕ್ಕೆ ಈ ಪ್ರದರ್ಶನ ತೆರೆ ಎಳೆಯಿತು.

ಈ ನಡುವೆ ಈ ಪಾತ್ರಕ್ಕಾಗಿ ಕಳೆದ ಆರು ತಿಂಗಳಿಂದ ಸಿದ್ಧತೆ ನಡೆಸಿದ್ದಾಗಿ ಅರ್ಷಿಯಾ ತಿಳಿಸಿದ್ದಾರೆ. ಉಪವಾಸ ಆಚರಿಸುವುದು, ಸಾತ್ವಿಕ ಆಹಾರ ಸೇವಿಸುವುದು, ನಿಯಮಿತವಾಗಿ ದೇವಸ್ಥಾನಗಳಿಗೆ ಭೇಟಿ ನೀಡುವುದು ಹಾಗೂ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು.

ತಮ್ಮ ಊರಿನ ಸಮೀಪ ನಡೆದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಪ್ರಸಂಗದಲ್ಲಿ ಮಹಿಷಾಸುರನ ಪಾತ್ರದ ಪ್ರದರ್ಶನವನ್ನು ನೋಡಿದಾಗಿನಿಂದ ಅರ್ಷಿಯಾ ಅವರಿಗೆ ಯಕ್ಷಗಾನದ ಬಗ್ಗೆ ಆಸಕ್ತಿ ಮೂಡಿತ್ತು.

Arshiya Khan
ವೈಭವದ ಜಂಬೂ ಸವಾರಿ, ಪಂಜಿನ ಕವಾಯತು, ಸಿಡಿಮದ್ದು ಪ್ರದರ್ಶನ...: ಮೈಸೂರು ದಸರಾ 2026ಕ್ಕೆ ವರ್ಣರಂಜಿತ ತೆರೆ

ಯಕ್ಷಗಾನದ ಕಲಾಪ್ರಕಾರ, ಚೆಂಡೆಯ ಗಂಭೀರ ನಾದ ಹಾಗೂ ಪಾತ್ರಗಳ ರಂಗಪ್ರವೇಶ ಅವರನ್ನು ಆಕರ್ಷಿಸಿದ್ದವು. ಈ ಆಕರ್ಷಣೆಯೇ ಯಕ್ಷಗಾನ ಕಲಿಯಲು ಪ್ರೇರಣೆ ನೀಡಿತು.

ಅರ್ಷಿಯಾ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದಾರೆ. ಮಂಗಳೂರಿನ ಕದಳಿಯ ಕಲಾ ಕೇಂದ್ರದಲ್ಲಿ ರಮೇಶ್ ಭಟ್ ಕದ್ರಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಪ್ರಮುಖ ಪಾತ್ರಗಳನ್ನು ನಿರ್ವಹಿಸಲು ಅವರು ಅರ್ಷಿಯಾ ಅವರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಅವಕಾಶಗಳನ್ನೂ ಕಲ್ಪಿಸಿದ್ದಾರೆ.

ಅರ್ಷಿಯಾ ಅವರಿಗೆ ವಿಶೇಷವಾಗಿ ಅಸುರ ಪಾತ್ರಗಳನ್ನು ನಿರ್ವಹಿಸುವುದರಲ್ಲಿ ಆಸಕ್ತಿ ಇದೆ. ಅದರಲ್ಲೂ ರಂಗಸ್ಥಳದಲ್ಲಿ ಅಬ್ಬರದ ಪ್ರವೇಶ ನೀಡುವುದು ಅವರಿಗೆ ಹೆಚ್ಚು ಇಷ್ಟ. ವರ್ಷಗಳ ಅವಧಿಯಲ್ಲಿ ‘ಶ್ರೀ ದೇವಿ ಮಹಾತ್ಮೆ’ ಪ್ರಸಂಗದಲ್ಲಿ ನಿಶುಂಭಾಸುರ, ರಕ್ತಬೀಜಾಸುರ ಹಾಗೂ ಮಹಿಷಾಸುರ ಸೇರಿದಂತೆ ಹಲವು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ದಕ್ಷಿಣ ಕನ್ನಡ, ಕಾರವಾರ ಹಾಗೂ ಉಡುಪಿ ಭಾಗಗಳಲ್ಲಿ ವಿವಿಧ ಯಕ್ಷಗಾನ ತಂಡಗಳೊಂದಿಗೆ ಅರ್ಷಿಯಾ ಪ್ರದರ್ಶನ ನೀಡಿದ್ದಾರೆ. ಆದರೆ, ಮಂಗಳವಾರದ ಪ್ರದರ್ಶನ ಅವರಿಗೆ ಅತ್ಯಂತ ವಿಶೇಷವಾಗಿತ್ತು. ಏಕೆಂದರೆ, ಕದ್ರಿ ದೇವಸ್ಥಾನದಲ್ಲಿ ಮೊದಲ ಬಾರಿಗೆ ಮಹಿಷಮರ್ದಿನಿ ದೇವಿಯ ಪಾತ್ರ ನಿರ್ವಹಿಸುವ ಅವಕಾಶ ಅವರಿಗೆ ದೊರೆತಿತ್ತು.

ಈ ಅನುಭವವನ್ನು ತಮ್ಮ ಕನಸು ನನಸಾದ ಕ್ಷಣ ಎಂದು ಬಣ್ಣಿಸಿದ ಅರ್ಷಿಯಾ, ಯಕ್ಷಗಾನಕ್ಕಾಗಿ ಹಲವು ವರ್ಷಗಳಿಂದ ತಾವು ಪಟ್ಟ ಪರಿಶ್ರಮ ಮತ್ತು ತೋರಿದ ಸಮರ್ಪಣೆಗೆ ಕೊನೆಗೂ ಫಲ ಸಿಕ್ಕಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಕದ್ರಿ ದೇವಸ್ಥಾನದ ರಂಗಸ್ಥಳದಲ್ಲಿ ಪ್ರದರ್ಶನ ನೀಡಿದ್ದು ಅಪಾರ ತೃಪ್ತಿ ತಂದಿದೆ. ಯಕ್ಷಗಾನದಲ್ಲಿ ತಾವು ಸಾಧಿಸಬೇಕೆಂದು ಬಯಸಿದ್ದ ಎಲ್ಲವನ್ನೂ ಸಾಧಿಸಿದ ಅನುಭವವಾಯಿತು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com