ಶಾಂತಿಯುತವಾಗಿ ಹಬ್ಬ ಆಚರಿಸಲು ಜನರಿಗೆ ಪೊಲೀಸ್ ರಕ್ಷಣೆ ಏಕೆ ಬೇಕು?: ಪ್ರಿಯಾಂಕ್ ಖರ್ಗೆ

ಮೈಸೂರಿನ ಟಿ. ನರಸೀಪುರದಲ್ಲಿ ಗಣೇಶ ಪೂಜಾ ಸಮಿತಿಯ ಸದಸ್ಯರು ಪೊಲೀಸರ ಸೂಚನೆಗಳನ್ನು ಪಾಲಿಸುವಂತೆ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ್ದ ಎಚ್ಚರಿಕೆ ಖಂಡಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ ಬಳಿಕ ಪ್ರಿಯಾಂಕ್ ಖರ್ಗೆ ಈ ಹೇಳಿಕೆ ನೀಡಿದ್ದಾರೆ
Priyank Kharge
ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ಹಬ್ಬಗಳ ಆಚರಣೆ ವಿಚಾರದಲ್ಲಿ ಬಿಜೆಪಿ ನಾಯಕರು ಅನಗತ್ಯ ಉದ್ವಿಗ್ನತೆ ಸೃಷ್ಟಿಸುತ್ತಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು. ಶಾಂತಿಯುತವಾಗಿ ಹಬ್ಬ ಆಚರಿಸಲು ಜನರಿಗೆ ಪೊಲೀಸ್ ರಕ್ಷಣೆ ಏಕೆ ಬೇಕು ಎಂದು ಅವರು ಪ್ರಶ್ನಿಸಿದರು.

ಮೈಸೂರಿನ ಟಿ. ನರಸೀಪುರದಲ್ಲಿ ಗಣೇಶ ಪೂಜಾ ಸಮಿತಿಯ ಸದಸ್ಯರು ಪೊಲೀಸರ ಸೂಚನೆಗಳನ್ನು ಪಾಲಿಸುವಂತೆ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ್ದ ಎಚ್ಚರಿಕೆ ಖಂಡಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ ಬಳಿಕ ಪ್ರಿಯಾಂಕ್ ಖರ್ಗೆ ಈ ಹೇಳಿಕೆ ನೀಡಿದ್ದಾರೆ. ಸಮುದಾಯಗಳ ನಡುವೆ ಯಾವುದೇ ರೀತಿಯ ಉದ್ವಿಗ್ನತೆ ಉಂಟಾಗದಂತೆ ತಡೆಯುವ ಉದ್ದೇಶದಿಂದ ಪೊಲೀಸ್ ಅಧಿಕಾರಿ ಈ ಸೂಚನೆ ನೀಡಿದ್ದರು ಎನ್ನಲಾಗಿದೆ.

ಬಿಜೆಪಿ ನಾಯಕರು, ಅದರಲ್ಲೂ ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವ ಪ್ರಿಯಾಂಕ್ ಖರ್ಗೆ, ಮುಸ್ಲಿಮರು ಭಾರತದ ಅವಿಭಾಜ್ಯ ಅಂಗ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿರುವುದನ್ನು ಬಿಜೆಪಿ ನಾಯಕರು ಗಮನಿಸಬೇಕು ಎಂದರು.

ಮೋಹನ್ ಭಾಗವತ್ ಅವರ ಮಾತನ್ನು ಬಿಜೆಪಿ ನಾಯಕರು ಕೇಳಬೇಕು. ಮುಸ್ಲಿಮರು ನಮ್ಮ ದೇಶದ ಅವಿಭಾಜ್ಯ ಅಂಗ ಎಂದು ಅವರು ಹೇಳಿದ್ದಾರೆ. ಆದರೆ ಇಲ್ಲಿ ಬಿಜೆಪಿ ನಾಯಕರಿಂದ ಭಿನ್ನವಾದ ನಿಲುವನ್ನು ನಾವು ನೋಡುತ್ತಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಸುದ್ದಿಗಾರರಿಗೆ ತಿಳಿಸಿದರು.

ಸಾಂಪ್ರದಾಯಿಕವಾಗಿ ಒಟ್ಟಾಗಿ ಆಚರಿಸುತ್ತಿದ್ದ ಹಬ್ಬಗಳು ಇದೀಗ ಉದ್ವಿಗ್ನತೆಯ ಮೂಲವಾಗಿ ಏಕೆ ಬದಲಾಗಿವೆ ಎಂದು ಅವರು ಪ್ರಶ್ನಿಸಿದರು.

Priyank Kharge
ಬಿಜೆಪಿ ಆಗ್ರಹಿಸಿದಂತೆ ಇನ್ಸ್​ಪೆಕ್ಟರ್​ ಧನಂಜಯ್​ನನ್ನು ಅಮಾನತು ಮಾಡೋಕ್ಕಾಗಲ್ಲ: ಪ್ರಿಯಾಂಕ್ ಖರ್ಗೆ

ಕ್ರಿಸ್‌ಮಸ್, ಈದ್, ಗಣೇಶೋತ್ಸವ ಸೇರಿದಂತೆ ಇತರ ಹಬ್ಬಗಳನ್ನು ಎಲ್ಲರೂ ಸದಾ ಒಟ್ಟಾಗಿ ಆಚರಿಸುತ್ತಾ ಬಂದಿದ್ದಾರೆ. ಮೆರವಣಿಗೆಗಳು ನಡೆದಿವೆ, ವಿಸರ್ಜನೆಗೂ ಜನರು ತೆರಳಿದ್ದಾರೆ. ಈಗ ಪರಿಸ್ಥಿತಿ ಏಕೆ ಬದಲಾಗಿದೆ, ಶಾಂತಿಯುತವಾಗಿ ನಮ್ಮ ಹಬ್ಬಗಳನ್ನು ಆಚರಿಸಲು ಪೊಲೀಸ್ ರಕ್ಷಣೆ ಏಕೆ ಬೇಕು ಎಂದು ,ಪ್ರಶ್ನಿಸಿದರು.

ಧಾರ್ಮಿಕ ಮೆರವಣಿಗೆಗಳ ಸಂದರ್ಭದಲ್ಲಿ ಜನರು ಪೊಲೀಸರೊಂದಿಗೆ ಸಹಕರಿಸಬೇಕು ಮತ್ತು ಉದ್ವಿಗ್ನತೆ ಸೃಷ್ಟಿಸುವಂತಹ ಯಾವುದೇ ಕ್ರಮಗಳಿಗೆ ಮುಂದಾಗಬಾರದು ಎಂದು ಮನವಿ ಮಾಡಿದರು.

ಯಾವುದೇ ಹಬ್ಬವಾಗಿರಲಿ, ಜನರು ಸಂತೋಷದಿಂದ ಆಚರಿಸಬೇಕು. ದಯವಿಟ್ಟು ಪೊಲೀಸರೊಂದಿಗೆ ಸಹಕರಿಸಿ. ಸಮಸ್ಯೆ ಉಂಟುಮಾಡಬಹುದಾದ ರೀತಿಯಲ್ಲಿ ನಿರ್ದಿಷ್ಟವಾಗಿ ಆಚರಿಸಬೇಕೆಂದು ಪಟ್ಟು ಹಿಡಿಯಬೇಡಿ. ಕೊನೆಗೂ ಎಲ್ಲರಿಗೂ ಕುಟುಂಬವಿದೆ ಎಂದು ಹೇಳಿದರು.

ಮೆರವಣಿಗೆಗಳ ಮೇಲಿನ ನಿರ್ಬಂಧಗಳು ಅಹಿತಕರ ಘಟನೆಗಳನ್ನು ತಡೆದು ಶಾಂತಿ ಕಾಪಾಡುವ ಉದ್ದೇಶ ಹೊಂದಿವೆಯೇ ಹೊರತು, ಹಬ್ಬಗಳ ಆಚರಣೆಯನ್ನು ತಡೆಯುವ ಉದ್ದೇಶ ಹೊಂದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

Priyank Kharge
ಪ್ರಿಯಾಂಕ್ ಖರ್ಗೆ ಪರಪ್ಪನ ಅಗ್ರಹಾರ ಜೈಲು ಸೇರುವ ಕಾಲ ಹತ್ತಿರ ಬಂದಿದೆ: ಪ್ರತಾಪ್ ಸಿಂಹ ತಿರುಗೇಟು

ಮೆರವಣಿಗೆಗೆ ಅಥವಾ ವಿಸರ್ಜನಾ ಸ್ಥಳಕ್ಕೆ ತೆರಳಲು ಮಾರ್ಗ ನಿಗದಿಪಡಿಸಿದ್ದರೆ ಅದನ್ನು ಪಾಲಿಸಬೇಕು. ಅನಿವಾರ್ಯವಾಗಿ ನಿರ್ದಿಷ್ಟ ಮಾರ್ಗವನ್ನೇ ಬಳಸಬೇಕಾದರೆ ಅದನ್ನೇ ಬಳಸಿ. ಅದರಲ್ಲಿ ತಪ್ಪೇನು, ಯಾರೊಬ್ಬರ ಹಬ್ಬದ ಆಚರಣೆಯಿಂದ ಮತ್ತೊಬ್ಬರಿಗೆ ಆತಂಕ ಅಥವಾ ಭಯ ಉಂಟಾಗಬಾರದು ಎಂದು ಹೇಳಿದರು. ಮುನ್ನೆಚ್ಚರಿಕೆ ಕ್ರಮಗಳನ್ನು ಬಿಜೆಪಿ ವಿರೋಧಿಸುತ್ತಿರುವುದನ್ನು ಪ್ರಿಯಾಂಕ್ ಖರ್ಗೆ ಟೀಕಿಸಿದರು. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹಾಗೂ ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಗೃಹ ಸಚಿವರಾಗಿದ್ದ ಸಂದರ್ಭದಲ್ಲೂ ಇದೇ ರೀತಿಯ ಸಭೆಗಳನ್ನು ನಡೆಸಲಾಗಿತ್ತು ಎಂದು ನೆನಪಿಸಿಕೊಂಡರು.

ಅಶೋಕ್ ಗೃಹ ಸಚಿವರಾಗಿದ್ದರಲ್ಲವೇ? ಅವರು ಇಂತಹ ಸಭೆಗಳನ್ನು ನಡೆಸಿರಲಿಲ್ಲವೇ? ಬಸವರಾಜ ಬೊಮ್ಮಾಯಿ ಕೂಡ ಇದೇ ರೀತಿ ಮಾಡಿರಲಿಲ್ಲವೇ? ನಾನು ಇಲ್ಲಿಗೆ ಬಂದ ಬಳಿಕ ಏನಾದರೂ ಬದಲಾವಣೆ ಮಾಡಿದ್ದೇನೆಯೇ? ಅಶೋಕ್ ಜಾರಿಗೆ ತಂದಿದ್ದ ನಿಯಮಗಳೇ ಇಂದಿಗೂ ಅಸ್ತಿತ್ವದಲ್ಲಿವೆ ಎಂದು ಅವರು ಹೇಳಿದರು.

ಹಿಂದೂ ಹಬ್ಬಗಳ ಸಿದ್ಧತೆಗಳ ಮೇಲೆ ನಿರ್ಬಂಧ ಹೇರಲಾಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ ಬಿಜೆಪಿಯವರು ಹೇಳಿದಂತೆ ನಾನು ಸರ್ಕಾರ ಅಥವಾ ಇಲಾಖೆಯನ್ನು ನಡೆಸಲು ಸಾಧ್ಯವಿಲ್ಲ. ಅವರು ಹೇಳಿದ್ದನ್ನೆಲ್ಲ ನಾವು ಮಾಡಬೇಕೇ ಜನರು ಶಾಂತಿಯುತವಾಗಿ ಹಬ್ಬ ಆಚರಿಸುವಂತೆ ಕೇಳುವುದು ತಪ್ಪೇ ಎಂದು ಪ್ರಶ್ನಿಸಿದರು.

ಪ್ರತಿಭಟನೆ ವೇಳೆ ಪೊಲೀಸ್ ಠಾಣೆಗೆ ನುಗ್ಗುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾದ ಬಿಜೆಪಿ ನಾಯಕರನ್ನೂ ಸಚಿವರು ಟೀಕಿಸಿದರು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಸಂಬಂಧಿಕರ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ಶೋಧದ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ, ಚುನಾವಣೆಗೂ ಮುನ್ನ ರಾಜ್ಯ ಸರ್ಕಾರವನ್ನು ಗುರಿಯಾಗಿಸಲು ಬಿಜೆಪಿ ಕೇಂದ್ರ ನಾಯಕತ್ವವು ಕೇಂದ್ರ ತನಿಖಾ ಸಂಸ್ಥೆಗಳನ್ನು ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಬಿಜೆಪಿಯಲ್ಲಿ ನಾಯಕರೇ ಉಳಿದಿಲ್ಲ. ಹೀಗಾಗಿ ಅವರು ಸಿಬಿಐ, ಆದಾಯ ತೆರಿಗೆ ಇಲಾಖೆ ಮತ್ತು ಇ.ಡಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿಯನ್ನು ಮುಂಚೂಣಿಗೆ ತರುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ ತನ್ನ ಕೆಲಸವನ್ನು ಆದಾಯ ತೆರಿಗೆ ಇಲಾಖೆ, ಇ.ಡಿ. ಮತ್ತು ಜೆಡಿಎಸ್‌ಗೆ ಹೊರಗುತ್ತಿಗೆ ನೀಡಿದಂತೆ ಕಾಣುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com