'ಎರಡೆರಡು ಮದುವೆ ಆಗಿರುವ, ಮನೆ ಇಟ್ಟುಕೊಂಡಿರುವ ಶಾಸಕರ ಹೆಸರನ್ನು ದಯವಿಟ್ಟು ಬಹಿರಂಗ ಮಾಡಿ ಮುಖ್ಯಮಂತ್ರಿಗಳೇ': ಸುರೇಶ್ ಕುಮಾರ್

ಸಿಎಂ ಸದನದಲ್ಲಿ ನೀಡಿರುವ ಹೇಳಿಕೆ ಬಗ್ಗೆ ಬಿಜೆಪಿ ಹಿರಿಯ ನಾಯಕ ಹಾಗೂ ಶಾಸಕ ಎಸ್​​. ಸುರೇಶ್​​ ಕುಮಾರ್​​ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
D K Shivakumar and S Suresh Kumar
ಡಿ ಕೆ ಶಿವಕುಮಾರ್, ಎಸ್ ಸುರೇಶ್ ಕುಮಾರ್
Updated on: 

ಬೆಂಗಳೂರು: ಬೆಂಗಳೂರಿಗೆ ಬಂದ ಕೆಲವು ಶಾಸಕರು ಎರಡೆರಡು ಮದುವೆ ಆಗಿದ್ದಾರೆ, ಅಂಥವರ ಒಂದು ಡಜನ್ ಪಟ್ಟಿ ಬೇಕಾದ್ರೆ ಕೊಡ್ತೀನಿ ಎಂದು ನಿನ್ನೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಆಡಿರುವ ಮಾತು ಭಾರೀ ಸುದ್ದಿಯಾಗಿದೆ.

ಬೆಂಗಳೂರಿನ ಬೆಳವಣಿಗೆ, ಜನಸಂಖ್ಯೆ ಏರಿಕೆ, ನಗರದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವಾಗ ಮುಖ್ಯಮಂತ್ರಿಗಳು ಬೆಂಗಳೂರಿಗೆ ಬಂದವರು ಮತ್ತೆ ವಾಪಸ್ ತಮ್ಮ ಊರುಗಳಿಗೆ ಹೋಗುವುದಿಲ್ಲ, ಲಾಯರ್ ಗಳು, ಶಾಸಕರು ಕೂಡ ಇದಕ್ಕೆ ಹೊರತಲ್ಲ, ಅದರ ಹಿಸ್ಟ್ರೀ ನನ್ನ ಬಳಿ ಇದೆ, ಎರಡೆರಡು ಮದುವೆ ಆಗಿದ್ದಾರೆ. ಅದು ಒಂದು ಡಜನ್ ಇದೆ, ನಾನು ಬೇಕಿದ್ರೆ ಅದರ ಪಟ್ಟಿ ಹೇಳ್ತೀನಿ. ಧಾರವಾಡ, ಕಾರವಾರ, ದಕ್ಷಿಣ ಕನ್ನಡ ಜಿಲ್ಲೆಯವರನ್ನೂ ಹೇಳ್ತೀನಿ. ಆದರೆ ಆ ರೀತಿಯ ಪರಿಸ್ಥಿತಿ ಬೇಡ ಎಂದು ಸಿಎಂ ಹೇಳಿರುವುದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ.

D K Shivakumar and S Suresh Kumar
'ಬೆಂಗ್ಳೂರಿಗೆ ಬಂದ MLAಗಳು ಕೂಡ ಎರಡೆರಡು ಮದುವೆ ಮಾಡ್ಕೊಂಡಿದ್ದಾರೆ, ಅಂಥವರ ಡಜನ್ ಪಟ್ಟಿ ನನ್ನಲ್ಲಿದೆ..ಬೇಕಾದ್ರೆ ಹೇಳ್ತೀನಿ': ಡಿ ಕೆ ಶಿವಕುಮಾರ್

ಸಿಎಂ ಹೇಳಿಕೆಗೆ ಬಿಜೆಪಿ ಶಾಸಕ ಎಸ್​​. ಸುರೇಶ್​​ ಕುಮಾರ್​​ ತೀವ್ರ ಆಕ್ಷೇಪ

ಸಿಎಂ ಸದನದಲ್ಲಿ ನೀಡಿರುವ ಹೇಳಿಕೆ ಬಗ್ಗೆ ಬಿಜೆಪಿ ಹಿರಿಯ ನಾಯಕ ಹಾಗೂ ಶಾಸಕ ಎಸ್​​. ಸುರೇಶ್​​ ಕುಮಾರ್​​ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿನ್ನೆ ನಾನು ಸಂಜೆ ನನ್ನ ಗೆಳೆಯರೊಬ್ಬರು ಆಸ್ಪತ್ರೆಯಲ್ಲಿ ಇದ್ದ ಕಾರಣ ಅವರನ್ನು ಕಾಣಲು ಸದನದಿಂದ ಕೊಂಚ ಮುಂಚೆ ಹೊರಟೆ. ಮುಖ್ಯಮಂತ್ರಿಗಳು ಸದನದಲ್ಲಿ ಉತ್ತರ ಕೊಡುವಾಗ ನಾನು ಇರಲು ಸಾಧ್ಯವಾಗಿರಲಿಲ್ಲ.

ಮುಖ್ಯಮಂತ್ರಿಗಳು ನೀಡಿರುವ ಉತ್ತರ ಲಘುವಾಗಿಯೇ ಇರಬಹುದು. ಆದರೆ ಈ ರೀತಿಯ ಉತ್ತರ ವಿಧಾನಸಭಾ ವೇದಿಕೆಯಿಂದ ಮಾತನಾಡುವುದು ಯಾರಿಗೂ ಘನತೆ ತರುವ ವಿಚಾರವಲ್ಲ. ನಾಡಿನ ಮುಖ್ಯಮಂತ್ರಿಗಳು ಈ ರೀತಿ ಹೇಳಬಾರದಿತ್ತು. ಇದು ಯಾರಿಗೂ ಗೌರವ ತರುವ ಸಂಗತಿಯಲ್ಲ. ಸದನದ ಗಾಂಭೀರ್ಯತೆಗೆ ತಕ್ಕ ಸಂಗತಿಯಲ್ಲ. ನಾನು ಸದನದಲ್ಲಿ ಇದ್ದಿದ್ದರೆ ಕೂಡಲೇ ಪ್ರತಿಕ್ರಿಯಿಸುತ್ತಿದ್ದೆ ಎಂದು ಹೇಳಿದ್ದಾರೆ.

ಮೊದಲೇ ವಿಧಾನಸಭಾ ಸದನವನ್ನು, ಅಲ್ಲಿ ನಡೆಯುವ ಚರ್ಚೆಯನ್ನು, ಶಾಸಕರನ್ನು ನಾಡಿನ ಜನತೆ ಗಂಭೀರವಾಗಿ ಪರಿಗಣಿಸದ ಸ್ಥಿತಿ ತಲುಪಿರುವುದರಿಂದ, ಡಿಕೆ ಶಿವಕುಮಾರ್ ಅವರ ಈ ಅಸಂಬದ್ಧ ಹೇಳಿಕೆ ಒಟ್ಟು ವಿಧಾನಮಂಡಲದ ಮತ್ತು ಜನಪ್ರತಿನಿಧಿಗಳ ವ್ಯಕ್ತಿತ್ವವನ್ನು ಇನ್ನಷ್ಟು ಅಧಃಪತನಕ್ಕೆ ತೆಗೆದುಕೊಂಡು ಹೋಗುತ್ತದೆ. ಯಾರೇ ಸಾರ್ವಜನಿಕ ವೇದಿಕೆಗಳಿಂದ ಮಾತನಾಡುವ ಮುನ್ನ ಸ್ವಲ್ಪ ಯೋಚಿಸಿ ಮುಂದುವರೆದರೆ ಈ ರೀತಿಯ ಅವಘಡ ಸಂಭವಿಸುವುದಿಲ್ಲ. ಮುಖ್ಯಮಂತ್ರಿಗಳ ವೇಷಭೂಷಣ, ನಡೆ ನುಡಿ ಎಲ್ಲವನ್ನು ನಿರ್ದೇಶಿಸುತ್ತಿರುವ ವೃತ್ತಿ ತಂಡ ಈ ಬಗ್ಗೆಯೂ ಗಮನ ನೀಡಬೇಕಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ಶಾಸಕರ ಹೆಸರು ಹೇಳಿ

ಈಗ ಮುಖ್ಯಮಂತ್ರಿಗಳು ಈ ರೀತಿ ಹೇಳಬಾರದನ್ನು ಹೇಳಿಯಾಗಿದೆ. ಈಗ ಇದು ಸಾರ್ವಜನಿಕರೆಲ್ಲರ ಕೆಟ್ಟ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಜನರ ಮುಂದೆ ಇಡಲು ಶ್ವೇತಪತ್ರ ಹೊರಡಿಸುತ್ತೀರೋ ಇಲ್ಲವೋ ನನಗೆ ಗೊತ್ತಾಗುತ್ತಿಲ್ಲ. ಆದರೆ ಎರಡೆರಡು ಮದುವೆ ಆಗಿರುವ, ಎರಡೆರಡು ಮನೆ ಇಟ್ಟುಕೊಂಡಿರುವ ಶಾಸಕರ ಹೆಸರರೂಗಳನ್ನು ದಯವಿಟ್ಟು ಬಹಿರಂಗ ಮಾಡಿ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com