ಎಲ್ಲರೊಳಗೊಂದಾಗು ಮಂಕುತಿಮ್ಮ

ಎಲ್ಲರೊಳಗೊಂದಾಗು ಮಂಕುತಿಮ್ಮ
Updated on: 

ಅದು 1999ರ ಸೆಪ್ಟೆಂಬರ್ 3. ಬೆಳಗಿನ ಸೂರ್ಯ ಕಿರಣಗಳು ಲುಫ್ತ್ಹಾನ್ಸ ವಿಮಾನದ ಕಿಟಕಿ ಹಾದು, ನಿದ್ದೆ ಮಾಡುತ್ತಿದ್ದ ನನ್ನನ್ನು ಎಬ್ಬಿಸಿದ್ದವು. ಸ್ವಲ್ಪ ಸಮಯದ ನಂತರ ಕ್ಯಾಪ್ಟನ್, 'ಇನ್ನು ಕೆಲವೇ ನಿಮಿಷಗಳಲ್ಲಿ ಬಾರ್ಸಿಲೋನಾ ವಿಮಾನ ನಿಲ್ದಾಣದಲ್ಲಿ ಇಳಿಯಲಿದ್ದೇವೆ' ಎಂದ, ಜೊತೆಗೆ ತಾಪಮಾನ, ಬಾರ್ಸಿಲೋನಾದಲ್ಲಿ ವೇಳೆ ಎಷ್ಟಿದೆ ಎಲ್ಲ ವಿವರ ನೀಡಿದ.
ಬಾರ್ಸಿಲೋನಾ ತಲುಪಿದ್ದೆ. ಇಲ್ಲಿನ ಭಾಷೆ ಕಾಸ್ತೆಯಾನೋ (ಸ್ಪಾನಿಷ್ ಇಂಗ್ಲಿಷ್ ಹೆಸರು. ಸ್ಪ್ಯಾನಿಷ್‌ಗೆ ಸ್ಪ್ಯಾನಿಷ್‌ನಲ್ಲಿ ಕಾಸ್ತೆಯನೋ ಎನ್ನುತ್ತಾರೆ) ಒಂದಕ್ಷರ ಕೂಡ ಬರುತ್ತಿರಲಿಲ್ಲ, ಹಲೋ ಅನ್ನುವುದಕ್ಕೆ 'ಓಲಾ', ಗುಡ್ ಮಾರ್ನಿಂಗ್‌ಗೆ 'ಬೋನಸ್ ದಿಯಾಸ್‌' ಹೇಳುತ್ತ ಪ್ರಾರಂಭವಾಯಿತು ನನ್ನ ಸ್ಪ್ಯಾನಿಷ್ ಕಲಿಕೆ.
ಬಾರ್ಸಿಲೋನಾಗೆ ಬಂದು ಇನ್ನೂ ತಿಂಗಳುಗಳಾಗಿರಲಿಲ್ಲ, ಕ್ಲೈಂಟ್ ಅಂತೋನಿ ನನ್ನನ್ನು ಆತನ ಮನೆಗೆ ಆಹ್ವಾನಿಸಿದ, ಮುಂಚಿತವಾಗೆ ತಿಳಿಸಿ ಆತನ ಹತ್ತು ವರ್ಷದ ಮಗಳು ಮಾರಿಯಾ ತನ್ನ ಜೀವನದಲ್ಲಿ ಹಿಂದು, ಇಂಡಿಯನ್ ನೋಡಿಲ್ಲವಂತೆ, ಆಕೆ ನನ್ನನ್ನು ಕಾಣಲು ಬಯಸಿದ್ದಳಂತೆ! ಸರಿ, ಹತ್ತು ವರ್ಷದ ಆ ಬಾಲಕಿ, ಏ ಹಿಂದೂ (ನೀನು ಹಿಂದೂನಾ?), ಇಂಡಿಯನ್ ಎಂದು, ನನ್ನ ಕೈಮುಟ್ಟಿ, ಯಾವುದೋ ಗ್ರಹದವಾಸಿ ಎನ್ನುವಂತೆ ಪರೀಕ್ಷಿಸಿದ್ದು ಇಂದು ನಗು ತರಿಸುತ್ತದೆ. ಸ್ಪೇನ್ ಇಂದಿಗೂ ಇಂಗ್ಲೆಂಡ್, ಫ್ರಾನ್ಸ್, ಜರ್ಮನಿಗಳಂತೆ ಭಾರತೀಯರಲ್ಲಿ ಹೆಚ್ಚು ಪ್ರಸಿದ್ಧವಲ್ಲ.
ನಮ್ಮಲ್ಲಿ ಮದುವೆಯಾಗಿ ಹೆಣ್ಣುಮಕ್ಕಳು ಗಂಡನ ಮನೆಗೆ ಹೋಗುತ್ತಾರೆ. ಇಲ್ಲಿ ಅದು ಉಲ್ಟಾ, ಹುಡುಗ, ಹುಡುಗಿ ಮನೆಯವರಿಗೆ ಹೊಂದಿಕೊಂಡು ಬಾಳುತ್ತಾನೆ. ಹೆಣ್ಣು, ಸಮಾಜದಲ್ಲಿ ಗಂಡಿಗಿಂತ ಒಂದು ಕೈ ಮೇಲೆ, ಸಿಗರೇಟು ಸೇವೆನೆ, ಕುಡಿತ ಇಂಥವು ಯಾವುದೇ ಇರಲಿ, ಇವರು ಸರಿಸಮನಾಗಿ ನಿಲ್ಲುತ್ತಾರೆ.
ಸಹೋದ್ಯೋಗಿ ಗಂಡಸಾಗಿದ್ದರೆ ಹಸ್ತಲಾಘವ, ಹೆಣ್ಣಾಗಿದ್ದರೆ ಎರಡು ಕೆನ್ನೆಗೆ ಲಘು ಮುತ್ತು ನೀಡುವುದು ಸಂಪ್ರದಾಯ. ಹೊಸತರಲ್ಲಿ ಈ ಸಂಪ್ರದಾಯಕ್ಕೆ ಹೊಂದಿಕೊಳ್ಳಲು ಭಾರತೀಯನಾದ ನನಗೆ ಬಹಳವೇ ಕಷ್ಟವಾಯಿತು. ಹದಿನಾಲ್ಕು ವರ್ಷದ ನಂತರ, ಹೆಣ್ಣು ಮಗಳು ಪರಿಚಯ ಮಾಡಿಕೊಂಡರೆ ಅರಿವಿಲ್ಲದೆ ನನ್ನ ಮುಖ ಮುಂದೆ ಸಾಗುತ್ತದೆ, ಎಷ್ಟಾದರೂ ಮನುಷ್ಯ ಅಭ್ಯಾಸಗಳ ಮೊತ್ತ ಅಲ್ಲವೆ?
ಸ್ನೇಹಿತ ಫ್ರಾನ್ಸಿಸ್ಕೋ, ಗಡಿಬಿಡಿಯಿಂದ ಟಾಯ್ಲೆಟ್ ಹೊಕ್ಕ. ಮೊದಲು ಕೈ ತೊಳೆದ, ನಂತರ ವಿಸರ್ಜಿಸುವ ಕೆಲಸ. ನಾನು ಆತನನ್ನು ಪ್ರಶ್ನಿಸಿ 'ಅಲ್ಲ ಫ್ರಾನ್ಸಿ, ನಾವು ವಿಸರ್ಜಿಸಿದ ನಂತರ ಕೈ ತೊಳೆಯುತ್ತೇವೆ. ನೀನು ಮೊದಲು, ನಂತರ ಹೀಗೆ ಎರಡು ಬಾರಿ ಯಾಕೆ?' ಎಂದೆ. 'ಗೊತ್ತಿಲ್ಲ. ಶಾಲೆಯಲ್ಲಿ ನಮಗೆ ಹೀಗೆ ಕಲಿಸಿದ್ದು' ಎಂದ. ಒಂದು ಸಣ್ಣ ವಿಷಯವನ್ನೂ ಯಾಕೆ? ಏನು? ಮೂಲ ಯಾವುದು? ಎಂದು ಪ್ರಶ್ನಿಸುವ ನನಗೆ ಮೊದಲು ಇವರೇಕೆ ಹೀಗೆ ಅನ್ನಿಸಿತು. ನಂತರದ ದಿನಗಳಲ್ಲಿ ಇಲ್ಲಿನ ಜನ ತುಂಬಾ ಮೆಥಾಡಿಕಲ್, ತಮಗೆ ಒಪ್ಪಿಸಿದ ಕೆಲಸವನ್ನು ಒಪ್ಪವಾಗಿ ಮಾಡುತ್ತಾರೆ, ಚಿಂತಿಸುವ ಕೆಲಸ, ಕೆಲವೇ ಕೆಲವರ ಕೆಲಸ, ಉಳಿದವರು ತಮ್ಮ ಪಾಲಿನ ಕೆಲಸ ಅಚ್ಚುಕಟ್ಟಾಗಿ ಮಾಡುತ್ತಾರೆ ಎನ್ನುವುದು ತಿಳಿಯಿತು. ನಮ್ಮಲ್ಲಿ ಕಾರು ರೈಟ್‌ಹ್ಯಾಂಡ್ ಡ್ರೈವ್. ಇಲ್ಲಿ ಲೆಫ್ಟ್‌ಹ್ಯಾಂಡ್ ಡ್ರೈವ್. ಮೊದಮೊದಲು ತಬ್ಬಿಬ್ಬಾದೆ. ಈಗ ಲೆಫ್ಟ್‌ಹ್ಯಾಂಡ್‌ಗೆ ಹೊಂದಿಕೊಂಡ ಮೆದುಳು ಭಾರತಕ್ಕೆ ಭೇಟಿ ಕೊಟ್ಟಾಗ, ಅರಿವಿಲ್ಲದೆ ಎಡಕ್ಕೆ ಚಲಿಸುತ್ತದೆ!
ಓದುವುದು ಇಲ್ಲಿನ ಜನರ ಜೀವನದ ಅವಿಭಾಜ್ಯ ಅಂಗ. ಮೆಟ್ರೋ ರೈಲು, ಬಸ್, ಏರೋಪ್ಲೇನ್ ಹೊಕ್ಕಿನೋಡಿ, ಜನರು ಪುಸ್ತಕದಲ್ಲಿ ಮುಖ ಹುದುಗಿಸಿರುವುದು ಕಾಣುತ್ತದೆ. ಇಬ್ಬರು ವ್ಯಕ್ತಿಗಳು ಭೇಟಿಯಾದರೆ ಯಾವ ಪುಸ್ತಕ ಓದಿದೆ, ಯಾವುದು ಓದಬೇಕೆಂದಿದ್ದೇನೆ ಎಂಬುದು ಅವರ ಸಾಮಾನ್ಯ ಮಾತುಕತೆ. ಸಾವಿರ ಪುಸ್ತಕ ಮುದ್ರಿಸಿ, ಮರುಮುದ್ರಣಕ್ಕೆ ಎರಡೋ, ಮೂರೋ ವರ್ಷ ತೆಗೆದುಕೊಳ್ಳುವ ನಮ್ಮ 'ಧಾರಾಳತನ', ಸಾಹಿತ್ಯದಲ್ಲಿ ಆಸಕ್ತಿ ಇರುವ ನನಗೆ ಕಿರಿಕಿರಿ ತರಿಸುತ್ತದೆ. ನಾವು ಈ ವಿಷಯದಲ್ಲಿ ಸ್ಪ್ಯಾನಿಷ್‌ರಂತೆ ಆದರೆ ಎಷ್ಟು ಚೆನ್ನ ಅಥವಾ ನನ್ನ ಭ್ರಾಂತಿಯೋ? ಸ್ಪೇನ್‌ನಲ್ಲಿ ಬರಹಗಾರ ಬಹಳ ಪ್ರಸಿದ್ಧಿ. ಸಿನಿಮಾ ನಟರಿಗೆ, ಆಟಗಾರರಿಗೆ ಸಿಗುವ ಗೌರವ, ಸನ್ಮಾನ ಒಬ್ಬ ಬರಹಗಾರನಿಗೆ ಸಿಗುತ್ತದೆ. ಇವೆಲ್ಲಾ ಸತ್ಯವೇ ಎನ್ನುವ ಮಟ್ಟಿಗೆ ಸಂಶಯ ನನ್ನನ್ನು ಕಾಡಿತ್ತು.
ನಮ್ಮಲ್ಲಿ ಪಿತೃಪಕ್ಷ ಮಾಡುತ್ತೇವೆ. ಹಾಗೆ ಇಲ್ಲಿ 'ದಿಯಾ ದೇ ತೋದೋ ಲ ಸಂತೊಸ್‌' ಆಚರಿಸುತ್ತಾರೆ. ಸತ್ತ ಎಲ್ಲಾ ಆತ್ಮಗಳ ನೆನಪಿಗೆ ಒಂದು ಹಬ್ಬ, ಒಂದು ದಿನ. 'ದಿಯಾ ದೇ ಸ್ಯಾನ್ ವಾನ್‌', ನಮ್ಮ ದೀಪಾವಳಿಯ ಸಹೋದರ, ಜನ ಮನತುಂಬಿ ಪಟಾಕಿ ಹೊಡೆಯುತ್ತಾರೆ. ಮೊದಲ ಬಾರಿ ಪಟಾಕಿ ಸದ್ದು ಕೇಳಿ, ಏಕಿರಬಹುದು ಎಂದುಕೊಂಡೆ. ದಿನ ಕಳೆದಂತೆ ಇವರಲ್ಲಿ ಒಂದಾಗಿ ಹೋದೆ. ತೀರಾ ಸಂಪ್ರದಾಯಸ್ಥ ಕುಟುಂಬದಿಂದ ಬಂದ ನಾನು, ಕಚೇರಿಗೆ ಗಂಧ, ಕುಂಕುಮ ಇಟ್ಟು ಬಂದಿದ್ದೆ. ಸಹೋದ್ಯೋಗಿ ಯವಾ, ಸಾಂಗ್ರೆ (ರಕ್ತ) ಎಂದು ಅರಚುತ್ತಾ ಟಿಶ್ಯೂ ಪೇಪರನ್ನು ನನ್ನೆಡೆ ಚಾಚಿದ್ದು ಇನ್ನೂ ಮನದಲ್ಲಿ ಹಸುರಾಗಿದೆ.
'ರಂಗ ಘಂಟೆ ಇನ್ನೂ ಆರು, ನೀನು ಇಷ್ಟು ಬೇಗ ಎದ್ದು ದೇವರ ಪೂಜೆ ಮಾಡಿದರೆ ಹೇಗೆ? ಹೇಳಿ ಕೇಳಿ ಇದು ಸ್ಪೇನ್. ಚಳಿ ದೇಶ, ದೇವರು ಕೂಡ ಏಳುವುದು ಹತ್ತರ ನಂತರವೇ' ಎಂದು ನಗೆಯಾಡಿದ ಗೆಳೆಯ ಸಿಬು ಕುರಿಯನ್ ಮನದಾಳದಲ್ಲಿ ಉಳಿದಿದ್ದಾನೆ.
ಹದಿನಾಲ್ಕು ವಸಂತ ಕಳೆದು ಸ್ಪ್ಯಾನಿಷ್, ಕಾತಲನ್, ಇಟಾಲಿಯನ್, ಪೋರ್ಚುಗೀಸ್ ಕಲಿತು, ಇಲ್ಲಿಯವರ ಸಂಸ್ಕೃತಿ, ಸಂಪ್ರದಾಯ ಹತ್ತಿರದಿಂದ ಕಂಡ ನಂತರ ಅನ್ನಿಸಿದ್ದು; ಭಾಷೆ- ವೇಷ ಬದಲಾಗಬಹುದು, ಮನುಷ್ಯರ ಭಾವನೆ ಒಂದೇ ಎಂದು. 'ವಸುದೈವ ಕುಟುಂಬಕಮ್‌' ಎನ್ನುವ ಭಾರತೀಯ ಶ್ರೇಷ್ಠಚಿಂತನೆ ಅನುಭವಿಸುವ ಅವಕಾಶ ಸಿಕ್ಕಿದ್ದು ಇಲ್ಲೇ. ಇದಕ್ಕೆ 'ಪುಣ್ಯ' ಎನ್ನದೆ ಬೇರೆ ಶಬ್ದ ಇಲ್ಲವಲ್ಲ!



- ರಂಗಸ್ವಾಮಿ ಮೂಕನಹಳ್ಳಿ, ಸ್ಪೇನ್
muraram@yahoo.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com