ವಿಧಾನಸೌಧಕೆ ಬಾರದ ರಾಧೆ

ವಿಧಾನಸೌಧಕೆ ಬಾರದ ರಾಧೆ
Updated on: 

ಉನ್ನತ ಶಿಕ್ಷಣ ಮತ್ತು ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ನಾಡು ಕಂಡ ಅಪರೂಪದ ರಾಜಕಾರಣಿ. ನಾಲ್ಕು ದಶಕಗಳಿಂದಲೂ ಸಕ್ರಿಯ ರಾಜಕಾರಣದಲ್ಲಿರುವ ದೇಶಪಾಂಡೆ, 'ನನ್ನ ಯಶಸ್ಸಿನ ದೊಡ್ಡಪಾಲು ನನ್ನ ಸೌಭಾಗ್ಯವತಿಯವರಿಗೆ ಸಲ್ಲಬೇಕು' ಎನ್ನುತ್ತಾರೆ. ಆದರೆ ಅವರ ಪತ್ನಿ ರಾಧಾ ಆರ್.ದೇಶಪಾಂಡೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಬಹಳ ಕಡಿಮೆ. ಹಾಗೆ ಮಾತು ಕೂಡ. 'ಖುಷಿ' ಜತೆ 'ಖುಷಿ'ಯಿಂದಲೇ ಒಂದಷ್ಟು ಹೊತ್ತು ಆಪ್ತವಾಗಿ ಮಾತನಾಡಿದರು.


ಮದುವೆಯಾಗಿ 41 ವರ್ಷವಾಯ್ತು. ಅದರಲ್ಲಿ 30 ವರ್ಷಕ್ಕಿಂತ ಹೆಚ್ಚು ಸಮಯವನ್ನು ನನ್ನವರು ವಿಧಾನಸೌಧದಲ್ಲೇ ಕಳೆದಿದ್ದಾರೆ. ನೀವು ನಂಬ್ತೀರೊ ಇಲ್ಲವೊ? ಈ ಅವಧಿಯಲ್ಲಿ ನಾನು ವಿಧಾನಸೌಧದ ಅವರ ಕಚೇರಿಗೆ ಕಾಲಿಟ್ಟಿದ್ದು ಎರಡು ಸಲವೊ, ಮೂರು ಸಲವೊ ಅಷ್ಟೇ. ನಾನು ಅಲ್ಲಿ ಹೋಗಿ ಮಾಡಬೇಕಾದದ್ದು ಏನಿದೆ? ಅವರ ಕೆಲಸದಲ್ಲಿ ಯಾವತ್ತೂ ಹಸ್ತಕ್ಷೇಪ ಮಾಡಿದವಳಲ್ಲ. ನನ್ನದು ಏನಿದ್ದರೂ 'ಗೃಹ ಕಚೇರಿ' ಕಾರುಬಾರು.
ನಮ್ಮ ಮದುವೆ ಕಥೆ ಹೇಳಬೇಕು. ನಮ್ಮೂರು ಗೋವಾ. ನನ್ನ ಅಪ್ಪನ ಕಡೆಯಿಂದ ಪ್ರಸ್ತಾಪ ಹೋದದ್ದು. ಯಜಮಾನರು ಆಗ ಹಳಿಯಾಳದಲ್ಲಿ ವಕೀಲಿ ವೃತ್ತಿ ಮಾಡುತ್ತಿದ್ದರು. ಅವರ ಮನೆಯವರಿಗೆಲ್ಲ ನಾನು ಇಷ್ಟವಾದೆನಂತೆ. ಆ ಮೇಲೆ ಹುಡುಗಿಯನ್ನು ನೋಡಬೇಕಲ್ಲ. ಅದಕ್ಕಾಗಿಯೇ ಅವರ ಊರಿಗೆ ಹೋಗಿದ್ದ ನಾನು ಆ ಕ್ಷಣವನ್ನು ಕಾತರದಿಂದ ಎದುರು ನೋಡುತ್ತಿದ್ದೆ. ಕೊನೆಗೆ ರಾಜಕುಮಾರ ಬಂದದ್ದು ಯಾವಾಗ ಗೊತ್ತಾ? ಸಂಜೆ, ಕೋರ್ಟ್ ಕೆಲಸ ಮುಗಿದ ಮೇಲೆ! 'ನಿಮಗೆಲ್ಲ ಇಷ್ಟವಾದರೆ ನನಗೂ ಓ.ಕೆ. ನನಗೇನು ಹುಡುಗಿಯನ್ನು ನೋಡಲೇಬೇಕು ಅಂತ ಇಲ್ಲ' ಎಂದು ತನ್ನ ಅಪ್ಪ-ಅಮ್ಮನ ಬಳಿ ಹೇಳಿದ್ದರಂತೆ. ಕೊನೆಗೂ ಹೆತ್ತವರ ಒತ್ತಾಯಕ್ಕೆ ಮಣಿದು ನನ್ನನ್ನು ನೋಡುವ 'ಶಾಸ್ತ್ರ' ಮುಗಿಸಲು ಬಂದರು ಎನ್ನಿ. ಎರಡೂ ಕಡೆಯ ಹಿರಿಯರು ಒಪ್ಪಿದ್ದಾಗಿತ್ತು. 1972ರ ಜೂನ್ 7ರಂದು ಗೋವಾದ ಶ್ರೀ ರಾಮನಾಥ ದೇವಾಲಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟೆವು. ಆಗ ಅವರಿಗೆ 25 ವರ್ಷ. ನನ್ನ ವಯಸ್ಸು ಕೇಳಬೇಡಿ ಮತ್ತೆ!
ಮದುವೆಯಾದ ಎರಡೇ ವರ್ಷದಲ್ಲಿ ಅವರು ರಾಜಕೀಯ ಪ್ರವೇಶಿಸಿದ್ದು. ಅದಕ್ಕೆ ನನ್ನ ವಿರೋಧವೇನೂ ಇರಲಿಲ್ಲ. ಅವರಲ್ಲಿ ನಾಯಕತ್ವ ಗುಣ, ದೂರದೃಷ್ಟಿ ಮತ್ತು ಎಲ್ಲರನ್ನೂ ಸಮಾನವಾಗಿ ನೋಡುವ ಗುಣ ಇದೆ ಎನ್ನುವುದು ನನಗೆ ಈ ಎರಡು ವರ್ಷಗಳಲ್ಲಿ ಗೊತ್ತಾಗಿ ಹೋಗಿತ್ತು. 'ಮನೆ ಬಗ್ಗೆ ಚಿಂತಿಸಬೇಡಿ. ಜನರಿಗೆ ಎಷ್ಟು ಸಾಧ್ಯವೊ ಅಷ್ಟು ಒಳ್ಳೆಯದು ಮಾಡಿ' ಎಂದು ಒಂದೇ ಮಾತು ಹೇಳಿದೆ. ನಮ್ಮವರ ಬಗ್ಗೆ ಜಾಸ್ತಿ ಹೇಳುವುದೇನಿದೆ? ಶಾಸಕರಾಗಿ, ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ, ತಮ್ಮ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರು ಒಂದೊಂದೇ ಮೆಟ್ಟಿಲು ಏರಿದಂತೆಲ್ಲ ಖುಷಿಪಟ್ಟಿದ್ದೇನೆ. ಸೋತಾಗ ಅವರಾಗಲೀ, ನಾನಾಗಲೀ ವ್ಯಥೆಪಟ್ಟಿದ್ದು ಇಲ್ಲ. ಅವರ ರಾಜಕಾರಣ ಏನಿದ್ದರೂ ಮನೆಯಿಂದ ಹೊರಗೆ. ಒಳಕ್ಕೆ ಕಾಲಿಟ್ಟ ತಕ್ಷಣ ನನಗೆ ಪತಿ, ಮಕ್ಕಳಿಗೆ ಅಪ್ಪ, ಮೊಮ್ಮಕ್ಕಳಿಗೆ ಪ್ರೀತಿಯ ಅಜ್ಜ, ಸೊಸೆಯಂದಿರಿಗೆ ಮುದ್ದಿನ ಮಾವ. ಅವರ ಈ ಸ್ವಭಾವ ನನಗೆ ಬಹಳ ಇಷ್ಟವಾದದ್ದು.
ನನ್ನದು, ಅವರದ್ದು ತದ್ವಿರುದ್ಧ ಗುಣ. ನಾನೋ ಮಿತಭಾಷಿ. ನನಗೆ ತಾಳ್ಮೆ ಹೆಚ್ಚು. ಅವರಿಗೋ ಮೂಗಿನ ತುದಿಯಲ್ಲೇ ಸಿಟ್ಟು. ಆದರೆ ಆ ಸಿಟ್ಟು ಬರುವುದು ಕೆಲಸ ವಿಚಾರದಲ್ಲಿ ಮಾತ್ರ. ಮನೆಮಂದಿ ಮೇಲೆ ರೇಗಿದ್ದು ಇಲ್ಲವೇ ಇಲ್ಲ ಎನ್ನಬಹುದು. 'ಸಿಟ್ಟು ಕಡಿಮೆ ಮಾಡಿಕೊಳ್ಳಿ. ಅದರಿಂದ ನಿಮ್ಮ ಜೀವಕ್ಕೂ ಅಪಾಯ, ಬೇರೆಯವರಿಗೂ ತೊಂದರೆ' ಎಂದು ಆಗಾಗ ಹೇಳುತ್ತಿರುತ್ತೇನೆ. 'ಸಿಟ್ಟಿನಿಂದ ಯಾವ ಕೆಲಸವೂ ಆಗುವುದಿಲ್ಲ. ಸಿಟ್ಟು ಬಂದಾಗ 1ರಿಂದ 10 ಎಣಿಸು' ಎಂದು ಮಾವನವರೂ ಆಗಾಗ ಕಿವಿಮಾತು ಹೇಳುತ್ತಿದ್ದರು. ಈಗ ಸಿಟ್ಟು ಬಹಳ ಅಂದರೆ ಬಹಳ ಕಡಿಮೆ ಆಗಿದೆ. ಅವರಿಗೂ ವಯಸ್ಸಾಯ್ತಲ್ಲ. ಸಹನೆ ಮತ್ತು ಹೊಂದಿಕೊಂಡು ಹೋಗುವ ಗುಣ ನನ್ನಲ್ಲಿ ಹುಟ್ಟಿನಿಂದಲೇ ಬಂದದ್ದು ಇರಬೇಕು. ಹೀಗಾಗಿಯೇ ಸಾಹೇಬರನ್ನು ನೋಡಲು ಮನೆಗೆ ಬರುವ ಎಲ್ಲರನ್ನೂ ಪ್ರೀತಿಯಿಂದ ಕಾಣಲು ಸಾಧ್ಯವಾದದ್ದಿರಬೇಕು. ಜನರನ್ನು ಸಂಭಾಳಿಸುವುದು ಯಾವತ್ತೂ ಕಷ್ಟ, ಕಿರಿಕಿರಿ ಅಂತ ನನಗೆ ಅನ್ನಿಸಿಯೇ ಇಲ್ಲ.
ಅಧಿಕಾರ ಇರಲಿ, ಇಲ್ಲದಿರಲಿ. ಅವರು ತಿಂಗಳಲ್ಲಿ 20 ದಿನ ಪ್ರವಾಸದಲ್ಲಿರುತ್ತಾರೆ. ಆದರೆ ನಿತ್ಯ ನನ್ನೊಂದಿಗೆ ಮಾತನಾಡಿದರೇ ಅವರಿಗೆ ಸಮಾಧಾನ. ಈಗಲೂ ಅವರ ಉತ್ಸಾಹ ಕುಗ್ಗಿಲ್ಲ. 'ಜಾಸ್ತಿ ಪ್ರವಾಸ ಮಾಡಬೇಡಿ. ಆರೋಗ್ಯದ ಬಗ್ಗೆ ಗಮನ ಕೊಡಿ' ಎಂದು ಆಗಾಗ ಕಿವಿಮಾತು ಹೇಳುತ್ತಿರುತ್ತೇನೆ. ಆದರೆ ಅವರೆಲ್ಲಿ ಕೇಳುತ್ತಾರೆ? ಎಷ್ಟೇ ಕೆಲಸವಿದ್ದರೂ ವರ್ಷಕ್ಕೆ ಒಮ್ಮೆ ಮನೆಮಂದಿಯನ್ನೆಲ್ಲ ಪ್ರವಾಸಕ್ಕೆ ಕರೆದುಕೊಂಡು ಹೋಗಲು ಮರೆಯುವುದಿಲ್ಲ. ನಿಸರ್ಗ, ನದಿ, ಸಮುದ್ರ, ಅರಣ್ಯ, ವನ್ಯಜೀವಿಗಳು ಎಂದರೆ ಇಬ್ಬರಿಗೂ ಪ್ರೀತಿ. ಅಂಥ ಸ್ಥಳಗಳಿಗೆ ಐದಾರು ದಿವಸ ಟೂರ್ ಹೋಗ್ತೀವಿ. ಅಮೆರಿಕ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಮಲೇಷ್ಯ, ನೇಪಾಳ, ಶ್ರೀಲಂಕಾ ಸೇರಿದಂತೆ ಅವರೊಂದಿಗೆ ವಿಶ್ವದ ಬಹಳಷ್ಟು ದೇಶಗಳನ್ನು ಸುತ್ತಿದ್ದೇನೆ. ಗೆಳತಿಯರೊಂದಿಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಡುವುದು ಎಂದರೆ ನನಗೆ ಭಾರಿ ಖುಷಿ. ನಮ್ಮದು ಆಸ್ತಿಕ ಮನೆತನ. ಮಹಾಗಣಪತಿ, ಮಂಗೇಶ ಮಹಾಲಕ್ಷ್ಮೀ, ತುಳಜಾ ಭವಾನಿ ನಮ್ಮ ಕುಟುಂಬದ ಆರಾಧ್ಯ ದೇವರುಗಳು. ಕೃಷ್ಣಾಷ್ಟಮಿ, ಗಣೇಶ ಚತುರ್ಥಿ, ನವರಾತ್ರಿ, ದೀಪಾವಳಿ ನಾವು ಪ್ರಮುಖವಾಗಿ ಆಚರಿಸುವ ಹಬ್ಬಗಳು. ಆ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲಿ ಇರಬೇಕಾದದ್ದು ಕಡ್ಡಾಯ. ದಾನ, ಧರ್ಮಗಳಲ್ಲೂ ಅವರು ಮುಂದು. ಅದಕ್ಕೂ ನನ್ನ ಆಕ್ಷೇಪವಿಲ್ಲ. ನಮ್ಮ ಬಳಿ ಇದ್ದುದನ್ನು ಹಂಚಿದರೆ ಸಿಗುವ ಆನಂದ ಅನುಭವಿಸಿದವರಿಗಷ್ಟೇ ಗೊತ್ತು.
ಹವ್ಯಾಸಗಳ ಬಗ್ಗೆ ಹೇಳೋದೇನಿದೆ? ಅದಕ್ಕೆ ಗಮನ ಕೊಡಲು ಸಮಯ ಬೇಕಲ್ಲ. ಏನಾದರೂ ಓದೋದು ಅಂದರೆ ಇಷ್ಟ. ದಿನಪತ್ರಿಕೆಗಳನ್ನು ತಪ್ಪದೇ ಓದುತ್ತೀನಿ. ನನ್ನ ಕುಟುಂಬದ ಬಗ್ಗೆ ಹೇಳಿಲ್ಲ ಅಲ್ಲ? ಪ್ರಸಾದ್ ಮತ್ತು ಪ್ರಶಾಂತ್ ಮಕ್ಕಳು. ಪ್ರಸಾದ್ ಹೆಂಡತಿ ಶಿರಸಿಯ ಕಾಸರಗೋಡ್ ಕುಟುಂಬದ ಮೇಘನಾ. ಧ್ರುವ್, ವಿವಾನ್ ಅವರ ಮಕ್ಕಳು. ಪ್ರಶಾಂತ್ ಮದುವೆಯಾಗಿದ್ದು ಕೇಂದ್ರ ಸಚಿವ ಪ್ರಫುಲ್ ಪಟೇಲ್ ಮಗಳು ಅವನಿಯನ್ನು. ತನಯ್, ಆನಂದ ಅವರ ಮಕ್ಕಳು. ನನ್ನ ಅತ್ತೆ ನನ್ನನ್ನು ಮಗಳಂತೆ ನೋಡಿಕೊಂಡಿದ್ದರು. ನಾನು ಸೊಸೆಯಂದಿರನ್ನು ಹಾಗೆಯೇ ನೋಡಿಕೊಳ್ಳುತ್ತಿದ್ದೇನೆ.
ನಮ್ಮವರು ಆಗಾಗ ಹೇಳುತ್ತಿರುತ್ತಾರೆ, 'ನನ್ನ ಯಶಸ್ಸಿನಲ್ಲಿ ನನ್ನ ಸೌಭಾಗ್ಯವತಿಯ ಪಾತ್ರ ದೊಡ್ಡದು' ಅಂತ. ಅವರಿಗೆ ಜನರ ಬಗ್ಗೆ ಕಳಕಳಿ ಇದೆ. ಹೀಗಾಗಿ ಜನ ಅವರನ್ನು ಗೆಲ್ಲಿಸುತ್ತಾರೆ. ಅವರ ಸಾಮರ್ಥ್ಯಕ್ಕೆ ತಕ್ಕಂತೆ ಸ್ಥಾನಮಾನಗಳು ಸಿಕ್ಕಿವೆ. ಇದರಲ್ಲಿ ನನ್ನ ಹೆಚ್ಚುಗಾರಿಕೆ ಏನಿದೆ ಹೇಳಿ?


- ರಾಧಾ ಆರ್.ದೇಶಪಾಂಡೆ
- ನಿರೂಪಣೆ: ರಾಜೇಶ್ ಮುಂಡಿಗೇಸರ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com