

ಅಂಥದ್ದೊಂದು ಕಾಲವಿತ್ತು. ಬೆಳಗ್ಗೆ ಹೊದಿಕೆ ಎಳೆದು, 'ಬೇಗ ಎದ್ದು ಮುಖ ತೊಳೆದು, ದೇವರಿಗೆ ನಮಸ್ಕಾರ ಮಾಡು' ಎಂದು ಪ್ರೀತಿಯಿಂದ ತಲೆಗೆ ಮೊಟಕುವ ಅಜ್ಜಿ. 'ಸರಿಯಾಗಿ ಹಲ್ಲುಜ್ಜಿದೆಯಾ? ಬಾಗಿಲಿಗೆ ನೀರು ಹಾಕಿದೆಯಾ?' ಎಂದು ಸಣ್ಣದಾಗಿ ಗದರಿಸುವ ಅಜ್ಜ. ಅಜ್ಜ- ಅಜ್ಜಿ ಮಾತು ಕೇಳು ಎದುರಾಡಬೇಡ ಎನ್ನುವ, ಕಣ್ಣಲ್ಲೇ ಗದರುವ ಅಮ್ಮ. ಮಕ್ಕಳನ್ನು ನೋಡಿಕೊಳ್ಳಲು ಅಜ್ಜ, ಅಜ್ಜಿ, ಅಮ್ಮ ಇದ್ದಾರೆ ಎನ್ನುವ ನಿಶ್ಚಿಂತೆಯಿಂದಿರುವ ಅಪ್ಪ. ಚಿಕ್ಕವರಿದ್ದಾಗ ಕಿರಿಕಿರಿ ಎನಿಸಿದರೂ ಈಗ ನಮ್ಮನ್ನು ಬಹುವಾಗಿ ಕಾಡುವ, ನಾವೇ ಮತ್ತೆ ಬಯಸುವ ಹಿತಕರವಾದ ವಾತಾವರಣವಿದು. ಮೊದಲು ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲೂ ಇರುವ ಈ ಸನ್ನಿವೇಶ ಈಗ ಬಯಸಿ ಹುಡುಕಿದರೆ ಬೆರಳೆಣಿಕೆಯಷ್ಟು. ಯಾಕಾಗಿ ಈ ಆಲೋಚನೆ ಬಂತೆಂದರೆ ಇಂದು ಹೆಚ್ಚುತ್ತಿರುವ ವೃದ್ಧಾಶ್ರಮಗಳು. ಅರ್ಥಾತ್, ಅವರವರ ಅಂತಸ್ತು, ಹಣಕ್ಕೆ ತಕ್ಕಂತೆ ಅನುಕೂಲ ಒದಗಿಸುವ ವೃದ್ಧರ ಮನೆಗಳು!
ಮೊದಮೊದಲು ಇಳಿ ವಯಸ್ಸಿನಲ್ಲಿ ತಂದೆ- ತಾಯಿಗಳನ್ನು ನೋಡಿಕೊಳ್ಳದವನೆಂದರೆ ಅಯೋಗ್ಯ ಎನ್ನುತ್ತಿದ್ದರು. ಆದರೆ ಈಗ ಅವರಿಗೆ ಎಲ್ಲಾ ಅನುಕೂಲ ಮಾಡಿದ್ದೇವೆ ಎಂಬ ಹಮ್ಮಿನಿಂದ ಹೇಳಿಕೊಂಡು ವೃದ್ಧಾಶ್ರಮಕ್ಕೆ ಬಿಡುವ ಮಕ್ಕಳು ಹಾಗೂ ಅವರನ್ನೇ ಸಮರ್ಥಿಸಿಕೊಳ್ಳುವ ತಂದೆತಾಯಂದಿರು. ನಮಗೇ ಬದುಕಲು ದುಡ್ಡಿಲ್ಲ, ಇನ್ನು ಇವರಿಗೆಲ್ಲಿ ಎಂದು ಅಪ್ಪ-ಅಮ್ಮಂದಿರನ್ನು ಬೀದಿಗೆ ತಳ್ಳುವ ಮಕ್ಕಳು ಇನ್ನೊಂದೆಡೆ. ತಮ್ಮ ಹೀನಾಯ ಸ್ಥಿತಿಗೆ ಕಣ್ಣೀರಿಡುವ ಅಪ್ಪ-ಅಮ್ಮಂದಿರು. ನಿನ್ನೆಯ ನೆನಪಿಲ್ಲದೆ, ನಾಳೆಯ ಯೋಚನೆಯಿಲ್ಲದೆ ಕೇವಲ ದುಡಿಮೆಯ ಹಿಂದೆ ಬಿದ್ದಿರುವ ಜನಾಂಗ. ಎತ್ತ ಸಾಗುತ್ತಿದೆ ನಮ್ಮ ಸಮಾಜ? ಜಾತಿ, ಧರ್ಮ, ಪಂಗಡ, ಮತ ಎಂದು ಹೊಡೆದಾಡುವ ನಮಗೆ ನಮ್ಮೆಲ್ಲರಲ್ಲೂ ಇರುವ ಈ ವಿಷಯ ಏಕೆ ಗಂಭೀರವಾಗಿ ಕಾಣಿಸುತ್ತಿಲ್ಲ?
ನಾವು ಸಣ್ಣವರಿದ್ದಾಗ ಕಾಲಿಗೆ ಚಪ್ಪಲಿ ಇಲ್ಲವೆಂದು ಎತ್ತಿ ಹೆಗಲ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದ ಅಪ್ಪ, ನಾವು ದುಡಿದು ಸಾವಿರಾರು ಸುರಿದು ಶೂ ಹಾಕಿ ಓಡಾಡುವಾಗ ನೆನಪಿಗೇ ಬರುವುದಿಲ್ಲ. ತಮ್ಮ ಕನಿಷ್ಠ ಅಗತ್ಯಗಳನ್ನೂ ಮರೆತು ನಮ್ಮನ್ನು ಓದಿಸಿ, ಬೆಳೆಸಿ ಒಂದು ಸುಸ್ತಿಗೆ ತಲುಪಿಸಿದ ಪಾಲಕರನ್ನು ಕಡೆಗಣಿಸುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಈಗಂತೂ ಹಳ್ಳಿ, ಪಟ್ಟಣ ಎರಡೂ ಕಡೆ ಇದೇ ಪಾಡು. ಮಕ್ಕಳು ಓದಿ ಪಟ್ಟಣ ಸೇರಿ ಹಳ್ಳಿಗಳೇ ಒಂದು ವೃದ್ಧಾಶ್ರಮವಾಗುತ್ತಿರುವುದನ್ನು ನಾವಿಂದು ಕಾಣುತ್ತಿದ್ದೇವೆ. ಇನ್ನು ವಿದೇಶ ಸೇರಿದ ಮಕ್ಕಳು ವರ್ಷ, ಎರಡು ವರ್ಷಕ್ಕೊಮ್ಮೆ ಬಂದು ಅಪ್ಪ- ಅಮ್ಮನ ಮುಖ ನೋಡಿ ಹೋಗುತ್ತಾರೆ. ಅವರ ಮಕ್ಕಳಿಗೋ (ಮೊಮ್ಮಕ್ಕಳು) ಇವರು ಕೇವಲ ಅಜ್ಜ- ಅಜ್ಜಿ ಅಷ್ಟೇ. ಸಂಬಂಧವೇ ಸರಿಯಾಗಿ ಅರ್ಥವಾಗದೇ ಇರುವ ಆ ಮಕ್ಕಳಲ್ಲಿ ಅನುಬಂಧ ಬೆಳೆಯುವುದೇ ಇಲ್ಲ. ನಾವು ತಿನ್ನುವ ಪ್ರತಿಯೊಂದು ತುತ್ತಿನಲ್ಲೂ ನಮ್ಮ ಪಾಲಕರ ಬೆವರಿದೆ, ನಾವು ಅನುಭವಿಸುವ ಸುಖದ ಹಿಂದೆ ಅವರ ಪರಿಶ್ರಮವಿದೆ ಎಂಬುದನ್ನು ನಾವೇ ಮರೆತಂತೆ ಕಾಣುತ್ತಿದೆ. ಇಷ್ಟೆಲ್ಲಾ ದುಡಿಮೆ ಯಾರಿಗಾಗಿ? ಕೇವಲ ನಮ್ಮ ಸುಖಕ್ಕೋ ಅಥವಾ ಅನುಬಂಧ ಮರೆತು ಸೌಕರ್ಯದಲ್ಲೇ ಅಪ್ಪ- ಅಮ್ಮನನ್ನು ಸುಖಪಡಿಸುವ ಭ್ರಮೆಯೋ? ಅಥವಾ ನಾವು ಪಟ್ಟ ಕಷ್ಟವನ್ನು ನಾಳೆ ನಮ್ಮ ಮಕ್ಕಳು ಪಡಬಾರದೆಂಬ ಕಾಳಜಿಯೋ? ಈ ಎಲ್ಲ ಯೋಚನೆಗಳೂ ಸರಿಯೇ. ಆದರೆ, ಇಳಿ ವಯಸ್ಸಿನಲ್ಲಿ ಬೇಕಾಗಿರುವುದು ಮಕ್ಕಳ ಕಾಳಜಿ, ಕುಟುಂಬದವರ ಹಿತವಾದ ಸ್ಪರ್ಶ, ಎಂಥಾ ನೋವನ್ನೂ ಮರೆಸುವ ಮೊಮ್ಮಕ್ಕಳ ನಲ್ಮೆಯ ತೊದಲು ನುಡಿ, ಆಟ-ಪಾಠ. ಹಾಗೆಯೇ ನಮ್ಮ ಮಕ್ಕಳಿಗೆ ಬೇಕಾಗಿರುವ ಭದ್ರತಾ ಭಾವನೆ.
ನಾವಿಂದು ಕೇವಲ ದುಡ್ಡಿಗಾಗಿ ಅಥವಾ ಮಕ್ಕಳ ನಾಳೆಯ ಭವಿಷ್ಯಕ್ಕಾಗಿ ದುಡಿಯುತ್ತಾ ನಮ್ಮ ಮಕ್ಕಳನ್ನ ಒಂಟಿ ಮಾಡುತ್ತಿದ್ದೇವೆ ಎಂದನಿಸುತ್ತಿದೆ. ಯಾವ ರೀತಿಯ ಸಂಬಂಧಗಳ ಅರಿವಿಲ್ಲದೆ, ಹಿರಿಯರ ಬಗ್ಗೆ ಗೌರವವಿಲ್ಲದೆ ಬೆಳೆದ ನಮ್ಮ ಮಕ್ಕಳು ನಾಳೆ ನಮ್ಮನ್ನೂ ನಾವು ನಮ್ಮ ಅಪ್ಪ- ಅಮ್ಮಂದಿರನ್ನು ನಡೆಸಿಕೊಂಡಂಥ ಸ್ಥಿತಿಗೇ ದೂಡಬಹುದು ಎಂಬ ಕನಿಷ್ಠ ಅರಿವೂ ನಮಗಾಗುತ್ತಿಲ್ಲವೆ? ಅದಿರಲಿ, ಯಾವುದೇ ರೀತಿಯ ಬಾಂಧವ್ಯದ ಅರಿವಿಲ್ಲದೆ ಬೆಳೆದ ಅವರ ಬದುಕು ಹೇಗಿರುತ್ತದೆ ಎಂದು ಯೋಚನೆ ಮಾಡಿದ್ದೇವಾ? ನಮ್ಮನ್ನ, ನಮ್ಮ ಮಕ್ಕಳನ್ನ ನಾವೇ ಅನಾಥರನ್ನಾಗಿಸುತ್ತಿದ್ದೇವಾ? ಅನಿವಾರ್ಯತೆಗೆಂದು ತಲೆಯೆತ್ತಿದ ವೃದ್ಧಾಶ್ರಮ ಇಂದು ಅವಶ್ಯಕತೆಯಾಗಿ ಬದಲಾಗುತ್ತಿರುವುದು ಸಂವೇದನೆ ಕಳೆದುಕೊಂಡ, ಸಂಬಂಧಗಳನ್ನು ಕಡಿದುಕೊಂಡ ಸಮಾಜ ನಿರ್ಮಾಣವಾಗುತ್ತಿರುವುದರ ಸಂಕೇತವೆನಿಸುತ್ತಿಲ್ಲವೆ? ಇಂದಿನ ವೃದ್ಧರಿಗೆ ಉಳಿಯುವುದಕ್ಕೆ ವೃದ್ಧಾಶ್ರಮವಾದರೂ ಇದೆ. ಹೀಗೆಯೇ ಮುಂದುವರಿದರೆ ನಮ್ಮ ಸಂಧ್ಯಾಕಾಲದ ನಾಳೆಗಳಿಗಾಗಿ ಬಹುಶಃ ಇಂದೇ ನಮ್ಮ ಜಾಗವನ್ನು ನಾವೇ ಕಾಯ್ದಿರಿಸಿಬೇಕಾದ ಪರಿಸ್ಥಿತಿ ಉಂಟಾಗಬಹುದು. ಯೋಚಿಸಿ...ಟಿ
'ಹ್ಯಾಗೆ ಬರೆಯೋದು?', 'ನಾವ್ ಬರೆದಿದ್ದನ್ನ ಪ್ರಕಟಿಸ್ತಾರಾ?' ಎಂಬ ಆತಂಕ ಬದಿಗಿಟ್ಟು ನಿಮ್ಮ ಮೊದಲ ್ಣಬರಹಗಳನ್ನು ನಮಗೆ ಕಳುಹಿಸಿ. 'ಇದೇ ಮೊದಲ ಬಾರಿಗೆ ನನ್ನ ಬರಹ ಪ್ರಕಟವಾಗಿದೆ' ಎಂಬ ಖುಷಿ ನಿಮ್ಮದಾದರೆ ಸಾಕು. ತೊದಲು ಬರಹಗಳಿಗೇ ಇರುವ ಅಂಕಣ ಇದು, 'ಮೊದಲ ಖುಷಿ'. ನೀವೂ ಗೀಚಿ...
- ವೇದಾ ಭಟ್