

ಕಳೆದೆರಡು ವರ್ಷಗಳಿಂದ ನೇಪಾಳ ಎಂಬ ಭಾರತದ ಭುಜವನ್ನು ಹತ್ತಿ ಕುಳಿತಿರುವ ನನಗೆ, ಸತ್ಯ ಹೇಳಬೇಕೆಂದರೆ ಭಾರತದಿಂದ ತೀರಾ ಹೊರಗಿದ್ದೇನೆಂದು ಅನ್ನಿಸಿದ್ದಿಲ್ಲ. ಈ ಮಣ್ಣಿನಲ್ಲಿ, ಗುಡ್ದ ಬೆಟ್ಟಗಳಲ್ಲಿ, ಹಿಮಾಲಯದ ಸಾನ್ನಿಧ್ಯದಲ್ಲಿ ನಾನು ಸದಾ ಭರತವರ್ಷದ ಇತಿಹಾಸವನ್ನು ನೆನೆಯುತ್ತ ಬಂದಿದ್ದೇನೆ.
ಬ್ರಿಟಿಷರು ಇಡೀ ಭಾರತವನ್ನು ಆಕ್ರಮಿಸಿದರೂ ಈ ದೇಶವನ್ನು ಬಿಟ್ಟರಲ್ಲ ಎಂಬುದರ ಬಗ್ಗೆ ನನಗೆ ನಿಜಕ್ಕೂ ಖೇದವಿದೆ. ಬ್ರಿಟಿಷರು ಭಾರತವನ್ನು ಸುದೀರ್ಘವಾಗಿ ಆಳಿ ಭಾರತಕ್ಕೆ ನೀಡಿದ್ದ ಕೊಡುಗೆ ಅಸಾಧಾರಣವಾದದ್ದು. ಹಾಗೆಯೇ ಅವರು ಈ ದೇಶವನ್ನೂ ಆಳಿದ್ದರೆ ನೇಪಾಳವು ತನ್ನ ಅಸಾಧಾರಣ ನೈಸರ್ಗಿಕ ಹಿರಿಮೆಯ ಜತೆಗೆ ಆಧುನಿಕತೆಯನ್ನೂ ತನ್ನದಾಗಿಸಿಕೊಂಡು ಮುನ್ನಡೆಯನ್ನು ಕಾಣುತ್ತಿತ್ತು ಎಂಬುದು ನಿಸ್ಸಂಶಯದ ಮಾತು. ಅವರು ಇಲ್ಲಿಗೆ ಯಾಕೆ ಬರಲಿಲ್ಲ ಎಂಬುದು ಮತ್ತೊಂದು ಸುದೀರ್ಘ ಲೇಖನಕ್ಕಾಗುವಂಥ ಮಾತು.
ನೇಪಾಳದ ಭೂಪಟವನ್ನು ಮೂರು ಭಾಗವಾಗಿ ಅಡ್ಡಡ್ಡ ಕತ್ತರಿಸಿದರೆ ಮೇಲಿನ ಎರಡು ಭಾಗಗಳು ನಿಸರ್ಗದ ಔನ್ನತ್ಯದ ಪರಮಾವಧಿ ಮೇಲಿನ ಹಿಮಾಲಯದ ಚಿತ್ತಾಪಹಾರಿ ಸಾಲು ಅತ್ಯಂತ ರಮಣೀಯ. ಹಿಮಾಲಯದ ಬಗ್ಗೆ ಬರೆಯುವುದು ಅಸಾಧ್ಯದ ಮಾತು. ಹಾಗೇನಾದರೂ ಬರೆಯುತ್ತೇನೆಂದು ಚಿಂತಿಸುತ್ತಾ ಹೋದರೆ, ಆತ ಗಡ್ಡ ಬಿಟ್ಟು ಋಷಿಯಾಗಿ ನೂರಾರು ಸಿದ್ಧಿಗಳನ್ನು ತನ್ನದಾಗಿಸಿಕೊಂಡುಬಿಡುತ್ತಾನೆ. ಆ ಭಾಗಗಳಲ್ಲಿ ಟ್ರೆಕ್ಕಿಂಗ್ ಮಾಡುವವರ ಹುಚ್ಚಿನಿಂದ, ಇಲ್ಲಿಗೆ ಜಗತ್ತಿನ ಮೂಲೆ ಮೂಲೆಗಳಿಂದ ಬರುವ ಸಾಹಸಿಗಳಿಂದ ನೇಪಾಳವು ಅರ್ಧ ಬದುಕಿದೆ ಇನ್ನು ಮಧ್ಯ ಭಾಗದ ಹಸಿರು ಪರ್ವತಗಳ ಪಹಾಡೀ ಇಲಾಖೆಯ ಹಿರಿಮೆಯೇ ಬೇರೆ. ಈ ಭಾಗದ ಎಷ್ಟೋ ಜಿಲ್ಲೆಗಳ ಮಾನವ ಕಣ್ಣುಗಳು ವಿದ್ಯುತ್ ಕಂಡಿಲ್ಲ ಮತ್ತು ಮನೆ ಸೇರುವ ಕಾಲುದಾರಿಗಳು ದಿನಗಟ್ಟಲೆ ಕ್ರಮಿಸುವಂಥದ್ದು. ಕೆಳಭಾಗವನ್ನು 'ಥರಾಯ್' ಎಂದು ಕರೆಯುತ್ತಾರೆ. ನಮ್ಮ ಬಯಲು ಸೀಮೆಯಂಥ ನಾಡು ಅದು.
ಹೀಗಾಗಿ ನೇಪಾಳದ ಮಾನವ ಜೀವನ ಸುಲಭದ್ದಲ್ಲ. ರಾಜರ ಆಡಳಿತ ಕಳೆದು ಪ್ರಜಾಪ್ರಭುತ್ವವು ಬಂದು ಆರು ವರ್ಷಗಳು ಕಳೆದರೂ ಇಲ್ಲಿನ ರಾಜಕಾರಣಿಗಳಿಗೆ ಸಂವಿಧಾನವೊಂದನ್ನು ರಚಿಸಲಾಗಿಲ್ಲ. ಹಾಗಾಗಿ ಅತ್ತ ರಾಜರ ಆಳ್ವಿಕೆಯೂ ಅಲ್ಲದ, ಇತ್ತ ಡೆಮಾಕ್ರೆಟಿಕ್ಕೂ ಅಲ್ಲದ ತ್ರಿಶಂಕು ಸ್ಥಿತಿ ನೇಪಾಳದ್ದು. ಇಂಥ ರಾಜಕೀಯ ಅಸ್ಥಿರತೆಯ ಪರಿಣಾಮ, ಆಗಾಗ ಸ್ಥಿಮಿತ ಕಳೆದುಕೊಳ್ಳುವ ವಿರೋಧ ಪಕ್ಷಗಳು ಘೋಷಿಸುವ ಬಂದ್ಗಳು. ಹಾಲಿಲ್ಲ, ನೀರಿಲ್ಲ, ಬಸ್ಸಿಲ್ಲ, ರಸ್ತೆ ಖಾಲಿ ಖಾಲಿ... ಈ ಲೇಖನವನ್ನು ಬರೆಯುವ ಎರಡು ದಿನಗಳ ಮುಂಚೆ ನನ್ನ ಕಾಠ್ಮಂಡು ಭೇಟಿ ಅದ್ಭುತವಾಗಿತ್ತು. ಅದೇ ವೇಳೆ ಎಲೆಕ್ಷನ್. ಅದ್ಯಾವುದೋ ತಲೆಕೆಟ್ಟ ಪಕ್ಷವೊಂದು ಎಲೆಕ್ಷನ್ ನಿಲ್ಲಿಸಲು ತಿಂಗಳಾನುಗಟ್ಟಲೆ ದೇಶಾದ್ಯಂತ ಬಂದ್ಗೆ ಕರೆಕೊಟ್ಟಿದೆ. ರಾತ್ರಿ ಯಾವುದೋ ಡಕೋಟ ಬಸ್ ಹತ್ತಿ ಪೋಖರಾದಿಂದ ಕಾಠ್ಮಂಡುಗೆ ತೆರಳಿದ್ದ ನಾನು, ಮಾರನೆಯ ದಿನ ರಾತ್ರಿಯೂ ಬಸ್ ಸಂಚರಿಸುವುದಿಲ್ಲವೆಂಬ ಸುದ್ದಿ ಕೇಳಿ ವಾಪಸ್ ಪೋಖರಾಗೆ ಫ್ಲೈಟ್ ಹತ್ತಬೇಕಾಗಿ ಬಂತು, ಮೂರು ಪಟ್ಟು ಹಣ ತೆತ್ತು ಕಾಠ್ಮಂಡುವಿನಲ್ಲಿ ಬಂದ್ನ ಕಾರಣದಿಂದಾಗಿ ನಾನು ನಡೆದಿದ್ದು 15ಕ್ಕೂ ಹೆಚ್ಚು ಕಿಲೋಮೀಟರ್ಗಳು!
ಇಷ್ಟಾಗಿ ನಾನು ನೇಪಾಳವನ್ನು ತುಂಬ ಪ್ರೀತಿಸುವುದಕ್ಕೆ ಬಹಳಷ್ಟು ಕಾರಣಗಳಿವೆ. ಈ ಅಮೋಘ ನಿಸರ್ಗ, ನೂರಾರು ಕ್ಲಾಸಿಕ್ನದಿಗಳು, ಸರೋವರಗಳು, ಕಣ್ಣೆತ್ತಿದರೆ ನಿತ್ಯ ಕಾಣುವ ಹಿಮಾಲಯದ ಬೆಳ್ಳಿ ಬೆಟ್ಟಗಳು, ಮರದ ಅಪರೂಪದ ಕೆತ್ತನೆಯ ಸಾವಿರಾರು ದೇಗುಲಗಳು, ಅಲ್ಲಿನ ವಿಶಿಷ್ಟ ಆಚರಣೆಗಳು, ಇಂದು ಜನಸಾಮಾನ್ಯರಂತಿರುವ ನಾವು ಪುರಾಣಗಳಲ್ಲಿ ಕಂಡ ಕಿರಾತರು, ಗಂಧರ್ವರು, ಪುರಾಣಗಳಲ್ಲಿ ನಮ್ಮನ್ನು ಕೆಣಕಿದ ಮತ್ತೂ ಹತ್ತಾರು ವಿವಿಧ ಬುಡಕಟ್ಟಿನ ಜನರು, ಅವರ ಶಾಸ್ತ್ರೀಯ ಭಾಷೆ, ಅಲ್ಲೆಲ್ಲ ನಾನು ಭರತವರ್ಷವನ್ನು ಕಂಡಿದ್ದೇನೆ. ಇಲ್ಲಿನ ಅನುಭೂತಿಯ ಬಗೆಯೇ ಬೇರೆ. ಬಂದು ನಾಕು ದಿನವಿದ್ದು ಕಂಡು ಹೋದರೆ ಕಾಣುವುದು ಈ ಎಲ್ಲ ಅದ್ಭುತಗಳ ಪ್ರತಿಮೆಗಳಷ್ಟೇ. ಇದ್ದು ಐಹಿಕವನ್ನು ಮರೆತು ಕಂಡರೆ ಅಲ್ಲಿ ಕಾಣುವುದು ನಿಜದ ಕಾಣ್ಕೆ.
- ಡಾ. ಕಣಾದ ರಾಘವ
dr.kanada@gmail.com