

ದ್ವೇಷಿಸ ತೊಡಗಿದ್ದೇನೆ
ನಿನ್ನ ಜತೆ
ನಿನ್ನ ಮಾತುಗಳನ್ನೂ
ನಿನ್ನನ್ನು ಕಾಡಿದಾಗ
ನೀ ನನಗೆ ಕೊಟ್ಟ ಉಪ್ಪಿಲ್ಲದ ಕಣ್ಣೀರಿನ
ಪದಗಳು ನನ್ನಲ್ಲೂ ಹುಟ್ಟಿದ್ದರೆ
ನಾನು ಅಂದೇ
ಕವಿಯಾಗಿ ಬಿಡುತ್ತಿದ್ದೆ
ಈಗ ಇಲ್ಲಿ ಹರಿಯುತ್ತಿರುವುದು
ಕೊಳಚೆ ನೀರು ಮಾತ್ರ
ನೀ ನನ್ನಿಂದ ದೋಚಿದ
ಕನಸುಗಳನ್ನು
ಅನುರಾಗದ ನೋವನ್ನು
ಮನಸ್ಸಿನಿಂದ ಕಿತ್ತೆಸೆಯಲು
ನಾನು ಕಂಡುಕೊಂಡ
ಮಾರ್ಗ ಇದು
ಮೇಣದ ಬತ್ತಿ
ಉರಿದುರಿದು ಕರಗುತ್ತಿದೆ
ಶವಗಳು ನಾತ ಬೀರುತ್ತಿವೆ
ನಾನಿನ್ನು ಇಲ್ಲಿಂದ
ಹೋಗಲೇ ಬೇಕಾಗಿದೆ
ಇಲ್ಲವಾದರೆ ನನ್ನ ಆತ್ಮವೂ
ಈ ಶವದೊಂದಿಗೆ ಮಣ್ಣಾಗುವುದು
ಇಲ್ಲಿಯವರೆಗೆ
ನಿಶಾಗಂಧಿಯನ್ನೂ
ಬೆಳದಿಂಗಳನ್ನೂ ಪ್ರೀತಿಸುತ್ತಾ
ಬದುಕು ಸಾಗಿಸಿದೆ
ಪ್ರಣಯವಾಗಿಯೂ, ಕನಸಾಗಿಯೂ
ಬಯಕೆಯಾಗಿಯೂ, ನಷ್ಟವಾಗಿಯೂ
ರಕ್ತವಾಗಿಯೂ, ಮಳೆಯಾಗಿಯೂ
ಮನುಷ್ಯಳಾಗಿಯೂ ಬದುಕಿದೆ
ಇನ್ನು ಬರೆಯಲು ವಾಕ್ಯಗಳಿಲ್ಲ
ಹಾಡಲು ಹಾಡುಗಳೂ
ನನ್ನಲ್ಲಿಲ್ಲ
ಕ್ಷಮೆಯಿರಲಿ
ಯಾವುದೇ ಪ್ರಾಯಶ್ಚಿತವಿಲ್ಲದೆ
ನಾನು ಮೆಟ್ಟಲಿಳಿಯುತ್ತಿದ್ದೇನೆ
ಈ ರುದ್ರಭೂಮಿಗೆ
ನೀವೂ ಬರುವುದಾದರೆ
ನೋಡಿ
ಒಂದು ನಕ್ಷತ್ರ ಕಣ್ಣು
ಮಿಟುಕಿಸುತ್ತಿರಬಹುದು.
- ರಶ್ಮಿ ಕಾಸರಗೋಡು
rashmitendulkar@gmail.com