ಕಾಮಿಡಿ ಉಪ್ಪಿನಕಾಯಿ

ಕಾಮಿಡಿ ಉಪ್ಪಿನಕಾಯಿ
Updated on: 

ತೆರೆ ಮೇಲೆ ಚಪ್ಪರಿಸಿ ನೋಡಿ
ಲವ್‌ಸ್ಟೋರಿಗಳು ಮತ್ತು ಕಾಮಿಡಿ ಸ್ಟೋರಿಗಳಿಗೆ ಚಿತ್ರರಂಗದಲ್ಲಿ ಯಾವತ್ತಿಗೂ ಮಾರ್ಕೆಟ್ ಇರುತ್ತದೆ ಎಂಬುದು ಸಿನಿಮಾ ಪಂಡಿತರ ಮಾತು. ಅದು ನಿಜ ಕೂಡ. ಅದರಲ್ಲೂ ಇತ್ತೀಚಿಗೆ, ಎಂಥ ಚಿತ್ರಗಳಾದರೂ ಅದರಲ್ಲೂ ಕಾಮಿಡಿ ಎಷ್ಟಿದೆ ಎಂಬುದು ಮುಖ್ಯವಾಗುತ್ತಿದೆ. ಹಾಗಾಗಿ ಈಗೀಗ ಒಂದು ಲೆಕ್ಕದಲ್ಲಿ ಎಲ್ಲ ಚಿತ್ರಗಳೂ ಕಾಮಿಡಿ ಚಿತ್ರಗಳೇ. ಆದರೆ ಕೆಲವು ಪೂರ್ಣಪ್ರಮಾಣದ ಕಾಮಿಡಿ ಚಿತ್ರಗಳು ನಮಗೆ ಕೊಟ್ಟ ಕಿಕ್‌ನ ಗಮ್ಮತ್ತೇ ಬೇರೆ. ಕನ್ನಡದ ಅಂಥ ಕೆಲವು ಜನಪ್ರಿಯ ಕಾಮಿಡಿ ಚಿತ್ರಗಳತ್ತ ಇಣುಕಿ ನೋಡುವ ಒಂದು ಸಣ್ಣ ಪ್ರಯತ್ನ ಇದು.
ಗುರುಶಿಷ್ಯರು
ಗುರುಗಳು ಸಾರ್ ಗುರುಗಳು
ಕನ್ನಡದಲ್ಲಿ ಕಾಮಿಡಿ ಸಿನಿಮಾ ಎಂದಕೂಡಲೇ ಬಹುಶಃ ಎಲ್ಲರಿಗೂ ಮೊದಲು ನೆನಪಾಗುವ ಚಿತ್ರ ಎಂದರೆ ಗುರು ಶಿಷ್ಯರು. ಒಂಥರಾ ಕಿಂಗ್ ಆಫ್ ಕಾಮಿಡೀಸ್ ಎನ್ನುವಂಥ ಚಿತ್ರದಲ್ಲಿ ವಿಷ್ಣುವರ್ಧನ್ ಕಿಂಗ್ ಆಗಿದ್ದರೂ ಕಾಮಿಡಿ ಕಿಲಾಡಿಗಳು ಎನಿಸಿಕೊಂಡಿದ್ದು ರಾಜಾನಂದ್ ಅವರ ಜೊತೆಗೆ ಕಾಣಿಸಿಕೊಂಡ ದ್ವಾರಕೀಶ್, ರತ್ನಾಕರ್, ಉಮೇಶ್, ಗೋಡೆ ಲಕ್ಷ್ಮೀನಾರಾಯಣ್, ಶಿವರಾಮ್ ಮುಂತಾದವರನ್ನೊಳಗೊಂಡ ಶಿಷ್ಯರ ತಂಡ. ಇದರ ಜೊತೆಗೆ ಕಿರೀಟದ ಮೇಲಿನ ಕಳಶದಂತೆ ಮುಸುರಿ ಕೃಷ್ಣಮೂರ್ತಿ ಅವರ ಅಭಿನಯ. ಭಾರ್ಗವ ನಿರ್ದೇಶನದ ಈ ಚಿತ್ರದಲ್ಲಿ ನಾಯಕ, ನಾಯಕಿಯರ ಕಥೆ ಕೇವಲ ನಾಮ್‌ಕೇವಾಸ್ತೆ ಆಗಿ, ಶಾಪಗ್ರಸ್ತ ಶಿಷ್ಯರ ಹುಚ್ಚಾಟಗಳಿಂದಲೇ ಸಿನಿಮಾ ಜನಪ್ರಿಯವಾದದ್ದು ವಿಶೇಷ.
ಪುಷ್ಪಕ ವಿಮಾನ
ಮೌನ ಸಂಭಾಷಣೆ
ಸಿಂಗೀತಂ ಶ್ರೀನಿವಾಸ್ ನಿರ್ದೇಶನದ ಕ್ಲಾಸಿಕ್ ಚಿತ್ರಗಳಲ್ಲಿ ಇದೂ ಒಂದು. ಮೂಕಿ ಚಿತ್ರ ಎಂಬ ಕಾರಣಕ್ಕೇ ದೊಡ್ಡ ಹೆಸರು ಮಾಡಿದರೂ ಇದೂ ಕೂಡ ಕಾಮಿಡಿ ಕೆಟಗರಿಗೇ ಸೇರಿದ್ದು. ಆ ಕಾಲದಲ್ಲೇ ಕಮಲ್‌ಹಾಸನ್, ಅಮಲ ಅಭಿನಯದ ಅಮಲು ಎಲ್ಲರ ನೆತ್ತಿಗೇರಿತ್ತು. ಕುತ್ತಿಗೆ ಹಿಡಿದುಕೊಂಡು ನಗುವಷ್ಟು ಕಾಮಿಡಿ ಸರಕೇ ಅಲ್ಲಿತ್ತು. ಕಾಮಿಡಿ ಚಿತ್ರ ಎಂದರೆ ಸಂಭಾಷಣೆಯನ್ನು ನೆಚ್ಚಿಕೊಂಡವರೇ ಎಲ್ಲ. ಆದರೆ ಚಾರ್ಲಿ ಚಾಪ್ಲಿನ್ ಚಿತ್ರಗಳ ಶೈಲಿಯಲ್ಲಿ ಭಾರತೀಯ ಶೈಲಿಯ ಕಥೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡಿ ಯಶಸ್ಸು ಗಳಿಸಿದ್ದು ಪುಷ್ಪಕ ವಿಮಾನ ಚಿತ್ರದ ಹೆಗ್ಗಳಿಕೆ. ಟೀನೂ ಆನಂದ್‌ರಂಥ ಖಳನಟ ಕೂಡ ಕಾಮಿಡಿ ಚಿತ್ರದಲ್ಲಿ ಸ್ಕೋರ್ ಮಾಡಿದ್ದು ವಿಶೇಷ. ಕಮಲ್‌ರ ವೇಸ್ಟ್ ಮ್ಯಾನೇಜ್‌ಮೆಂಟ್ ಸ್ಕಿಲ್ಸ್, ಅಮಲ ಜೊತೆಗಿನ ಮೌನ ಪ್ರೇಮ ಸಂಭಾಷಣೆ, ಕ್ಲೈಮ್ಯಾಕ್ಸ್‌ನಲ್ಲಿ ಟೀನೂ ಆನಂದ್ ಜೊತೆಗಿನ ಐಸ್ ವಾರ್ ಎಲ್ಲವೂ ಈ ಚಿತ್ರದ ಹೈಲೈಟ್ಸ್.

ಉಂಡೂಹೋದ ಕೊಂಡೂ ಹೋದ
ಮಾಸ್ಟರ್ ಪೀಸ್
ಮಾಸ್ತರರಾಗಿದ್ದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಮಾಸ್ಟರ್ ಪೀಸ್ ಎಂದೇ ಕರೆಯಬಹುದಾದ ಚಿತ್ರ ಇದು. ಮೋಸ ಮಾಡಲೆಂದು ತಮ್ಮ ಹಳ್ಳಿಗೆ ಬಂದ ಕೌ ಇನ್ಸ್‌ಪೆಕ್ಟರ್‌ರನ್ನು ನೀವು ಓದಿದ್ದು, ಫೇಲಾಗಿದ್ದು ಎಲ್ಲ ಯಾವ ಸ್ಕೂಲಲ್ಲಿ ಸಾರ್ ಎಂದು ಕೇಳುವ ಹಳ್ಳಿ ಹುಡುಗರ ಅಮಾಯಕತೆ, ದೌರ್ಬಲ್ಯ. ತನ್ನದೊಂದು ಕವಿತೆ ಪ್ರಕಟವಾಗಬೇಕು, ನನ್ನ ಹಾಡು ನಿಮ್ಮ ಮೆಚ್ಚಿನ ಚಿತ್ರಗೀತೆಗಳು ಕಾರ್ಯಕ್ರಮದಲ್ಲಿ ಪ್ರಸಾರವಾಗಬೇಕು, ಬಸ್‌ನಲ್ಲಿ ಕಂಡಕ್ಟರ್ ಆಗಬೇಕು ಎಂಬುದನ್ನೇ ಮಹತ್ವಾಕಾಂಕ್ಷೆಯನ್ನಾಗಿಸಿಕೊಂಡ ಕಮಂಗಿಪುರದ ಕ್ರಾಂತಿಕಾರಿಗಳ ನಡುವೆ ಫ್ರಾಡ್ ಒಬ್ಬ ಕೊನೆಗೆ ಮಾನವೀಯತೆಯ ಹಾದಿ ಹಿಡಿಯುವ ಕಥೆಯನ್ನು ಎಷ್ಟು ಹಾಸ್ಯಮಯವಾಗಿ ಹೇಳಬಹುದು ಎಂಬುದನ್ನು ಈ ಚಿತ್ರದಲ್ಲಿ ನಾಗತಿಹಳ್ಳಿ ಯಶಸ್ವಿಯಾಗಿ ತೋರಿಸಿಕೊಟ್ಟಿದ್ದರು.

ಗೌರಿಗಣೇಶ
ಡ್ಯಾಡಿ ನಂಬರ್ 1,2,3
ಫಣಿ ರಾಮಚಂದ್ರ ಅವರ ಗಣೇಶನ ಮದುವೆ ಚಿತ್ರದ ಯಶಸ್ಸಿನ ಸ್ಫೂರ್ತಿಯಿಂದ ಬಂದ ಚಿತ್ರ ಇದು. ಗಣೇಶನ  ಸೀರೀಸ್ ಚಿತ್ರಗಳಲ್ಲೇ ಅತಿ ಜನಪ್ರಿಯವಾದದ್ದು ಎನ್ನಬಹುದು. ಗಣೇಶನ ಮದುವೆ ಚಿತ್ರದಲ್ಲಿ ಅನಂತ್‌ನಾಗ್, ವಿನಯಾಪ್ರಸಾದ್ ಜೋಡಿಯೇ ಆಕರ್ಷಣೆ ಎನಿಸಿದರೆ ಈ ಚಿತ್ರದಲ್ಲಿ ಅನಂತನಾಗ್ ಅವರಿಗೆ ತಕ್ಕ ಜೋಡಿ ಎನಿಸಿಕೊಂಡಿದ್ದು ಮಾಸ್ಟರ್ ಆನಂದ್. ಅಮಾಯಕ ಹೆಣ್ಣೊಬ್ಬಳ ಕಥೆ ಎಂದು ಶುರುವಾಗುವ ಚಿತ್ರ ಎಲ್ಲಿಂದಲೋ ಆರಂಭವಾಗಿ ಎಲ್ಲಿಗೋ ತಲುಪುತ್ತದೆ. ಮೊದಲು ಅನಾಥ ಬಾಲಕ ಎನಿಸಿಕೊಂಡ ಮಾಸ್ಟರ್ ಆನಂದ್ ಎಷ್ಟೇ ಕಾಮಿಡಿ ಮಾಡಿದರೂ, 'ನೋಡಿದ್ರಾ ಸರ್, ಒಂದ್ ಕಾಲದಲ್ಲಿ ನನಗೆ ಒಬ್ರೂ ಅಪ್ಪ ಇರಲಿಲ್ಲ, ಈಗ ಥ್ರೀ ಥ್ರೀ ಡ್ಯಾಡೀಸ್‌' ಎನ್ನುವ ಸಂಭಾಷಣೆಯಲ್ಲಿನ ಗಾಂಭೀರ್ಯ ಗೌರಿ ಗಣೇಶ ಚಿತ್ರದ ಹಲವು ಹೈಲೈಟ್ಸ್‌ಗಳಲ್ಲೊಂದು.

ಎದ್ದೇಳು ಮಂಜುನಾಥ
ನಾವು ಕಮರ್ಷಿಯಲ್ಲು
ಜಗ್ಗೇಶ್ ಅವರ ಇತ್ತೀಚಿನ ವೃತ್ತಿ ಜೀವನದಲ್ಲಿ ದೊಡ್ಡ ತಿರುವು ಕೊಟ್ಟ ಚಿತ್ರಗಳೆಂದರೆ ಒಂದು ಮಠ, ಇನ್ನೊಂದು ಎದ್ದೇಳು ಮಂಜುನಾಥ. ಗುರುಪ್ರಸಾದ್ ನಿರ್ದೇಶನದ ಈ ಎರಡೂ ಚಿತ್ರಗಳು ನಿಜವಾದ ಅರ್ಥದಲ್ಲಿ ಟಾಕಿ ಚಿತ್ರಗಳು ಎನ್ನುವಷ್ಟರ ಮಟ್ಟಿಗೆ ಜನಪ್ರಿಯವಾದವು. ಆದರೆ ಈ ಎರಡರಲ್ಲ್ಲಿ ಎದ್ದೇಳು ಮಂಜುನಾಥ ಹೆಚ್ಚಿನ ಸ್ಕೋರ್ ಮಾಡುತ್ತಾನೆ. ಸೋಮಾರಿ ಕುಡುಕನೊಬ್ಬನ ಕಥೆಯನ್ನು ಹೀಗೂ ಹೇಳಬಹುದು ಎಂದು ತೋರಿಸಿಕೊಟ್ಟಿದ್ದು ಗುರುಪ್ರಸಾದ್, ಇಂಥ ಪಾತ್ರವನ್ನೂ ಹೀಗೂ ಅಭಿನಯಿಸಬಹುದು ಎಂದು ತೋರಿಸಿಕೊಟ್ಟಿದ್ದು ನವರಸ ನಾಯಕ ಜಗ್ಗೇಶ್. ಇಂದಿಗೂ ಯೂ ಟ್ಯೂಬ್‌ನಲ್ಲಿರುವ ಕಾಮಿಡಿ ಸಿನಿಮಾ ಬಿಟ್ಸ್‌ಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಇರುವ ಚಿತ್ರ ಇದೇ. ಅದರಲ್ಲೂ ನಾಣಿ ಮತ್ತು ಕಂಠಪೂರ್ತಿ ಕುಡಿಯುವ ಪಾತ್ರದಲ್ಲಿರುವ ಜಗ್ಗೇಶ್ ಅವರ ಜುಗಲ್ಬಂದಿಯ ಸಂಭಾಷಣೆಗಳು ಸಿನಿಮಾ ಪ್ರಿಯರಿಗೆ ಹೆಚ್ಚೂ ಕಡಿಮೆ ಕಂಠಪಾಠವಾಗಿವೆ.
ಕೋತಿಗಳು ಸಾರ್ ಕೋತಿಗಳು
ಬಾರೆ ರಾಜಕುಮಾರಿ
ಸೀರಿಯಸ್ ಸಿನಿಮಾಗಳಿಗೆ ಹೆಸರಾಗಿದ್ದ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅವರ ಇತ್ತೀಚಿನ 'ಸಾರ್‌' ಸರಣಿಯ ಚಿತ್ರ ಇದು. ಕುರಿಗಳು, ಕೋತಿಗಳು, ಕತ್ತೆಗಳು ಎಂಬ ಹ್ಯಾಟ್ರಿಕ್ ಚಿತ್ರಗಳಲ್ಲೂ ಗೆಲುವು ಸಾಧಿಸಿದರೂ ಕೋತಿಗಳಿಗೆ ಹೆಚ್ಚು ಅಂಕಗಳು ಸಿಗುತ್ತವೆ. ಮಧ್ಯಮ ವರ್ಗದ ಜನ ಜೀವನವನ್ನು ತೋರಿಸುತ್ತ ಅದರಲ್ಲಿ ಎಷ್ಟೆಲ್ಲಾ ವಿಷಯಗಳನ್ನು ತೂರಿಸಬಹುದು ಎಂದು ತೋರಿಸಿಕೊಟ್ಟಿದ್ದರು ಸಿಂಗ್ ಬಾಬು. ಅದಕ್ಕೆ ತಕ್ಕಂತೆ ರಮೇಶ್, ಎಸ್.ನಾರಾಯಣ್, ಮೋಹನ್ ಎಂಬ ತ್ರಿಮೂರ್ತಿಗಳು ತಮ್ಮ ವಿಶಿಷ್ಟ ಅಭಿನಯದಿಂದ ಕೋತಿಗಳನ್ನು ಸೂಪರ್‌ಹೀರೋಗಳಾಗಿಸಿ ಇದನ್ನು ಸೂಪರ್ ಹಿಟ್ ಸಿನಿಮಾ ಆಗಿಸಿದ್ದರು. ಮುನಿಯಮ್ಮನ ಪಾತ್ರದಲ್ಲಿ ಉಮಾಶ್ರೀ ಮಿಂಚಿದರೆ, ಬಾರೆ ರಾಜಕುಮಾರಿ ಎನ್ನುತ್ತಾ ಪ್ರೇಕ್ಷಕರನ್ನು ಜಂಬೂಸವಾರಿಗೆ ತರೆದುಕೊಂಡು ಹೋಗುವಲ್ಲಿ ಹಂಸಲೇಖರ ಹಾಡುಗಳ ಮಹತ್ವವೂ ದೊಡ್ಡದಿತ್ತು.

ಆಸೆಗೊಬ್ಬ ಮೀಸೆಗೊಬ್ಬ
ಅಪ್ಪ ಅನ್ನೋದು ಬುರುಡೆ...
ಅಮೋಲ್ ಪಾಲೇಕರ್ ಅಭಿನಯದ ಹೃಷಿಕೇಷ್ ಮುಖರ್ಜಿ ನಿರ್ದೇಶನದ ಗೋಲ್‌ಮಾಲ್ ಚಿತ್ರ ಹಿಂದಿಯ ಕಾಮಿಡಿ ಚಿತ್ರಗಳಲ್ಲಿ ಕ್ಲಾಸಿಕ್ ಸ್ಥಾನ ಪಡೆದುಕೊಂಡಂಥದ್ದು. ಈ ಚಿತ್ರವನ್ನು ಕನ್ನಡಕ್ಕೆ ಆಸೆಗೊಬ್ಬ ಮೀಸೆಗೊಬ್ಬ ಎಂಬ ಹೆಸರಿನಲ್ಲಿ ರಿಮೇಕ್ ಮಾಡಿದ್ದು ಎಂ.ಎಸ್.ರಾಜಶೇಖರ್. ದ್ವಿಪಾತ್ರ ಅಲ್ಲದಿದ್ದರೂ ದಶರಥ ಪ್ರಸಾದ ರಾಮಪ್ರಸಾದ ಶರ್ಮಾ, ಲಕ್ಷ್ಮಣ ಪ್ರಸಾದ್ ರಾಮಪ್ರಸಾದ್ ಶರ್ಮಾ ಅಲಿಯಾಸ್ ಲಕ್ಕಿ ಎಂಬ ದ್ವಿಪಾತ್ರದಲ್ಲಿ ಕಾಣಿಸಿಕೊಂಡ ಶಿವರಾಜ್‌ಕುಮಾರ್ ಅಭಿನಯದ ದಿ ಬೆಸ್ಟ್ ಕಾಮಿಡಿ ಫಿಲ್ಮ್ ಇದು ಎಂದರೆ ತಪ್ಪಿಲ್ಲ. ಆ ಕಾರಣಕ್ಕೇ ಇದು ರಿಮೇಕ್ ಅನಿಸದೇ ಇರುವಷ್ಟರ ಮಟ್ಟಿಗೆ ಸಿನಿಮಾ ಅಪ್ಪಟ ಕನ್ನಡದ್ದು ಎನಿಸಿಕೊಂಡಿತ್ತು. ಹಿರಿಯ ನಟ ಲೋಕೇಶ್ ಅವರಿಗೆ ಎಷ್ಟು ಅದ್ಭುತ ಹಾಸ್ಯಪ್ರಜ್ಞೆ ಮತ್ತು ಅಭಿನಯ ಚಾತುರ್ಯ ಇದೆ
ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದ್ದು ಈ ಚಿತ್ರ. ನಾಯಕ ನಟ ಶಿವರಾಜ್‌ಕುಮಾರ್ ಅವರಷ್ಟೇ ಇಷ್ಟವಾಗುವ ಲೋಕೇಶ್ ಈ ಚಿತ್ರದ ಆಧಾರಸ್ತಂಭಗಳಲ್ಲೊಬ್ಬರು.
ಭಾಗ್ಯದ ಲಕ್ಷ್ಮಿ ಬಾರಮ್ಮ
ಇದು  'ಆನಂದ'ದ ಉಪ್ಪಿನಕಾಯಿ
ಸಿಂಗೀತಂ ಶ್ರೀನಿವಾಸರಾವ್ ನಿರ್ದೇಶನದ ಕನ್ನಡದ ಬೆಸ್ಟ್ ಕಾಮಿಡಿ ಚಿತ್ರಗಳಲ್ಲಿ ಇದೂ ಒಂದು. ರಾಜ್‌ಕುಮಾರ್ ತಮ್ಮ ಇಮೇಜ್ ಬದಿಗಿಟ್ಟು ಹೀರೋಯಿಸಂ ಇಲ್ಲದ ಈ ಪೂರ್ಣ ಪ್ರಮಾಣದ ಹಾಸ್ಯಪಾತ್ರಕ್ಕೆ ಒಪ್ಪಿದ್ದು, ಹಾಲು-ಜೇನು ನಂತರ ಮತ್ತೆ ಮಾಧವಿ-ರಾಜ್ ಒಂದಾಗಿದ್ದು, ಚಿತ್ರದ ಹಾಡುಗಳು ಅತಿ ದೊಡ್ಡ ಹಿಟ್ ಆಗಿದ್ದು, ರೆಗ್ಯುಲರ್ ವಿಶೇಷಗಳಾದರೆ, ಇಡೀ ಚಿತ್ರದ ಇದೇ ದ್ವಿತೀಯಾರ್ಧ ಹೋಟೆಲೊಂದರಲ್ಲಿ ನಡೆಯುವುದು, ಅಲ್ಲಿ  ಪ್ರತಿ ಸೆಕೆಂಡಿಗೊಮ್ಮೆ ನಗೆಯುಕ್ಕಿಸುವ ಘಟನೆಗಳಾಗುವುದು, ಬಾಲಕೃಷ್ಣ ಪದೇಪದೇ ಯಾಮಾರುವುದು, ಕ್ಲೈಮ್ಯಾಕ್ಸಿನ ಚೇಸಿಂಗ್ ದೃಶ್ಯ, ಆದರ್ಶದಂಪತಿ ಸ್ಪರ್ಧೆಯಲ್ಲಿ ನಡೆಯುವ ತಮಾಷೆಗಳು ಈ ಎಲ್ಲದರ ನಡುವೆ ನಿರುದ್ಯೋಗ ಸಮಸ್ಯೆ, ಹಣಕ್ಕಾಗಿ ಮಧ್ಯಮ ವರ್ಗದ ಪ್ರಜೆಯ ಸರ್ಕಸ್ ಎಲ್ಲವೂ ಚಿತ್ರವನ್ನು ಇಂದಿಗೂ ಸಮಕಾಲೀನವಾಗಿಟ್ಟಿದೆ.  
 
ತರ್ಲೆ ನನ್ಮಗ
ಡಗಾರ್ ಡಗಾರ್ ಕಾಮಿಡಿ
ಕಾಶೀನಾಥ್ ಗರಡಿಯಲ್ಲಿ ಪಳಗಿದ ಮೇಲೆ ಮೊದಲ ಚಿತ್ರದಲ್ಲಿ ಗುರುವಿನ ಛಾಪಿಲ್ಲದಿದ್ದರೆ ಹೇಗೆ ಎಂಬಂತೆ ಒಂದು ಪರಮಪೋಲಿ ಚಿತ್ರದ ಮೂಲಕ ನಿರ್ದೇಶನಕ್ಕೆ ಇಳಿದವರು ಉಪೇಂದ್ರ.  ತರ್ಲೆನನ್ಮಗ ಹೊಸಹೊಸ ಡಬಲ್ ಮೀನಿಂಗ್ ಪದಗಳ ಕೊಡುಗೆ ನೀಡಿದ ಚಿತ್ರ. ಜಗ್ಗೇಶ್‌ಗೆ ನಾಯಕನಾಗಿ ಬಡ್ತಿ ಕೊಟ್ಟು ನವರಸ ನಾಯಕನನ್ನಾಗಿ ಮಾಡಿತು. ಟೆನಿಸ್ ಹೊನ್ನವಳ್ಳಿ ಕೃಷ್ಣಗಳು, ಸತ್ಯಭಾಮ, ಮೈಸೂರ್ ಲೋಕೇಶ್, ಬ್ಯಾಂಕ್ ಜನಾರ್ದನ್‌ರ ವಿಶಿಷ್ಟ ಮ್ಯಾನರಿಸಂಗಳ ಪಾತ್ರಗಳು, ಅಂಜಲಿಯ ಅಂಜಿಕೆರಹಿತ ಅಭಿನಯ, ಜಗ್ಗೇಶ್ ನಾನ್ ಸ್ಟಾಪ್ ಡೈಲಾಗ್ಸ್ ಚಿತ್ರದ ಹೈಲೈಟ್ಸ್. ಬ್ಯಾಚಲರ್ ಹುಡುಗರ ಕಂಪ್ಯೂಟರ್ ಹಾರ್ಡ್‌ಡಿಸ್ಕಿನಲ್ಲಿ ಈಗಲೂ ಅಡಗಿಕೊಂಡಿದ್ದು ಆಗಾಗ ಹೊರಗಿಣುಕಿ ನಕ್ಕು ನಲಿಸುವ ಚಿತ್ರ ತರ್ಲೆನನ್ಮಗ.

ರಾಮಶ್ಯಾಮಭಾಮ ಜೋಕ್‌ಪಾನಾ..ಖಾತ್ರಿಯಾಯ್ತು
ತಮಿಳಿನ ಮಿಸ್ ಲೀಲಾವತಿ ಚಿತ್ರದ ರೀಮೇಕಾದರೂ, ಆಗಲೇ ಬಂದು ಹೋಗಿದ್ದ ಹಲವು  ಗಂಡ-ಹೆಂಡ್ತಿ ಮತ್ತು ಸೆಕೆಂಡ್ ಯುನಿಟ್ ಕಥೆಯ ಎಳೆಯನ್ನೇ ಹೊಂದಿದ್ದರೂ, ಶುರುವಿನಿಂದ ಕೊನೆಯ ತನಕ ನಕ್ಕು ನಲಿಸುವ ಗುಣ ಚಿತ್ರಕ್ಕೆ ಬಂದದ್ದಕ್ಕೆ ಮೊದಲ ಕಾರಣ ಕಮಲ್‌ಹಾಸನ್. ದಶಕಗಳ ನಂತರ ಮತ್ತೆ ಕನ್ನಡಕ್ಕೆ ಗ್ರಾಂಡ್ ಎಂಟ್ರಿ ಕೊಟ್ಟಿದ್ದ ಕಮಲ್ ಜೊತೆಗೆ ಊರ್ವಶಿ, ಶ್ರುತಿ ಹಾಗೂ 'ಕನ್ನಡದ ಕಮಲ್‌' ರಮೇಶ್ ನಟನೆ ಮತ್ತು ನಿರ್ದೇಶನದ ಕಮಾಲ್ ಇತ್ತು. ಗುರುಕಿರಣ್ ಕೊಟ್ಟಿದ್ದ ಎರಡು ಹಾಡುಗಳು ಕಾಮಿಡಿ ಚಿತ್ರದ ಮಧ್ಯೆಯೂ ನೆನಪಲ್ಲುಳಿವ ಲಿಸ್ಟಿಗೆ ಸೇರಿದ್ದು ಇನ್ನೊಂದು ವಿಶೇಷ. 'ಜೋಪಾನ ರಾತ್ರಿಯಾಯ್ತು' ಹಾಡು ಹಾಗೂ 'ಮುಂದ' ಎಂಬ ಡೈಲಾಗು ಚಿತ್ರಕ್ಕೆ  ಟ್ರೇಡ್ ಮಾರ್ಕ್.


-   ಹರಿ
harikannadaprabha@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com