

ಅಂತೂ ವರುಷ ಕಳೆಯಿತು. ಈ ವರ್ಷದ ಹಲವು ಘಟನೆಗಳಲ್ಲಿ ಒಂದಿಷ್ಟು ಹಾಸ್ಯಗಳನ್ನೂ ಹುಡುಕಬಹುದು. ತೀರಾ ಮುಜುಗರಕ್ಕೀಡುಮಾಡಿದ ಈ ಸಂಗತಿಗಳಲ್ಲಿ ಎದ್ದು ಕಾಣುವುದು ನಮ್ಮ ಮೂರ್ಖತನಗಳು. ಮತ್ತೆಂದು ಇಂಥ ಪ್ರಸಂಗ ಮರುಕಳಿಸಬಾರದು ಎಂಬುದು ನಮ್ಮ ಆಶಯ...
ಕನಸಿನ ಚಿನ್ನವನ್ನರಸಿ...
ಭಾರತೀಯರಿಗೆ ಚಿನ್ನದ ಹುಚ್ಚು ಹೆಚ್ಚೇ ಎಂಬುದು ಸಾರ್ವಕಾಲಿಕ ಸತ್ಯ. ಹೀಗಿರುವಾಗ ಸಾಧುವೊಬ್ಬನಿಗೆ ಸಾವಿರ ಟನ್ ಚಿನ್ನದ ಕೊಪ್ಪರಿಗೆಯಿರುವ ಕನಸುಕಂಡರೆ? ಉತ್ತರಪ್ರದೇಶದ ಉನ್ನಾವ್ನಲ್ಲಿ ನಡೆದದ್ದೂ ಇದೇ. ಸಾಧುವಿಗೆ ಕೋಟೆಯಡಿ ಭಾರಿ ಚಿನ್ನವಿರುವ ಕನಸು ಬಿತ್ತಂತೆ, ಅದನ್ನು ಸರ್ಕಾರವೂ ಸೇರಿದಂತೆ ಎಲ್ಲರೂ ನಂಬಿದರಂತೆ. ಚಿನ್ನ ಸಿಗುತ್ತದೆಂಬ ಆಸೆಯಿಂದ ಸರ್ಕಾರ ಆದೇಶ ಕೊಟ್ಟಿದ್ದೇ ಕೊಟ್ಟಿದ್ದು, ಚಿನ್ನಕ್ಕಾಗಿ ಅಗೆತ ನಡೆದಿದ್ದೇ ನಡೆದಿದ್ದು. ಕೊನೆಗೆ ಮಾತ್ರ ಕೈಗೆ ಚಿಪ್ಪು. ಹೀಗೆ ಕನಸನ್ನು ಆಧರಿಸಿ ಉತ್ಖನನಕ್ಕೆ ಆದೇಶ ಕೊಟ್ಟ ಸರ್ಕಾರ ಕೊನೆಗೆ ನಾಚಿಕೆಯಿಂದ ತಲೆತಗ್ಗಿಸಬೇಕಾಯ್ತು.
ಸೆಲ್ಫಿ ಆಟ...
ದಕ್ಷಿಣ ಆಫ್ರಿಕಾ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಇಹಲೋಕ ತ್ಯಜಿಸಿದ ನೋವಿನಲ್ಲಿ ಜಗತ್ತೇ ಮುಳುಗಿತ್ತು. ಜೊಹಾನ್ಸ್ಬರ್ಗ್ನಲ್ಲಿ ಮಂಡೇಲಾ ಶ್ರದ್ಧಾಂಜಲಿ ಸಭೆ ನಡೆಸಲಾಗಿತ್ತು. ಎಲ್ಲರೂ ನಾಯಕನನ್ನಗಲಿದ ನೋವಿನಲ್ಲಿದ್ದರೆ ವಿಶ್ವದ ಶ್ರೀಮಂತ ರಾಷ್ಟ್ರವನ್ನು ಪ್ರತಿನಿಧಿಸುತ್ತಿದ್ದ ಒಬಾಮ ಸೆಲ್ಫಿ ಆಟದಲ್ಲಿ ತೊಡಗಿದ್ದರು. ಬ್ರಿಟನ್ ಪ್ರಧಾನಿ ಕೆಮೆರಾನ್, ಡೆನ್ಮಾರ್ಕ್ ಪ್ರಧಾನಿ ಹೆಲ್ಲೆ ಥಾರ್ನಿಂಗ್ ಜತೆಗೂಡಿ ತಮ್ಮ ಸ್ಮಾರ್ಟ್ಫೋನ್ನಲ್ಲಿ ತಾವೇ ಫೋಟೋಗೆ ಪೋಸ್ ನೀಡುತ್ತಾ ಮಕ್ಕಳಾಟವಾಡುತ್ತಿದ್ದುದು ಕ್ಯಾಮೆರಾಗಳಲ್ಲಿ ಸೆರೆಯಾದವು. ಮಾರನೇ ದಿನ ವಿಶ್ವಾದ್ಯಂತ ಈ ವಿಚಾರ ಸುದ್ದಿಯಾಗಿ ದೊಡ್ಡಣ್ಣನನ್ನು ಪೇಚಿಗೆ ಸಿಲುಕಿಸಿದ್ದಂತೂ ಸತ್ಯ.
ರಾಗಿಣಿ ಟಾಪ್ ಜಾರಿತು...
'ತುಪ್ಪದ ಬೆಡಗಿ' ರಾಗಿಣಿ ಜಾಗತಿಕ ಮಟ್ಟದಲ್ಲಿ ಮುಜುಗರ ಅನುಭವಿಸಿದ್ದೂ ಇದೇ ವರುಷವೇ. ಅದು ಶಾರ್ಜಾದಲ್ಲಿ ನಡೆದ ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭ. ರಾಗಿಣಿ ಸ್ಟೇಜಿನಲ್ಲಿ ಮೈಮರೆತು ಕುಣಿಯುತ್ತಿದ್ದರು. ಅಷ್ಟರಲ್ಲೇ ಅವರ ಲೇಸ್ ಔಟ್ಫಿಟ್ ಜಾರಿ ಕೆಳಗೆ ಬಿತ್ತು. ಇದನ್ನು ಗಮನಿಸಿದ ನಿರೂಪಕರು ಕೂಡಲೇ ಲೈಟ್ ಅನ್ನು ಡಿಮ್ ಮಾಡಿ ಅವರನ್ನು ವೇದಿಕೆಯಿಂದ ಕೆಳಗೆ ಇಳಿಸಿದರು. ಈ ಪ್ರಸಂಗ ಮುಗಿದ ಮೇಲೆ ಬೇರೆ ಡ್ರೆಸ್ ಹಾಕ್ಕೊಂಡು ಬಂದು ಪ್ರಶಸ್ತಿ ಸ್ವೀಕರಿಸಲು ಬಂದರು ರಾಗಿಣಿ. ಒಟ್ಟಿನಲ್ಲಿ ಆ ಪ್ರೇಕ್ಷಕರೆಲ್ಲ ತುಪ್ಪದ ರುಚಿ ಅನುಭವಿಸಿದರಪ್ಪ...
ಛುಪ್ಕೇ, ಛುಪ್ಕೇ...
ಬಾಲಿವುಡ್ನ ಸೆಕ್ಸಿ ಬಾಲೆ ಕತ್ರೀನಾ ಕೈಫ್ಯೊಂದಿಗೆ ರಣಬೀರ್ ಸಿಂಗ್ ವಿದೇಶದ ಬೀಚೊಂದರಲ್ಲಿ ಚೋರೀ, ಚೋರೀ, ಛುಪ್ಕೇ ಛುಪ್ಕೇ ಎನ್ನುತ್ತಾ ಸುತ್ತಾಡುತ್ತಿದ್ದುದು ಮಾಧ್ಯಮಗಳಿಗೆ ಆಹಾರ ಆಗಿಬಿಟ್ಟಿತು. ಗೊತ್ತಾದೊಡನೆ ಹೌಹಾರಿದ ನಟ-ನಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ, ಇದು ನಮ್ಮ ವೈಯಕ್ತಿಕ ವಿಚಾರ. ಅದರಲ್ಲಿ ಯಾರೂ ತಲೆಹಾಕಬೇಡಿ ಎಂದುಬಿಡುವುದೇ!? ಸೆಲೆಬ್ರಿಟಿಗಳ ಲೈಫು ಸಾರ್ವಜನಿಕರ ಸ್ವತ್ತು ಎಂಬುದನ್ನು ಅವರು ಮರೆತೇ ಬಿಟ್ಟಿದ್ದರು ಪಾಪ.
ಷರೀಫರ ಟಿಪ್ಪಣಿ...
ಅಲ್ಲಾ, ಒಂದು ದೇಶದ ನಾಯಕ, ಮತ್ತೊಂದು ದೇಶದ ನಾಯಕನೊಂದಿಗೆ ಮಾತುಕತೆ ನಡೆಸುವುದಕ್ಕೆ ಒಂದು ರೀತಿ ನೀತಿ ಇಲ್ಲವೇ? ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಅಮೆರಿಕ ಅಧ್ಯಕ್ಷ ಒಬಾಮರನ್ನು ಭೇಟಿಯಾಗಿ ಮಾತುಕತೆ ಆರಂಭಿಸಿದ್ದರು. ಒಬಾಮ ಏನು ಹೇಳುತ್ತಿದ್ದಾರೆ ಎಂಬುದನ್ನು ಆಲಿಸಿ, ಅರಿತುಕೊಳ್ಳುವುದರ ಬದಲು ಷರೀಫ್ ಅವರು ಚಿಕ್ಕದೊಂದು ನೋಟ್ ಪುಸ್ತಕ ಹಿಡಿದುಕೊಂಡು ಏನೇನನ್ನೋ ಗೀಚುತ್ತಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾತುಕತೆ ನಡೆಯುವಾಗ ಥೇಚ್ ಮಕ್ಕಳಂತೆ ವರ್ತಿಸಿದ ಷರೀಫರ ನಡೆ ಮಾಧ್ಯಮಗಳಲ್ಲಿ ಬಿತ್ತರಗೊಂಡಾಗ ಷರೀಫ್ಗೆ ಆದ ಮುಜುಗರ ಅಷ್ಟಿಷ್ಟಲ್ಲ.
ಸುಗ್ರೀವಾಜ್ಞೆಗೆ ರಾಹು ಕಾಟ
ಕಳಂಕಿತರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿಗೆ ವಿರುದ್ಧವಾಗಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ತರಲು ಹೊರಟಿತ್ತು. ಸುಗ್ರೀವಾಜ್ಞೆಯನ್ನು ರಾಷ್ಟ್ರಪತಿಯ ಅಂಗೀಕಾರಕ್ಕೂ ಕಳುಹಿಸಲಾಗಿತ್ತು. ಇಷ್ಟೆಲ್ಲ ಪ್ರಕ್ರಿಯೆ ನಡೆಯುವವರೆಗೂ ಸುಮ್ಮನಿದ್ದ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಕೊನೇ ಕ್ಷಣದಲ್ಲಿ ಜ್ಞಾನೋದಯವಾದಂತೆ ಎದ್ದುನಿಂತರು. ಅಷ್ಟೇ ಅಲ್ಲ, ಸುಗ್ರೀವಾಜ್ಞೆಗೆ ಮುಂದಾದ ಪ್ರಧಾನಿ ಸಿಂಗ್ಗೆ ಎರ್ರಾಬಿರ್ರಿ ಬಯ್ದರು. ಸುಗ್ರೀವಾಜ್ಞೆಯನ್ನು ಕಸದ ಬುಟ್ಟಿಗೆ ಬಿಸಾಕಿ ಎಂದರು. ರಾಹುಲ್ ಆವೇಶ ಕಂಡು ಜನ ನಕ್ಕರು. ಹೆದರಿದ ಸರ್ಕಾರ ಮುಖಮುಚ್ಚಿಕೊಂಡು ಸುಗ್ರೀವಾಜ್ಞೆ ವಿಚಾರವನ್ನೇ ಕೈಬಿಟ್ಟಿತು.
ಮೂಢ ನಿರ್ಧಾರ
ಅಧಿಕಾರಿದ ಚುಕ್ಕಾಣಿ ಹಿಡಿದಿದ್ದೇ ತಡ ಸಿಎಂ ಸಿದ್ದರಾಮಯ್ಯ ಅವರು ಎಡವಟ್ಟುಗಳ ಮೇಲೆ ಎಡವಟ್ಟು ಮಾಡತೊಡಗಿದರು. ಅವುಗಳಲ್ಲಿ ಮೂಢನಂಬಿಕೆ ತಡೆ ವಿಧೇಯಕವೂ ಒಂದು. ನಂಬಿಕೆಗಳ ಜತೆ ಮೂಢನಂಬಿಕೆಗಳನ್ನು ಮಿಕ್ಸ್ ಮಾಡಿ ಜನರನ್ನು ಗೊಂದಲಕ್ಕೀಡುಮಾಡಿದರು. ಸರ್ಕಾರದ ಈ ನಡೆ ಭಾರಿ ಚರ್ಚೆಗೆ, ವಾದ-ವಿವಾದ, ಟೀಕೆ-ಟಿಪ್ಪಣಿಗಳಿಗೆ ಕಾರಣವಾದವು. ಕೊನೆಗೆ ನಾವಿನ್ನೂ ಆ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎನ್ನುವ ಮೂಲಕ ಸರ್ಕಾರ ವಿವಾದಕ್ಕೆ ತೆರೆಎಳೆಯಿತು. ಆದರೆ, ಸಿದ್ರಾಮಣ್ಣ ಮಾತ್ರ ಎಲ್ಲರಿಂದ ಲೇವಡಿಗೊಳಗಾಗಬೇಕಾಯಿತು.
ದಯವಿಟ್ಟು ಯಾರೂ ಹೋಗ್ಬೇಡಿ...
ಅಂದು ದೆಹಲಿಯಲ್ಲಿ ಚುನಾವಣಾ ಪ್ರಚಾರ ಭಾಷಣ ಏರ್ಪಡಿಸಲಾಗಿತ್ತು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಅಂದಿನ ಸ್ಟಾರ್ ಕ್ಯಾಂಪೈನರ್. ಇನ್ನೇನು ರಾಹುಲ್ ಭಾಷಣ ಆರಂಭಿಸುತ್ತಿದ್ದಾರೆ ಎನ್ನುವಷ್ಟರಲ್ಲಿ ನೆರೆದಿದ್ದ ಜನರು ಕುಳಿತಲ್ಲಿಂದ ಎದ್ದು ಹೋಗತೊಡಗಿದರು. ಪಾಪ, ರಾಹುಲ್ಗೆ ಎಷ್ಟು ನಾಚಿಕೆಯಾಗಿರಬೇಡ. ರಾಹುಲ್ ಸ್ಥಿತಿಯನ್ನು ಮನಗಂಡ ಅಂದಿನ ದೆಹಲಿ ಸಿಎಂ ಶೀಲಾ ದೀಕ್ಷಿತ್ ತಕ್ಷಣ ಎದ್ದುನಿಂತು, 'ದಯವಿಟ್ಟು ಯಾರೂ ಹೋಗ್ಬೇಡಿ. ರಾಹುಲ್ ಭಾಷಣ ಮಾಡುತ್ತಿದ್ದಾರೆ. ಮುಗಿಯುವವರೆಗೆ ಕುಳಿತುಕೊಳ್ಳಿ, ಪ್ಲೀಸ್...' ಎಂದು ಬೇಡಿಕೊಂಡಿದ್ದೇ ಬೇಡಿಕೊಂಡಿದ್ದು. ಶೀಲಾ ಅವರ ಈ ದಯನೀಯ ಕೋರಿಕೆಗಳು ಕ್ಯಾಮೆರಾಗಳಲ್ಲಿ ಹಂಗೇ ರೆಕಾರ್ಡ್ ಆಗಿದ್ದವು. ಮಾರನೇ ದಿನ ಶೀಲಾ, ರಾಹುಲ್ ಮಾತ್ರವಲ್ಲ, ಇಡೀ ಕಾಂಗ್ರೆಸ್ ಪಾಳಯವೇ ಮುಜುಗರದಲ್ಲಿ ಮುಳುಗಿತು.
ಪಿಚ್ನಲ್ಲೇ ಸುಸ್ಸು
ಛೀ, ಹೀಗೂ ವಿಜಯೋತ್ಸವ ಆಚರಿಸ್ತಾರಾ? ಆ್ಯಶಸ್ನಲ್ಲಿ ಗೆಲವು ಸಾಧಿಸಿದ ಇಂಗ್ಲೆಂಡ್ ತಂಡದ ಆಟಗಾರರು ಎಲ್ಲರಲ್ಲೂ ಈ ಪ್ರಶ್ನೆ ಮೂಡುವಂತೆ ಮಾಡಿದ್ದರು. ಗೆದ್ದ ಖುಷಿಯಲ್ಲಿ ಅಂದು ರಾತ್ರಿ ನೇರವಾಗಿ ಕ್ರೀಡಾಂಗಣಕ್ಕೆ ಬಂದ ಆಟಗಾರರು ಪಿಚ್ನಲ್ಲೇ ಕುಳಿತು, ಬಿಯರ್ ಕುಡಿದಿದ್ದಷ್ಟೇ ಅಲ್ಲ, ಕ್ರೀಸಿನ ಮೇಲೆ ಸುಸ್ಸು ಕೂಡ ಮಾಡಿದ್ದರು. ಜವಾಬ್ದಾರಿಯುತವಾಗಿ ವರ್ತಿಸಬೇಕಾದ ಆಟಗಾರರು ಇಷ್ಟೊಂದು ಕೀಳುಮಟ್ಟಕ್ಕಿಳಿದಿದ್ದು ಅಲ್ಲಿಯ ಅಧಿಕಾರಿಗಳಿಗೆ ಸಹಿಸಲಾಗಲಿಲ್ಲ. ಕೊನೆಗೆ ಆಟಗಾರರ ವಿರುದ್ಧ ದೂರನ್ನೂ ನೀಡಲಾಯಿತು. ಮಾರನೇ ದಿನ ಪೇಪರ್, ಟಿವಿಯಲ್ಲಿ ತಮ್ಮ ಕಿತಾಪತಿ ನೋಡಿದ ಆಟಗಾರರಿಗೆ ಏನನಿಸಿರಬಹುದು?
ನಮ್ಮಲ್ಲೇ ಇದ್ದ, ಇಲ್ಲ ಇಲ್ಲ...
ಭೂಗತ ಪಾತಕಿ ದಾವೂದ್ ಇಬ್ರಾಹಿಂ ನಮ್ಮ ರಾಷ್ಟ್ರದಲ್ಲೇ ಝಂಡಾ ಹೂಡಿದ್ದ. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಆತ ಅರಬ್ ರಾಷ್ಟ್ರದ ಕಡೆಗೆ ಹೋದ. ಹೀಗೆಂದು ಹೇಳಿದ್ದ ಪಾಕಿಸ್ತಾನದ ಸಚಿವರೊಬ್ಬರು, ಮಾಧ್ಯಮಗಳಲ್ಲಿ ಈ ವಿಚಾರ ಪ್ರಚಾರ ಪಡೆಯುತ್ತಿದ್ದಂತೆಯೇ ಬೆವರತೊಡಗಿದರು. ಮಾರನೇ ದಿನ ಸುದ್ದಿಗೋಷ್ಠಿ ಕರೆದು, ಅಯ್ಯೋ, ನಾನು ಹಾಗೆ ಹೇಳಲೇ ಇಲ್ಲ, ದಾವೂದ್ ಪಾಕ್ನಲ್ಲಿ ಇರಲೇ ಇಲ್ಲ ಎಂದು ಹೇಳಿ ನಗೆಪಾಟಲಿಗೀಡಾದರು. ಆದ್ರೆ, ದಾವೂದ್ ಪಾಕ್ನಲ್ಲೇ ಇದ್ದ, ಈಗಲೂ ಇದ್ದಾನೆ ಎಂದು ಗೊತ್ತಾಗದಷ್ಟು ಜನರು ಮೂರ್ಖರೇ?