ಖುಷಿ

ನಗುವೇ ನಮ್ಮ ಆಸ್ತಿ

ನಗುವೇ ನಮ್ಮ ಆಸ್ತಿ
Published On :

ಶಂಕರನಾಗ್
'ನಗುವ ಗುಲಾಬಿ ಹೂವೆ' ಎಂದು ಸಪ್ಪೆ ಮೋರೆ ಮಾಡಿ ಹಾಡಿದ ಈ ಆಟೋರಾಜನದ್ದು ಎಂದೂ ಮಾಸದ ನಗು. ಶೇವ್‌ಮಾಡದ ಅವರ ಮುಖಕ್ಕೆ ನಗು ಕೊಟ್ಟ ಕಳೆಯೇ ಅದ್ಭುತ. ಇಂದು ಶಂಕರ್ ಇಲ್ಲ. ಆದರೆ, ಅವರ ನಗುವಿನ ನೆನಪನ್ನು ನಾವೆಂದು ಕಳೆದುಕೊಳ್ಳುವುದಿಲ್ಲ.

ಸಿದ್ದರಾಮಯ್ಯ
ಅಧಿಕಾರದಿಂದ ದೂರ ಕೂತಾಗಲೂ (ವಿರೋಧಪಕ್ಷ), ಅಧಿಕಾರ ಬಂದಮೇಲೂ ಇವರ ಮೊಗದಲ್ಲೇನು ವ್ಯತ್ಯಾಸ ಕಾಣಲಿಲ್ಲ. ನಗುವ ಸಿದ್ದರಾಮಯ್ಯ ಇದ್ದಾರೆ. ಆದರೂ ಇವರ ನಗುವಲ್ಲಿ ಹೆಚ್ಚು ನರ್ತಿಸುವುದು ವ್ಯಂಗ್ಯ. 'ನಗುವ ಸಿದ್ದರಾಮಯ್ಯ ಅವರನ್ನು ನಂಬಬಾರದು' ಎದುರಾಳಿ ನಾಯಕರ ಗಾದೆ.

ನಾ. ಡಿ'ಸೋಜ
ನಗುಮೊಗದ ನಾಡಿ ಬರಹಗಳ ಜೊತೆಗೂ ಪರಿಸರ ಹೋರಾಟವನ್ನೂ ಮಾಡಿಕೊಂಡು ಬಂದವರು. ಅಂಥ ಬಿರುಬಿಸಿಲಿನ ಧರಣಿಯಲ್ಲೂ ನಗುತ್ತಾ ನಮಗೇನೋ ಸಂದೇಶ ರವಾನಿಸುವಂಥವರು. ಅವರ ನಗು ಎಂದೂ ಬಾಡದು. ಈಗ ನಾಡಿದ್ದಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಅವರೇ. ಅಂದರೆ, ಆ ನಗುಮೊಗ ನೋಡುತ್ತಲೇ '2014' ಅನ್ನು ಬರಮಾಡಿಕೊಳ್ಳುತ್ತಿದ್ದೇವೆ. ನಾವೆಷ್ಟು ಧನ್ಯರಲ್ಲವೇ?

ಸ್ವಾಮಿ ವಿವೇಕಾನಂದರು
ಇವರದ್ದು ಆದರ್ಶನಗು. ನಗುತ್ತಲೇ ತನ್ಮಯಸುಖ ಅನುಭವಿಸುತ್ತಿರುವಂತೆ ಚಕಿತಗೊಳಿಸುವ ವದನ. ಅವರ ಮುಖ ನೋಡುತ್ತಲೇ ನಮ್ಮೆಲ್ಲ ನೋವುಗಳನ್ನು ಮರೆಯುವಂಥ ಮಾಯಾನಗು. ಅದೇ ನಗುವನ್ನು ದಿಟ್ಟಿಸುತ್ತಾ ಆಳಕ್ಕಿಳಿದರೆ ನಿಮ್ಮೆದುರು ಅಧ್ಯಾತ್ಮದ ಹೊಸ ಜಗತ್ತು ತೆರೆದುಕೊಳ್ಳುತ್ತದೆ. 

ಎಚ್.ಎಸ್. ವೆಂಕಟೇಶಮೂರ್ತಿ
ಇವರು ನೈಸರ್ಗಿಕ ನಗುವನ್ನು ಸದಾ ಅಂಟಿಸಿಕೊಂಡಿರುತ್ತಾರೆ. ಗಂಟುಮೊಗದ ಎಚ್ಚೆಸ್ವಿ ಎಂದೂ ಕನ್ನಡಿಗರಿಗೆ ದರ್ಶನವಾಗಿಲ್ಲ. ಸ್ವತಃ ಮಕ್ಕಳಕವಿ ಆಗಿರುವುದರಿಂದ ಆ ಮಗುವಿನ ನಗುವನ್ನೇ ಇವರೂ ಎಲ್ಲೋ ಕದ್ದರೇನೋ ಎಂಬಷ್ಟು ಅನುಮಾನ ಕಾಡುತ್ತದೆ. ನಗುಮೊಗದ ಎಲ್ಲ ಸಂಗತಿಗಳೂ ಇವರಿಗಿಷ್ಟ. ಅದಕ್ಕೆ ಬಹುಶಃ 'ಬುದ್ಧಸ್ಮಿತ' ದೀರ್ಘಕಾವ್ಯ ಬರೆದರೇನೋ!

ಪೂಜಾಗಾಂಧಿ
ಈ ಮಳೆಹುಡುಗಿ ಸದಾ ಹಸಿರು ನಗುವನ್ನು ಮೊಗದ ಮೇಲೆ ಉಟ್ಟವರು. ಹಾಗೆ ದಿಟ್ಟಿಸಿ ನೋಡಿ, ಆಕೆಯದ್ದು ಬಲವಂತದ ನಗು ಅಂತ ಅನ್ನಿಸುವುದೇ ಇಲ್ಲ. ಎಂಗೇಜ್‌ಮೆಂಟ್ ಮುರಿದುಬಿದ್ದಾಗಲೂ ಆ ದುಃಖ ಅವರನ್ನು ಅಷ್ಟು ಕಾಡಲಿಲ್ಲ. ಅಲ್ಲೂ ನಗುವೇ ದಿಗ್ವಿಜಯ ಸಾಧಿಸಿತ್ತು. ಗಾಂಧಿ ಕೂಡ ಸದಾ ನಗುತ್ತಿದ್ದರು. ಈಗ ಪೂಜಗಾಂಧಿಯೂ ಹಾಗೆಯೇ ನಗುವಿನ ಮೇಲೆ ನಂಬಿಕೆ ಇಟ್ಟವರಂತೆ ತೋರುತ್ತಾರೆ.

ಡಾ. ರಾಜ್‌ಕುಮಾರ್
'ನಗು ನಗುತಾ ನಲಿ' ಎನ್ನುತ್ತಾ ನಗುವನ್ನೇ ದೇವರೆಂದುಕೊಂಡವರು ಈ ವರನಟ. ಅಣ್ಣಾವ್ರ ಬಾಡಿಹೋದ ಮುಖವನ್ನು ನೀವೆಂದಾದರೂ ನೋಡಿದ್ದೀರಾ? ಚಾನ್ಸೇ ಇಲ್ಲ. ನರಹಂತಕ ವೀರಪ್ಪನ್ ಅಪಹರಿಸಿದ್ದಾಗಲೂ ಅಣ್ಣಾವ್ರು ನಗುತ್ತಲೇ ಇದ್ದ ಚಿತ್ರಗಳು ನಮ್ಮನ್ನು ಬೆರಗುಗೊಳಿಸುತ್ತವೆ. ನಗುವೆ ಅಣ್ಣಾವ್ರ ದೊಡ್ಡ ಗುಣ.

ಸದಾನಂದಗೌಡ
ಯಡಿಯೂರಪ್ಪ ಬಂಡಾಯ ಎದ್ದು ಏನೇನೋ ಸಂಕಟ ಸೃಷ್ಟಿಸಿದಾಗಲೂ ಸದಾನಂದ ಗೌಡರು ನಗು ಕಳೆದುಕೊಳ್ಳಲಿಲ್ಲ. ಮುಖ್ಯಮಂತ್ರಿಯಂಥ ಒತ್ತಡದ ಹುದ್ದೆಯಲ್ಲಿದ್ದು ನಕ್ಕ ಅವರ ತಾಕತ್ತಿಗೆ ಒಂದು ಸಲಾಂ. ಕೋಲ್ಗೇಟ್ ಜಾಹೀರಾತಿಗೆ ಹೇಳಿಮಾಡಿಸಿದ ಮಂದಹಾಸ. ಬಹುಶಃ ನಗುಮೊಗದ ರಾಜಕಾರಣಿಗಳ ಪಟ್ಟಿ ತೆಗೆದರೆ ಗೌಡರ ಹೆಸರು ಮೊದಲು ಹಾದುಹೋಗುತ್ತದೆ.

ಗಣೇಶ್
ವೀಕ್ಷಕರಿಗೆ ಕಾಮಿಡಿ ಹೇಳ್ತಾ 'ಟೈಮ್‌'ಪಾಸ್‌ಗೆ ಬಂದ ಈ ಹುಡುಗ ಇಂದು ಗೋಲ್ಡನ್‌ಸ್ಟಾರ್. ಅವರ ನಗುವಿಗೂ ಚಿನ್ನದ ಹೊಳಪು. ಒಂದು ಟೈಮಲ್ಲಿ ಗಣೇಶ್‌ನನ್ನು ಕಂಡರೆ ನಗು ಉಕ್ಕುತ್ತಿತ್ತು. ಆದರೆ, ಈಗ ಅವರ ಸಿನಿಮಾಗಳು ಅಷ್ಟೇನು ಸದ್ದುಮಾಡದಿರುವ ಕಾರಣಕ್ಕೋ ಏನೋ, ನಮ್ಮೆಲ್ಲರಲ್ಲೂ ಆ ನಗು ಅವಿತು ಕೂರುತ್ತಿದೆ.

ರಾಘವೇಶ್ವರ ಶ್ರೀ
ಒಂದು ಮುಗ್ಧ, ಮಗುವಿನಂಥ ನಗು ಹೇಗಿರಬೇಕು ಎಂಬುದಕ್ಕೆ ರಾಮಚಂದ್ರಾಪುರ ಮಠದ ಶ್ರೀಗಳು ಕನ್ನಡಿ. ಹಸು ನಗುವುದು ಕಾಣುವುದಿಲ್ಲ. ಆದರೆ, ರಾಘವೇಶ್ವರ ಶ್ರೀಗಳ ನಗುವಲ್ಲಿ ಹಸುವಿನ 'ಮುಗ್ಧತೆ' ಎದ್ದುಕಾಣುತ್ತದೆ. ಸಿಡುಕುನೋಟ ಬೀರುವ ವ್ಯಕ್ತಿತ್ವವೂ ಅಲ್ಲ ಇವರದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.