

'ಅಳು ಹೆಂಗಸರ ಅಸ್ತ್ರ, ಗಂಡಸರ ಕರವಸ್ತ್ರ' ಎಂಬ ನನ್ನ ಹೇಳಿಕೆಗೆ ಭುವನೇಶ್ವರಿ ಒಂದು ಅಪವಾದವಾಗಿದ್ದಾರೆ ಎಂದು ಒಪ್ಪಿಕೊಂಡವರು ಹನಿಗವಿ ಎಚ್. ಡುಂಡಿರಾಜ್. ಹಾಗೆ ಒಪ್ಪಿಕೊಳ್ಳದೆ ಬೇರೆ ದಾರಿಯೇ ಇಲ್ಲದ ಹಾಗೆ ಮಾಡಿದವರು ತಮ್ಮ ಹಾಸ್ಯಪ್ರಜ್ಞೆಯೊಂದಿಗೆ ಕರ್ನಾಟಕದ ಉದ್ದಗಲಗಳನ್ನು ಮೀರಿ, ಅಮೆರಿಕ- ಲಂಡನ್ಗಳಿಗೆ ಹಾರಿದ ಭುವನೇಶ್ವರಿ ಹೆಗಡೆಯವರು.
'ಮಹಿಳೆಯರಲ್ಲಿ ವಿನೋದಪ್ರಜ್ಞೆ ಕಡಿಮೆ ಎನ್ನುವ ಒಂದು ಸಾಮಾನ್ಯ ಅಭಿಪ್ರಾಯ ನಮ್ಮಲ್ಲಿದೆ. ಆದರೆ ಇದು ತಪ್ಪುಗ್ರಹಿಕೆ ಎಂದು ನಾನು ಘಂಟಾಘೋಷವಾಗಿ ಸಾರಬಲ್ಲೆ. ನಗುವ ಸಾಮರ್ಥ್ಯವನ್ನು ಪ್ರಕೃತಿ ಗಂಡಿಗಾಗಿ ಎಂದು ಮಾತ್ರ ವಿಂಗಡಿಸಿಟ್ಟಿಲ್ಲ. ವಾಸ್ತವದಲ್ಲಿ ಹೆಣ್ಣು ಗಂಡಿಗಿಂತ ಹೆಚ್ಚು ನಗುತ್ತಾಳೆ, ನಗಿಸುತ್ತಾಳೆ. ಆದರೆ ಒಂದು ಮಾಧ್ಯಮದ ಅಭಿವ್ಯಕ್ತಿಗಾಗಿ ವಿನೋದವನ್ನು ಗಂಭೀರವಾಗಿ (?) ತೆಗೆದುಕೊಂಡ ಮಹಿಳೆಯರು ನಮ್ಮಲ್ಲಿ ವಿರಳ ಎನ್ನುವುದು ನಿಜ. ಅದರಲ್ಲೂ ವಿನೋದವನ್ನು ವೈಚಾರಿಕ ಮಟ್ಟದಲ್ಲಿ ಗುರುತಿಸಿ ಬರೆಯಬಲ್ಲ ಭುವನೇಶ್ವರಿ ಹೆಗಡೆಯಂಥವರು ಇನ್ನೂ ವಿರಳ'- ಭುವನೇಶ್ವರಿಯವರ ವಿಶಿಷ್ಟ ಪ್ರತಿಭೆಯನ್ನು ಮೊಟ್ಟಮೊದಲು ಗುರುತಿಸಿ ಪ್ರೋತ್ಸಾಹಿಸಿದ 'ತುಷಾರ' ಮಾಸಪತ್ರಿಕೆಯ ಅಂದಿನ (1986) ಸಂಪಾದಕ ಈಶ್ವರಯ್ಯನವರ ಸಮರ್ಪಕ ಶ್ಲಾಘನೆ ಇದು.
ಭುವನೇಶ್ವರಿಯವರ ಬರಹಗಳು ಜನಮನವನ್ನು ಸುಸಂಸ್ಕೃತವಾಗಿಸುವಲ್ಲಿ, ಸುಶಿಕ್ಷಿತವಾಗಿಸುವಲ್ಲಿ ಮುಖ್ಯಪಾತ್ರ ವಹಿಸುತ್ತಿವೆ. ಉಲ್ಲಾಸ ಅಥವಾ ಸಂತೋಷವೆಂಬುದು ಒಂದು ಮನೋವೃತ್ತಿ. ಅದನ್ನು ಕುಳಿತಲ್ಲೇ ಸೃಷ್ಟಿಸಿಕೊಳ್ಳಬಹುದು ಎಂಬ ಸರಳ ತತ್ವವನ್ನು ಅವರ ಬರಹಗಳು ಪ್ರಾತ್ಯಕ್ಷಿಕೆಯೊಂದಿಗೆ ಸಿದ್ಧ ಮಾಡಿ ತೋರಿಸುತ್ತವೆ. ಇದನ್ನೇ ಸೂಕ್ಷ್ಮವಾಗಿ ಅವಲೋಕಿಸಿ ಶ್ರೀ ಪಾ.ವೆಂ. ಆಚಾರ್ಯರು- 'ಭುವನೇಶ್ವರಿಯವರ ಬರಹಗಳು ಬಹಿರ್ಮುಖ ವಿನೋದವನ್ನು ಬಳಸುವುದಿಲ್ಲ. ಅವು ಉತ್ತಮ ಪುರುಷದಲ್ಲಿರುವುದು ಬರೀ ತಂತ್ರ ಮಾತ್ರವಲ್ಲ, ಅದು ಒಂದು ಮನೋವೃತ್ತಿಯೇ ಆಗಿದೆ' ಎನ್ನುತ್ತಾರೆ.
ಇಂತಿಪ್ಪ ಭುವನೇಶ್ವರಿಯವರು ಹಸಿರು- ಸಿರಿ ಸಮೃದ್ಧವಾಗಿರುವ ಉತ್ತರಕನ್ನಡದ ಕತಗಾಲ ಗ್ರಾಮದಲ್ಲಿ ಜನಿಸಿ, ಧಾರವಾಡದಲ್ಲಿ ಅರ್ಥಶಾಸ್ತ್ರದ ಸ್ನಾತಕೋತ್ತರ ಪದವಿ ಪಡೆದು, ಈಗ ಮಂಗಳೂರಿನ ಯೂನಿವರ್ಸಿಟಿ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿಯನ್ನು ಕುತ್ತಿಗೆಮಟ್ಟ ಆಸ್ವಾದಿಸುತ್ತಿದ್ದಾರೆ. ತಂಪು ತಂಪು ನಾಡಿನಿಂದ ಬಿಸಿ ಬಿಸಿ ಬೆವರೂರಿಗೆ ಬಂದರೂ ನಗೆ ಒರತೆಗೇನೂ ಕೊರತೆಯಾಗಿಲ್ಲ. ಅವರೇ ಯಾವಾಗಲೂ ಹೇಳುವಂತೆ, ಬಾಲ್ಯದ ಅಂದಿನ ಪ್ರಕೃತಿ, ತಂದೆತಾಯಿಯರ ಪ್ರೀತಿ, ವಿದ್ಯಾರ್ಥಿ ದೆಸೆಯ ಸ್ನೇಹಸುಧೆಯ ನಶೆ ಅವರನ್ನು ಇನ್ನೂ ಬಿಸಿಲಿಗೆ ಬಾಡದ ಹಾಗೆ ಕಾಯುತ್ತಿವೆ.
'ಮುಗುಳು', 'ನಕ್ಕು ಹಗುರಾಗಿ', 'ಎಂಥದು ಮಾರಾಯ್ರೆ', 'ವಲಲ ಪ್ರತಾಪ', 'ಹಾಸ- ಭಾಸ', 'ಮೃಗಯಾವಿನೋದ', 'ಬೆಟ್ಟದ ಭಾಗೀರಥಿ', 'ಮಾತನಾಡಲು ಮಾತು ಬೇಕೆ?', 'ಪುಟ್ಟಿಯ ಪಟ್ಟೆಹುಲಿ', 'ಕೈಗುಣ- ಬಾಯ್ಗುಣ' ಎಂಬವು ಅವರ ಪ್ರಕಟಿತ ಹಾಸ್ಯಸಂಕಲನಗಳು. ಅವರ ಈ ವಿಶಿಷ್ಟ, ಮೌಲಿಕ ಕೊಡುಗೆಯನ್ನು ಕರ್ನಾಟಕ ಗುರುತಿಸದೇ ಇಲ್ಲ. ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಡುಕೋಣೆ ರಮಾನಂದ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ ಬಹುಮಾನ, ಬನಹಟ್ಟಿ ಪುಸ್ತಕ ಬಹುಮಾನ, ಉ.ಕ. ಲೇಖಕಿಯರ ಸಂಘ ಹಾಗೂ ಇನ್ಫೋಸಿಸ್ ಫೌಂಡೇಷನ್ನಿನ ಸುಧಾಮೂರ್ತಿ ಪ್ರಶಸ್ತಿ- ಇತ್ಯಾದಿ ಭುವನೇಶ್ವರಿ ಅವರಿಗೆ ಸಂದ ಪ್ರಶಸ್ತಿಗಳಲ್ಲಿ ಕೆಲವಷ್ಟೆ.
ಈ ಎಲ್ಲ ಪ್ರಶಸ್ತಿಗಳೊಂದಿಗೆ ಶುದ್ಧತೆಗೂ, ಬದ್ಧತೆಗೂ ಹೆಸರಾದ ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿ ಇದೀಗ ಭುವನೇಶ್ವರಿಯವರ ಮುಡಿಗೇರುತ್ತಿದೆ. ಕವಿ, ವಿಮರ್ಶಕ ಪ್ರೊ. ಬಿ.ಎಚ್. ಶ್ರೀಧರರ ನಿಧನಾನಂತರ ಅವರ ಕರ್ಮಭೂಮಿ ಶಿರಸಿಯಲ್ಲಿ ರೂಪುಗೊಂಡ ಈ ಪ್ರಶಸ್ತಿ ಇದೀಗ 24ನೇ ವರ್ಷ ಪೂರೈಸುತ್ತಿದೆ.
ಶ್ರೀಧರರು ಗಂಭೀರ ಚಿಂತನೆಗೆ ಹೆಸರು ಪಡೆದಿದ್ದರೂ, ಆ ಚಿಂತನೆಯ ಹಾದಿಯಲ್ಲಿ ಸಮಾಜದ ಮತ್ತು ಜನಮನದ ಓರೆಕೋರೆಗಳನ್ನು ಕಾಣಿಸಿಕೊಡಲು, ತಿದ್ದಲು ಹಾಸ್ಯದ ವಿಡಂಬನಾರೂಪವನ್ನು ಪರಿಣಾಮಕಾರಿಯಾಗ ಬಳಸಿದವರು. ಭುವನೇಶ್ವರಿಯವರ ಪ್ರಥಮ ಹಾಸ್ಯ ಸಂಕಲನ 'ಮುಗುಳು' ಶ್ರೀಧರರಿಂದ ಪ್ರಶಂಸಿತವಾದದ್ದೇ. ಅದನ್ನೋದಿ '...ಚಿನ್ನದೊಡವೆಗಳಲ್ಲ ಕನ್ನಡಕೆ... ಆನಂದಜನ್ಯ ನಗುವಾಭರಣ, ಸುಸ್ತ್ರೀವಿಲಾಸಗುಣ, ಅನ್ಯರಸದೊಳಗಗ್ರಗಣ್ಯ, ಚಿಂತಾಶತ್ರು ಭುವನೇಶ್ವರಿ ಸುಸ್ಮಿತ' ಎಂದು ಪ್ರೀತಿಯಿಂದ ಹರಸಿದ್ದರು.
'ಉತ್ತಮ ಹಾಸ್ಯವು ಆನಂದದ ಒಂದು ಸ್ವರೂಪ ಎಂದು ಬಲ್ಲವರು ಹೇಳುತ್ತಾರೆ. ಭುವನೇಶ್ವರಿ ಹೆಗಡೆಯವರ ಕೃತಿಯನ್ನೋದಿದಾಗ ಅಂಥ ಆನಂದದ ಅನುಭವವಾಗುತ್ತದೆ. ಇವರ ನಗುವಿನಲ್ಲಿ ಮೇರೆ ಮೀರಿದ ಮರ್ಯಾದೆಯಿದೆ' ಎಂಬ ಶ್ರೀನಿವಾಸ ವೈದ್ಯರ ಮಾತು ಭುವನೇಶ್ವರಿಯವರ ಹಾಸ್ಯದ ವಿಶಿಷ್ಟ, ಉತ್ಕೃಷ್ಟ ಗುಣಕ್ಕೊಂದು ಸಮರ್ಪಕ ವ್ಯಾಖ್ಯೆ.
-ರಾಜೇಶ್ವರಿ ಲೋಕರೆ