ನಾಯಕರೇ, ನಾಯಿಗೂ ಮರ್ಯಾದೆ ಕೊಡಿ

ನಾಯಕರೇ, ನಾಯಿಗೂ ಮರ್ಯಾದೆ ಕೊಡಿ
Updated on: 

ಅಮೆರಿಕದಲ್ಲಿ ನಾಯಿಗಳಿಗೆ ಬೆಲೆ ಇದೆ. ಕೌಟುಂಬಿಕ ಸ್ಥಾನವನ್ನೇ ನೀಡಲಾಗಿದೆ. ಅದು ಮನೆ ಕಾಯುತ್ತೋ, ಬಿಡುತ್ತೋ ಸೆಕೆಂಡರಿ. ಹೆತ್ತ ಮಕ್ಕಳನ್ನು ಸಾಕುವಂತೆಯೇ ಇವನ್ನೂ ಸಾಕಲಾಗುತ್ತದೆ. ಮನೆಯಲ್ಲಿನ ನಾಯಿ (ಹೆಣ್ಣಾಗಿದ್ರೆ) ಗರ್ಭಿಣಿಯಾದಾಗ ಎಲ್ಲರೂ ಸಂಭ್ರಮಿಸುತ್ತಾರೆ. ನರ್ಸ್ ಮನೆಗೇ ಬಂದು ಹೆರಿಗೆ ಮಾಡಿಸಿ ಒಂದೊಂದು ಮರಿ ಹೊರ ಬಂದಾಗೊಮ್ಮೆ ಬಾಗಿಲಿಗೆ ಬಂದು, 'ಇಟ್ಸ್ ಎ ಬೇಬಿ ಬಾಯ್‌', 'ಇಟ್ಸ್ ಎ ಬೇಬಿ ಗರ್ಲ್‌' ಎಂದು ಹೇಳಿ ಹೋಗ್ತಿರ್ತಾಳೆ! ಈ ಹೊಸ ನಾಯಿಮರಿಗಳಿಗೆ ಹೊಸ ಗೂಡು, ಹೊಸ ಊಟದ ತಟ್ಟೆ, ಅವುಗಳ ಪಾಲನೆ ಪೋಷಣೆ ಬಗ್ಗೆ ಮನೆಯ ಯಜಮಾನಿ ಸಿದ್ಧತೆಗಳಲ್ಲಿ ತೊಡಗಿಕೊಂಡಿರ್ತಾಳೆ. ಆ ಮರಿಗಳು ತುಸು ದೊಡ್ಡವಾದಂತೆಲ್ಲ ಆಸಕ್ತಿಯುಳ್ಳವರನ್ನು ಮನೆಗೆ ಆಹ್ವಾನಿಸಿ ಅವರ ಮನೆಯಲ್ಲಿ ಸಾಕಲು ಕಳಿಸುವುದೂ ಉಂಟು. ಆಗ ಆ ಹೊಸ ಮನೆ ಇವರಿಗೆ ಬೀಗರ ಮನೆಯಂತಾಗುತ್ತೆ!

ಇನ್ನು ಹಾಲಿವುಡ್‌ನಲ್ಲಿ ನಾಯಿಗಳೇ ಮುಖ್ಯಪಾತ್ರದಲ್ಲಿ ನಟಿಸಿರೋ ಅಸಂಖ್ಯಾತ ಸಿನಿಮಾಗಳು ತೆರೆ ಕಂಡಿವೆ. ಅನೇಕ ಸಿನಿಮಾಗಳಲ್ಲಿ ನಾಯಿಗಳು ಇಂಗ್ಲಿಷ್‌ನಲ್ಲಿ ಮಾತನಾಡುವುದೂ ಉಂಟು! ಕುಟುಂಬ ಒಂದು ಮಾಡುವ ಜವಾಬ್ದಾರಿ ಹೊತ್ತ ಪಾತ್ರದಲ್ಲಿ, ಪತ್ತೇದಾರಿಯಾಗಿ, ಪೊಲೀಸ್ ಸಿಬ್ಬಂದಿಯಾಗಿ, ಒಮ್ಮೊಮ್ಮೆ ಆರ್ಕಿಯಾಲಜಿಸ್ಟ್ ಆಗಿ- ಹೀಗೆ ಅನೇಕಾನೇಕ ಪಾತ್ರಗಳಲ್ಲಿ ನಾಯಿಗಳನ್ನು ವಿಜೃಂಭಿಸಲಾಗುತ್ತೆ.
ಆದರೆ ಭಾರತದಲ್ಲಿ ಮಾತ್ರ ನಾಯಿಗೆ ಒಂದು ಉತ್ತಮ ಸ್ಥಾನ ನೀಡುವಲ್ಲಿ ನಮ್ಮ ರಾಜಕಾರಣಿಗಳು ಎಡವಿದ್ದಾರೆ. ರಾಜಕಾರಣದಲ್ಲಿ ಆಗಾಗ ನಾಯಿಗಳು ಬಂದು ಹೋಗುವುದು ಸಾಮಾನ್ಯ. ಈ ನಾಯಿಗಳ ಬಳಕೆ ಎಲ್ಲಿಂದ ಆರಂಭವಾಗುತ್ತೆ, ಎಲ್ಲಿಗೆ ನಿಲ್ಲುತ್ತೆ ಎಂದು ಊಹಿಸಿಕೊಳ್ಳೋದು ತುಸು ಕಷ್ಟ. ಇನ್ನೇನು ನಾಯಿಗಳನ್ನು ನೆನೆಯೋದನ್ನ ಇವರು (ರಾಜಕಾರಣಿಗಳು) ಮರೆತ್ತಿದ್ದಾರೆ ಅಂದುಕೊಳ್ಳುವ ವೇಳೆಗೆ ಅದೆಲ್ಲೋ ದೂರದ ಪೂರ್ವ ರಾಜ್ಯದಲ್ಲೊಬ್ಬ ಸಂಸದ ನಾಯಿಗೆ ಹೋಲಿಸಿಕೊಂಡು ಕಾಮೆಂಟ್ ಮಾಡಿರ್ತಾನೆ!
ಸಾಮಾನ್ಯವಾಗಿ ನಾಯಿಗಳ ಉಪಮೆ ಅರಂಭವಾಗುವುದೇ ನಿಷ್ಠೆಯ ಪ್ರಶ್ನೆ ಬಂದಾಗ. ಅತಿಯಾಗಿ ಪಕ್ಷವನ್ನು ಪ್ರೀತಿಸುವ ರಾಜಕಾರಣಿ 'ನಾನು ಈ ಪಕ್ಷದ ನಿಷ್ಠಾವಂತ ನಾಯಿ' ಎಂದು ಕಣ್ಣಂಚಲ್ಲಿ ನೀರು ಜಿನುಗಿಸಿಕೊಂಡು ನುಡಿಯುತ್ತಾನೆ. ಅದೇ ಇನ್ನೊಬ್ಬ ರಾಜಕಾರಣಿ ಪಕ್ಷಕ್ಕೆ ಹಗಲಿರುಳು ದುಡಿದರೂ ಏನೂ ಸಿಗಲಿಲ್ಲ ಎಂದು ಹೇಳಿಕೊಳ್ಳುವಾಗ 'ನಾಯಿಯಂತೆ ಹಗಲಿರುಳು ದುಡಿದರೂ ಈ ಪಕ್ಷ ನನ್ನನ್ನು ಕಡೆಗಣಿಸಿತು' ಎಂದು ನೊಂದು ನುಡಿಯುತ್ತಾನೆ. ಮತ್ತೆ ಕೆಲವರಿದ್ದಾರೆ. ತಲೆತಲಾಂತರದಿಂದ ಅದೇ ಪಕ್ಷದಲ್ಲಿರ್ತಾರೆ. ಅವರಿಗೆ ಆಗಾಗ ಪಕ್ಷದಿಂದ 'ಸಿಗಬೇಕಾದ್ದು' ಎಲ್ಲವೂ ಸಿಗ್ತಿರುತ್ತೆ. ಹಾಗಾಗಿ ಇವರಿಗೆ ಕೆಲವರು 'ಅವ್ರು ಬಿಡಿ, ಆ ಮನೆಯವರ ಸಾಕು ನಾಯಿ ಇದ್ದಂತೆ' ಎಂದು ಛೇಡಿಸುವುದೂ ಉಂಟು.
ಇನ್ನೂ ಒಂದು ಗುಂಪಿನ ರಾಜಕಾರಣಿಗಳಿದ್ದಾರೆ. ಇವರು ತಮ್ಮ ಮನೆಯಲ್ಲಿ ನಾಯಿಗಳನ್ನು ಸಾಕ್ತಾರೋ ಬಿಡ್ತಾರೋ, ಆದರೆ, ಇವರಿಗೆ ನಾಯಿಯ ಬಳಕೆ ಮಾಡಿಕೊಳ್ಳದೆ ಭಾಷಣ ಮಾಡೋದಕ್ಕೆ ಆಗೋದೇ ಇಲ್ಲ. ತನ್ನನ್ನು ನಾಯಿಗೆ ಹೋಲಿಸಿಕೊಳ್ಳದಿದ್ದರೂ ಇತರರನ್ನು ತೆಗಳುವಾಗ 'ಅವತ್ತು ನೀವು ಮತ ಹಾಕಿದ್ರಿ ಬಂಧುಗಳೇ. ಆದರೆ ಏನಾಯ್ತು? ಈಗ ನಾಯಿಗೆ ಇರೋ ನಿಷ್ಠೆನೂ ಇಲ್ಲ ಇವರಿಗೆ ಮತದಾರರ ಮೇಲೆ' ಎಂದು ಮೈಕ್ ಹಿಡಿದು ಬೊಗಳುತ್ತಾರೆ.
ಇನ್ನು ಪತ್ರಕರ್ತರು ನಾಯಿಯ ವಿಚಾರದಲ್ಲಿ ಮೈಯೆಲ್ಲಾ ಕಣ್ಣಾಗಿರ್ತಾರೆ. ಯಾರಾದ್ರೂ ರಾಜಕಾರಣಿಗಳು ಈ ನಾಯಿಗಳ ಬಗ್ಗೆ ಪ್ರಸ್ತಾಪ ಮಾಡಿದ್ರೆ ಮುಗಿದೇ ಹೋಯ್ತು. ಅದು ವಿದೇಶಿ ನಾಯಿಗಳೂ ಬೆರಗಾಗುವ ಮಟ್ಟಿಗೆ ಸುದ್ದಿ ಆಗೋವರೆಗೂ ಬಿಡೋದೇ ಇಲ್ಲ.
ಈ ಚರ್ಚೆ 24 ಗಂಟೆ ಕಾಲಹರಣ ಮಾಡೋ ನ್ಯೂಸ್ ಚಾನೆಲ್‌ಗೆ ಬಂದ್ರೆ ಮುಗಿದೇ ಹೋಯ್ತು ಕಥೆ. ಆ ನಾಯಕ ಹೋಲಿಸಿದ ಆ ನಾಯಿ ಅವರ ಮನೆಯದ್ದೇ? ಅಥವಾ ಆತ ಬೀದಿ ನಾಯಿ ನೋಡಿಯೇ ತನ್ನ ಭಾಷಣದಲ್ಲಿ ನಾಯಿ ಬಗ್ಗೆ ಪ್ರಸ್ತಾಪ ಮಾಡಿದ್ನಾ? ಅಥವಾ ಆತನ ಇನ್ನೊಂದು ಮನೆಯಲ್ಲಿ ಸಾಕಿದ್ದ ನಾಯಿ ಆತನಿಗೆ ಹಿಂದಿನ ದಿನ ರಾತ್ರಿ ಕಚ್ಚಿದ ಕಾರಣಕ್ಕಾಗಿ ಇಂದು ಬಹಿರಂಗ ಸಭೆಯಲ್ಲಿ ನಾಯಿ ಬಗ್ಗೆ ಚರ್ಚೆ ಮಾಡಿದ್ನಾ... ಹೀಗೆ ನೇರಪ್ರಸಾರದಲ್ಲಿ 'ಬ್ರೇಕಿಂಗ್ ನ್ಯೂಸ್‌' ಹೆಸರಲ್ಲಿ ಚರ್ಚೆ ಮುಂದುವರಿದೇ ಇರುತ್ತದೆ.
ಇತ್ತ ನಾಯಿಗಳ ಚರ್ಚೆಯಲ್ಲಿ ನನ್ನನ್ನು ಯಾರೂ ಗಮನಿಸುತ್ತಿಲ್ಲ ಎಂದು ನೊಂದ ಸುಂದರಿಯೊಬ್ಬಳು ನಾನೂ 'ಪೇಟಾ'ದವಳೇ ಎಂದುಕೊಂಡು ಅರೆನಗ್ನಳಾಗಿ ಪಗ್ ನಾಯಿಯೊಂದಿಗೆ ಫೋಟೋ ತೆಗೆಸಿಕೊಂಡು 'ಸೇವ್ ಡಾಗ್ಸ್‌' ಎಂದು ಮೈಮೇಲೆ ಬರೆಸಿಕೊಂಡು, ಫೋಟೋ ತೆಗೆಸಿ ಫೇಸ್ಬುಕ್ ಸೇರಿದಂತೆ ಇತರೆ ಗೋಡೆಗೆ ಅಂಟಿಸುತ್ತಾಳೆ. ಇತ್ತೀಚೆಗೆ ಸಾಮಾಜಿಕ ತಾಣವೊಂದರಲ್ಲಿ ರಾಜಕೀಯ ಮನೆತನವೊಂದರ ಭಾವಚಿತ್ರ ಅಪ್ಲೋಡ್ ಮಾಡಲಾಗಿತ್ತು. ಅದರಲ್ಲಿ ಇಬ್ಬರು ಮಹಿಳೆಯರು. ಒಬ್ಬರಿಗೆ ವಯಸ್ಸಾಗಿದೆ (ಹಿರಿಯ ರಾಜಕಾರಣಿ, ಈಗಿಲ್ಲ ಆಕೆ). ಇನ್ನೊಬ್ಬ ಮಹಿಳೆ(ಆಕೆ ಈಗ ಹಿರಿಯ ರಾಜಕಾರಣಿ), ಆಕೆಯೊಂದಿಗೆ ಇಬ್ಬರು ಮಕ್ಕಳು. ಮತ್ತೊಂದು ಮೂಲೆಯಲ್ಲಿ ಸಾಕುನಾಯಿ. ಪ್ರಶ್ನೆ ಹೀಗಿತ್ತು- ಈ ಚಿತ್ರದಲ್ಲಿ (ಹೆಸರು ಬೇಡ).... ವ್ಯಕ್ತಿಯನ್ನು ಹುಡುಕಿ- ಅಂದ್ರೆ ಆ ವ್ಯಕ್ತೀನ ಸಾಕುನಾಯಿಗೆ ಹೋಲಿಸಲಾಗಿತ್ತು!

ಇದೀಗ ಭಾರತದೆಲ್ಲೆಡೆ ಚುನಾವಣಾ ಸಮರ. 'ನನಗೆ ಮತ ಹಾಕಿ, ನಿಮ್ಮನೆ ನಾಯಿಯಂತೆ ನಾನು ದುಡಿಯುತ್ತೇನೆ' ಎಂದು ಯಾರಾದ್ರೂ ಮತ ಯಾಚಿಸಿದ್ರೆ ನಿಮ್ಮನೆ ನಾಯಿಯ ಮಟ್ಟಕ್ಕೆ ಆತ ಏರಬಲ್ಲನೆ ಎಂದು ಸ್ವಲ್ಪ ಯೋಚಿಸಿ..!

= ಅನಿಲ್ ಭಾರದ್ವಾಜ್, ಫಿನಿಕ್ಸ್, ಯುಎಸ್‌ಎ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com