ಮಹಿಳಾ ಸಂವೇದನೆಯ ಆದಿ- ಅನಾದಿ

Updated on: 

ಹಿಂದಿ ಕಥಾ ಜಗತ್ತಿನಲ್ಲಿ ಚಿತ್ರಾ ಮುದ್‌ಗಲ  ಅವರಿಗೆ ವಿಶೇಷ ಸ್ಥಾನ ಇದೆ. ತಮ್ಮ ಕತೆಗಳು ಮತ್ತು ಕಾದಂಬರಿಗಳಿಂದ ಹಿಂದಿ ಗದ್ಯಕ್ಕೆ ಜೀವಂತಿಕೆಯನ್ನು ನೀಡಿರುವ ಅವರು ಸ್ತ್ರೀವಾದಿ ಚಿಂತನೆಗಳಿಂದ ಗಮನ ಸೆಳೆದಿದ್ದಾರೆ. ಅವರ ಕತೆಗಳ ಸ್ತ್ರೀಪಾತ್ರಗಳು ವ್ಯವಸ್ಥೆಯೊಂದಿಗೆ ಸೆಣೆಸುತ್ತ ಹೊಸ ಬದುಕಿಗೆ ಮುಖ ಮಾಡುವ ರೀತಿ ವಿಶೇಷವಾದದ್ದು.
1965ರಿಂದ ಕತೆಗಳನ್ನು ಬರೆಯಲು ಆರಂಭಿಸಿದ ಚಿತ್ರಾ ಅವರು ಇನ್ನೂ ಬರೆಯುತ್ತಲೇ ಇದ್ದಾರೆ. ಅವರ ಎಲ್ಲ ಕತೆಗಳನ್ನು ಕನ್ನಡಕ್ಕೆ ತರುವ ಯೋಜನೆಯನ್ನು ರೂಪಿಸಲಾಗಿದ್ದು 2007ರ ವರೆಗೆ ಅವರು ಬರೆದ 27 ಕತೆಗಳು 'ಆದಿ- ಅನಾದಿ' ಹೆಸರಿನ ಮೊದಲ ಸಂಪುಟದಲ್ಲಿವೆ. ಆರ್.ಪಿ. ಹೆಗಡೆಯವರು ಅವನ್ನು ಕನ್ನಡಿಸಿದ್ದಾರೆ.
ಚಿತ್ರಾ ಅವರಿಗೆ ಕಬೀರ ಅಚ್ಚುಮೆಚ್ಚಿನ ಕವಿ. ಕಬೀರರ ಆದರ್ಶ ಅವರ ಆದರ್ಶ ಕೂಡ. ಸಹನೆ ಸಹಜೀವನದ ತೀವ್ರ ಬಯಕೆ ಸುಂದರ ಬದುಕನ್ನು ಕಟ್ಟಿಕೊಡಬಲ್ಲುದು ಎಂಬುದು ಅವರ ನಂಬಿಕೆ. ಆಧುನಿಕ ಸಮಾಜದ ಮಹಿಳೆ ಮನೆಯಲ್ಲಿ ಮತ್ತು ಕಚೇರಿಯಲ್ಲಿ ಹಾಗೂ ಸಮಾಜದಲ್ಲಿ ಎದುರಿಸುವ ಸವಾಲುಗಳು ಚಿತ್ರಾ ಅವರ ಬಹುತೇಕ ಕತೆಗಳ ವಸ್ತುವಾಗಿದೆ. ಈಸಬೇಕು ಇದ್ದು ಜೈಸಬೇಕು ಎಂಬ ನಿಲವಿಗೆ ಅವರ ಬೆಂಬಲ.
ಅವರ ಈ ಸಂಕಲನದಲ್ಲಿಯ ಒಂದು ಕತೆ, 'ಇದರ ಹೊರತಾಗಿ'. ಇದು ಚಿತ್ರಾ ಅವರ ಸಾಹಿತ್ಯಕ ಧೋರಣೆಯ ಪ್ರಾತಿನಿಧಿಕ ಸ್ವರೂಪದ್ದಾಗಿದೆ.
ಈ ಕತೆಯ ನಾಯಕಿ ಪ್ರೀತಿ. ಅವಳ ಮದುವೆ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿದ್ದ ಗೋಯೆಲ್ ಎಂಬವನೊಂದಿಗೆ ಆಗಿತ್ತು. ಹೈಪ್ರೊಫೈಲ್ ಜೀವನ ಶೈಲಿ ಅವಳಿಗೆ ಒಗ್ಗುವುದಿಲ್ಲ. ಗಂಡನ ಜತೆ ಹೊಂದಿಕೊಳ್ಳಲಾಗದೆ ಅವಳು ತವರಿಗೆ ಬರುತ್ತಾಳೆ. ಮತ್ತೆ ಗಂಡನ ಮನೆಗೆ ಹೋದರೆ ಆತ ದುರ್ವ್ಯಸನಿ. ಮಗಳು ಆಸ್ಪತ್ರೆಗೆ ದಾಖಲಾದರೂ ನೋಡಲು ಬರಲಾಗದಷ್ಟು ಬಿಜಿ. ಅವಳ ಮೈದುನನೇ ಇವಳ ಪರ ನಿಲ್ಲುತ್ತಾನೆ. ತವರಿನಲ್ಲಿ ಅಣ್ಣ ಮತ್ತು ತಾಯಿ ಗೋಯೆಲ್ ಪರ. ಇವಳು ಹೋಟೆಲ್ ಒಂದರಲ್ಲಿ ರಿಸೆಪ್ಷನಿಸ್ಟ್ ಆಗಿ ಸೇರುತ್ತಾಳೆ. ಅಲ್ಲಿ ಮದುವೆಯಾಗದವರಿಗೆ ಮಾತ್ರ ಕೆಲಸವಿತ್ತು. ಕಾರಣ ಇವಳು ತನಗೆ ಮದುವೆಯಾಗಿಲ್ಲವೆಂದು ಹೇಳಿ ಕೆಲಸ ಪಡೆದಿರುತ್ತಾಳೆ. ಅವಳು ಮದುವೆಯಾದವಳೆಂದು ಗಂಡ ಆ ಹೋಟೆಲ್ ಆಡಳಿತದವರಿಗೆ ಪತ್ರ ಬರೆಯುತ್ತಾನೆ. ಅಲ್ಲಿಯ ಬಾಸ್ ದ್ವಿವೇದಿ ಅವಳಿಗೆ ವ್ಯಭಿಚಾರ ಮಾಡುವ ಆಮಿಷವೊಡ್ಡುತ್ತಾನೆ. ಪಿಂಪ್ ರೀತಿ ವರ್ತಿಸುತ್ತಾನೆ. ಅವಳು ರಾಜಿನಾಮೆ ನೀಡಲು ಬಯಸುತ್ತಾಳೆ. ಮನೆಗೆ ಬಂದಾಗ ಅವಳ ಅಣ್ಣ ಇಷ್ಟು ದಿನ ಆಕೆಯ ಗಂಡನ ಪರ ವಹಿಸುತ್ತಿದ್ದವನು ಅಂದು ಇವಳ ಪರ ಮಾತನಾಡುತ್ತಾನೆ. ಆತನ ಈ ಪರಿವರ್ತನೆಗೆ ಅವಳ ಗಂಡ ಅವಳ ಅಣ್ಣನ ಮೇಲೆ ಸಿಟ್ಟುಮಾಡಿಕೊಂಡು ಬರೆದ ಪತ್ರ ಮತ್ತು ಇವಳ ದುಡಿಮೆಯಲ್ಲಿ ತವರಿನವರು ಮಜಾ ಮಾಡುತ್ತಾರೆ ಎಂದು ಮಾಡಿದ ಆರೋಪ. ಯಾವುದೇ ವಿಷಯದಲ್ಲಿ ಬೇರೆಯವರನ್ನು ಟೀಕಿಸುವುದು ಸುಲಭ. ಆದರೆ ಅವರಿರುವ ಸ್ಥಿತಿಯಲ್ಲಿ ತಾನೇ ಇದ್ದರೆ ಏನು ಮಾಡುತ್ತಿದ್ದೆ ಎಂಬ ಆತ್ಮ ನಿರೀಕ್ಷಣೆ ವ್ಯಕ್ತಿಯಲ್ಲಿರಬೇಕು.
ಹೀಗೆ ಬದುಕಿನ ಸಂಕೀರ್ಣ ವಿವರಗಳನ್ನು ದೀರ್ಘವಾಗಿ ಕಟ್ಟಿಕೊಡುವ ಚಿತ್ರಾ ಮುದ್‌ಗಲ ಅವರು ಕತೆಯನ್ನು ಮುಗಿಸುವುದು ಹೀಗೆ:
'ಕೊನೆಯ ತಿರುವಿನ ಮೆಟ್ಟಿಲುಗಳನ್ನು ಇಳಿಯುತ್ತ ಅವಳು ನಿಂತು ಬಿಟ್ಟಳು. ಎಲ್ಲೆಲ್ಲಿಗೆ ಅಂತ ಓಡ್ತಾಳೆ? ಗೋಯಲ್‌ಗಾಗಿ ನೌಕರಿ ಬಿಡಲೇ? ಮರಳಿ ಹೋಗಲೇ? ಅಣ್ಣನಿಗಾಗಿ ಮಾಡುತ್ತಿರಲೇ? ದ್ವಿವೇದಿ? ದ್ವಿವೇದಿಯಂಥವರು ಎಲ್ಲ ಆಫೀಸಿನ ಕ್ಯಾಬಿನ್‌ಗಳಲ್ಲಿಯೂ ಹಾಜರ ಇರ್ತಾರೆ! ಹೋರಾಟ ಸ್ವಂತದ್ದು... ಅಂದ ಮೇಲೆ? ಕೊನೆಯೆಂಬುದಿದೆಯೇ? ಯಾವುದೇ ಕೊನೆ ಎಂಬುದಿಲ್ಲ. ಅವಳ ಪಾಲಿಗಂತೂ ಇಲ್ಲ. ಅಂದಮೇಲೆ ಹೋರಾಟದ ದಾರಿಯನ್ನೇ ಯಾಕೆ ಆಯ್ಕೆಮಾಡಿಕೊಳ್ಳಬಾರದು? ನಾಣ್ಯಗಳ ಹಾಗೆ ಯಾಕೆ ಬಳಕೆ ಆಗಬೇಕು? ರಾಜೀನಾಮೆ ಪತ್ರವನ್ನು ಹೊರತೆಗೆದು ಅವಳು ಚಿಂದಿ ಚಿಂದಿ ಮಾಡಿದಳು. ತಿರುಗಿದಳು. ಖಟ್ ಖಟ್ ವ್ಯಾಕುಲತೆಯಿಂದೆಂಬಂತೆ ಬದುಕನ್ನೇ ಏರತೊಡಗಿದಳು.'
ನಮ್ಮ ಭಾರತೀಯ ಸಮಾಜದ ಯಾವುದೇ ಮನೆಯ ಹೆಣ್ಣಿನ ಬದುಕಿನಲ್ಲೂ ಘಟಿಸಬಹುದಾದ ಸಂಭವನೀಯ ಸ್ಥಿತಿ ಇದು. ಮಹಿಳಾಪರವಾದ ದನಿಯು ಇಲ್ಲಿಯ ಎಲ್ಲ ಕತೆಗಳಲ್ಲಿಯೂ ಇದೆ. ಕನ್ನಡ ಸಾಹಿತ್ಯದಲ್ಲಿಯ ಮಹಿಳಾ ಧ್ವನಿಯೊಂದಿಗೆ ಇಲ್ಲಿಯ ಕತೆಗಳನ್ನು ತೌಲನಿಕವಾಗಿ ನೋಡಬಹುದಾಗಿದೆ. ಈ ಕಾರಣಕ್ಕಾಗಿ ಈ ಅನುವಾದ ಸ್ವಾಗತಾರ್ಹವಾಗಿದೆ.
ಪ್ರ: ಹೇಮಂತ ಸಾಹಿತ್ಯ, ಬೆಂಗಳೂರು, ಪುಟಗಳು 492, ಬೆಲೆ ರು. 300

ನದಿ ಧ್ಯಾನ
ಕೆ.ಎನ್. ಲಾವಣ್ಯಪ್ರಭಾ ಅವರ ಮೂರನೇ ಕವನ ಸಂಕಲನ 'ನದಿ ಧ್ಯಾನದಲ್ಲಿದೆ'. ಇದರಲ್ಲಿ 49 ಕವಿತೆಗಳಿವೆ. 'ಕವಿತೆ ಎನ್ನುವುದು ಲಾವಣ್ಯಗೆ ನಿರೂಪಿಸುವ ಸಂಗತಿಯಲ್ಲ; ತನಗೆ ತಾನೇ ರೂಪಗೊಳ್ಳುವ ಆತ್ಮಾನುಸಂಧಾನ' ಎಂದು ಎಚ್.ಎಸ್. ವೆಂಕಟೇಶಮೂರ್ತಿಯವರು ಮುನ್ನುಡಿಯಲ್ಲಿ ಹೇಳಿದ್ದಾರೆ. ಹೆಣ್ಣಿನ ನೋವು, ಸಂಕಟ, ಆಕೆಯ ವಿಶಿಷ್ಟ ಸಂವೇದನೆಗಳೆಲ್ಲ ಇಲ್ಲಿ ಅಕ್ಷರರೂಪ ತಳೆದಿವೆ. ಹೆಣ್ಣನ್ನು ನದಿಗೆ ಅನ್ವಯಿಸುವ ಹಾಗೂ ಆ ನದಿ ಧ್ಯಾನದಲ್ಲಿದೆ ಎನ್ನುವ ಮೂಲಕ ಹೆಣ್ಣಿನ ನಿರ್ವಿಕಾರ ಸ್ಥಿತಿಗೆ ಧ್ವನಿ ನೀಡುತ್ತಾರೆ.
ಪ್ರ: ಭೂಮಿಕಾ ಪ್ರಕಾಶನ, ಮೈಸೂರು, ಪುಟಗಳು 92, ಬೆಲೆ ರು. 70

ಅಸೂಯೆ ಇಲ್ಲದ ಹಾಡು
ಡಾ.ಅನಸೂಯಾದೇವಿಯವರು ಎರಡು ದಶಕಗಳಲ್ಲಿ ಬರೆದ ಕವಿತೆಗಳ ಸಂಕಲನ 'ಎದೆ ಹಾಸಿನ ಭಾವ ಹೂಗಳು'. ಸಂಕಲನದಲ್ಲಿ ಸಖೀಗೀತೆಗಳು, ಹೆಣ್ಣಾಗಿ ಅವಳು, ಮನದ ಮಂಥನಗಳು, ಮಂಥನದ ಮಣಿಗಳು, ಕಣ್ಣ ಹನಿಗಳು, ಗುರುಚರಣ ಕುಸುಮಗಳು ಎಂದು ಆರು ಭಾಗಗಳಿವೆ. ಹರೆಯದ ಹೆಣ್ಣಿನ ನೋವು ಒಂದು ರೀತಿಯಾದರೆ ವೃದ್ಧಾಪ್ಯದಲ್ಲಿ ಆಕೆಯ ನೋವು ಇನ್ನೊಂದು ರೀತಿಯದು. ಪರಂಪರೆ ಮತ್ತು ಆಧುನಿಕತೆಯ ನಡುವೆ ನಲುಗುವ ಹೆಣ್ಣಿನ ಚಿತ್ರಣ ಹೃದಯಕ್ಕೆ ತಟ್ಟುವುದು.
ಪ್ರ: ಸೃಷ್ಟಿ ಪಬ್ಲಿಕೇಷನ್ಸ್, ಬೆಂಗಳೂರು, ಪುಟಗಳು 248, ಬೆಲೆ ರು. 150

ನವಿಲಿನ ನವಿರು
ಕುಸುಮಾ ಶಾನಭಾಗ ಅವರು ಪತ್ರಕರ್ತರಾಗಿ ಸ್ವಯಂ ನಿವೃತ್ತಿ ಪಡೆದವರು. ರೋಚಕ ವರದಿಗಳನ್ನು ಮಾಡಿದವರು. ಅವರು ಬರೆದ ಸಾಮಾಜಿಕ ಚಿಂತನೆಯ 29 ಬರೆಹಗಳು 'ಪುಟಗಳ ನಡುವಿನ ನವಿಲುಗರಿ' ಸಂಕಲನದಲ್ಲಿವೆ. ಇವು ನೈಜ ಕತೆಗಳ ಸಂಕಲನವಾಗಿದೆ. ಪತ್ರಕರ್ತರಿಗಿರುವ ವಿಶಿಷ್ಟ ಒಳನೋಟಗಳು ಈ ಕೃತಿಯಲ್ಲಿ ಸಿಗುತ್ತವೆ. ಮುತ್ತತ್ತಿಯಲ್ಲಿ ಎಲ್‌ಟಿಟಿಇಯ ಉಗ್ರರು ಇರುವ ಸುದ್ದಿ ತಿಳಿದಾಗ ರಾತ್ರಿಯೇ ಅಲ್ಲಿಗೆ ಹೋಗಿ ವರದಿ ಮಾಡಿದ್ದು ಪತ್ರಕರ್ತರಿಗೆ ಮಾರ್ಗದರ್ಶಿಯಾಗಿದೆ. ನವಿಲುಗರಿಯ ನವಿರು ಬರೆಹದಲ್ಲಿದೆ.
ಪ್ರ: ಅಂಕಿತ ಪುಸ್ತಕ, ಬೆಂಗಳೂರು, ಪುಟಗಳು 168, ಬೆಲೆ ರು. 130

-ಡಾ. ವಾಸುದೇವ ಶೆಟ್ಟಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com