ನನಗೆ ನನ್ನ ವೃತ್ತಿಯ ಬಗೆಗೆ ನಂಬಿಕೆ. ನನ್ನ ಸಾಧನದ ಬಗ್ಗೆ ನಂಬಿಕೆ. ಹಸಿವಿನಿಂದ ಜನ ಸಾಯುತ್ತಿರುವ ಹೊತ್ತಿನಲ್ಲಿ ಸಾಹಿತ್ಯದಿಂದ ಏನು ಉಪಯೋಗ ಎಂದು ಪ್ರಶ್ನಿಸುವವರು ಯಾಕೆ ಬರೆಯುತ್ತಾರೆ ಎಂದು ನನಗರ್ಥವಾಗದು. ಪದಗಳು ಆಯುಧಗಳು, ಅವು ಒಳಿತಿಗೂ ಕೆಟ್ಟದ್ದಕ್ಕೂ ಬಳಕೆಯಾಗಬಹುದು.
ನನ್ನ ದೇಶದಲ್ಲಿ ಸ್ವಾತಂತ್ರ್ಯ ಎಂದರೆ ರಾಜಕೀಯ ಕೈದಿಗಳಿಗಾಗಿ ಇರುವ ಕಾರಾಗೃಹ. ಪ್ರಜಾಪ್ರಭುತ್ವ ಅಂದರೆ ಭಯೋತ್ಪಾದನೆಯ ನಾನಾ ಮುಖಗಳಲ್ಲಿ ಕೆಲವಕ್ಕೆ ಇರುವ ಹೆಸರು. ಪ್ರೀತಿ ಎಂಬ ಪದವು, ಒಬ್ಬ ವ್ಯಕ್ತಿ ತನ್ನ ವಾಹನದ ಜತೆಗೆ ಇಟ್ಟುಕೊಂಡಿರುವ ಸಂಬಂಧವನ್ನು ಸೂಚಿಸುತ್ತದೆ. ಕ್ರಾಂತಿ ಅಂದರೆ, ಹೊಸದೊಂದು ಬ್ರಾಂಡಿನ ಡಿಟರ್ಜಂಟ್ ಪೌಡರ್ ನಿಮ್ಮ ಬಟ್ಟೆಗಳನ್ನು ಹೇಗೆ ಬೆಳಗಿಸಬಲ್ಲದು ಎಂಬ ಅಂಶ. ವೈಭವ ಎಂದರೆ ಒಂದು ಬಗೆಯ ಸಾಬೂನು ನಿಮಗೆ ಏನು ಮಾಡಬಲ್ಲುದು ಎಂಬ ವಿಚಾರ. ಸುಖ ಎಂಬುದು ಹಾಟ್ಡಾಗ್ನಂಥ ತಿಂಡಿಗಳನ್ನು ಸೇವಿಸುವಾಗ ಆಗುವಂಥದು. ಶಾಂತಿಯುತ ದೇಶ ಎಂಬುದರ ಅರ್ಥ, ಶಿಸ್ತುಬದ್ಧವಾಗಿ ನೋಡಿಕೊಳ್ಳಲಾದ ಶವಾಗಾರ. ಆರೋಗ್ಯವಂತ ಮನುಷ್ಯ ಅಂದರೆ ಪ್ರಮುಖ ಹುದ್ದೆಯಲ್ಲಿರುವವ ಅಂತ ತಿಳಿದುಕೋಬೇಕು.
ಬರೆಯುವುದರಿಂದ, ನಮ್ಮ ದೇಶದ ಶಿಕ್ಷೆ, ಸೆನ್ಸಾರ್, ನಮ್ಮ ಕಾಲದ ಮತ್ತು ಜನರ ದುರಂತ ಇಂದಿಗಲ್ಲದಿದ್ದರೂ, ಮುಂದೆಂದಿಗಾದರೂ ಗೊತ್ತಾಗುತ್ತದೆ. ನಾವಿಲ್ಲಿದ್ದೇವೆ, ಇಲ್ಲಿದ್ದೇವೆ, ಹೀಗಿದ್ದೇವೆ ಎಂದಿಷ್ಟೇ ಯಾರಾದರೂ ಬರೆಯಬಹುದು. ಲ್ಯಾಟಿನ್ ಅಮೆರಿಕದ ಸಾಹಿತ್ಯ ಇನ್ನೂ ರೂಪುಗೊಳ್ಳುತ್ತಿದೆ, ಶಕ್ತಿ ಪಡೆಯುತ್ತಿದೆ. ಒಂದು ಸಾಹಿತ್ಯದ ಗುರಿ ಜನರಿಗೆ ಜೋಗುಳ ಹಾಡುವುದಲ್ಲ, ಅವರನ್ನು ಎಚ್ಚರಿಸುವುದು. ಸಾಹಿತ್ಯ ಜನರನ್ನು ಹುಗಿಯುವಂಥದಲ್ಲ, ಅವರನ್ನು ಅಮೃತಪುತ್ರರಾಗಿಸುವಂಥದು. ಅದು ಬೂದಿಯನ್ನು ಕೆದರುವಂಥದಲ್ಲ, ಬೆಳಕನ್ನು ಬೆಳಗುವಂಥದು. ಭರವಸೆ ಎಂಬುದು ನಾಸ್ಟಾಲ್ಜಿಯಾ ಅಥವಾ ಹಳಹಳಿಕೆಯ ಹಾಗೆ. ಆದರೆ, ಸಾಹಿತ್ಯ ನಮ್ಮ ಭವಿಷ್ಯವನ್ನು ಒಳ್ಳೆಯದಕ್ಕಾಗಿಯೇ ಬದಲಾಯಿಸಲಿದೆ ಎಂಬುದು ನನ್ನ ನಂಬುಗೆ.
ಇದು ಲ್ಯಾಟಿನ್ ಅಮೆರಿಕದ ಲೇಖಕ ಎಡ್ವರ್ಡೊ ಗೆಲಿಯಾನೊನ 'ಡೇಸ್ ಆ್ಯಂಡ್ ನೈಟ್ಸ್ ಆಫ್ ಲವ್ ಆ್ಯಂಡ್ ವಾರ್' ಕೃತಿಯ ಉಪೋದ್ಘಾತದಿಂದ ಆಯ್ದದ್ದು. ಈತ ಕಳೆದ ವಾರ ತೀರಿಕೊಂಡ ಮಾರ್ಕ್ವೆಜ್ನ ಪಕ್ಕದ ದೇಶದವನು.
- ಹರೀಶ್ ಕೇರ