

ಪರೋಕ್ಷವಾಗಿ ನಡೆಯುವ ವಂಚನೆಯಿಂದ ಅದೆಷ್ಟೋ ಕ್ರೀಡೆಗಳಲ್ಲಿ ಗೆಲ್ಲುವ ತಂಡಗಳು ಸೋತಿವೆ, ವೀರಾವೇಷದ ಆಟಗಾರರು ಮಣ್ಣು ಮುಕ್ಕಿದ್ದಾರೆ. ತಂಡಗಳ ನಾಯಕರ ತರ್ಕಬದ್ಧ ತಂತ್ರಗಾರಿಕೆಗಳು ತಲೆಕೆಳಗಾಗಿವೆ. ಇಂಥ ವಂಚನೆ ಕ್ರಿಕೆಟ್ನಲ್ಲೂ ನಡೆಯುತ್ತದೆ. ಪಿಚ್ನಲ್ಲೇ ಇದನ್ನು ಸುಲಭವಾಗಿ ಸಾಧಿಸುತ್ತಾರೆ. ಎದುರಾಳಿ ತಂಡದ ಬ್ಯಾಟ್ಸ್ಮನ್ಗಳು ಬೌನ್ಸಿ ಪಿಚ್ಗಳಲ್ಲಿ ಆಡುವ ಸಾಮರ್ಥ್ಯ ಹೊಂದಿದ್ದರೆ, ಸ್ಪಿನ್ ಪಿಚ್ ನಿರ್ಮಿಸುತ್ತಾರೆ. ಸ್ಪಿನ್ಗೆ ಆಡುವ ಬ್ಯಾಟ್ಸ್ಮನ್ಗಳಿದ್ದರೆ, ಬೌನ್ಸಿ ಪಿಚ್ ನಿರ್ಮಿಸುತ್ತಾರೆ! ಇದು ಪ್ರಥಮ ದರ್ಜೆಯಿಂದ ಹಿಡಿದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತಿಥೇಯ ತಂಡ ಮಾಡುವ ಪರೋಕ್ಷ ವಂಚನೆ. ಹೀಗಾಗಿಯೇ ಈ ಬಾರಿಯ ರಣಜಿ ಟ್ರೋಫಿಯ ಫೈನಲ್ ಪಂದ್ಯವನ್ನು ತಟಸ್ಥ ಸ್ಥಳದಲ್ಲಿ ನಡೆಸಲು ಬಿಸಿಸಿಐ ತೀರ್ಮಾನಿಸಿತ್ತು. ಆದರೆ, ಈ ವಂಚನೆ ಮಾಡುವಾಗ ಹೆಚ್ಚಿನ ಯಾತನೆ ಅನುಭವಿಸುವವರು ಪಿಚ್ ಕ್ಯುರೇಟರ್ಗಳು. ಕಾರಣ ಆತಿಥೇಯ ತಂಡಕ್ಕೆ ನೆರವಾಗುವಂಥ ಪಿಚ್ ಸಿದ್ಧಪಡಿಸಲು ಅವರ ಮೇಲೆ ಒತ್ತಡ ಹೇರಲಾಗುತ್ತದೆ.
ಮಹತ್ವದ ಅಂಶ
ಇದೇ ಕಾರಣಕ್ಕೇನೋ... ಕ್ಯುರೇಟರ್ ನಾರಾಯಣ ರಾಜು ಹೀಗನ್ನುತ್ತಾರೆ; 'ಕ್ಯುರೇಟರ್ ಎಂದರೆ ಬಾಣಸಿಗನಿದ್ದಂತೆ. ಬಾಣಸಿಗ ರುಚಿಕಟ್ಟಾದ ಅಡುಗೆಯನ್ನೂ ಮಾಡಬಲ್ಲ. ಆಹಾರ ಪದಾರ್ಥವನ್ನು ತಿನ್ನಲು ಬಾರದಂತೆಯೂ ಮಾಡಿಡಬಲ್ಲ. ಇಲ್ಲೂ ಅಷ್ಟೇ; ಕ್ಯುರೇಟರ್ ಒಂದು ಪಿಚ್ಚನ್ನು ಅದ್ಭುತವಾಗಿ ನಿರ್ಮಿಸಬಲ್ಲ. ಹಾಳನ್ನೂ ಮಾಡಬಲ್ಲ. ಹೀಗಾಗಿ ಕ್ರೀಡಾ ಧರ್ಮವನ್ನು ಮೀರಿದ ಒತ್ತಡವನ್ನು ಅವರ ಮೇಲೆ ಹೇರಬಾರದು. ಕ್ಯುರೇಟರ್ ಆದವರೂ ಆ ಧರ್ಮವನ್ನು ಮೀರಲೂಬಾರದು'.
ಮಣ್ಣಿನ ಜ್ಞಾನ ಮುಖ್ಯ
ಕ್ಯುರೇಟರ್ಗಳಾಗಲು ವಿಶೇಷವಾದ ಪದವಿಗಳಿವೆ. ಇವನ್ನು ಪೂರೈಸಲೇಬೇಕು. ಇದರೊಂದಿಗೆ ಕ್ರಿಕೆಟ್ ಜ್ಞಾನ, ಚೆಂಡಿನ ಗತಿಗಳ ಬಗ್ಗೆ ತಿಳಿವಳಿಕೆಯೂ ಮಹತ್ವದ್ದು. ಮಣ್ಣಿನ ಬಗ್ಗೆ ಜ್ಞಾನವೂ ಇರಬೇಕು. ಕ್ಯುರೇಟರ್ ನೇಮಕಕ್ಕೆ ಪರೀಕ್ಷೆ ಇರುತ್ತದೆ. ಬಿಸಿಸಿಐ ತನ್ನ ಎಲ್ಲ ವಲಯಗಳಿಗೆ ಕ್ಯುರೇಟರ್ಗಳನ್ನು ನೇಮಿಸುತ್ತದೆ. ಆದರೆ, ರಾಜ್ಯ ಕ್ರಿಕೆಟ್ ಸಂಸ್ಥೆಗಳು ಅನುಭವಿಗಳನ್ನು ಹುಡುಕಿ ತಾವೇ ಆಯ್ಕೆಮಾಡುತ್ತವೆ. ಬಿಸಿಸಿಐನಿಂದ ಆಯ್ಕೆಯಾದ ಕ್ಯುರೇಟರ್ಗಳಿಗೆ ಮಾಸಿಕ ರು. 25,000ದಿಂದ, ರು. 50,000ವರೆಗೆ ಸಂಬಳವಿದೆ. ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದಾಗ ಬಿಸಿಸಿಐ ಸಂಪೂರ್ಣ ಖರ್ಚನ್ನು ಭರಿಸುತ್ತದೆ.
ಮಲ್ಲಿಕಾರ್ಜುನ ಕರಿಯಪ್ಪನವರ
malluk3@gmail.com