

ನಿಜ ಹೇಳಬೇಕು ಎಂದರೆ ದೇವರೇ ನಮ್ಮನ್ನು ಬೆಸೆದದ್ದು. ಅಜಯ್ ನನ್ನ ಅಣ್ಣನ ಗೆಳೆಯ. ಆತನ ಮದುವೆಯಲ್ಲೇ ನಮ್ಮ ಮೊದಲ ಭೇಟಿ. ಅದು ತೀರಾ ವಿಶೇಷವಾಗಿಯೇನೂ ಇರಲಿಲ್ಲ. ಈತ ಒಳ್ಳೆಯ ಗಾಯಕ ಎಂದು ಅಣ್ಣ ಪರಿಚಯಿಸಿದ್ದ. ನಾನೂ ಅವರ ಕುರಿತಾಗಿ ಅಂಥ ಆಸಕ್ತಿಯನ್ನೇನೂ ತೋರಿಸಿರಲಿಲ್ಲ. ಅಜಯ್ ಕೂಡಾ ಅಷ್ಟೆ.
ಅದಾಗಿ ಒಂದು ವರ್ಷವೂ ಆಗಿರಲಿಕ್ಕಿಲ್ಲ. ಆಗಸದಲ್ಲಿ ಮತ್ತೊಮ್ಮೆ ತೀರಾ ಆಕಸ್ಮಿಕವಾಗಿ ನಮ್ಮ ಭೇಟಿ ಆಗಿಬಿಡೋದೆ? ಹೇಗೆ ಎಂದರೆ ಕುವೈತ್‌ನಿಂದ ದೋಹಾಕ್ಕೆ ಹೋಗುವಾಗ ವಿಮಾನದಲ್ಲಿ ಸಿಕ್ಕೆವು. ಓಹ್, ನನ್ನ ಬಗ್ಗೆ ಹೇಳಿಕೊಂಡಿಲ್ಲ ಅಲ್ಲವೆ? ನಾನು ಶಬರಿ. ಕೇರಳ ನನ್ನ ತವರು. ಖತಾರ್ ಏರ್‌ವೇಸ್‌ನಲ್ಲಿ ಗಗನಸಖಿ ಆಗಿದ್ದೆ. ಹೀಗಾಗಿಯೇ ನನ್ನ ಮತ್ತು ಅಜಯ್ ಮರುಭೇಟಿ ಸಾಧ್ಯವಾದದ್ದು. ಅಣ್ಣನ ಮದುವೆಯಲ್ಲಿ ಪರಿಚಯ ಆಗಿತ್ತಲ್ಲ, ಫ್ಲೈಟ್‌ನಲ್ಲಿ ಅದರ ನವೀಕರಣ ಆಯಿತು. ಅದೇ ನಮ್ಮಿಬ್ಬರ ಬದುಕಿನ ತಿರುವು. ಪ್ರಯಾಣ ಮುಗಿಯುವಷ್ಟರಲ್ಲಿ ಇಬ್ಬರೂ ಆಪ್ತರಾಗಿಬಿಟ್ಟಿದ್ದೆವು. ಅಜಯ್ ನಮ್ಮ ಮನೆಯವರಿಗೆ ಗೊತ್ತಿದ್ದ ಹುಡುಗನೇ ಆಗಿದ್ದ ಕಾರಣ ಮನೆಯಲ್ಲಿ ಪ್ರಸ್ತಾಪಿಸುವುದು, ಒಪ್ಪಿಗೆ ಪಡೆಯುವುದು ಕಷ್ಟ ಆಗಲೇ ಇಲ್ಲ. ಮೇಲಾಗಿ ಅಪ್ಪ ಸಂಗೀತ ಪ್ರೇಮಿ. ಅಜಯ್‌ನ ಅಭಿಮಾನಿ ಸಹ. ಈ ಸಂಬಂಧದಿಂದ ನನಗಿಂತ ಹೆಚ್ಚು ಖುಷಿಪಟ್ಟಿದ್ದು ನನ್ನ ತಂದೆಯೇ ಎಂದರೆ ಸುಳ್ಳಲ್ಲ. ಈಗಂತೂ ಅಪ್ಪ ಮತ್ತು ಅಜಯ್ ಬೆಸ್ಟ್ ಫ್ರೆಂಡ್ಸ್ ಆಗಿಬಿಟ್ಟಿದ್ದಾರೆ. 2006 ಫೆ.8ರಂದು ಗುರುವಾಯೂರಿನಲ್ಲಿ ನಾವಿಬ್ಬರೂ ಹಸೆಮಣೆ ಏರಿದೆವು.
ನನಗೆ ಕನ್ನಡ ಗೊತ್ತಿಲ್ಲ ನಿಜ. ಆದರೆ ಚೆನ್ನಾಗಿ ಆರ್ಥಮಾಡಿಕೊಳ್ಳಬಲ್ಲೆ. ಅಜಯ್ ಹೆತ್ತವರು ಕೇರಳದವರು.
ಆದರೆ ಆಜಯ್ ಹುಟ್ಟಿ ಬೆಳೆದದ್ದೆಲ್ಲ ಬೆಂಗಳೂರಿನಲ್ಲಿ. ಆತ ಕನ್ನಡಿಗನಾಗಿದ್ದರೂ ಮಲೆಯಾಳಂ ಅನ್ನೂ ಸೊಗಸಾಗಿ ಮಾತನಾಡುತ್ತಾರೆ. ಆದಕಾರಣ ಭಾಷೆ ನಮಗೆ ಎಂದಿಗೂ ತೊಡಕಾದದ್ದೇ ಇಲ್ಲ. ನಮ್ಮಿಬ್ಬರ ಮನೋಭಾವ, ಇಷ್ಟಾನಿಷ್ಟ, ಅಭಿರುಚಿಗಳು ಒಂದೇ ಆಗಿರುವುದರಿಂದ ನಾವು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಹೆಚ್ಚು ಕಷ್ಟವೂ ಆಗಲಿಲ್ಲ.
ಅಜಯ್ ಅಪ್ಪಟ ಚಿನ್ನ. ಕುಟುಂಬ, ಸ್ನೇಹಿತರೆಂದರೆ ಜೀವ. ಅದಿತಿ ಹುಟ್ಟಿದ ಮೇಲಂತೂ ಅವಳೇ ಇವರ ಪ್ರಪಂಚ ಎಂಬಂತೆ ಆಗಿದೆ. ಈಗಂತೂ ಆತ ಮನೆಯಲ್ಲಿರುವುದೇ ಕಷ್ಟ. ನಾನು ಮತ್ತು ಮಗಳು ಅವರನ್ನು ಬಹಳವೇ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅಜಯ್ ಕೂಡ ನಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತಾರೆ. ಆದರೆ ಇದು ಅನಿವಾರ್ಯ. ಆತ ಯಾವಾಗಲೂ ಹೀಗೆಯೇ ಬ್ಯುಸಿಯಾಗಿರಲಿ, ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಮನದುಂಬಿ ಹಾರೈಸುವೆ. ವಯಸ್ಸಿದ್ದಾಗಲೇ ಅವಕಾಶಗಳು ಸಿಗುತ್ತಿವೆ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು ಅಲ್ಲವೆ? ಆದರೆ, ಬಿಡುವಿದ್ದಾಗ ಅಥವಾ ರೆಕಾರ್ಡಿಂಗ್ ಮುಗಿಸಿ ಸಂಜೆ ಬೇಗ ಮನೆಗೆ ಬಂದಾಗ ಎಲ್ಲಾದರೂ ಸುತ್ತಾಡಲು ಹೋಗುತ್ತೇವೆ. ರಸ್ತೆ ಪಕ್ಕ ಪಾನಿಪುರಿ ತಿನ್ನುತ್ತೇವೆ. ಎರಡು ವರ್ಷಕ್ಕೊಮ್ಮೆ ವಿದೇಶಕ್ಕೆ ಕರೆದುಕೊಂಡು ಹೋಗುವುದಾಗಿ ಅಜಯ್ ಪ್ರಾಮಿಸ್ ಮಾಡಿದ್ದಾರೆ. ಪ್ರತಿವರ್ಷ ಭಾರತದ ಯಾವುದಾದರೂ ಸ್ಥಳಕ್ಕೆ ಪ್ರವಾಸ ಹೋಗುತ್ತೇವೆ. ಒಮ್ಮೊಮ್ಮೆ ನಾವು ಮದುವೆಯಾಗಿ ಇಷ್ಟುಬೇಗ ಎಂಟು ವರ್ಷ ಕಳೆದುಹೋಯಿತಾ ಎಂದು ಆಶ್ಚರ್ಯವೂ ಆಗುತ್ತದೆ. ಹಾಗಿದೆ ನಮ್ಮ ದಾಂಪತ್ಯ.
ಗರ್ಭಿಣಿಯಾದ ನಂತರ ನಾನು ಕೆಲಸಕ್ಕೆ ರಾಜೀನಾಮೆ ನೀಡಿದೆ. ಮುಂದಿನ ವರ್ಷ ಅದಿತಿ ಒಂದನೇ ತರಗತಿ. ಆಗ ಅವಳ ಬಹಳಷ್ಟು ಸಮಯ ಶಾಲೆಯಲ್ಲೇ ಕಳೆದು ಹೋಗುವುದರಿಂದ ಮತ್ತೆ ನೌಕರಿಗೆ ಹೋಗಬೇಕು ಎನ್ನುವ ತೀರ್ಮಾನ ಮಾಡಿದ್ದೇನೆ. ಅದು ಅಜಯ್ ಆಸೆಯೂ ಹೌದು.
- ಶಬರಿ