

ಖ್ಯಾತ ವಿಮರ್ಶಕರೆಂದೇ ಹೆಸರಾಗಿರುವ ಮಾಧವ ಕುಲಕರ್ಣಿಯವರ ಏಳನೇ ಕಥಾಸಂಕಲನ 'ಪ್ರತ್ಯಕ್ಷ'. ಇದರಲ್ಲಿ ಏಳು ಕತೆಗಳಿವೆ. ಮೂಲತಃ ಗದಗ ಜಿಲ್ಲೆಯವರಾದ ಮಾಧವ ಕುಲಕರ್ಣಿ ಸದ್ಯ ನೆಲೆಸಿರುವುದು ಮೈಸೂರಿನಲ್ಲಿ. ಅವರು ಉದ್ಯೋಗ ನಿಮಿತ್ತ ಬಹುಕಾಲವನ್ನು ಕಳೆದದ್ದೂ ಆ ಊರಿನಲ್ಲಿಯೇ. ಪ್ರಸ್ತುತ ಸಂಕಲನದಲ್ಲಿ ಈ ಎರಡೂ ಊರಗಳ ಹಿನ್ನೆಲೆಯ ಕತೆಗಳಿವೆ.
ಮೊದಲ ಕತೆ 'ಶಾಪ'ದ ಕಾಲ ಗಾಂಧಿ ಯುಗದ್ದು. ಬ್ರಿಟಿಷರು ಭಾರತವನ್ನು ಬಿಟ್ಟುಹೋಗುವ ಸಂಧಿಕಾಲ. ಭಾರತೀಯರು ಭಾರತವನ್ನು ಸಮರ್ಥವಾಗಿ ಆಳಬಲ್ಲರೆ ಎಂಬ ಅನುಮಾನ ಬ್ರಿಟಿಷರಿಗೆ. ಗಾಂಧೀಜಿಯ ವಿಲಕ್ಷಣವಾದ ಸತ್ಯ ಮತ್ತು ಅಹಿಂಸೆಯ ಶಕ್ತಿಯನ್ನು ಅರಿಯುವುದು ಅವರಿಗೆ ಸಾಧ್ಯವಾಗಿರಲಿಲ್ಲ. ಇಂಥ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶರ ಹುದ್ದೆಯಲ್ಲಿದ್ದ ವಿಲ್ಸನ್ ಅವರು ತಾವು ಮರಳಿ ಬ್ರಿಟನ್ನಿಗೆ ಹೋಗುವುದಾಗಿಯೂ, ತಮ್ಮ ಸ್ಥಾನದಲ್ಲಿ ಕೇಶವರಾಯರನ್ನು ನಿಯುಕ್ತಿಗೊಳಿಸಲು ನಿರ್ಧರಿಸಿದ್ದಾಗಿಯೂ, ಅಧಿಕಾರವನ್ನು ತ್ಯಾಗ ಮಾಡುವ ಪೂರ್ವದಲ್ಲಿ ತಾವು ಭಾರತವನ್ನು ಒಂದು ಸುತ್ತು ಸುತ್ತಿ ಬರುವುದಾಗಿಯೂ, ಅಲ್ಲಿಯ ವರೆಗೆ ಪ್ರಭಾರಿ ರೀತಿಯಲ್ಲಿ ಕೆಲಸ ಮಾಡುವಂತೆಯೂ ಕೇಶವರಾಯರಿಗೆ ಹೇಳಿ ಹೊರಟುಬಿಡುತ್ತಾರೆ.
ನಿಮ್ಮ ಕುಟುಂಬದಲ್ಲಿ ಚೊಚ್ಚಲು ಬಸರಿಗೆ ಹೆರಿಗೆ ಸುಖವಾಗದಿರಲಿ ಎಂಬ ಶಾಪ ಕೇಶವರಾಯರ ಕುಟುಂಬಕ್ಕೆ ಬಂದಿತ್ತು. ಮಗಳು ಚೊಚ್ಚಲ ಹೆರಿಗೆಗೆಂದು ತವರಿಗೆ ಬಂದಿದ್ದಳು. ಮಗಳನ್ನು ಕಂಡಾಗಲೆಲ್ಲ ಇವರಿಗೆ ಶಾಪದ ನೆನಪು. ತಮ್ಮ ಕುಟುಂಬದಲ್ಲಿ ಅಜ್ಜನ ಕಾಲದಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಒಯ್ಯಲು ಕುದುರೆ ಗಾಡಿ ಕೊಡದೆ ಇದ್ದ ಕಾರಣಕ್ಕೆ ಮಗು ಸತ್ತುಹೋಗುವುದು, ಆ ಗರ್ಭಿಣಿ ಸಾಯುವ ಮೊದಲು ಶಾಪ ಕೊಡುವುದು ಎಲ್ಲ ನಮಗೆ ಮೈಸೂರು ಅರಸರಿಗೆ ಮಕ್ಕಳಾಗದಿರಲಿ ಎಂಬ ಶಾಪ ಬಂದುದನ್ನು ನೆನಪಿಸುತ್ತದೆ.
ಜಿಲ್ಲಾ ನ್ಯಾಯಾಧೀಶರಾದ ಬಳಿಕ ಕೇಶವರಾಯರು ತಮ್ಮ ಕುಟುಂಬಕ್ಕೆ ಶಾಪ ನೀಡಿದವರ ಇಂದಿನ ನೆಲೆಯನ್ನು ಪತ್ತೆ ಹಚ್ಚಿ ಅಲ್ಲಿಗೆ ತೆರಳುತ್ತಾರೆ. ಅಲ್ಲಿಯೂ ಮನೆ ಮಗಳು ಹೆರಿಗೆ ಬೇನೆಯಿಂದ ನರಳುತ್ತಿದ್ದಾಗ ಇವರು ತಮ್ಮ ಪ್ರಭಾವ ಬಳಸಿ ಇಂಗ್ಲೆಂಡಿನಲ್ಲಿ ಕಲಿತು ಬಂದ ಮಹಿಳಾ ವೈದ್ಯೆಯನ್ನು ಕರೆತಂದು ಆಕೆಯ ಜೀವ ಉಳಿಸುತ್ತಾರೆ. ಈ ಮೂಲಕ ಶಾಪದಿಂದ ಮುಕ್ತಿ ಪಡೆದ ನೆಮ್ಮದಿಯನ್ನು ಹೊಂದುತ್ತಾರೆ. ಕತೆಗಾರರು ಸ್ವಲ್ಪ ಎಡವಿದರೂ ಇದೊಂದು ಮೂಢ ನಂಬಿಕೆಯನ್ನು ವೈಭವೀಕರಿಸುವ ಕತೆಯಾಗಬಹುದಿತ್ತು. ಕೇಶವರಾಯರಲ್ಲಿದ್ದ ಸನಾತನ ಧರ್ಮವನ್ನು ಕುರಿತ ಶ್ರದ್ಧೆ ಅಹಿಂಸೆಯಲ್ಲಿ ಗಾಂಧೀಜಿಗೆ ಇದ್ದ ಶ್ರದ್ಧೆಗೆ ಸಮನಾದುದು. ಇಂಥವರಿಂದ ಭವಿಷ್ಯದ ಭಾರತಕ್ಕೆ ಒಳ್ಳೆಯದೇ ಆಗಲಿದೆ ಎಂದು ಸ್ವದೇಶಕ್ಕೆ ತೆರಳುತ್ತಿರುವ ವಿಲ್ಸನ್ಗೆ ಕೂಡ ಬೋಧೆಯಾಗುತ್ತದೆ. ವೈವಿಧ್ಯತೆಯಲ್ಲಿಯ ಏಕತೆ ಎಷ್ಟೊಂದು ಗಟ್ಟಿಯಾದದ್ದು ಎಂಬುದನ್ನು ಕುಲಕರ್ಣಿಯವರು ಇಲ್ಲಿ ಹೇಳಿದ್ದಾರೆ.
'ಭೂಮಿ ಮ್ಯಾಗಿನ ಒಂದು ಜೀವ ಉಳಿಸಿದರ ರೊಕ್ಕಾ ತಗೊಳ್ಳೋದು ತಪ್ಪಾಗತೇತಿ' ಎಂಬ ಸಿದ್ಧಾತವನ್ನು ಪ್ರತಿಪಾದಿಸುವ ಕುರಿಕಾಯುವ ದ್ಯಾಮಪ್ಪ ಯಾವ ತತ್ತ್ವಜ್ಞಾನಿಗೂ ಕಡಿಮೆಯವನಲ್ಲ. ತಮ್ಮ ಜೀವದ ಹಂಗು ತೊರೆದು ಬೇರೆಯವರ ಪ್ರಾಣವನ್ನು ರಕ್ಷಿಸುವುದು ಈ ದೇಶದ ಜನರ ಸಂಸ್ಕೃತಿ ಎನ್ನುವುದನ್ನು ಹೇಳುವ ಕತೆಯು 'ಶಾಪ'ದ ಮುಂದುವರಿಕೆಯಾಗಿ ತೋರುತ್ತದೆ.
'ಕಲ್ಲೆಸೆಯುವ ಹಾದಿಯಲ್ಲಿ' ಕತೆ ಒಂದು ಅಸಂಗತ ಪ್ರಸಂಗದಂತೆ ತೋರಿದರೂ ನೆನಪು ಕಳೆದುಕೊಂಡ ಗುರುಪಾದಪ್ಪ ನೆನಪು ಮರಳಿ ಪಡೆದ ಮೇಲೆ ಕರ್ಮಯೋಗಿಯಾಗುವುದನ್ನು ಹೇಳುವ ಮೂಲಕ ಬದುಕಿನಲ್ಲಿ ಕಾಯಕದ ಶ್ರೇಷ್ಠತೆಯನ್ನು ಹೇಳುವಲ್ಲಿ ಯಶಸ್ವಿಯಾಗಿದ್ದಾರೆ. ಬದುಕಿನ ಭ್ರಮೆ ಮತ್ತು ನಿಜಗಳ ನಡುವಿನ ಅಂತರ ತೀರಾ ತೆಳುವಾದದ್ದು ಎಂಬುದನ್ನು ಬಿಂಬಿಸುವುದು 'ಪ್ರತ್ಯಕ್ಷ' ಕತೆಯ ಉದ್ದೇಶವಿರುವಂತೆ ತೋರುತ್ತದೆ. ಇಲ್ಲಿಯ ಕಾಶಪ್ಪ 'ಪರಸಂಗದ ಗೆಂಡೆತಿಮ್ಮ'ನನ್ನು ನೆನಪಿಗೆ ತರುತ್ತಾನೆ. ಇದೂ ಅಸಂಗತ ತಂತ್ರವನ್ನು ಉಪಯೋಗಿಸಿಕೊಂಡು ಹೆಣೆದ ಕತೆಯಾಗಿದೆ. ಆಧುನಿಕ ತಂತ್ರಜ್ಞಾನ ಅಪಾಯಗಳ ಬಗೆಗೆ ಹೇಳುವ ಕತೆ 'ಫೋಟೋಗಳು'.
ಜೀವನದಲ್ಲಿ ಸರಿ ತಪ್ಪುಗಳು, ಭ್ರಮೆ ವಾಸ್ತವಗಳು ಹೀಗೆ ಭಿನ್ನ ಧ್ರುವಗಳ ಅನುಸಂಧಾನದ ಮೂಲಕ ಮೌಲ್ಯವೊಂದನ್ನು ಮಾಧವ ಕುಲಕರ್ಣಿಯವರು ತಮ್ಮ ಕತೆಗಳಲ್ಲಿ ಕಂಡುಕೊಳ್ಳುತ್ತಾರೆ.
ಕೃತಿ: ಪ್ರತ್ಯಕ್ಷ
ಲೇ: ಮಾಧವ ಕುಲಕರ್ಣಿ
ಪ್ರ: ಮೊಗಸಾಲೆ ಪ್ರಕಾಶನ, ಬೆಳುವಾಯಿ,
ಪುಟಗಳು 160, ಬೆಲೆ ರು. 95
ರತ್ನಕಂಬಳಿಯಂಥ ಮೇಘರಾಶಿ
ಚಿಟ್ಟೆ ತನ್ನ ವೇಗ ಹೆಚ್ಚಿಸಿಕೊಂಡು ಮೇಘಗಳ ರಾಶಿಯನ್ನು ಪ್ರವೇಶಿಸಿತು. ನನ್ನನ್ನು ಹಗುರವಾಗಿ ಆದರೆ ದೃಢವಾಗಿ ಹಿಡಿದಿತ್ತು. ಅದರ ಹಿಡಿತದಲ್ಲಿ ಯಾವುದೇ ಅಸೌಖ್ಯವಾಗಲಿ, ಇರುಸುಮುರುಸಾಗಲೀ ಇರಲಿಲ್ಲ. ಅದಾಗಲೇ ಭಯವನ್ನು ಮೀರಿಯಾಗಿತ್ತು. ಹಾಗಾಗಿ ಸುತ್ತಲಿನ ಸೌಂದರ್ಯದ ಕಡೆ ಗಮನ ಹರಿಸತೊಡಗಿದೆ.
ಬೇಸರವಾದಾಗಲೆಲ್ಲ ಆಕಾಶ ನೋಡುತ್ತ ಕುಳಿತುಕೊಳ್ಳುವುದು, ಮೋಡಗಳ ವಿನ್ಯಾಸಕ್ಕೆ ನನ್ನ ಭಾವಗಳನ್ನು ಬೆರೆಸುವುದು ನನ್ನ ಅಭ್ಯಾಸ. ಎಷ್ಟೋ ಸಲ ಆಕಾಶ, ಮೋಡಗಳು ತನ್ನ ಅನಂತತೆಯಿಂದ, ಅಗಾಧತೆಯಿಂದ, ಸೌಂದರ್ಯದಿಂದ ನನ್ನನ್ನು ಸಮಾಧಾನ ಪಡಿಸಿವೆ, ಸಮಚಿತ್ತವಾಗಿಟ್ಟಿವೆ. ಹಾಗೇ ನನ್ನ ಮನುಷ್ಯ ಸಹಜ ಅಗಾಧ ಅಹಂ ಅನ್ನು ತಕ್ಕಮಟ್ಟಿಗೆ ಕರಗಿಸಿವೆ. ಸಂಪೂರ್ಣವಾಗಿ ಅಲ್ಲದಿದ್ದರೂ; ತಾತ್ಕಾಲಿಕವಾಗಿಯಾದರು. ಆದರೆ ಈ ಸಂಜೆಯ ಅನುಭವ ಎಲ್ಲವನ್ನೂ ಮೀರಿದ್ದು.
ನಾನು ಹಲವು ಬಾರಿ ವಿಮಾನಯಾನ ಮಾಡಿದ್ದೇನೆ. ಅನೇಕ ಸುಂದರ ಮೇಘಗಳ ದೃಶ್ಯಗಳನ್ನು, ನೋಟಗಳನ್ನು ಸವಿದಿದ್ದೇನೆ. ಆದರೆ ಈ ಅನುಭವ ಮಾತ್ರ ವರ್ಣಿಸಲಾಗದ್ದು. ಸಂಜೆ ಹೊತ್ತಿನ ಸೂರ್ಯ ತನ್ನ ನಿತ್ಯ ಕರ್ಮದ ಕೊನೆಯ ಘಟ್ಟದಲ್ಲಿದ್ದ. ಬೀಳ್ಕೊಡುಗೆಯ ಸಮಯದಲ್ಲಿ ಪ್ರೇಮಿಯು ತೋರುವ ಚತುರತೆ, ಚಮತ್ಕಾರಗಳನ್ನು ರವಿರಾಯ ತೋರುತ್ತಿರುವಂತೆ ಭಾಸವಾಯಿತು. ಸಂಜೆಯ ವರ್ಣಗಳು ಮೋಡಗಳನ್ನು ಪ್ರೀತಿಯಿಂದ ಅಲಂಕಾರ ಮಾಡಿದ್ದವು. ಮಗುವನ್ನು ಅಲಂಕರಿಸಿ ದೂರದಿಂದ ನೋಡಿ ಸಂತೋಷಿಸುವ ತಾಯಿಯಂತೆ, ಭಾನು ಆಗಸದ ಕ್ಷಿತಿಜದಲ್ಲಿದ್ದ. ಅಪರೂಪದ ಸೌಂದರ್ಯವನ್ನು ಕಂಡು ಹೃದಯ ತುಂಬಿ ಬಂತು. ಆನಂದದಿಂದ ಕಣ್ಣೀರಾದೆ. ಚಿಟ್ಟೆ ನನ್ನನ್ನು ನನ್ನ ಪಾಡಿಗೆ ಬಿಟ್ಟು ಏರಿಳಿತವಿಲ್ಲದ ಸಮವೇಗದಲ್ಲಿ ಹಾರುತ್ತಿತ್ತು. ಹೃದಯ ತುಂಬಿ ಬಂದು 'ಮಿತ್ರಾ, ಈ ಅಪರೂಪದ ಸೌಂದರ್ಯ ಸವಿಯೂಟಕೆ ವಂದನೆ!' ಎಂದೆ. ಚಿಟ್ಟೆ ತನ್ನ ಒಂದು ಕಾಲಿನಿಂದ ನನ್ನ ತಲೆ ಸವರಿತು ಅಷ್ಟೆ... ಮಾತಾಡದೆಯೇ ಸಾವಿರ ಭಾವಗಳ ವಿನಿಮಯವಾಯಿತು.
ಕೆಲವು ನಿಮಿಷಗಳಲ್ಲಿ ನಾವು ಮೇಘಗಳನ್ನು ಮೀರಿ ಮೇಲೇರಿದೆವು. ಕೆಳಗೆ ನೋಡಿದರೆ ಮೇಘಗಳ ಅಗಾಧ ರಾಶಿ ವಿವಿಧ ರಂಗಿನ ರತ್ನಕಂಬಳಿಯಂತೆ ತೋರುತ್ತಿತ್ತು.
ಕೃತಿ: ಕನಸಿನ ಚಿಟ್ಟೆಯ ಹಿಡಿಯಲು ಹೊರಟು
(ಕನ್ನಡದ ಮೊಟ್ಟ ಮೊದಲ ಮೊಬೈಲ್ ಕೃತಿ)
ಲೇ: ವಿದ್ಯಾಶಂಕರ್ ಹರಪನಹಳ್ಳಿ, ಪ್ರ: ಅದ್ವೈತ್ ಪಬ್ಲಿಕೇಷನ್, ಬೆಂಗಳೂರು, ಬೆಲೆ: 90 ರು., ಪುಟ: 72
ಕಂಬತ್ತಳ್ಳಿ ನಾಟಕಗಳು
ಪ್ರಕಾಶ ಕಂಬತ್ತಳ್ಳಿಯವರು ಬರೆದಿರುವ ನಾಟಕಗಳ ಸಂಕಲನ 'ಕಂಪ್ಯೂಟರ್ ಸೇವಕ ಮತ್ತು ಇತರ ನಾಟಕಗಳು'. ಇದರಲ್ಲಿ ಕಂಪ್ಯೂಟರ್ ಸೇವಕ, ದೂರದಿಂದ ಬಂದವರು, ಲಿಫ್ಟ್, ಗಗನ ದೂತ ಎಂಬ ನಾಲ್ಕು ನಾಟಕಗಳಿವೆ. ಟೀವಿ ಮಾಧ್ಯಮ ಬಂದಮೇಲೆ ರೇಡಿಯೋ ನಾಟಕಗಳು ಕಡಿಮೆಯಾಗಿವೆ ಎಂಬ ಭಾವನೆ ಇತ್ತು. ಅದನ್ನು ಕಂಬತ್ತಳ್ಳಿಯವರ ಈ ನಾಟಕಗಳು ದೂರಮಾಡುತ್ತವೆ. ಇವು ಓದು ನಾಟಕಗಳೂ ಹೌದು. ಸವಾಲನ್ನು ಸ್ವೀಕರಿಸುವ ನಿರ್ದೇಶಕ ಇವನ್ನು ರಂಗಕ್ಕೂ ತರಬಹುದು.
ಪ್ರ: ಅಂಕಿತ ಪುಸ್ತಕ, ಬೆಂಗಳೂರು, ಪುಟಗಳು 88, ಬೆಲೆ ರು. 70
ಲಾಸ್ಟ್ ಬೆಲ್
ವೃದ್ಧಾಪ್ಯದಲ್ಲಿ ಕರುಣಾಜನಕವಾಗಿ ಬದುಕುವ ಬದಲು ಅವರಿಗೆ ಗೌರವಯುತವಾಗಿ ಸಾಯುವುದಕ್ಕೆ ಅವಕಾಶ ನೀಡಬೇಕೆಂದು ಆಂದೋಳನ ನಡೆಸಿದ ಎಚ್.ಬಿ. ಕರಿಬಸಮ್ಮನವರ ಆತ್ಮಕಥನ ಮತ್ತು ಇತರೆ ಲೇಖನಗಳನ್ನು 'ಲಾಸ್ಟ್ ಬೆಲ್' ಹೆಸರಿನಲ್ಲಿ ಮಲ್ಲಿಕಾರ್ಜುನ ಕಡಕೋಳ ಹಾಗೂ ಈಶ್ವರಪ್ರಸಾದ ಸಂಪಾದಿಸಿಕೊಟ್ಟಿದ್ದಾರೆ. ದಯಾಮರಣ ಎನ್ನುವ ಪರಿಕಲ್ಪನೆ ಕರ್ನಾಟಕದ ಮಟ್ಟಿಗೆ ಹೊಸದು. ಸಂವಿಧಾನದ ಮಾನ್ಯತೆಯನ್ನು ಇದಕ್ಕೆ ದೊರಕಿಸಿಕೊಡಬೇಕೆಂಬ ಅವರ ಕಳಕಳಿ ವಿಶೇಷ.
ಪ್ರ: ಎಚ್.ಬಿ.ಕರಿಬಸಮ್ಮ ಗೌರವ ಗ್ರಂಥ ಸಮಿತಿ, ದಾವಣಗೆರೆ, ಪುಟಗಳು 162, ಬೆಲೆ ರು. 125
ದಾಸರು ನಡೆದ ದಾರಿಯಲ್ಲಿ ನಾವಡರು
ಕನ್ನಡದ ವಿಶಿಷ್ಟ ದಾರ್ಶನಿಕ ಸಾಹಿತ್ಯವೂ ಸಾಮಾಜಿಕ ಚಿಂತನೆಯ ಸಾಹಿತ್ಯವೂ ಆದ ದಾಸ ಸಾಹಿತ್ಯದ ಅನುಸಂಧಾನ ಬೇರೆಬೇರೆ ಸಂದರ್ಭಗಳಲ್ಲಿ ಬೇರೆಬೇರೆ ರೀತಿಯಲ್ಲಿ ಆಗಿದೆ. ಪ್ರೊ.ಎ.ವಿ. ನಾವಡ ಅವರು, ಸದ್ಯದ ಸಂದರ್ಭದಲ್ಲಿ ದಾಸಸಾಹಿತ್ಯವನ್ನು ನೋಡುವ ಹಾಗೂ ಪರಿಭಾವಿಸುವ ದೃಷ್ಟಿಧೋರಣೆಯಲ್ಲಿ ಬದಲಾವಣೆ ಆಗಬೇಕಾಗಿದೆ. ಮಧ್ಯಕಾಲೀನ ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ ಇತಿಹಾಸದ ಹಿನ್ನೆಲೆಯಲ್ಲಿಟ್ಟು ನೋಡಬೇಕಾಗಿದೆ ಎಂದು ಹೇಳಿ ಆ ರೀತಿ ಮಾಡಿದ್ದಾರೆ.
ಪ್ರ: ಶ್ರೀನಿವಾಸ ಪುಸ್ತಕ ಪ್ರಕಾಶನ, ಬೆಂಗಳೂರು, ಪುಟಗಳು 242 ಬೆಲೆ ರು. 145
ವೈಶಾಲಿಯ ವೈಶಾಲ್ಯ
ವೈಶಾಲಿ ಅಂದ್ರೆ ನಗುನೊಗ, ವೈಶಾಲಿ ಅಂದ್ರೆ ಸಿನಿಮಾ, ರಂಗಭೂಮಿ, ಬ್ಯಾಕ್-ಸ್ಟೇಜ್, ವೈಶಾಲಿ ಅಂದ್ರೆ ಡೈರೆಕ್ಟರ್, ವೈಶಾಲಿ ಅಂದ್ರೆ 'ಧ್ವನಿ'.., ಜೀವನ ಪ್ರೀತಿಗೆ ಇನ್ನೊಂದು ಹೆಸರೇ 'ವೈಶಾಲಿ ಕಾಸರವಳ್ಳಿ'. ಇವರ ಆತ್ಮಕತೆಯನ್ನು ನೆರೇಟ್ ಮಾಡಿದ್ದು ನಿಖಿತಾ ಅಡವೀಶಯ್ಯ. ವೈಶಾಲಿಯ ಸಂಕಥನದೊಂದಿಗೇ ಕನ್ನಡ ರಂಗಭೂಮಿ ಮತ್ತು ಚಿತ್ರರಂಗದ ಹಲವು ಒಳಸುಳಿಗಳೂ ಬಿಚ್ಚಿಕೊಂಡಿವೆ. ವೈಶಾಲಿಯವರನ್ನು ಹತ್ತಿರದಿಂದ ಬಲ್ಲ ನಟ ಲೋಕನಾಥ, ಶಿವರಾಂ ಮೊದಲಾದವರ ಟಿಪ್ಪಣಿಗಳೂ ಇವೆ.
ಪ್ರ: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್, ಬೆಂಗಳೂರು, ಪುಟಗಳು 128, ಬೆಲೆ ರು. 110
-ಡಾ. ವಾಸುದೇವ ಶೆಟ್ಟಿ
vasudevs@sify.com