

ಆರ್ನೂರು ಕಿಲೋಮೀಟರ್.
ಬೆಂಗಳೂರಿಂದ ಹೈದರಾಬಾದಿಗೆ ಹೋದಷ್ಟೇ ದೂರ. ವಿಮಾನದಲ್ಲಿ ಹಾರುವುದಾದರೆ ಒಂದು ಗಂಟೆಯ ದಾರಿ. ಸುಮ್ಮನೆ ಕಲ್ಪಿಸಿಕೊಳ್ಳಿ; ಗುರುತ್ವ, ಓಜೋನ್ ಪದರ, ವಾಯುಮಂಡಲ- ಯಾವುದೂ ಇಲ್ಲವೆಂದಾದರೆ, ದೇವನಹಳ್ಳಿಯಿಂದ ರಾಕೆಟ್ಟಿನಂತೆ ಮೇಲ್ಮುಖವಾಗಿ ಚಿಮ್ಮಿದ ವಿಮಾನ ಒಂದು ಗಂಟೆಯೊಳಗಾಗಿ ನಿಮ್ಮನ್ನು ಭೂಕವಚದಿಂದ ಆರ್ನೂರು ಕಿಮೀ ದೂರದ ಅವಕಾಶದಲ್ಲಿ ತೇಲಾಡಿಸುತ್ತದೆ! ಅಲ್ಲಿಂದ ಕೆಳಗೆ ನೋಡಿದರೆ ಭೂಮಿ ಒಂದು ಬೃಹದಾಕಾರದ ನೀಲಿಉಂಡೆಯಂತೆ ಕಾಣಬಹುದು. ಕ್ಷಿತಿಜ ಎಂದು ನಾವು ಕರೆಯುವ ಅದರ ಅಂಚನ್ನು ಪಚಪಚ ನೆಕ್ಕುತ್ತ ಓಡಿಬರುವ ಸೂರ್ಯರಶ್ಮಿಯ ಹೊಂಬಣ್ಣದ ಲಾಸ್ಯವನ್ನು ಕಂಡು ಮನಸ್ಸು ಪುಳಕಗೊಂಡೀತು. ಎತ್ತರದ ಆ ದಂತಗೋಪುರದಲ್ಲಿ ಕೂತು ಇಣುಕಿದರೆ, ರುದ್ರರಮಣೀಯತೆಗಳನ್ನು ಗರ್ಭಿಸಿಕೊಂಡ ವಸುಂಧರೆಯ ಶಾಂತಮುದ್ರೆಯನ್ನು ಕಂಡು ಭಯ, ಕುತೂಹಲ, ಉದ್ವಿಗ್ನತೆಗಳ ವಿಚಿತ್ರಭಾವ ಹುಟ್ಟಬಹುದು.
ಆರ್ನೂರು ಕಿಲೋಮೀಟರ್! ಭೂಮಿಯಿಂದ ಅಷ್ಟು ಎತ್ತರಕ್ಕೆ ಹೋದರೆ, ಅಲ್ಲಿ ಗುರುತ್ವವೇ ಇಲ್ಲದ ಸ್ಥಿತಿ ತಲುಪುತ್ತೀರಿ! ನ್ಯೂಟನ್ನ ತೋಟದಲ್ಲಿ ಕಳಚಿಬಿದ್ದ ಸೇಬು ನೆಲಮುಟ್ಟಿದಂತೆ, ಇಲ್ಲಿ ಯಾವುದೂ ಕೆಳಕ್ಕೆ ಬೀಳುವುದಿಲ್ಲ. ನೀವು ಕೈಯಲ್ಲಿ ಹಿಡಿದ ಸೇಬನ್ನು ಬಿಟ್ಟರೂ ಅದು ತನ್ನ ಪಾಡಿಗೆ ತಾನು ಹಕ್ಕಿಯಂತೆ ಹಗುರಾಗಿ ತೇಲುತ್ತ ನಿಮ್ಮ ಸುತ್ತಮುತ್ತ ಕುಣಿದಾಡಿಕೊಂಡಿರುತ್ತದೆ! ಮನೆಯ ನೆನಪಾಗಿ ಕಣ್ಣೀರು ಹುಟ್ಟಿದರೂ ಅದು ಕೆನ್ನೆಯ ಮೇಲೆ ನದಿಯಂತೆ ಇಳಿಯದೆ ಗಾಳಿಪಟದಂತೆ ಅಲ್ಲಿಂದಲೇ ಮುತ್ತಾಗಿ ಹಾರಿಹೋಗುತ್ತದೆ. ಇಲ್ಲಿ ಹಕ್ಕಿಗಳಿಲ್ಲ, ಶಬ್ದವಿಲ್ಲ, ಭೌತಿಕವಾಗಿ ದೂರ ಹೋದರೂ ಮನಸ್ಸಿಗೆ ಭೂಮಿಯ ಅಮಿತಸೆಳೆತ ಹುಟ್ಟಿಸುವ ಪಿಶಾಚಮೌನದ ಬಟ್ಟಾಂಬಯಲು ಇದು.
ನಾವು ಚಪ್ಪಾಳೆ ತಟ್ಟಿ ಶಿಳ್ಳೆ ಹೊಡೆದು ಕಳಿಸಿದ ಎಲ್ಲ ರಾಕೆಟ್ಟುಗಳು ತಂದು ಹಾಕುವ ಉಪಗ್ರಹಗಳು ಭೂಮಿಯನ್ನು ಸುತ್ತುವ ಜಾಗ ಇದೇ. ಭೂಮಿಯಿಂದ ಆರ್ನೂರು ಕಿಮೀ ಮೇಲೆ ಶುರುವಾಗುವ ಈ ಪಟ್ಟಿ (ಅಥವಾ ಬೆಲ್ಟ್) ಅಲ್ಲಿಂದ ಮುಂದೆ ನಾಲ್ನೂರು ಕಿಮೀ ಎತ್ತರದವರೆಗೆ ಚಾಚಿಕೊಂಡಿದೆ. ಒಟ್ಟಲ್ಲಿ ಈ ಪಟ್ಟಿಯೇ ಉಪಗ್ರಹಗಳ ಆಡುಂಬೊಲ. ಇಲ್ಲಿ ಒಂದು ನಿರ್ದಿಷ್ಟ ಜಾಗ ಹುಡುಕಿಕೊಂಡು, ಭೂಮಿಗೆ ಸುತ್ತು ಬರುವ ಅಥವಾ ಭೂಮಿಯ ಜತೆಜತೆಗೇ ತಾವೂ ಪ್ರದಕ್ಷಿಣೆ ಹಾಕುವ ಉಪಗ್ರಹಗಳ ಸಂಖ್ಯೆಯೇ ಐದುಸಾವಿರ ದಾಟುತ್ತದೆ! ಯಾರಿಗೂ ಸೇರದ ಕಾಡಿನ ತಪ್ಪಲಲ್ಲಿ ಬಿಡಾರ ಬಿಟ್ಟ ಅಲೆಮಾರಿಗಳ ಡೇರೆಗಳಂತೆ ಈ ಉಪಗ್ರಹಗಳು ದೇಶ, ಭಾಷೆಗಳ ಗಡಿಗಳ ಹಂಗಿಲ್ಲದೆ ಆಗಸದ ಅಂಗಳದಲ್ಲಿ ಕ್ರಿಕೆಟ್ಟಿನ ಫೀಲ್ಡರುಗಳಂತೆ ಚದುರಿ ನಿಂತಿವೆ.
ಸರಿಯಾಗಿ ಕೆಲಸ ಮಾಡುತ್ತಿರುವವುಗಳೇನೋ ದೂರದ ತವರುಮನೆಗೆ ಬೇಕಾದ ಮಾಹಿತಿಯನ್ನು ರವಾನೆ ಮಾಡುತ್ತಿವೆ ಅನ್ನಬಹುದು. ಕೆಟ್ಟುಕೂತ ಉಪಗ್ರಹಗಳ ಕತೆಯೇನು? ಇಂದು ಇಲ್ಲಿ ನಾಳೆ ಅಲ್ಲಿ ಎನ್ನುತ್ತ ಗೊತ್ತುಗುರಿ ಇಲ್ಲದೆ ತಿರುಗುವ ಇವುಗಳ ಬಾಳು ಅನಿಶ್ಚಿತ. ಅವನ್ನು ಹಿಡಿದು ಕಟ್ಟಿಹಾಕುವವರು ಯಾರೂ ಇಲ್ಲ. ಬಂದ ಕರ್ಮಕ್ಕೆ ಮರುಗಿ ತಪ್ಪಾಯ್ತೆಂದು ಬೇಡಿಕೊಂಡರೂ ಅವನ್ನು ಮರಳಿ ಮನೆಗೊಯ್ಯುವವರು ಇಲ್ಲ! ಭೂಮಿಯ ಗುರುತ್ವವನ್ನು ದಾಟಿ ಹೋದ ತಪ್ಪಿಗೆ ಅವು ಅಲ್ಲೇ ರಣಪೀಡೆಗಳಂತೆ ನೀರಿಲ್ಲದೆ ಅಲೆಯುತ್ತಿರಬೇಕು! ಇದುವರೆಗೆ ಹೇಳಿದ ಕೆಲಸವನ್ನೆಲ್ಲ ನಿಯತ್ತಾಗಿ ಮಾಡಿಮುಗಿಸಿ ಪ್ರಾಮಾಣಿಕತೆ ಮೆರೆದ ಉಪಗ್ರಹಗಳಿಗೂ, ಅವುಗಳ ಅವಧಿ ಮುಗಿದು ನಿವೃತ್ತಜೀವನ ಶುರುವಾದ ಮೇಲೆ ಇದೇ ಗತಿಯೇ.
ಹೀಗೆ ಕೆಲಸವಿಲ್ಲದೆ ತಿರುಗುವ, ಕೆಟ್ಟು ಅಲೆಯುವ, ಹೋಗುವಾಗಲೇ ದಾರಿ ಮಧ್ಯ ಎಡವಟ್ಟಾಗಿ ಕೆಲಸಕ್ಕೆ ಬರದೆ ಮೂಲೆಗುಂಪಾದ ಒಟ್ಟು ಎಷ್ಟು ನಿರುಪಯುಕ್ತ ಉಪಗ್ರಹಗಳು ಭೂಮಂಡಲದ ಈ ಪಟ್ಟಿಯಲ್ಲಿ ಗಿರಕಿ ಹೊಡೆಯುತ್ತಿವೆ? ಅಮೆರಿಕದ ನೊರಡ್ ಎಂಬ ಅಂತರಿಕ್ಷದ ಯಾತ್ರೆಗಳಿಗೆ ಸಂಬಂಧಿಸಿದ ಸಂಸ್ಥೆ ಎಪ್ಪತ್ತರ ದಶಕದಲ್ಲಿ ಭೂಮಿಯಿಂದ ಬಾನಿಗೆ ಹಾರಿದ ಎಲ್ಲ ಉಪಗ್ರಹಗಳ ಪಟ್ಟಿ ಇಟ್ಟುಕೊಂಡಿತ್ತಂತೆ. ಯಾವ ವರ್ಷದ ಯಾವ ದಿನ ಭೂಮಿಯ ಯಾವ ಮೂಲೆಯಿಂದ ಎಷ್ಟು ಉಪಗ್ರಹಗಳು ಹಾರಿದವು ಎಂಬುದರ ಕರಾರುವಾಕ್ ಲೆಕ್ಕ ಅದರ ಬಳಿ ಇತ್ತು. ಅಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದ ಜಾನ್ ಗಿಬ್ಬರ್ಡ್ ಎಂಬವನು ಹವ್ಯಾಸಕ್ಕಾಗಿ ತಾನೂ ಒಂದು ಡೈರಿ ಬರೆಯಲು ಶುರುಮಾಡಿದ. ಅದರಲ್ಲಿ, ಹಾರಿದ ಮೇಲೆ ಕೆಟ್ಟುಹೋದ, ಬೇಕಾದ ನಕ್ಷೆಗೆ ಸೇರದೆ ಬೇಕುಬೇಕಾದಲ್ಲಿ ಬೀಡಾಡಿ ಅಲೆದು ದಾರಿತಪ್ಪಿದ, ಸ್ಫುಟ್ನಿಕ್ನಂತೆ ತಲೆ ಮೇಲೇ ಬೀಳುವ ಭಯ ಹುಟ್ಟಿಸಿ ಸಾಗರಗಳಿಗೆ ಧುಮುಕಿ ಪರ್ಯಾವಸಾನಗೊಂಡ ಎಲ್ಲ ಉಪಗ್ರಹಗಳ ಲೆಕ್ಕ ಬರೆದಿಡಲು ಪ್ರಾರಂಭಿಸಿದ.
ಅದೇ ಸಮಯಕ್ಕೆ, ಈ ವಿಷಯದಲ್ಲಿ ಗಬ್ಬರ್ಡ್ ಮಾಡುತ್ತಿದ್ದ ದಾಖಲಾತಿಯ ವಿಷಯ ಗೊತ್ತಿಲ್ಲದೆ, ಆದರೆ ಅದೇ ನಿಟ್ಟಿನಲ್ಲಿ ಯೋಚನೆ ಮಾಡಿ ಸಂಶೋಧನೆ ನಡೆಸಿದ ಡೊನಾಲ್ಡ್ ಕೆಸ್ಲರ್ ಬರೆದ ಲೇಖನದ ಪ್ರತಿ ಗಬ್ಬರ್ಡ್ಗೆ ಸಿಕ್ಕಿತು. ಕೆಸ್ಲರ್ ಪ್ರತಿಪಾದಿಸಿದ್ದ ಮೂರು ಅಂಶಗಳು ಅವನ ಗಮನವನ್ನು ಥಟ್ಟನೆ ಸೆಳೆದವು.
ಕೆಸ್ಲರ್ ತನ್ನ ಪೇಪರಿನಲ್ಲಿ ಹೇಳಿದ್ದು ಇದು;
1. ಕೆಟ್ಟ ಉಪಗ್ರಹಗಳು ತಲೆಕೆಟ್ಟವರಂತೆ ತಿರುಗುತ್ತ ಈ ಪಟ್ಟಿಯಲ್ಲಿ ಪರಸ್ಪರ ಢಿಕ್ಕಿ ಹೊಡೆದರೆ, ಅದರಿಂದ ಒಂದಷ್ಟು ಚೂರುಗಳು ಹಾರುವುದು ಸರಿಯಷ್ಟೆ. ಈ ತುಣುಕುಗಳು ಮತ್ತೆ ಎಕ್ಸ್ಪ್ರೆಸ್ ವೇಗದಲ್ಲಿ ಹಾರುತ್ತ ಇನ್ನಷ್ಟು ಒಳ್ಳೆಯ, ಕ್ಷಮತೆಯುಳ್ಳ ಉಪಗ್ರಹಗಳಿಗೆ ಬಡಿಯುವ ಸಾಧ್ಯತೆ ಉಂಟು. ತಾನು ಕಚ್ಚಿದವರನ್ನೆಲ್ಲ ತನ್ನಂತೆಯೇ ನೆತ್ತರು ಕುಡಿವ ಭೂತಗಳನ್ನಾಗಿ ಪರಿವರ್ತಿಸುವ ಝಾಂಬಿಯ ಹಾಗೆ, ಈ ಹಾಳಾದ ಉಪಗ್ರಹಗಳು ಒಳ್ಳೆಯದನ್ನೂ ಕೆಡಿಸುತ್ತವೆ. ಭೂಮಿಯ ವಾಯುಮಂಡಲದತ್ತ ಯಮವೇಗದಲ್ಲಿ ತೂರಿಬರುವ ಉಲ್ಕಾಪಿಂಡಗಳಿಗಿಂತಲೂ ಇವು ಹೆಚ್ಚು ಅಪಾಯಕರ.
2. ಪ್ರತಿಬಾರಿ ಢಿಕ್ಕಿ ಹೊಡೆದುಕೊಂಡಾಗಲೂ ಉಪಗ್ರಹಗಳು ಛಪ್ಪನ್ನಾರು ಚೂರಾಗಿ ಒಡೆಯುವುದರಿಂದ ಅವಕಾಶಕ್ಕೆ (ಸ್ಪೇಸ್ಗೆ) ಸೇರುವ ಕಸದ ಪ್ರಮಾಣ ನೂರ್ಮಡಿಯಾಗುತ್ತದೆ. ಇದರಿಂದಾಗಿ ಅಲ್ಲಿ ಅಪಘಾತ ಮತ್ತು ಕಸ ಎರಡರ ಪ್ರಮಾಣವೂ ಘಾತಾಂಕ ಫಲನದ ಗತಿಯಲ್ಲಿ (ಊ್ಢಠ್ಟಟಿಜಟಿಡ್ಝಿಛಟ ್ಜ್ಠ್ಟಢಿಝಿ) ಏರತೊಡಗುತ್ತದೆ.
3. ಇದನ್ನು ತಡೆಯಲು ಮಾಡಬೇಕಾದ್ದೇನು? ಅತಿ ಕಡಿಮೆ ಅನುಪಯುಕ್ತ ವಸ್ತುಗಳನ್ನು ಅವಕಾಶಕ್ಕೆ ಬಿಟ್ಟುಕೊಡುವ ರಾಕೆಟ್ಟುಗಳನ್ನು ನಿರ್ಮಿಸುವುದು ಮೊದಲ ಆದ್ಯತೆ. ಮತ್ತು, ಒಟ್ಟು ಉಪಗ್ರಹ ಉಡಾವಣೆಯ ಸಂಖ್ಯೆಯನ್ನೇ ಗಣನೀಯವಾಗಿ ತಗ್ಗಿಸುವುದು ಅತ್ಯಂತ ಅವಶ್ಯಕ ಜವಾಬ್ದಾರಿ. ಹೆಚ್ಚೆಚ್ಚು ಉಪಗ್ರಹಗಳು ಆಕಾಶಕ್ಕೆ ಸೇರುತ್ತ ಹೋದಹಾಗೆ, ಈ ಎಲ್ಲ ಎಡವಟ್ಟುಗಳ ಗಾತ್ರ- ಪ್ರಮಾಣದಲ್ಲೂ ಏರಿಕೆಯಾಗುವುದು ಸಹಜವೇ.
ನ್ಯೂಟನ್ನ ಮೊದಲ ನಿಯಮ ಜ್ಞಾಪಿಸಿಕೊಳ್ಳಿ. ಯಾವುದೇ ವಸ್ತುವಿಗೆ ಹೊರಗಿನ ಪ್ರಚೋದನೆ ಇಲ್ಲದೆ ಹೋದರೆ, ಅದು ಈಗ ಯಾವ ವೇಗದಲ್ಲಿ ಚಲಿಸುತ್ತಿದೆಯೋ ಅದನ್ನೇ ಅನಂತ ಸಮಯದವರೆಗೂ ಕಾಯ್ದುಕೊಳ್ಳುತ್ತದೆ- ಎಂದು ಅದು ಹೇಳುತ್ತದೆ, ಅಲ್ಲವೆ? ಶೂನ್ಯ ಘರ್ಷಣೆಯ ನೆಲದಲ್ಲಿ ಒಂದು ಚೆಂಡನ್ನು ಉರುಳಲು ಬಿಟ್ಟರೆ, ಅದು ಎಷ್ಟೇ ಸಹಸ್ರವರ್ಷಗಳಾದರೂ ಆ ನೆಲದಲ್ಲಿ ಏಕರೀತಿಯಲ್ಲಿ ಸಮವೇಗದಲ್ಲಿ ಉರುಳುತ್ತಲೇ ಇರುತ್ತದೆ- ಎನ್ನುವುದು ನಿಯಮ. ಉಪಗ್ರಹಗಳು ಭೂಮಿಯ ಗುರುತ್ವದ ಅಪ್ಪುಗೆಯನ್ನು ಹರಿದುಕೊಂಡು ಹೋಗಬೇಕಾದರೆ ಅವುಗಳನ್ನು ಹೊತ್ತ ರಾಕೆಟ್ಟುಗಳು ಸೆಕೆಂಡಿಗೆ 11.6 ಕಿ.ಮೀ. ವೇಗದಲ್ಲಿ ದಪದಪನೆ ಹೆಜ್ಜೆಹಾಕುತ್ತ ಓಡಬೇಕು. ಅಂಥ ರಾಕ್ಷಸವೇಗದಲ್ಲಿ ಹಾರಿ ಗುರುತ್ವದ ಆಚೆಗೆ ಹೋಗಿಬಿದ್ದ ರಾಕೆಟ್ಟುಗಳು ಮುಂದೆ ಕೆಟ್ಟುಹೋದರೆ, ಅವುಗಳ ವೇಗದಲ್ಲೇನೂ ಬದಲಾವಣೆಯಾಗುವುದಿಲ್ಲ. ಯಾಕೆಂದರೆ ಆ ವೇಗವನ್ನು ತಗ್ಗಿಸುವ, ತನ್ನತ್ತ ಎಳೆದುಕೊಳ್ಳುವ ಗುರುತ್ವಶಕ್ತಿಯೇ ಅಲ್ಲಿ ನಾಸ್ತಿ! ಹಾಗಾಗಿ, ಈ ಎಲ್ಲ ಉಪಗ್ರಹಗಳು ಅದೇವೇಗದಲ್ಲಿ ಭೂಮಿಯ ಹೊರಗೆ ಸುತ್ತುತ್ತಿರುತ್ತವೆ! ಬೆಂಗಳೂರಿನ ನಾಲ್ಕುರಸ್ತೆಗಳು ಕೂಡುವ ಯಾವುದೇ ಜಾಗದಲ್ಲಿ ವಾಹನಗಳೆಲ್ಲವೂ ನೂರಿಪ್ಪತ್ತರ ಒಂದೇ ವೇಗದಲ್ಲಿ ಯರ್ರಾಬಿರ್ರಿ ಓಡುವ ಚಿತ್ರವನ್ನು ಕಣ್ಣಮುಂದೆ ತಂದುಕೊಳ್ಳಿ!
ಕೆಸ್ಲರ್ನ ಲೇಖನದ ಪ್ರಮುಖ ಆಶಯವನ್ನು ಮೆಚ್ಚಿ ಒಪ್ಪಿಕೊಂಡ ಗಬ್ಬರ್ಡ್ ಅದನ್ನು 'ಕೆಸ್ಲರ್ ಸಿಂಡ್ರೋಮ್' ಎಂದೇ ಕರೆದ. 1978ರ ತನ್ನ ಬರಹದಲ್ಲಿ ಇದನ್ನು ವಿವರವಾಗಿ ಚರ್ಚಿಸಿದ ಕೆಸ್ಲರ್ 2000ನೇ ಇಸವಿಯ ವೇಳೆಗೆ ಉಪಗ್ರಹಗಳ ಕಕ್ಷೆಯಲ್ಲಿ ಟ್ರಾಫಿಕ್ ಜಾಮ್ ಆಗಲು ಶುರುವಾಗುತ್ತದೆ! ಉಪಗ್ರಹಗಳು ತಮ್ಮತಮ್ಮೊಳಗೆ ಢೀ ಹೊಡೆದುಕೊಳ್ಳಲು ಪ್ರಾರಂಭಿಸುತ್ತವೆ ಎಂದು ಭವಿಷ್ಯ ನುಡಿದಿದ್ದ ಅವನು ಊಹಿಸಿದ್ದಕ್ಕಿಂತಲೂ ಬಹಳ ಮುಂಚಿತವಾಗಿಯೇ, 1991ರಲ್ಲಿ, ಆಕಾಶದಲ್ಲಿ ಮಾನವನಿರ್ಮಿತ ಕಾಯಗಳ ಗುದ್ದಾಟ ಪ್ರಾರಂಭವಾಗಿಬಿಟ್ಟಿತು! 2009ರ ಫೆಬ್ರವರಿ 10ರಂದು ಇರಿಡಿಯಂ 33 ಮತ್ತು ಕಾಸ್ಮೋಸ್ 2251 ಎಂಬೆರಡು ಬೃಹತ್ ಉಪಗ್ರಹಗಳು 11.6 ಕಿ.ಮೀ/ಸೆ. ವೇಗದಲ್ಲಿ ಬಂದು ತಲೆಗೆ ತಲೆ ಗುದ್ದಿಕೊಂಡು ಅಸಂಖ್ಯ ಚೂರುಗಳಾಗಿ ಒಡೆದು ಅವಕಾಶದಲ್ಲಿ ಹರಡಿಹೋದವು. ಭೂಮಿಯಿಂದ 790 ಕಿ.ಮೀ. ಎತ್ತರದಲ್ಲಿ ನಡೆದ ಈ ವಿದ್ಯಮಾನ, ಖಾಲಿ ಹೈವೆಯಲ್ಲಿ ಒಬ್ಬ ಫಟಿಂಗ ಗೋಣಿ ತುಂಬ ಮೊಳೆ ತಂದು ಚೆಲ್ಲಿದಂತಾಯಿತು. ಇವೆರಡು ಉಪಗ್ರಹಗಳಿಂದ ಹುಟ್ಟಿದ ಅಪಘಾತದ ತುಂಡುಕಸ ಹಾದಿಯಲ್ಲಿ ಹೋಗಿಬರುವ ಇತರೆಲ್ಲ ಉಪಗ್ರಹಗಳಿಗೆ ಚೇಷ್ಟೆಯೆಂಬಂತೆ ಬಡಿಯತೊಡಗಿದವು. ಇಂಗ್ಲಿಷಿನಲ್ಲಿ ಈ ಕಸವನ್ನು 'ಸ್ಪೇಸ್ ಡೆಬ್ರಿಸ್' ಎಂದು ಕರೆದರು.
ಮೂವತ್ತೈದು ವಷಗಳ ಹಿಂದೆ ಕೆಸ್ಲರ್ ಹೇಳಿದ ಮಾತು, ಈಗ ನಿಜವಾಗಿ ಸಂಭವಿಸುತ್ತಿರುವುದರಿಂದ ಜಗತ್ತು ಕಣ್ಣುಬಿಡುತ್ತಿದೆ. ಇನ್ನಷ್ಟು ಹೆಚ್ಚು ಉಪಗ್ರಹಗಳನ್ನು ನಭೋಮಂಡಲಕ್ಕೆ ಚಿಮ್ಮುವುದು ಬೇಡ ಎಂಬ ಕಳಕಳಿ ಅಂತಾರಾಷ್ಟ್ರೀಯಮಟ್ಟದಲ್ಲಿ ವ್ಕಕ್ತವಾಗುತ್ತಿದೆ. ನಮ್ಮ ನಿತ್ಯದ ಕೆಲಸಗಳಿಗೆ ಬೇಕೇಬೇಕಾದ ದೂರಸಂಪರ್ಕಕ್ಕೆ ಸಂಬಂಧಿಸಿದ ಉಪಗ್ರಹಗಳ ಸುತ್ತಾಟ ಕೂಡ ನಡೆಯುವುದು ಇದೇ ಪಟ್ಟಿಯಲ್ಲೇ. ಹವಾಮಾನ ವರದಿ ಹೇಳುವ, ಪ್ರಕೃತಿ ವೈಪರೀತ್ಯಗಳ ಮುನ್ಸೂಚನೆ ಕೊಡುವ, ತೈಲಸೋರಿಕೆ ಮತ್ತು ಕಾಳ್ಗಿಚ್ಚಿನ ಹರಡುವಿಕೆಯಂಥ ಗಂಭೀರ ದುರಂತಗಳ ಬಗ್ಗೆ ನಮ್ಮನ್ನು ಎಚ್ಚರಿಸುವ ಉಪಗ್ರಹಗಳಿಗೇ ಈಗ ಅಪಾಯ ಎದುರಾಗಿದೆ. ಬಂದೂಕು ಹೊತ್ತು ಓಡಾಡುವ ಸೈನಿಕರು ಮತ್ತು ಎಲ್ಲೆಲ್ಲೂ ಹೊಗೆ ಎಬ್ಬಿಸುತ್ತಿರುವ ಬಾಂಬುಗಳ ರಣಾಂಗಣದಲ್ಲಿ ನಿಂತು ವರದಿ ಮಾಡುವ ಪತ್ರಕರ್ತನ ಬದುಕೇ ಈ ಉಪಗ್ರಹಗಳದ್ದೂ. ನಮ್ಮ ಕೈಗೆ ಕ್ಷಣಕ್ಷಣದ ತಾಜಾಖಬರ್ ಕೊಡುತ್ತ ವೃತ್ತಿನಿಷ್ಠೆಯಿಂದ ಕೆಲಸ ಮಾಡುತ್ತಿರುವ ಈ ಉಪಗ್ರಹಗಳಿಗೆ ಎಂದು ಯಾವ ಕ್ಷುದ್ರತುಂಡುಗಳು ಬಡಿಯುತ್ತವೋ ಯಾರಿಗೆ ಗೊತ್ತು!
ಈ ಸಮಸ್ಯೆಯ ಸೂಕ್ಷ್ಮತೆಯನ್ನು ಅರಿಯಲು ಒಂದು ಉದಾಹರಣೆ ತೆಗೆದುಕೊಳ್ಳಿ. ಉಪಗ್ರಹಗಳಿಂದ ದಟ್ಟವಾಗಿರುವ ಈ ಪಟ್ಟಿಯಲ್ಲಿ ಸಮರ್ಪಕವಾಗಿ ಕೆಲಸ ಮಾಡುತ್ತಿರುವ ಎಂಟುನೂರು ಕೆ.ಜಿ. ತೂಕದ ಎನ್ವಿಸ್ಯಾಟ್ ಎಂಬ ಒಂದು ಉಪಗ್ರಹಕ್ಕೆ ಕಸದ ಚೂರುಗಳು ಬಂದು ಬಡಿದವು ಎನ್ನೋಣ. ಆಗ ಎನ್ವಿಸ್ಯಾಟ್ನ ಕಕ್ಷೆ ತಪ್ಪುತ್ತದೆ. ಕಳಿಸುವ ಮಾಹಿತಿಗಳಲ್ಲಿ ಏರುಪೇರಾಗುತ್ತದೆ. ಅದು ಭೂಮಿಯ ಕಂಟ್ರೋಲ್ ರೂಂನಿಂದ ಸ್ವೀಕರಿಸುವ ಸಿಗ್ನಲ್ಗಳು ತಪ್ಪಿಹೋಗಬಹುದು, ಅಥವಾ ನಿಂತೇಬಿಡಬಹುದು. ಒಟ್ಟಿನಲ್ಲಿ ಉಪಗ್ರಹ ಭೂಮಿಯ ತನ್ನ ಕರುಳಸಂಬಂಧ ಕಡಿದುಕೊಂಡು ಅನಂತ ವಿಶ್ವದ ಅಲೆಮಾರಿಯಾಗುತ್ತದೆ. ಅದರ ಬಿಡಿಭಾಗಗಳು ಕಳಚಿಕೊಂಡು ಹಾರಬಹುದು; ಬ್ಯಾಟರಿಯ ಬಲಕೊಡುತ್ತಿದ್ದ ಸೌರತಟ್ಟೆಗಳು ಕಿತ್ತುಹೋಗಬಹುದು. ಸಾವಿರಾರು ಡಾಲರು ವ್ಯಯಿಸಿ, ನೂರಾರು ತಂತ್ರಜ್ಞರು ಹಗಲಿರುಳು ದುಡಿದು ಕಳಿಸಿದ ಅತ್ಯಂತ ನಿಷ್ಕೃಷ್ಟ ವ್ಯವಸ್ಥೆಯೊಂದು ನಿಷ್ಪ್ರಯೋಜಕವಾಗಿ, ದಾರುಣ ಅಂತ್ಯ ಕಾಣುವ ಸಂದರ್ಭ ಇದು. ಇವೆಲ್ಲಕ್ಕಿಂತ ಮುಖ್ಯವಾಗಿ, ಢಿಕ್ಕಿ ಹೊಡೆಸಿಕೊಂಡದ್ದಕ್ಕೆ ಮುಯ್ಯಿ ತೀರಿಸಿಕೊಳ್ಳುವಂತೆ, ಸಾವಿರ ಹೋಳಾಗಿ ಚದುರಿದ ಉಪಗ್ರಹ ಈ ಇಡೀ ಕಕ್ಷೆಯನ್ನೇ ತನ್ನ ಕಸದಿಂದ ಮುಚ್ಚಿಹಾಕಿ ಇನ್ನಾವ ಉಪಗ್ರಹವೂ ಅಲ್ಲಿ ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಅನ್ನುವ ಸನ್ನಿವೇಶ ಸೃಷ್ಟಿಸುತ್ತದೆ.
ಉಪಗ್ರಹಗಳ ಕೆಲಸ ನಿಂತರೆ ಜಗತ್ತು ಹೇಗಿರುತ್ತದೆ? ತ್ರೀಜಿ-ಫೋರ್ಜಿ ಬಿಡಿ, ಕನಿಷ್ಠ ಮಾತಾಡಿಕೊಳ್ಳುವುದಕ್ಕೂ ನೆಟ್ವರ್ಕ್ ಸಂಪರ್ಕ ಇಲ್ಲ! ಟಿವಿಗಳು ಬಂದ್, ಇಂಟರ್ನೆಟ್ ಬಂದ್, ಜಿಪಿಎಸ್ ಇಲ್ಲ, ಕ್ಲೌಡ್ ಕಂಪ್ಯೂಟಿಂಗ್ ಇಲ್ಲ. ಏನೊಂದೂ ಕೆಲಸ ಮಾಡಲಾಗದ, ಹತಾಶ- ಅಷ್ಟೇ ಪ್ರಶಾಂತವಾದ ಸ್ಥಿತಿ. ಹದಿನೆಂಟನೇ ಶತಮಾನ!
'ಭಯ ಬೇಡ! ಈಗಲೇ ಹೆದರಿ ಎದೆಯೊಡೆದುಕೊಂಡು ಓಡಬೇಕೆಂದೇನಿಲ್ಲ. ಈ ರಾಕೆಟ್ಟುಗಳು, ಉಪಗ್ರಹಗಳು ಬಡಿದಾಡಿಕೊಂಡು ಚೂರಾಗುವ ಕೆಲಸ ಇನ್ನೂ ನೂರುವರ್ಷ ನಡೆಯಬಹುದು. ಅಷ್ಟರೊಳಗೆ ನಾವು ಅವನ್ನು ಪರಿಹರಿಸುವ ಕೆಲಸ ಮಾಡಬೇಕು. ನಮ್ಮ ಭೂಮಿಯ ಸುತ್ತ ಕಸಬರಿಗೆ ಆಡಿಸಬೇಕು. ಈಗ ತುಂಬಿರುವ ಎಲ್ಲ ಕಸವನ್ನು ನಿವಾರಿಸಿ ಮುಂದೆ ಮತ್ತೆ ಅದು ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು' ಎಂದೆನ್ನುತ್ತಾನೆ ಕೆಸ್ಲರ್.
ಆದರೆ ಈ ಕಸವಿಲೇವಾರಿ ಮಾಡುವುದು ಹೇಗೆ? ಒಂದು ದೊಡ್ಡ ಬಲೆ ಹರಡಿ ಈ ಕಸವನ್ನೆಲ್ಲ ಹಿಡಿಯೋಣವೆ? ಈಗಾಗಲೇ ಭೂಮಿಗೆ ಸುತ್ತು ಬರುತ್ತಿರುವ ನಿಷ್ಕ್ರಿಯ ಉಪಗ್ರಹಗಳನ್ನು ಒಂದೋ ವಿಶ್ವದಾಚೆಗೆ ನೂಕುವ ಅಥವಾ ಮರಳಿ ಭೂಮಿಗೆ ವಾಪಸು ತರುವ ಕೆಲಸ ಮಾಡೋಣವೆ? ಮರಳಿ ತರುವುದಾದರೆ ಅವನ್ನು ಹ್ಯಾಂಡಲ್ ಮಾಡುವ ಬಗೆ ಹೇಗೆ? ಅವುಗಳಿಂದ ವಿಕಿರಣದ ಅಪಾಯ ಎದುರಾದರೆ ಏನು ಮಾಡಬೇಕು? ಅವು ಎಲ್ಲೆಲ್ಲೋ ಹೋಗಿ ಬಿದ್ದು ಏಳುವ ರಾಜಕೀಯ ಯುದ್ಧಗಳನ್ನು ತಣಿಸುವುದು ಹೇಗೆ?
ನಮ್ಮ ಭೂಮಿಯಿಂದ ಕೇವಲ ಆರೇಳ್ನೂರು ಕಿ.ಮೀ. ಎತ್ತರದಲ್ಲೇ ನಡೆಯುತ್ತಿರುವ ಈ ಎಲ್ಲ ದೊಂಬರಾಟದ ಸ್ಪಷ್ಟಚಿತ್ರಣ ಪಡೆಯಲು ಅರ್ಜೆಂಟಾಗಿ ಒಂದು ಉಪಗ್ರಹ ಕಳಿಸಬೇಕಾಗಿದೆ!
-ರೋಹಿತ್ ಚಕ್ರತೀರ್ಥ
rohithmath@gmail.com