

ತಿಮ್ಮಾ: ಅದೇನು ತಿಮ್ಮಾ, ಆ ರಿಕ್ಷಾದವರ ಹತ್ತಿರ ಅಷ್ಟೋತ್ತು ಮಾತಾಡ್ತಿದ್ದಿ? ಭಾಡಗಿ ಹೆಚ್ಚಿಗಿ ಕೇಳಿದ್ನೇನು?
ತಮ್ಮಾ: ಇಲ್ಲ, ಅಂವಾಡ ತನ್ನ ಅಟೋರಿಕ್ಷಾದ ಹಿಂದ ಏನೇನೋ ಬರದಿದ್ನಲಾಡ, ಅದೇನು ಅಂತ ಕೇಳ್ತಿದ್ದೆ.
ತಿಮ್ಮಾ: ಅಲ್ಲಪಾ, ಕನ್ನಡದಾಗ ಎಂಥೆಂಥವರೋ, ಏನೇನೋ ಬರದು ನಾನು ಸಾಹಿತಿ, ನಾನು ಕವಿ ನನಗೊಂದು ರಾಜ್ಯೋತ್ಸವ ಕೊಡ್ರಿ ಅಂತ ಓಡ್ಯಾಡತಿರತಾರ, ಅವರು ಬರದದ್ದನ್ನ ಓದದ ಬಿಟ್ಟು ಈ ಆಟೋದವರನ್ನ ಯಾಕ ಕಾಡ್ತಿ?
ತಮ್ಮಾ: ಆ ಸಾಹಿತಿ ಬುದ್ಧಿಜೀವಿಗಳ ವಿಷಯ ಬಿಟ್ಟು ಬಿಡಪಾ, ಈ ಆಟೋ ಸಾಹೇಬರು ಏನ ಮಜಾ ಬರದವರ ನೋಡಣ ಬಾ.
ತಿಮ್ಮಾ: ಅದನ್ನ ಹ್ಯಾಂಗ ನೋಡ್ತಿ? ಹೊಂಟ ಹೋದ್ನಲಾ ಅಂವಾ...
ತಮ್ಮಾ: ಎಲಾ ಇವನ! ಹೋದ್ನ? ಹೋಗಲಿ ಬಿಡು, ನಾನ ಹೇಳ್ತೇನಿ ಕೇಳ, ಅವ ಏನೇನ ಬರದಿದ್ದ ಅಂತ.
ತಿಮ್ಮಾ: ಹೇಳು.
ತಮ್ಮಾ: ಮ್ಯಾಲೆ 'ಹಾಯ್ ರಾಜು' ಅಂತ ಬರದಿದ್ನ, ನಡುವ 'ಕಾವ್ಯ, ಭಾರತಿ, ರಮ್ಯಾ- ಬಾಡಿಗೆಗೆ' ಅಂತ ಇತ್ತು.
ತಿಮ್ಮಾ: ಏನು ಅವರು ಬಾಡಿಗೆಗೆ?
ತಮ್ಮಾ: ಮುಂದ ಕೇಳು, 'ಕಓ' ಅಂತ ದಪ್ಪ ಅಕ್ಷರದಾಗ ಇತ್ತು.
ತಿಮ್ಮಾ: ಅಂದ್ರೇನು, ಅವರು ಬಾಡಿಗೆಗೆ 'ಕಓ' ಅಂತ ನಾವು ತಿಳ್ಕೋಬೇಕೋ ಏನೋ?
ತಮ್ಮಾ: ಕೆಳಗೆ 'ಸೌಂಡ್ ಹಾರ್ನ' ಅಂತ ಬ್ಯಾರೆ ಇತ್ತು, ಮುಂದ 'ಟಾಟಾ, ಸೀಯು, ಬೈಬೈ...'
ತಿಮ್ಮಾ: ಅಂದರ, ಒಟ್ಟು ಕೂಡಿಸಿ ಓದಿದರ ಏನಾಕ್ಕೇತಲೇ ತಮ್ಮಾ?
ತಮ್ಮಾ: 'ಹಾಯ್ ರಾಜು, ಕಾವ್ಯ, ಭಾರತಿ, ರಮ್ಯ- ಬಾಡಿಗೆಗೆ - ಕಓ!! ಸೌಂಡ್ ಹಾರ್ನ, ಟಾಟಾ, ಸೀಯು, ಬೈಬೈ...' ಒಟ್ಟುಗೂಡಿಸಿದರ ಹಿಂಗಾಕ್ಕೇತಿ ನೋಡ, ಅದಕ್ಕ ಆ ರಿಕ್ಷಾದವರ ಹತ್ರ ಮಾತಾಡಾಕತ್ತಿದ್ದೆ.
ತಿಮ್ಮಾ: ಏನಂತ ಕೇಳ್ತಿದ್ದಿ? ಅವರೆಲ್ಲಾ ಬಾಡಿಗೆಗೆ ಎಲ್ಲಿ ಸಿಗತಾರ ಅಂತ ಕೇಳತೀದ್ಯೋ ಏನೂ?
ತಮ್ಮಾ: ಇಲ್ಲಪಾ... ನಡುವ ಇರೋ ಆ ಹಾಣ್ಮಕ್ಕಳ ಹೆಸರು ತಗದಬಿಡಪಾ ಅಂತ ಹೇಳ್ತಿದ್ದೆ.
ತಿಮ್ಮಾ: ಕರೆಕ್ಟ್, ಗಾಡಿ ಹಿಂದ ಬರಕೊಂಡ ಓಡ್ಯಾಡೋದು ಬರೋಬ್ಬರಿ ಇರಬೇಕಪಾ, ಪೋಲಿಸ್ ಗಾಡಿ ಹಿಂದ ಹ್ಯಾಂಗ ಬರೋಬ್ಬರಿ ಬರದಿರತಾರಲೇ ನೋಡು.
ತಮ್ಮಾ: ಏನ ಬರೆದಿರತಾರಲೇ ಅಲ್ಲೆ?
ತಿಮ್ಮಾ: 'ಪೋಲಿಸ್- ನಡುವೆ ಅಂತರವಿರಲಿ' - (Police - Keep Safe Distance)
ತಮ್ಮಾ: ಹೌದು ಬಿಡ್, ಪೊಲೀಸರ ಕೂಡ ದೋಸ್ತೀನೂ ಬ್ಯಾಡ, ದುಷ್ಮನಿ ಅಂತೂ ಮೊದಲ್ ಬ್ಯಾಡ, ಬರೋಬ್ಬರಿ ಅಂತರ ಇರಬೇಕು ಅಷ್ಟ!!
- ಯಶವಂತ ಸರದೇಶಪಾಂಡೆ
khullamkhullabevubella@gmail.com