ಹಳ್ಳಿ ಬದುಕಿನ ಕನ್ನಡಿ ಈ ವಾಡೆ
ತಿರುಪತಿಹಳ್ಳಿ ಶಿವಶಂಕರಪ್ಪ ಅವರ ಹದಿನೇಳು ಕತೆಗಳ ಸಂಕಲನ 'ವಾಡೆ'. ಗ್ರಾಮೀಣ ಭಾಗದಲ್ಲಿ ಶ್ರೀಮಂತರ ದೊಡ್ಡ ಮನೆ ವಾಡೆ. ಒಂದರ್ಥದಲ್ಲಿ ಚಿಕ್ಕ ಅರಮನೆಯೇ ಅದು. ಗ್ರಾಮೀಣ ಬದುಕಿಗೆ ವಾಡೆ ಒಂದು ಪ್ರತಿಮೆಯಾಗಿದೆ. ಇಲ್ಲಿಯ ಎಲ್ಲ ಕತೆಗಳೂ ದಟ್ಟವಾದ ಗ್ರಾಮೀಣ ಚಿತ್ರಣವನ್ನು ಹೊಂದಿವೆ. ಕತೆಗಳು ಮನತಟ್ಟಿ ಓದುಗನನ್ನು ದ್ರವಿಸುವಹಾಗೆ ಮಾಡುತ್ತವೆ. ಜೊತೆಗೆ ಚಿಂತನೆಗೂ ಹಚ್ಚುತ್ತವೆ. ಗ್ರಾಮಗಳ ಗೆಲವಿನಲ್ಲಿಯೇ ದೇಶದ ಏಳಿಗೆಯಿದೆ ಎಂಬ ಧ್ವನಿ ಇವುಗಳಲ್ಲಿದೆ.
ಪ್ರ: ಹಾಡ್ಲಹಳ್ಳಿ ಪ್ರಕಾಶನ, ಹಾಸನ, ಪುಟಗಳು 112, ಬೆಲೆ ರು. 90
ಅಂತರ್ಮುಖದ ವೀಣಾ
ನನ್ನ ಬದುಕಿಗಿಂತ ತೀವ್ರವಾದುದು ನನಗೆ ಕಂಡಿಲ್ಲ. ಇನ್ನಿಲ್ಲದಂತೆ ಬದುಕಬೇಕೆನ್ನುವ ಹಸಿವಿನ ಹೊರತಾಗಿ ಬೇರೇನಿಲ್ಲ ಎಂದು ತಮ್ಮ ತಲ್ಲಣಗಳ ಬಗ್ಗೆ ಹೇಳಿಕೊಂಡಿರುವ ವೀಣಾ ಬನ್ನಂಜೆ ತಮ್ಮನ್ನು ಆಗುಮಾಡಿದ ಹಲವರ ಕುರಿತು ಬರೆದ ಕೃತಿ 'ಅಂತರ್ಮುಖ'. 'ಇಲ್ಲಿ ಹಲವು ದೊಡ್ಡವರಿದ್ದಾರೆ... ನಾನು ತುಂಬ ಚಿಕ್ಕವಳು, ಅವರನ್ನು ನೋಡುವುದೆಂದರೆ ನನ್ನನ್ನೇ ನೋಡಿದಂತೆ. ಅದಕ್ಕೆ ಇದು ಅಂತರ್ಮುಖ' ಎಂದಿದ್ದಾರೆ ಅವರು. ವೀಣಾಧರಿ, ಸತ್ಯಕಾಮ, ದೊಡ್ಡಪ್ಪ, ಮುರಾರಿಯಣ್ಣ, ಅಪ್ಪ, ಅಜ್ಜಿ ಮೊದಲಾದವರ ಚಿತ್ರಣವಿಲ್ಲಿದೆ.
ಪ್ರ: ಯಾಜಿ ಪ್ರಕಾಶನ, ಹೊಸಪೇಟೆ, ಪುಟಗಳು 112, ಬೆಲೆ ರು. 80
ದೃಶ್ಯ ನಿರ್ಮಾಣ
ದೃಶ್ಯ ಮಾಧ್ಯಮಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಸಂಪೂರ್ಣವಾಗಿ ತಾಂತ್ರಿಕ ವಿಷಯ ಕುರಿತು ಬರೆದಿರುವ ಪುಸ್ತಕಗಳು ಕಡಿಮೆ. ಡಾ.ನಾಗೇಂದ್ರ ಅವರ 'ದೃಶ್ಯ ನಿರ್ಮಾಣ' ಕೃತಿಯು ಈ ಕೊರತೆಯನ್ನು ನಿವಾರಿಸಿದೆ. ಈ ಕೃತಿಯ ಏಳು ಅಧ್ಯಾಯಗಳಲ್ಲಿ ವಿಡಿಯೋ ಮತ್ತು ಚಲನಚಿತ್ರಗಳ ಕಾರ್ಯಕ್ರಮವನ್ನು ಹೇಗೆ ರೂಪಿಸಬೇಕು ಎಂಬುದನ್ನು ವಿವರಿಸಲಾಗಿದೆ. ಇಂಥ ಕೃತಿ ಬರೆಯುವಾಗ ಎದುರಾಗುವ ಸಮಸ್ಯೆ ಪಾರಿಭಾಷಿಕ ಪದಗಳದ್ದು. ಡಾ.ನಾಗೇಂದ್ರ ಆ ಸಮಸ್ಯೆಯನ್ನು ಯಶಸ್ವಿಯಾಗಿ ನೀಗಿಸಿಕೊಂಡಿದ್ದಾರೆ.
ಪ್ರ: ಶ್ರೀ ಚನ್ನಕೇಶವ ಪ್ರಕಾಶನ, ತುಮಕೂರು, ಪುಟಗಳು 152, ಬೆಲೆ ರು. 130
ಕನ್ನಡದಲ್ಲಿ ಪಿಳ್ಳೈ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ತಗಳಿ ಶಿವಶಂಕರ ಪಿಳ್ಳೈ ಮಲೆಯಾಳಿ ಸಾಹಿತ್ಯದಲ್ಲಿ ದೊಡ್ಡ ಹೆಸರು. ಅವರ 'ತೋಟಿಯುಡೆ ಮಗನ್' ಕಾದಂಬರಿಯನ್ನು ಮೋಹನ ಕುಂಟಾರ್ ಅವರು 'ತೋಟಿಯ ಮಗ' ಹೆಸರಿನಲ್ಲಿ ಕನ್ನಡಕ್ಕೆ ತಂದಿರುವರು. ಇದು ಅಲಪ್ಪುಳ ನಗರದ ತೋಟಿಗಳ ನರಕ ಸದೃಶವಾದ ಬದುಕನ್ನು ಕಟ್ಟಿಕೊಡುತ್ತದೆ. ತೋಟಿಗಳೆಂದರೆ ಕಕ್ಕಸುಗಳನ್ನು ಸ್ವಚ್ಛಮಾಡುವವರು. ತೋಟಿಯ ಮಗನಾದ ಮೋಹನ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಚಿತ್ರಣ ಈ ಕೃತಿಯಲ್ಲಿದೆ.
ಪ್ರ: ಯಾಜಿ ಪ್ರಕಾಶನ, ಹೊಸಪೇಟೆ, ಪುಟಗಳು 158, ಬೆಲೆ ರು. 120
ಷರೀಫರ ತತ್ತ್ವಪದ
ಕನ್ನಡದ ಅನುಭಾವ ಸಾಹಿತ್ಯದಲ್ಲಿ ಸಂತ ಶಿಶುನಾಳ ಷರೀಫರ ಹೆಸರು ಬಹುದೊಡ್ಡದು. ಅಕ್ಷರ ಅರಿಯದವರೂ ಅವರ ತತ್ತ್ವಪದಗಳನ್ನು ಹಾಡುತ್ತಾರೆ. ಸಮಾಜದ ಅಂಕುಡೊಂಕುಗಳನ್ನು ತಮ್ಮ ಮೊನಚಾದ ವಿಮರ್ಶೆಯಿಂದ ಚುಚ್ಚಿ ತಿದ್ದುವುದಕ್ಕೆ ಅವರು ನೋಡಿದ್ದಾರೆ. ಅವರ ಪದಗಳ ಸಾಲುಗಳು ಗಾದೆಗಳಾಗಿ ಬಳಕೆಯಲ್ಲಿವೆ. ಷರೀಫರ ನೂರೊಂದು ತತ್ತ್ವಪದಗಳನ್ನು ಶ್ಯಾಮಸುಂದರ ಬಿದರಕುಂದಿಯವರು 'ಬೋಧವೊಂದೆ ಬ್ರಹ್ಮನಾದವೊಂದೆ' ಹೆಸರಿನಲ್ಲಿ ಸಂಪಾದಿಸಿಕೊಟ್ಟಿದ್ದಾರೆ.
ಪ್ರ: ಕನ್ನಡಸಾಹಿತ್ಯ ಪರಿಷತ್ತು, ಬೆಂಗಳೂರು, ಪುಟಗಳು 144, ಬೆಲೆ ರು. 70
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

