

ಐ ಲವ್ ಮುಂಬಯಿ... ಅಲ್ಲೇ ಬೆಳೆದವಳು ನಾನು. ವೆರಿ ಎಕ್ಸೈಟಿಂಗ್ ಸಿಟಿ. ಮುಂಬಯಿ ನಗರಿಯ ಬೆಳವಣಿಗೆಯನ್ನು ಹಂತ ಹಂತವಾಗಿ ಕಂಡವಳು. ಅದು ಎಲ್ಲರನ್ನು ಕೈ ಚಾಚಿ ಕರೆವ, ನೀ ಏನು ಬೇಕಾದರೂ ಮಾಡು ಎಂದು ಉತ್ತೇಜಿಸುವ ನಗರ. ಹೀಗಾಗಿ ಕನಸುಗಳನ್ನು ಕಟ್ಟಿಕೊಂಡ ಜನ ಇಲ್ಲಿಗೆ ಬರಲಾರಂಭಿಸಿದರು...
ಹೀಗೆ ನಮ್ಮ ನಿಮ್ಮೆಲ್ಲರಂತೆ ಪಕ್ಕದಲ್ಲಿ ಕುಳಿತು ಸರಳವಾಗಿ ಮಾತನಾಡುತ್ತಿರುವವರು ಭಾರತದ 3ನೇ ಅತಿ ದೊಡ್ಡ ಧನಿಕನ ಪತ್ನಿ. ಹೆಸರು ಯಾಸ್ಮಿನ್ ಪ್ರೇಮ್ಜಿ!
ಹೌದು, ಯಾಸ್ಮಿನ್ ಪ್ರೇಮ್ಜಿ ಸರಳತೆಯ ಸಾಕಾರ ಮೂರ್ತಿ. 'ನೀವು ವಿಪ್ರೋ ಗೇಟ್ ಒಳ ಹೊಕ್ಕ ಕೂಡಲೇ ಫೋನ್ ಮಾಡಿ, ನಾನು ಗೈಡ್ ಮಾಡ್ತೀನಿ' ಅನ್ನುವ ಸೌಹಾರ್ದತೆ ಅವರಲ್ಲಿದೆ.
ಕೋಟ್ಯಧೀಶನ ಮಡದಿ, ಸ್ವತಃ ಆರ್ಕಿಟೆಕ್ಟ್ ಯಾಸ್ಮಿನ್ ಪ್ರೇಮ್ಜಿ ಅವರ ಮನದ ಬೀದಿಯೊಳಗೆ ಸಾಹಿತ್ಯದ ಮೆರವಣಿಗೆ ಹೊರಟಿದ್ದೂ ಸಹಜವಾಗಿಯೇ. 'ಚಿಕ್ಕವಳಿದ್ದಾಗಿಂದ ಬರೆಯಕ್ಕೆ ಆಸೆ. ಆದ್ರೆ ಏನು ಬರೀಬೇಕೋ ಗೊತ್ತಿಲ್ಲ. ಬೆಳೆದಂತೆ, ಕಥೆಗಳನ್ನು ಓದುತ್ತಾ ಕೇಳುತ್ತಾ ಬೆಳೆದೆ. ಕಚ್ಛ್ನಿಂದ ಮರಳಿದ ಅಜ್ಜನ ಕಥೆ, ಹಳೆಯ ಕಾಲದ ಕಥೆಗಳು, ಅಮ್ಮ ಅಜ್ಜಿ ಹೇಳಿದ ಕಥೆಗಳು ನನ್ನ ಮೇಲೆ ಅಗಾಧ ಪರಿಣಾಮ ಬೀರಿದವು. ಇದೇ ಮುಂದೆ ಪುಸ್ತಕ ಬರೆಯಲು ಪ್ರೇರಣೆ'.
ಯಾಸ್ಮಿನ್ರ ಹದಿನೇಳನೆ ವಯಸ್ಸಿನಲ್ಲಿ ಅವರ 'ಕಾರ್ಟ್ ಸ್ಟೋರೀಸ್' ಪ್ರಕಟಗೊಂಡಿತು. ನಂತರ 20 ವರ್ಷರಿಸರ್ಚ್ ನಡೆಸಿ ಬರೆದ, ದಾರಿದ್ರ್ಯದಿಂದ ಸಂಪತ್ತಿಗೆ ನಡೆದ ನಿರ್ಗತಿಕನ ಕಥೆಯೇ 'ಡೇಸ್ ಆಫ್ ಗೋಲ್ಡ್ ಅಂಡ್ ಸೆಪಿಯಾ' ಮೊನ್ನೆ ಮೊನ್ನೆ ಪ್ರಕಟಗೊಂಡ ಕೃತಿ.
ವಿಪ್ರೋ ಸಂಸ್ಥೆಯ ಗೇಟಿನೊಳ ಹೊಕ್ಕು, ಬಲಭಾಗದಲ್ಲಿ ಸ್ವಲ್ಪ ಮುನ್ನಡೆದರೆ, ಕಣ್ಣು ಹಾಯಿಸಿದಲ್ಲೆಲ್ಲಾ ಎತ್ತರವಾಗಿ, ಸಾಲು ಸಾಲಾಗಿ ಬೆಳೆದು ನಿಂತ ನೀಲಗಿರಿ ಮರಗಳು. ಪ್ರಶಾಂತ ವಾತಾವರಣ, ತಂಗಾಳಿಯ ನಡುವೆ ಎದ್ದು ನಿಂತಿರುವ 'ಅಜೀಂ ಪ್ರೇಮ್ಜಿ ಫೌಂಡೇಶನ್'. ಇದನ್ನು ಡಿಸೈನ್ ಮಾಡಿದವರು ಯಾಸ್ಮಿನ್ ಪ್ರೇಮ್ಜಿ. ಈ ಆರ್ಕಿಟೆಕ್ಟ್ ಒಳಗೆ ಒಬ್ಬ ಉತ್ತಮ ಮಗಳು, ಸೊಸೆ, ಪತ್ನಿ, ಅಮ್ಮ, ಆರ್ಟಿಸ್ಟ್, ಕ್ರೀಡಾಳು, ಬರಹಗಾರ್ತಿ ಅಡಗಿದ್ದಾರೆ.
ಅವರೊಂದಿಗೆ ಮಾತಿಗೆ ಕುಳಿತರೆ, 2 ಕಪ್ ಚಹಾ ತರಿಸಿ, ನಮ್ಮ ಕಪ್ಗೆ ಸಕ್ಕರೆ ಬೆರೆಸಿ ಕೊಟ್ಟು, ನಮ್ಮೊಡನೆ ಅವರೂ ಚಹಾ ಸೇವಿಸುತ್ತಾ, ಮುಗ್ಧತೆಯಿಂದ, ಮನದ ಮಾತನ್ನು ಹಂಚಿಕೊಳ್ತಾರೆ.
ಮುಂಬಯಿಂದ ಬೆಂಗಳೂರಿಗೆ ನಿಮ್ಮ ಪಯಣದ ಬಗ್ಗೆ ತಿಳಿಸಿ.
ಮುಂಬಯಿಯಲ್ಲಿ 50 ವರ್ಷ ಕಳೆದವಳು ನಾನು. ಮೊದಲಿನಿಂದಲೂ ಬೆಂಗಳೂರೆಂದರೆ ತುಂಬಾ ಇಷ್ಟ ನಂಗೆ. ಬೆಂಗಳೂರಿನ ಜನ ತುಂಬಾ ಹಿಡಿಸಿದ್ದಾರೆ. ಸೌಹಾರ್ದತೆ, ವಾತ್ಸಲ್ಯ, ಧಾರಾಳತನ, ಸ್ನೇಹ ಮನೋಭಾವ ಮುಂತಾದ ಉದಾತ್ತ ಗುಣಗಳಿಂದ ತುಂಬಿದ ಒಳ್ಳೆಯ ಜನ. ನಾನಿಲ್ಲಿಗೆ ಬಂದ ಹೊಸತರಲ್ಲಿ ನನ್ನ ಮುಂಬಯಿ ಸ್ನೇಹಿತೆಯರು, 'ಹೌ ಈಸ್ ಬೆಂಗಳೂರ್' ಅಂತಿದ್ರು. ಅದಕ್ಕೆ ನಾನು, ಬೆಂಗಳೂರು ನಾ ಬೆಳೆದ ಮುಂಬಯಿನಂತೆಯೇ ಅಂತಿದ್ದೆ. ಬೆಂಗಳೂರಿಗೂ ಮುಂಬಯಿಗೂ ಅಂತರ ವ್ಯತ್ಯಾಸ ಕಾಣಲಿಲ್ಲ.
ಸೈಕಾಲಜಿಯಲ್ಲಿ ಮಾಸ್ಟರ್ಸ್ ಮುಂದೆ ಇಂಟೀರಿಯರ್ ಡಿಸೈನಿಂಗ್ ಕಡೆ ನಿಮ್ಮ ಮನ ಒಲಿಯಲು ಕಾರಣ?
ನನಗೆ ಚಿಕ್ಕಂದಿನಿಂದಲೂ ಡಿಸೈನಿಂಗ್, ಪೇಂಟಿಂಗ್ ಆಸೆ ಹೆಚ್ಚಿತ್ತು. ಸ್ಕೂಲ್ ದಿನಗಳಲ್ಲಿ ನಮಗೆ ಒತ್ತಡವಿರಲಿಲ್ಲ. ಹಾಗಾಗಿ, ಇದಕ್ಕೆಲ್ಲಾ ಸಮಯವಿತ್ತು, ಸಹಕಾರವೂ ಇತ್ತು. ಆದ್ದರಿಂದ ಇಂಟೀರಿಯರ್ ಡಿಸೈನಿಂಗ್ ಕೋರ್ಸ್ ಮಾಡಿಕೊಂಡೆ. ಮದುವೆಯಾಗಿ ಬೆಂಗಳೂರಿಗೆ ಬಂದಾಗ ಅತ್ಯಂತ ಬ್ಯುಸಿಯಾಗಿದ್ದ ನನ್ನ ಪತಿ, ನಮ್ಮ ಹೊಸ ಆಫೀಸ್ನ ಇಂಟೀರಿಯರ್ಸ್ ಮಾಡಬಾರದೇಕೆ ಅಂದ್ರು. ಆ ಕೆಲಸ ಖುಷಿ ಕೊಟ್ಟಿತು.
ಓರ್ವ ಉತ್ತಮ ಆರ್ಕಿಟೆಕ್ಟ್ ಆಗಿ ಏ.ಪಿ. ಫೌಂಡೇಶನ್ ಅನ್ನು ಡಿಸೈನ್ ಮಾಡಿದಿರಿ. ಹಾಗೆಯೇ ನಿಮ್ಮ ಫ್ಯಾಮಿಲಿಯನ್ನು ಡಿಸೈನ್ ಮಾಡುವಾಗ ನಿಮ್ಮೊಳಗಿನ ಆರ್ಕಿಟೆಕ್ಟ್ ಪಾತ್ರ?
ನನ್ನ ಫ್ಯಾಮಿಲಿಯೊಂದಿಗೆ ಹೊಂದಿಕೊಳ್ಳಲು ನನಗೆ ಸಹಾಯಕವಾಗಿ ನಿಂತವರು ನನ್ನ ಅತ್ತೆ. ಅವರಿಗೆ ನಾನು ತುಂಬಾ ಹತ್ತಿರವಾಗಿದ್ದೆ. ನನ್ನ ಪತಿ ಹಾಗೂ ನನ್ನ ಅತ್ತೆ ದೃಢ ವ್ಯಕ್ತಿತ್ವದವರು. ನಮ್ಮದು ಅವಿಭಕ್ತ ಕುಟುಂಬವಾಗಿದ್ದು, ಹೊಂದಾಣಿಕೆಯಿಂದಿದ್ದೆವು. ಅತ್ತೆ ಡಾ. ಗುಲ್ಬಾನೂ ಪ್ರೇಮ್ಜಿಯವರು ಧಾರಾಳಿ, ಹೃದಯವಂತಿಕೆಯಲ್ಲಿ ಶ್ರೀಮಂತೆ. ಸ್ಪಾಸ್ಟಿಕ್ ಮಕ್ಕಳಿಗೆ, ಪೋಲಿಯೋ ಮಕ್ಕಳಿಗೆ ಆಸ್ಪತ್ರೆ ಕಟ್ಟಿಸಿ, ಹಗಲು ರಾತ್ರಿ ಮಕ್ಕಳ ಸೇವೆಯಲ್ಲಿ ನಿರತರಾಗಿದ್ದರು.
ನಿಮ್ಮ ಬಾಲ್ಯದ ಬಗ್ಗೆ ಹೇಳಿ.
ಆನಂದದಾಯಕ ಬಾಲ್ಯ ನನ್ನದಾಗಿತ್ತು. ಅಪ್ಪ, ಅಮ್ಮ ಇಬ್ಬರು ಅಣ್ಣಂದಿರು ಎಲ್ಲಾ ಸೇರಿ ಸಾಂಪ್ರದಾಯಿಕ ಕುಟುಂಬವಾಗಿದ್ದರೂ ಆಚಾರ- ವಿಚಾರ ಆಧುನಿಕವಾಗಿತ್ತು. ಹಾಗಿದ್ದುದರಿಂದಲೇ ನಾನು ಆಗಿನ ಕಾಲದಲ್ಲಿ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಸಾಧ್ಯವಾಯ್ತು. ಕೆಲಸ ಮಾಡಲು ಪ್ರೇರೇಪಿಸಿದರು. ಮಕ್ಕಳು ಗಂಡಿರಲಿ, ಹೆಣ್ಣಿರಲಿ, ವಿದ್ಯಾಭ್ಯಾಸ ಬಹಳ ಮುಖ್ಯ. ತನ್ನ ಕಾಲ ಮೇಲೆ ತಾನು ನಿಲ್ಲುವುದು ಅತಿ ಮುಖ್ಯ ಅಂತಿದ್ರು. ನಾನು ಮದುವೆಯಾಗಿ ಬಂದ ಮನೆಯಲ್ಲೂ ಇದೇ ಮೌಲ್ಯಗಳು ಮುಂದುವರೆದವು. ವೈದ್ಯೆಯಾದ ನನ್ನ ಅತ್ತೆಯೂ ಅಸಹಾಯಕರಿಗಾಗಿ ಆಸ್ಪತ್ರೆ ಕಟ್ಟಿ ದುಡಿಯುತ್ತಿದ್ದರು. ಎಂದೂ ನಾನೂ ಹೆಣ್ಣಾಗಿ ಹುಟ್ಟಿದ್ದು ಕೊರತೆ ಅನ್ನಿಸಲಿಲ್ಲ.
ನಿಮ್ಮ ಫಿಟ್ನೆಸ್ ಮಂತ್ರ?
ಯೋಗ ತಪ್ಪದೇ ಮಾಡ್ತೀನಿ. ನನ್ನ ಅಮ್ಮ ತುಂಬಾ ಶಿಸ್ತಿನಿಂದ ಯೋಗಾಭ್ಯಾಸ ಮಾಡ್ತಿದ್ರು. ಅವರು ಕಲಿಸಿದ ಫಿಟ್ನೆಸ್ ಮಂತ್ರ ಏನು ಗೊತ್ತ? '7-1-0', ಅಂದರೆ, ವಾರದಲ್ಲಿ ಒಂದು ದಿನ ಯೋಗ ಅಥವಾ ಎಕ್ಸರ್ಸೈಸ್ ಮಿಸ್ ಮಾಡಿದ್ರೂ, ಮತ್ತೆ ಜೀರೋ(0)ದಿಂದ ಪ್ರಾರಂಭಿಸಬೇಕಾಗತ್ತೆ ಅಂತ ಹೇಳಿದ್ರು.
ನಿಮಗೆ ಇಬ್ಬರು ಗಂಡು ಮಕ್ಕಳು. ಹೆಣ್ಣು ಮಗು ಬೇಕು ಅನ್ನಿಸಲಿಲ್ವ?
ನಿಜ ಹೇಳ್ಬೇಕು ಅಂದ್ರೆ, ಇಲ್ಲ! ಕಾರಣ ನಾನು ನನ್ನ ಅಮ್ಮ ಮತ್ತು ಅತ್ತೆಯವರೊಂದಿಗೆ ತುಂಬಾ ಕ್ಲೋಸ್ ಆಗಿದ್ದೆ. ಅವರೊಡನೆ ಎಲ್ಲಾ ಶೇರ್ ಮಾಡಿಕೊಳ್ತಿದ್ದೆ. ಆದರೆ ಈಗ, ಹೌದು ಒಂದು ಹೆಣ್ಣು ಮಗಳು ಇರ್ಬೇಕಿತ್ತು ಅನ್ನಿಸ್ತಿದೆ.
ಕನ್ನಡ ಭಾಷೆ ಬಗ್ಗೆ ನಿಮ್ಮ ನಿಲುವು?
ನಾನು ಮದುವೆಯಾಗಿ ಬೆಂಗಳೂರಿಗೆ ಬಂದಾಗ ಕನ್ನಡ ಕಲಿಯಬೇಕು ಅಂತ ಬುಕ್ಸ್ ಎಲ್ಲಾ ತೆಗೊಂಡೆ. ಪ್ರಯತ್ನಾನೂ ಪಟ್ಟೆ. ಒಬ್ಬ ಟೀಚರ್ನೂ ಗೊತ್ತು ಮಾಡ್ಕೊಂಡೆ. ಆದರೆ ಕನ್ನಡ ಮಾತಾಡುವವರೊಡನೆ ಒಡನಾಟವಿಲ್ಲದೆ ಅಷ್ಟಕ್ಕೇ ನಿಂತಿತು. ನಂಗೆ ಕನ್ನಡ ಭಾಷೆ, ಬೆಂಗಳೂರಿನ ಜನ ತುಂಬಾ ಇಷ್ಟ.
ನಿಮ್ಮ ಪುಸ್ತಕ 'ಡೇಸ್ ಆಫ್ ಗೋಲ್ಡ್ ಅಂಡ್ ಸೆಪಿಯಾ' ಬರೆಯಲು ಪ್ರೇರಣೆ?
ಚಿಕ್ಕಂದಿನಿಂದಲೂ ಕಥೆಗಳನ್ನು ಕೇಳುತ್ತಾ ಬೆಳೆದವಳು ನಾನು. ಅಮ್ಮ, ಅಜ್ಜಿ ತಂದೆ ಹೇಳುತ್ತಿದ್ದ ಕತೆಗಳ ಭಂಡಾರ ನನ್ನಲ್ಲಿತ್ತು. 'ದಾರಿದ್ರ್ಯದಿಂದ ಸಂಪತ್ತಿನೆಡೆಗೆ' ಬರವಣಿಗೆಯ ವಿಷಯವಾಯ್ತು.
ನಿಮ್ಮ ಬರವಣಿಗೆಗೆ ನಿಮ್ಮ ಫ್ಯಾಮಿಲಿ ಸಪೋರ್ಟ್ ಹೇಗಿತ್ತು?
ತಮಾಷೆ ಏನೆಂದರೆ, ನಾನು ಬರೀತಿರೋ ವಿಷಯ ಯಾರಿಗೂ ತಿಳಿದಿರಲಿಲ್ಲ. ಬರೆದು ಮುಗಿಸಿದ ಬಳಿಕ, ನನ್ನ ಆಪ್ತ ಸ್ನೇಹಿತೆ ಅದನ್ನ ಓದಿ ಮೆಚ್ಚಿದಳು. ಪ್ರಕಾಶಕರೊಡನೆ ಸಹಿಯಾದ ಬಳಿಕ ನನ್ನ ಪತಿ ಹಾಗೂ ಮಕ್ಕಳಿಗೆ ತಿಳಿಸಿದೆ. ಅವರಿಗೆಲ್ಲಾ ಆಶ್ಚರ್ಯ. ನನ್ನ ಪತಿ, 'ಸ್ಕ್ರಿಪ್ಟ್ ಓದಬಹುದಾ?' ಅಂದರು. ಅಷ್ಟು ಬ್ಯುಸಿಯಾದ ವ್ಯಕ್ತಿ ಓದ್ತೀನಿ ಅಂದಿದ್ದು ಖುಷಿ ಕೊಡ್ತು. ಅವ್ರು ಓದಿ ತುಂಬಾ ಚೆನ್ನಾಗಿದೆ ಅಂದ್ರು. ಸಾರ್ಥಕತೆ ಮೂಡ್ತು.
ಚಿಕ್ಕ ವಯಸ್ಸಿನಲ್ಲಿಯೇ ಬರೆಯಲಾರಂಭಿಸಿದಿರಿ. ತಾಯಿ ನಿಮ್ಮ ಮೇಲೆ ಬೀರಿದ ಪ್ರಭಾವ?
ನಾನು 17ರ ವಯಸ್ಸಿನವಳಿದ್ದಾಗ ಮೊದಲ ಶಾರ್ಟ್ ಸ್ಟೋರಿ ಬರೆದದ್ದು. ನನ್ನ ಅಮ್ಮ ತುಂಬಾ ಓದ್ತಿದ್ರು. ನನಗೂ ಓದುವ ಹವ್ಯಾಸ ಹಚ್ಚಿದರು. ನನ್ನ ಬರವಣಿಗೆಗೆ ಅವರ ಸಂಪೂರ್ಣ ಸಹಕಾರ ಇತ್ತು. ಪುಸ್ತಕ ಬರೆಯಲು ನನ್ನ ಅಮ್ಮ ಮತ್ತು ಅತ್ತೆ ಪ್ರೇರಣೆ. ಆದರೆ ಪುಸ್ತಕ ಬಿಡುಗಡೆಯಾದಾಗ ಅದನ್ನು ಓದಲು ಅವರಿಬ್ಬರೂ ಇರಲಿಲ್ಲ.
ನಿಮ್ಮ ಹಾಬೀಸ್?
ತುಂಬಾ ಓದ್ತೀನಿ, ಯೋಗ ಮಾಡ್ತೀನಿ, ಬರೆಯೋದು ತುಂಬಾ ಇಷ್ಟ, ಡ್ರಾಯಿಂಗ್, ಪೇಂಟಿಂಗ್ ಸಹ ಮಾಡ್ತೀನಿ. ನಮ್ಮ ಎ.ಪಿ. ಫೌಂಡೇಶನ್ ಇಂಟೀರಿಯರ್ ಡಿಸೈನಿಂಗ್ ಮಾಡಿದ್ದು ಖುಷಿ ಕೊಟ್ಟಿದೆ. ಡ್ರಾಮಾ, ಡಾನ್ಸ್, ಮ್ಯೂಸಿಕ್ ಪ್ರೋಗ್ರಾಂಗಳನ್ನು ಎಂಜಾಯ್ ಮಾಡ್ತೀನಿ.
ನಂಗಿಷ್ಟವಾದದ್ದು
ತಿಂಡಿ- ಇಂಡ್ಲಿ
ನಟ- ಗಿರೀಶ್ ಕಾರ್ನಾಡ್
ನಟಿ- ಶಬನಾ ಆಜ್ಮಿ
ಉಡುಪು- ಸಲ್ವಾರ್ ಕಮೀಜ್ ಮತ್ತು ಸೀರೆ
ವ್ಯಕ್ತಿ- ನನ್ನ ಸ್ನೇಹಿತೆಯ ಅಮ್ಮ ಚಂದ್ರಿಕಾ ಬೇನ್, ಅಮ್ಮ, ಅತ್ತೆ
ಫಿಲ್ಮ್- ಶೋಲೆ
ರೋಲ್ ಮಾಡೆಲ್- ಅಮ್ಮ, ಅತ್ತೆ. ನನ್ನ ಪುಸ್ತಕವನ್ನು ಅವರಿಗೆ ಅರ್ಪಣೆ ಮಾಡಿದೀನಿ.
- ಗೀತಾ ಶ್ರೀನಿವಾಸನ್