ಏರ್ ಟೈಪ್ ಈ ಟೈಪ್

ಇನ್ನು 'ಕೀಲಿ'ಗಾಗಿ 'ಮಣೆ' ಹಾಕಬೇಕಿಲ್ಲ! ಕೀಲಿಮಣೆಯಿಲ್ಲದ ದಿನಗಳು...
ಏರ್ ಟೈಪ್ ಈ ಟೈಪ್
Updated on: 

ಇನ್ನು 'ಕೀಲಿ'ಗಾಗಿ 'ಮಣೆ' ಹಾಕಬೇಕಿಲ್ಲ!
ಕೀಲಿಮಣೆಯಿಲ್ಲದ ದಿನಗಳು ಶೀಘ್ರದಲ್ಲೇ ಬರಬಹುದು. ಯಾವ ಟಚ್‌ಸ್ಕ್ರೀನ್ ತಂತ್ರಜ್ಞಾನ ಅಸಾಧ್ಯ ಎಂದು ಮೂಗು ಮುರಿದಿದ್ದೆವೋ ಅದು ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಸಾರ್ವಭೌಮತ್ವ ಪಡೆದುಕೊಂಡಿದೆ. ಇದೇ ಮಣೆಯಿಲ್ಲದ ಕೀಲಿಯ ಬಗೆಗೂ 3 ವರ್ಷಗಳ ಹಿಂದೆ ಕಾನ್ಸೆಪ್ಟ್‌ಗಳು ಬಂದಾಗ ಜನ ಅಸಡ್ಡೆ ತೋರಿದ್ದರು. ಕೆಲವರು ಅಷ್ಟೇ ಆಸಕ್ತಿಯಿಂದ ನಿರೀಕ್ಷೆಯನ್ನೂ ಇರಿಸಿಕೊಂಡಿದ್ದರು. ಆದರೆ ಈಗ ಈ ತಂತ್ರಜ್ಞಾನ ಬಹುತೇಕ ಸಾಕಾರಗೊಳ್ಳುವ ಹಾದಿಯಲ್ಲಿದೆ. ವರ್ಷಾಂತ್ಯಕ್ಕೆ ಆಸ್ಟಿನ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಕೀಲಿ ಅಥವಾ ಮಣೆಯೇ ಇಲ್ಲದ ವ್ಯವಸ್ಥೆ ಕುರಿತಂತೆ ಗಂಭೀರ ಸಂಶೋಧನೆ ನಡೆದಿದೆ. ಇದಕ್ಕೆ ಹೊಸ ಹೆಸರನ್ನು ಹುಡುಕಬೇಕಿದೆ. ಸ್ಮಾರ್ಟ್ ಕೀಲಿ ಎನ್ನಬಹುದೇನೋ?
ಸುಮಾರು ಮೂರೂವರೆ ವರ್ಷಗಳ ಹಿಂದೆ ಆ್ಯಪಲ್ ಸಂಸ್ಥೆಯ ಹೆಸರಿನಡಿ ಒಂದು ವಿಡಿಯೋ ಯೂಟ್ಯೂಬ್‌ನಲ್ಲಿ ಹರಿದಾಡುತ್ತಿತ್ತು. ಆ ವಿಡಿಯೋದಲ್ಲಿನ ಕಾನ್ಸೆಪ್ಟ್ ಪ್ರಕಾರ, ಆ್ಯಪಲ್ ಮೊಬೈಲ್ ಸುತ್ತಲೂ ಮತ್ತೊಂದು ಪ್ರಪಂಚ ಕಟ್ಟಬಹುದಿತ್ತು. ಏನನ್ನೇ ಟೈಪ್ ಮಾಡಬೇಕಿದ್ದರೆ, ಮೊಬೈಲ್ ಸ್ಕ್ರೀನ್ ಸಣ್ಣ ಎನಿಸಿದರೆ ಸ್ಕ್ರೀನ್ ಅನ್ನು ಎಳೆದು ಟೇಬಲ್ ಮೇಲೆ ತಂದುಕೊಂಡು ಅಲ್ಲಿಯೇ ಟೈಪ್ ಮಾಡಬಹುದಿತ್ತು. ಅದನ್ನು ನೋಡಿ ರೋಮಾಂಚನವಾಗುವುದರ ಜತೆ ಇದು ಸಾಧ್ಯವೇ ಎಂಬ ಪ್ರಶ್ನೆಯೂ ಮೂಡಿತ್ತು. ಅದರ ಜತೆಗೆ ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲಿ ಬರೆಯುವುದನ್ನೇ ಕಸಬು ಮಾಡಿಕೊಂಡವರಿಗೆ ಎಷ್ಟು ಸುಲಭವಾಗುತ್ತದೆ ಎಂಬ ಕನಸು ಒಮ್ಮೆ ಹಾದುಹೋಗಿತ್ತು.
ಆ್ಯಪಲ್ 4, 4ಎಸ್ ಹಾಗೂ 5ನಲ್ಲಿ ಈ ತಂತ್ರಜ್ಞಾನವಿರುತ್ತದೆಯಂತೆ ಎಂಬ ಸಾಕಷ್ಟು ಗಾಳಿಸುದ್ದಿಗಳು ಬಂದವು. ಇದಾದ ಬಳಿಕ ಸ್ಯಾಮ್‌ಸಂಗ್ ಎಸ್4 ಬರುವಾಗಲೂ ಇಂಥದ್ದೊಂದು ಮಾತು ಕೇಳಿಬಂದಿತ್ತು. ಆದರೆ ಯಾವಾಗ ಇದ್ಯಾವ ದುಬಾರಿ ಸ್ಮಾರ್ಟಿಗಳಲ್ಲಿ ಕಾಣಲಿಲ್ಲವೋ, ಇದು ಅಸಾಧ್ಯ ಎಂಬ ಉಡಾಫೆ ಹೇಳಿಕೆಗಳು ಬಂದವು. ಆದರೆ ಮತ್ತೆ ಒಂದೂವರೆ ವರ್ಷಗಳ ಬಳಿಕ 'ಏರ್‌ಟೈಪ್‌' ಕಾನ್ಸೆಪ್ಟ್ ಬಂದಿದೆ. ಆದರೆ ಈ ಬಾರಿ ಮಾರುಕಟ್ಟೆಗೆ ಬರಬಹುದಾದಂಥ ತಂತ್ರಜ್ಞಾನದೊಂದಿಗೆ ಕಾಣಿಸಿಕೊಂಡಿದೆ. ಇದಕ್ಕೂ ಮುಂಚೆ ವಿಂಡೋಸ್-8 ಆಧಾರಿತ ಟಚ್‌ಸ್ಕ್ರೀನ್ ಡೆಸ್ಕ್‌ಟಾಪ್ ಬಂದಾಗ ಟಚ್‌ಸ್ಕ್ರೀನ್ ಮೂಲಕ ಟೈಪ್ ಮಾಡಲು ಅವಕಾಶವಿತ್ತು.
ಗಾಳಿಯಲ್ಲಿ ಗುಂಡು ಹಾರಿಸಿದಂತೆ ಗಾಳಿಯಲ್ಲಿ ಬರೆಯುವುದು ಇದು. ಕಂಪ್ಯೂಟರ್, ಟ್ಯಾಬ್ಲೆಟ್ ಅಥವಾ ಸ್ಮಾರ್ಟ್‌ಫೋನ್ ಎದುರಿಗೆ ಎರಡು ಕೈ ಇಟ್ಟುಕೊಂಡು ಟೈಪ್ ಮಾಡಬೇಕಾಗುತ್ತದೆ. ಕೈಗೆ ಧರಿಸುವ ಬ್ರೇಸ್‌ಲೈಟ್ ಥರದ ಎರಡು ಸಾಧನವನ್ನು ಅಂಗೈಗೆ ಧರಿಸಿಕೊಂಡು ಟೈಪ್ ಮಾಡಬಹುದು. ಈ ಸಾಧನವು ಬ್ಲ್ಯೂಟೂತ್ ತಂತ್ರಜ್ಞಾನ ಆಧರಿಸಿ ಕೆಲಸಮಾಡುತ್ತದೆ. ಮೊಬೈಲ್ ಅಥವಾ ಟ್ಯಾಬ್ಲೆಟ್‌ನಲ್ಲಿ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡು 'ಏರ್‌ಟೈಪ್‌' ಮಾಡಬೇಕಾಗುತ್ತದೆ. ಸೆನ್ಸಾರ್ ಹಾಗೂ ವೈರ್‌ಲೆಸ್ ತಂತ್ರಜ್ಞಾನ ಆಧರಿಸಿ ಇದು ಕಾರ್ಯನಿರ್ವಹಿಸುತ್ತದೆ.
ಈ ತಂತ್ರಜ್ಞಾನವನ್ನು ಈಗಾಗಲೇ ಸೋನಿ, ಎಲ್‌ಜಿ ಹಾಗೂ ಸ್ಯಾಮ್‌ಸಂಗ್ ಕಂಪನಿಗಳು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನ ನಡೆಸುತ್ತಿವೆ. ಒಂದೊಮ್ಮೆ ಇದು ಯಶಸ್ವಿಯಾದರೆ ಶೀಘ್ರದಲ್ಲೇ ಮೂರೂವರೆ ವರ್ಷದ ಹಿಂದೆ ನೋಡಿದ ಆ್ಯಪಲ್ ವಿಡಿಯೋ ಕೂಡ ನಿಜವಾಗುವ ದಿನಗಳು ಬರಬಹುದು. ಜತೆಗೆ ಕಂಪ್ಯೂಟರ್ ಹಾಗೂ ಮೊಬೈಲ್ ಜಗತ್ತಿನ ಹೊಸ ದಿನಗಳು ಆರಂಭವಾಗುತ್ತವೆ. 18 ಇಂಚಿನ ಕಂಪ್ಯೂಟರ್ ಯುಗ ಅಥವಾ ಅಷ್ಟೇ ಅಗಲದ ಕೀಲಿಮಣೆಗಳು 'ಮ್ಯೂಸಿಯಂ ಪೀಸ್‌'ಗಳಾಗಬಹುದು. ಇದೆಲ್ಲಕ್ಕಿಂತ ನಿಮ್ಮ ಕಂಪ್ಯೂಟರ್ ಜಗತ್ತು ಮತ್ತಷ್ಟು ಸಣ್ಣವಾಗಲಿದೆ. ಲ್ಯಾಪ್‌ಟಾಪ್ ಜಮಾನವೂ ದೂರವಾಗಬಹುದು. ಏರ್‌ಟೈಪ್ ಮಾಡಲು ಹಾಗೂ ಇತರ ಕೀಲಿಮಣೆ ಕೆಲಸಕ್ಕೆ ಅವಕಾಶ ಸಿಕ್ಕಿದರೆ ಅಷ್ಟು ಜಾಗ ಉಳಿಸಬಹುದು ಹಾಗೂ ತೂಕವನ್ನು ಉಳಿಸಬಹುದು ಎನ್ನುವುದು ಬಹುತೇಕ ಬಳಕೆದಾರರ ಲೆಕ್ಕಚಾರವಾಗುತ್ತದೆ. ಈ ತಂತ್ರಜ್ಞಾನ ಮತ್ತಷ್ಟು ಸುಧಾರಣೆಯಾಗಿ ಸಂಪೂರ್ಣ ಏರ್‌ಟೈಪ್ ಆಗಿ, ಅಂಗೈಗೆ ಸಾಧನ ಧರಿಸುವ ಅಗತ್ಯವೂ ಇರದಿದ್ದರೆ ದೊಡ್ಡ ಕ್ರಾಂತಿಗೆ ಕಾರಣವಾಗುತ್ತದೆ.


- ರಾಜೀವ ಹೆಗಡೆ
meet.hegde@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com