

ನನ್ನ ಸಮಕಾಲೀನರಾದ ಶ್ರೀ ಗೊ.ರು. ಚನ್ನಬಸಪ್ಪ ಅವರನ್ನು ಮೊದಲು ಕಂಡಾಗಿನಿಂದಲೂ ಈವರೆಗೂ ಸುಮಾರು ನಾಲ್ಕು ದಶಕಗಳ ಅವಧಿಯಲ್ಲಿ- ಸ್ಥಿತ್ಯಂತರಗಳೇನೂ ಆಗಿಲ್ಲ. ಅದೇ ಶುಭ್ರ ಅಂಗಿ, ಅದೇ ಶುಭ್ರ ಲುಂಗಿ, ಅದೇ ಹಸನ್ಮುಖ, ಅದೇ ಕ್ರಿಯಾಶೀಲತೆ, ಸರಳ ಸಹಜ ನಡೆ. ಆದರೆ ಚಿಂತನೆಗೆ ಹೊಸ ಹೊಸ ಯೋಜನೆಗೆ ಕೊರತೆಯಿಲ್ಲ. 'ಮಹಾಮನೆ'ಯ ಒಳಾಂಗಣದ ಹೊಯ್ದಾಡದ ದೀಪದಂತಿದ್ದರೂ ಅವರು ಅಖಿಲ ಭಾರತ ಶರಣ ಸಾಹಿತ್ಯದ ಹೊರ ಜಗತ್ತಿನ ದೀವಟಿಗೆ ಕೈಯಲ್ಲಿ ಹಿಡಿದವರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕರ್ನಾಟಕದಲ್ಲಿ ಮತ್ತು ಹೊರನಾಡಿನಲ್ಲಿ ತನ್ನ ಶಾಖೆಗಳನ್ನು ಪ್ರಾರಂಭಿಸಿ, ಶರಣರ ಚಿಂತನೆಗಳನ್ನು ಪಸರಿಸುವ ಕಾರ್ಯದಲ್ಲಿ ತನ್ಮಯವಾಗಿದೆ. ಈ ತನ್ಮಯತೆಯ ಹಿಂದೆ ಗೊರುಚರ ಪರಿಶ್ರಮ ಬಹಳ ದೊಡ್ಡದು.
ಗೊರುಚ- ಗ್ರಾಮೀಣ ಪ್ರದೇಶದಿಂದ ಬಂದ, ಜನಪದ ಸತ್ವವನ್ನು ಮೈಗೂಡಿಸಿಕೊಂಡ ದೇಸಿ ಚೇತನ. ನಡೆ-ನುಡಿ, ಆಚಾರ-ವಿಚಾರಗಳಲ್ಲಿ ದೇಸೀಯತೆ ಇದ್ದೇ ಇದೆ. ಬೆಂಗಳೂರು ಮಹಾನಗರ ನಿವಾಸಿಯಾದರೂ ಆಧುನಿಕತೆಯ ತಂತ್ರಗಾರಿಕೆಯಿಂದ ಅವರು ಬಹುದೂರ. ಅವರಲ್ಲಿ ಜನಪದರ ಸರಳತೆಯೂ ಇದೆ, ವಚನಕಾರರ ಶ್ರದ್ಧೆಯೂ ಇದೆ. ಅವರಲ್ಲಿ ಎದ್ದು ಕಾಣುವ ಗುಣವೆಂದರೆ- ಕಾಯಕನಿಷ್ಠೆ, ಹಿಡಿದ ಕೆಲಸವನ್ನು ಒಂದು ಸಂಯೋಜನೆಗೆ ಹೊಂದಿಸಿ, ನಿಷ್ಠೆಯಿಂದ ಪೂರೈಸುವ ಅಗಾಧ ಶಕ್ತಿಯೂ ಅವರಲ್ಲಿದೆ. 'ಆಡದೆ ಮಾಡುವವನು ರೂಢಿಯೊಳಗುತ್ತಮನು' ಎಂಬ ಸರ್ವಜ್ಞನ ಉಕ್ತಿಗೆ ನಿದರ್ಶನ ಅವರು. ಕಸಾಪ ಅಧ್ಯಕ್ಷರಾಗಿ, ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿ ಹಾಗೂ ಇನ್ನಾವುದೇ ಸಂಸ್ಥೆಯಲ್ಲಿ ಅವರು ಸಂಘಟಕರಾಗಿ ಮಾಡಿದ ಕೆಲಸ 'ಲಿಂಗ ಮೆಚ್ಚಿ ಅಹುದು- ಅಹುದು' ಎನ್ನುವಂತೆಯೇ ಇದೆ.
ಕನ್ನಡ ನಾಡು- ನುಡಿಯ ಸೇವೆಯಲ್ಲಿ, ಸಾಂಸ್ಕೃತಿಯ ಕಾಳಜಿ ಹೊಂದಿದ, ಬರಹ ಮತ್ತು ಭಾಷಣಗಳ ಮೂಲಕ ಬದ್ಧತೆಯಿಂದ ದುಡಿದ, ದುಡಿಯುತ್ತಿರುವ ಮೂರಕ್ಷರಗಳ ಪ್ರಸಿದ್ಧಿ ಪಡೆದ ಕೆಲವು ಹೆಸರುಗಳಿವೆ. ಅವರವರು ನಿರ್ವಹಿಸಿದ ಕಾರ್ಯಕ್ಷೇತ್ರ ಭಿನ್ನವಾಗಿರಬಹುದು. ಆದರೆ ಅವರ ಕನ್ನಡನಿಷ್ಠೆ ಪ್ರಶ್ನಾತೀತ. ಬಿಎಂಶ್ರೀ, ಡಿವಿಜಿ, ಕುವೆಂಪು, ಅನಕೃ, ದೇಜಗೌ... ಹೀಗೆ ಹೆಸರುಗಳನ್ನು ಗುರುತಿಸಬಹುದು. ಜನಪದ ಸಾಹಿತ್ಯದ ದೃಷ್ಟಿಯಿಂದ ಕೃರಾಕೃ, ಜೀಶಂಪ, ಜೊತೆಗೆ ಗೊರುಚ ಅವರನ್ನು ಸೇರಿಸಬಹುದು. ಗೊರುಚ ಕಾರ್ಯ ಎರಡು ಕ್ಷೇತ್ರಕ್ಕೆ ಅನ್ವಯಿಸುತ್ತದೆ. 1. ಜನಪದ ಸಾಹಿತ್ಯ, 2. ವಚನ ಸಾಹಿತ್ಯ ಅಥವಾ ಶರಣ ಸಾಹಿತ್ಯ. ಅರ್ಧ ಶತಮಾನಕ್ಕೂ ಮಿಕ್ಕಿ ಅವರು ದುಡಿದದ್ದು ಸ್ಮರಣೀಯ. ಜನಪದ ವಿವಿ ಅವರು ಕಂಡ ಬಹು ದೊಡ್ಡ ಕನಸು. ಅದು ನನಸಾಗುವಲ್ಲೂ ಅವರ ಪಾತ್ರ ಮಹತ್ವದ್ದು.
ಗೊರುಚ ಉನ್ನತ ಮಟ್ಟದ ಗದ್ಯ ಲೇಖಕರು, ಉಚ್ಚ ಮಟ್ಟದ ವಾಗ್ಮಿಗಳು. ಅವರ ಗದ್ಯ ಬರವಣಿಗೆಗೆ, ಅವರು ಪ್ರತಿ ತಿಂಗಳು ಬರೆಯುತ್ತಿರುವ 'ಮಹಾಮನೆ' ಮಾಸಪತ್ರಿಕೆಯಲ್ಲಿಯ 'ಅಧ್ಯಕ್ಷರ ನುಡಿ'ಗಳೇ ನಿದರ್ಶನ. ಅಲ್ಲಿ ಸಕಾಲಿಕವಾಗಿ ಸ್ಪಂದನವಿರುವಂತೆ ಸಾರ್ವಜನಿಕ ಮೌಲ್ಯವುಳ್ಳ ವಚನಗಳ ಉದಾಹರಣೆಯಿರುತ್ತದೆ. ಅಲ್ಲಿ ಒಂದೊಂದು ಪಂಕ್ತಿಯೂ ಅರ್ಥಪೂರ್ಣ, ಅನುಭವಪೂರ್ಣ. ಅವರ ಭಾಷಣಗಳು ಬರವಣಿಗೆಗಳಂತೆಯೇ ಸಮುಚಿತ. ಅಷ್ಟೇ ಅಲ್ಲ, ಅವರ ವಾಣಿಯಲ್ಲಿ ಅನುರಣಗೊಳಿಸುವ ಶಕ್ತಿಯಿದೆ, ಯೋಚನೆಗೆ ತೊಡಗಿಸುವ ಪ್ರಭಾವವೂ ಇದೆ.
ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳು ವೈಶಿಷ್ಟ್ಯಪೂರ್ಣವೂ ನವೀನವೂ ಆಗಿರುವುದಕ್ಕೆ ಅವರ ನಿರಂತರ ಅಧ್ಯಯನವೇ ಕಾರಣ. ರಾಯಚೂರಿನಲ್ಲಿ ಜರುಗಿದ ಸಮ್ಮೇಳನಕ್ಕೆ ಡಾ. ಭಗವಾನದಾಸ ತಿವಾರಿಯವರನ್ನು ಆಯ್ಕೆ ಮಾಡಿದ್ದು, ಧಾರವಾಡದಲ್ಲಿ ನಡೆದ ಸಮ್ಮೇಳನಕ್ಕೆ ಡಾ. ಅಜಯ್‌ಕುಮಾರ್ ಸಿಂಗ್‌ರನ್ನು ಗುರುತಿಸಿದ್ದು ಗೊರುಚ ಅವರ ದೃಷ್ಟಿವೈಶಾಲ್ಯಕ್ಕೆ. ಗುಣಗ್ರಾಹಕತ್ವಕ್ಕೆ ಕುರುಹುಗಳಾಗಿವೆ. ಅ.ಭಾ.ಶ. ಸಾಹಿತ್ಯದ ಪರವಾಗಿ ರಮಣಶ್ರೀ, ಕದಳಿಶ್ರೀ ಪ್ರಶಸ್ತಿಗಳಿವೆ. ಈ ಪ್ರಶಸ್ತಿಗಳಿಗೆ ಆಯ್ಕೆ ಮಾಡುವಲ್ಲೂ ಅವರು ಗಣಪಕ್ಷಪಾತಿಗಳೇ ಆಗಿರುತ್ತಾರೆ.
ಕಿರಿಪ್ರಾಯದಲ್ಲೇ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿರುವ ಗೊರುಚ ಗಾಂಧೀಜಿಯವರ ತತ್ವಾದರ್ಶಗಳಿಗೆ ಮಾರುಹೋದವರು. ತಮ್ಮ ಗೊಂಡೇದಹಳ್ಳಿಯನ್ನು ಮಾದರಿ ಗ್ರಾಮವನ್ನಾಗಿ ರೂಪಿಸುತ್ತಲೇ ಗ್ರಾಮಾಂತರ ಯುವಜನ ಪರಿಷತ್ತಿನ ರೂವಾರಿಗಳಾದವರು. ಅಲ್ಲಿಂದ ಲೆಕ್ಕ ಮಾಡುತ್ತ ಬಂದರೆ- ಕರ್ನಾಟಕ ಜಾನಪದ ಅಕಾಡೆಮಿ, ನಾಟಕ ಅಕಾಡೆಮಿಗಳನ್ನು ಒಳಗೊಂಡು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನವರೆಗೆ ನಲವತ್ತಕ್ಕೂ ಮಿಕ್ಕಿರುವ ಸಂಘ ಸಂಸ್ಥೆಗಳಲ್ಲಿ ಅವರ ಕ್ರಿಯಾಶೀಲತೆಯ ಸಹಯೋಗವಿರುವುದು ಗಮನಕ್ಕೆ ಬರುತ್ತದೆ. ಅಲ್ಲಿಗಲ್ಲಿಗೆ ಅವರ ಹೆಜ್ಜೆಯ ಗುರುತುಗಳೂ ಇವೆ. ಅವರು ನೆಟ್ಟ ಮೈಲುಗಲ್ಲುಗಳೂ ಇವೆ. ಇಷ್ಟು ವ್ಯಾಪಕವಾಗಿ ಕಾರ್ಯ ಮಾಡಿದವರು ಗೊರುಚ ಬಿಟ್ಟರೆ ಇನ್ನೊಬ್ಬರಿಲ್ಲ. ಕನ್ನಡ ನಾಡಿನ ಸಾಂಸ್ಕೃತಿಕ ಲೋಕದ ಅದ್ವಿತೀಯ ವ್ಯಕ್ತಿತ್ವ ಅವರೆಂದು ಹೇಳಿದರೆ ಅದು ಉತ್ಪ್ರೇಕ್ಷೆಯಾಗದು. ಇದಕ್ಕೆಲ್ಲ ಕಾರಣ ಅವರಲ್ಲಿರುವ ಶರಣ ಪರಂಪರೆಯ ಕಾಯಕನಿಷ್ಠೆ ಮತ್ತು ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ದೃಷ್ಟಿಕೋನ. ಹೀಗಿರುವಾಗ ಗೊರುಚ ಅವರನ್ನು ಅಭಿನಂದಿಸುವುದು ಶರಣ ಸಂಸ್ಕೃತಿಗೆ ಸಲ್ಲಿಸುವ ಗೌರವವೇ ಆಗುತ್ತದೆ.
ಡಾ. ಗುರುಲಿಂಗ ಕಾಪಸೆ