ಉಜ್ಜಿನಿಯ ಅಚ್ಚರಿ

ಪತ್ರಕರ್ತ ಉಜ್ಜಿನಿ ರುದ್ರಪ್ಪ ತಮ್ಮಲ್ಲಿಯ ಕುತೂಹಲವನ್ನು ಜಾಗೃತವಾಗಿ ಇಟ್ಟುಕೊಂಡಿದ್ದರ ಕುರುಹು ಎಂಬಂತೆ 'ಅಚ್ಚರಿ' ಎಂಬ ಕೃತಿಯನ್ನು ನೀಡಿದ್ದಾರೆ. ಇದರಲ್ಲಿ ಎರಡು ಭಾಗಗಳಿವೆ. ಮೊದಲ ಭಾಗದಲ್ಲಿ ತಮ್ಮ ಸುತ್ತಲಿನ ಪರಿಸರದಲ್ಲಿ ಇತರರಿಗೆ ಸಾಮಾನ್ಯ ಅನಿಸಬಹುದಾದ ವಿಷಯದಲ್ಲಿಯ ಅಚ್ಚರಿ ಅಂಶವನ್ನು ಗಮನಕ್ಕೆ ತರುತ್ತಾರೆ. ಅವರು ಹೇಳಿದ ಮೇಲೆಯೇ ಅದರ ಮಹತ್ವ ನಮಗೆ ಗೋಚರವಾಗುವುದು. ಸಾಂಕೇತಿಕವಾದ ಕರಫಲ್ ಭಾಷೆ ಇಂದು ವಿನಾಶದ ಹಾದಿಯಲ್ಲಿದೆ ಎಂದು ಅವರು ಬರೆದಿದ್ದಾರೆ. ಇದನ್ನು ಗೂಢಚರ್ಯದಂಥ ಕೆಲಸಗಳಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಇದರತ್ತ ಗಮನ ಸೆಳೆದಿರುವುದೇ ರುದ್ರಪ್ಪ ಅವರ ಮಹಾನ್ ಸಾಧನೆ. ಇಂಥ ಹಲವು ವಿಸ್ಮಯಗಳನ್ನು ಅವರು ಈ ಕೃತಿಯಲ್ಲಿ ನೀಡಿದ್ದಾರೆ. ಇದರ ಎರಡನೇ ಭಾಗದಲ್ಲಿ ಹದಿನೆಂಟು 'ಗಣ್ಯರು ಕಂಡಂತೆ ಕಾಂಚಾಣ'ವನ್ನು ಕಿರು ಸಂದರ್ಶನಗಳಲ್ಲಿ ಹೇಳಿದ್ದಾರೆ. ಹಣದ ಕುರಿತ ಈ ಅನುಭವದ ಮಾತುಗಳು ಸಾಮಾನ್ಯರಿಗೆ ದಾರಿದೀಪದಂತೆ ಇವೆ.
ಪ್ರ: ದಶ ಪ್ರಕಾಶನ, ಬೆಂಗಳೂರು, ಪುಟಗಳು 152, ಬೆಲೆ ರು. 100
ಎಲ್ಲಕ್ಕಿಂತ ದೀರ್ಘ ರಾತ್ರಿ
ಚಂದ್ರಶೇಖರ ರಥ್ ಅವರು ಒಡಿಯಾ ಭಾಷೆಯಲ್ಲಿ ದೊಡ್ಡ ಸಾಹಿತಿ. ಅವರ ಹನ್ನೆರಡು ಸಣ್ಣ ಕತೆಗಳನ್ನು ಸ್ನೇಹಲತಾ ರೋಹಿಡೇಕರ್ 'ಎಲ್ಲಕ್ಕಿಂತ ದೀರ್ಘ ರಾತ್ರಿ' ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. ಒಡಿಶಾದಲ್ಲಿಯೇ ಹುಟ್ಟಿ ಬೆಳೆದು ಕನ್ನಡದ ಸೊಸೆಯಾಗಿರುವ ಸ್ನೇಹಲತಾ ಇಲ್ಲಿಯ ಕತೆಗಳನ್ನು ಮೂಲ ಒಡಿಯಾ ಭಾಷೆಯಿಂದಲೇ ಕನ್ನಡಕ್ಕೆ ತಂದಿರುವುದು ವಿಶೇಷ. ಮನುಷ್ಯ ನಿಜವಾದ ಅರ್ಥದಲ್ಲಿ ಹೇಗೆ ಮನುಷ್ಯನಾಗುತ್ತಾನೆ ಎನ್ನುವುದರ ಶೋಧ ರಥ್ ಅವರ ಕತೆಗಳಲ್ಲಿ ನಡೆದಿರುವಂತೆ ತೋರುತ್ತದೆ. 'ಎಲ್ಲಕ್ಕಿಂತ ದೀರ್ಘ ರಾತ್ರಿ'ಯ ರಾಜುವಿನ ಪಾತ್ರ ಇದಕ್ಕೊಂದು ಉದಾಹರಣೆ. ಮನೆಯಲ್ಲಿ ಮಗ ಅನಾರೋಗ್ಯದಿಂದ ನರಳುತ್ತಿದ್ದರೂ ಇನ್ನೊಬ್ಬರ ನೆರವಿಗೆ ಒದಗುವ ಆತನ ಪಾಲಿಗೆ ದೇವರು ಕರುಣಾಮಯಿ ಆಗಲಿಲ್ಲ. ಮಗ ಸತ್ತುಹೋಗಿರುತ್ತಾನೆ. ಮರುದಿನ ಬೆಳಗ್ಗೆ ಅವನ ಬಳಿಗೆ ಬಂದ ಕತೆಯ ನಿರೂಪಕನಿಗೆ ಆತ ಹೇಳುವ ಮಾತು, '... ಹೋಗಬೇಕಾದವ ಹೋಗಿಬಿಟ್ಟ. ಅವನ ಬಗ್ಗೆ ದುಃಖಪಡಲಿಕ್ಕೆ ನಮಗೆ ಸಮಯ ಎಲ್ಲಿದೆ ಸರ್?..' ಇಂಥ ಮನಮಿಡಿಯುವ ಚಿತ್ರಣ ಇಲ್ಲಿ ಸಿಗುತ್ತವೆ.
ಪ್ರ: ಸಾಹಿತ್ಯ ಅಕಾಡೆಮಿ, ನವದೆಹಲಿ, ಪುಟಗಳು 112, ಬೆಲೆ ರು. 75
ಮರುಭೂಮಿಯ ಹೂ
ಆಫ್ರಿಕವನ್ನು ಕಗ್ಗತ್ತಲೆಯ ಖಂಡ ಎಂದು ಕರೆಯುತ್ತಿದ್ದರು. ಆ ಕತ್ತಲೆಯ ಗರ್ಭದಲ್ಲಿ ಅದೆಷ್ಟೋ ಅಮಾನುಷವಾದ ಕತೆಗಳು ಹುದುಗಿವೆ. ಕರಿಯ ಎಳೆಯಳೊಬ್ಬಳ ಬದುಕು ಜಗಮಗಿಸುವ ತಾರೆಯಂತಾದದ್ದು ಒಂದು ಸೋಜಿಗವೇ ಸರಿ. ಹಸಿವು ಅಪಮಾನಗಳ ಕ್ರೂರ ಬದುಕಿನಿಂದ ಬಚಾವಾಗಿ ಜಾಹೀರಾತು ಪ್ರಪಂಚದಲ್ಲಿ, ಬೆಳ್ಳಿ ತೆರೆಯ ಮೇಲೆ ಮಿಂಚಿದ ಅದೃಷ್ಟವಂತೆ ವಾರಿಸ್ ಡೆರಿಸ್. ಯಾವುದೇ ಉದ್ವೇಗವಿಲ್ಲದೆ ತನ್ನೆಲ್ಲ ನೋವು, ಅಪಮಾನಗಳಿಗೆ ಅಕ್ಷರ ರೂಪ ನೀಡಿದ ಆಕೆಯ 'ಡೆಸರ್ಟ್ ಫ್ಲಾವರ್' ಕೃತಿಗೆ ಕನ್ನಡದ ಆಕೃತಿಯನ್ನು ನೀಡಿದವರು ಪತ್ರಕರ್ತ ಡಾ.ಎನ್. ಜಗದೀಶ ಕೊಪ್ಪ. ಸೋಮಾಲಿಯಾ ದೇಶದ ಬಡ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ವಾರಿಸ್ ಡೆರಿಸ್ ಮುದುಕನೊಂದಿಗೆ ಅಪ್ಪ ತನ್ನ ಮದುವೆ ಮಾಡುವುದನ್ನು ಧಿಕ್ಕರಿಸಿ ಓಡಿಹೋಗುತ್ತಾಳೆ. ಅವಳ ಈ ಓಟ ಲಂಡನ್ ತಲುಪುವವರೆಗೆ ಸಾಗಿಯೇ ಇತ್ತು. ಅಲ್ಲಿ ಸೂಪರ್ ಮಾಡೆಲ್ ಆಗಿ, ನಂತರ ಬಾಂಡ್ ಸಿನಿಮಾಗಳಲ್ಲಿ ನಟಿಸಿದ್ದು, ಅವಳ ಬಗೆಗೇ ಹಾಲಿವುಡ್ನಲ್ಲಿ ಸಿನಿಮಾ ನಿರ್ಮಾಣವಾಗಿದ್ದು ಎಲ್ಲವೂ ಅಚ್ಚರಿಯೇ. ಕೊಪ್ಪ ಅವರ ಬರೆವಣಿಗೆ ಇಲ್ಲಿ ಚೆನ್ನಾಗಿ ಕ್ಲಿಕ್ ಆಗಿದೆ.
ಪ್ರ: ಮಣಿ ಪ್ರಕಾಶನ, ಬೆಂಗಳೂರು, ಪುಟಗಳು 176, ಬೆಲೆ ರು. 125
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


