ಗಂಡೋಬಳ ನಾಗತಿಯ ಕಥೆಯೂ...

ಐತಿಹಾಸಿಕ ಚಿತ್ರದುರ್ಗ ಎಂದಾಕ್ಷಣ ಎಲ್ಲರ ಮನದಲ್ಲಿ ಮೂಡುವುದು ರಾಜಾವೀರ ಮದಕರಿನಾಯಕ...
ಗಂಡೋಬಳ ನಾಗತಿಯ ಕಥೆಯೂ...
Updated on: 

ಐತಿಹಾಸಿಕ ಚಿತ್ರದುರ್ಗ ಎಂದಾಕ್ಷಣ ಎಲ್ಲರ ಮನದಲ್ಲಿ ಮೂಡುವುದು ರಾಜಾವೀರ ಮದಕರಿನಾಯಕ. ನಂತರ ವೀರ ವನಿತೆ ಒನಕೆ ಓಬವ್ವ. ದುರ್ಗಕ್ಕೆ ಮದಕರಿನಾಯಕನಂಥ ವೀರನ ಅನನ್ಯ ಕೊಡುಗೆಯನ್ನಿತ್ತ, ವೀರಗಚ್ಚೆ ಹಾಕಿ ಕತ್ತಿ ಹಿಡಿದು ರಣರಂಗದಲ್ಲಿ ಹೋರಾಡಿದ ವೀರರಾಣಿ ಗಂಡುಗಲಿ ಗಂಡೋಬಳ ನಾಗತಿಯೂ ಇದ್ದಾಳೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.
ಕನ್ನಡನಾಡಿನ ವೀರ ವನಿತೆಯರಾದ ಕಿತ್ತೂರು ಚೆನ್ನಮ್ಮ, ಕೆಳದಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವರ ಸಾಲಿಗೆ ಸೇರಬೇಕಾಗಿದ್ದ ಗಂಡೋಬಳ ನಾಗತಿಯ ಹೆಸರು ಚರಿತೆಯ ಗರ್ಭದಲ್ಲೆಲ್ಲೋ ಹುದುಗಿ ಹೋಗಿದ್ದು ನಿಜಕ್ಕೂ ದುರಂತ. ಇದೀಗ ಗಂಡುಗಲಿ ಗಂಡೋಬಳ ನಾಗತಿ ಅಥವಾ ಓಬಳವ್ವ ನಾಗತಿ ಇತಿಹಾಸದ ಗರ್ಭದಿಂದ ಹೊರಬರುವ ಕಾಲ ಸನ್ನಿಹಿತ.
ಮುತ್ಸದ್ಧಿತನ, ಹೋರಾಟ ಭಾವ, ಎದೆಗಾರಿಕೆಗೆ ಹೆಸರಾದ ಓಬಳವ್ವ ನಾಗತಿಯನ್ನು ಇತಿಹಾಸಕಾರರು 'ಗಂಡೋಬಳವ್ವ' ಎಂದೇ ಪ್ರಶಂಸಿಸುತ್ತಾರೆ. ಆಕೆಯ ರಾಜಕೀಯ ಪ್ರೀತಿ, ನಿರ್ಣಯಗಳು, ದರ್ಪ, ಸರ್ವಾಧಿಕಾರಿ ಧೋರಣೆಯನ್ನು ದಿವಂಗತ ಪ್ರಧಾನಿ ಇಂದಿರಾಗಾಂಧಿಗೆ ಇತಿಹಾಸಕಾರರು ಹೋಲಿಸುತ್ತಾರೆ. ಇಂಥ ಮಹಾಮುತ್ಸದ್ಧಿ, ಚಿತ್ರದುರ್ಗ ಸಿಂಹಾಸನವು ಅನರ್ಹರ ಪಾಲಾಗಬಾರದೆಂದು ನಡೆಸಿದ ಕುಟಿಲೋಪಾಯಗಳಲ್ಲಿ ಸ್ವಾರ್ಥವಿರಲಿಲ್ಲ, ದುರ್ಗದ ಶ್ರೇಯಸ್ಸಿನ ಕನಸಿತ್ತೆಂಬ ಸತ್ಯವನ್ನು ತೆರೆದಿಡಲು ಹೊರಟಿದ್ದಾರೆ ಖ್ಯಾತ ಕಾದಂಬರಿಕಾರ ಡಾ. ಬಿ.ಎಲ್. ವೇಣು. ಎರಡು ವರ್ಷಗಳ ಸತತ ಅಧ್ಯಯನದ ನಂತರ ಐತಿಹಾಸಿಕ ಕಾದಂಬರಿ ರೂಪದಲ್ಲಿ 'ಚಿತ್ರದುರ್ಗದ ವೀರರಾಣಿ ಓಬಳವ್ವ ನಾಗತಿ' ಸಿದ್ಧಪಡಿಸಿದ್ದಾರೆ. ಕಾದಂಬರಿ ಈಗ ಶಿವಮೊಗ್ಗದ ಗೀತಾಂಜಲಿ ಪ್ರಕಾಶನದವರ ಮುದ್ರಣದಲ್ಲಿ ಶೀಘ್ರದಲ್ಲೇ ನಾಡಿನ ಓದುಗರ ಕೈ ಸೇರಲಿದೆ.
ಓಬಳವ್ವ ನಾಗತಿಯು ಚಿತ್ರದುರ್ಗದ ಚರಿತ್ರೆಯಲ್ಲಿ ರಾಜಕೀಯವಾಗಿ ಗಮನಾರ್ಹ ಸ್ಥಾನ ಪಡೆದಿರುವ ಗಂಡೋಬಳವ್ವ ನಾಗತಿ ಎಂದೇ ಖ್ಯಾತಳಾದ ವೀರರಾಣಿ. ನಾಗತಿಯರಲ್ಲೇ (ಪಾಳೇಗಾರರ ಹೆಂಡತಿಯರನ್ನು ನಾಗತಿಯರೆಂದೇ ಕರೆಯುತ್ತಾರೆ) 13 ನಾಗತಿಯರು ಮುಖ್ಯವಾಗಿ ಕಂಡುಬಂದರೂ ರಾಣಿಯಾಗಿ ಬರೀ ಅಂತಃಪುರಕ್ಕೆ ಸೀಮಿತಳಾಗದೆ ವೀರಗಚ್ಚೆ ಹಾಕಿ ಕತ್ತಿ ಹಿಡಿದು ರಣರಂಗದಲ್ಲಿ ಗಂಡಿನ ಸಮನಾಗಿ ಯುದ್ಧ ಮಾಡಿ ಚಿತ್ರದುರ್ಗದ ಉಳಿವಿಗಾಗಿ ತನ್ನ ಬದುಕನ್ನೇ ತ್ಯಾಗ ಮಾಡಿದ ವೀರರಾಣಿ ಆಕೆ ಎಂಬ ಅಭಿಪ್ರಾಯವಿದೆ. ಹೆಬ್ಬುಲಿ ಹಿರೇಮದಕರಿನಾಯಕರ ಪತ್ನಿಯಾದ ಈಕೆ ಅವರೊಡನೆ ಯುದ್ಧದಲ್ಲಿ ಪಾಲ್ಗೊಂಡಿದ್ದುಂಟು. ಹಿರೇಮದಕರಿಯು ಮಾಯಕೊಂಡದಲ್ಲಿ ನಡೆದ ಯುದ್ಧದಲ್ಲಿ ವೀರಸ್ವರ್ಗ ಹೊಂದಿದ ತರುವಾಯ ಪಟ್ಟಕ್ಕೆ ಬಂದ ಮಗ ಕಸ್ತೂರಿ ರಂಗಪ್ಪನಾಯಕನು ಅಳಿದ್ದು ಕೇವಲ ಕ್ರಿ.ಶ. 1749ರಿಂದ 1754 ರವರೆಗೆ ಮಾತ್ರ. ಐವರು ಪತ್ನಿಯರಿದ್ದೂ ಕಸ್ತೂರಿ ರಂಗಪ್ಪನಾಯಕನಿಗೆ ಸಂತಾನವಿರಲಿಲ್ಲ. ಹೊಸ ದೊರೆಯನ್ನು ದುರ್ಗದ ಸಿಂಹಾಸನಕ್ಕೆ ತರುವವರೆಗೆ ಓಬಳವ್ವ ನಾಗತಿ ತಾನೇ ಆಡಳಿತ ನೋಡಿಕೊಂಡಳು.
ತನ್ನ ಇಬ್ಬರು ಸಹೋದರರ ಪೈಕಿ ಒಬ್ಬನನ್ನು ಪಟ್ಟಕ್ಕೆ ತರಬೇಕು ಎಂಬ ಆಕೆಯ ಆಲೋಚನೆಗೆ ಅಡ್ಡಿ ಮಾಡಿದವ ಪತಿಯ ಸಹೋದರ ಜಂಪಣ್ಣನಾಯಕ. ಸ್ತ್ರೀ ಲೋಲುಪನೂ, ಅಸಮರ್ಥನೂ ಆಗಿದ್ದ ಜಂಪಣ್ಣನಾಯಕ ತಾನೇ ಪಟ್ಟಕ್ಕೇರಬೇಕು ಎಂಬ ಹೊಂಚು ಹಾಕಿದ್ದು ಅರಿತ ಓಬಳವ್ವ ಆತನನ್ನು ಮುಗಿಸಿಬಿಡಲು ತನ್ನ ನಂಬಿಕಸ್ಥರಾದ ದಳವಾಯಿ ಭರಮಪ್ಪ, ಗುರುಸಿದ್ದಪ್ಪಗೆ ಆದೇಶಿಸಿದರೂ ಅವರು ಒಪ್ಪಲಿಲ್ಲ. ಈ ಮಧ್ಯೆ ಆಕೆಯ ಸಹೋದರ ನರಸಪ್ಪನಾಯಕ ಅನುಮಾನಾಸ್ಪದವಾಗಿ ಸಾವಿಗೀಡಾದ. ಜಂಪಣ್ಣನಾಯಕನನ್ನು ಪರೋಕ್ಷವಾಗಿ ಬೆಂಬಲಿಸಿದ ಭರಮಪ್ಪ ಮತ್ತು ಗುರುಸಿದ್ದಪ್ಪರನ್ನು ಓಬಳವ್ವ ಕೊಲೆ ಮಾಡಿಸುತ್ತಾಳೆ. ಜಂಪಣ್ಣನಾಯಕ ಅಕಾಲಿಕ ಸಾವಿಗೀಡಾಗುತ್ತಾನೆ.
ಇದರಿಂದ ಜಾನಕಲ್ಲಿನ ಖಿಲ್ಲೇದಾರ ತೊದಲು ಭರಮಪ್ಪನಾಯಕನ ಮಗ 12 ವರ್ಷದ ಬಾಲಕ ಮದಕರಿನಾಯಕನನ್ನು ಆಹ್ವಾನಿಸಿ ಪಟ್ಟಕ್ಕೆ ತರುತ್ತಾಳೆ. ಮದಕರಿನಾಯಕನಿಗೆ ಪಟ್ಟ ಕಟ್ಟಬೇಕು ಎಂದು ಪತಿ ಹಿರೇಮದಕರಿ ಕನಸಿನಲ್ಲಿ ಸೂಚಿಸಿದರೆಂದು ಹೇಳಿ ಎಲ್ಲರನ್ನೂ ನಂಬಿಸಿ ಪಟ್ಟ ಕಟ್ಟಿಸಿದ ಚಾಣಾಕ್ಷೆ ಈಕೆ. ಯಾವುದೇ ಕೊಲೆಯಲ್ಲಿ ಕೈವಾಡವಿದೆ ಎಂದರೂ ಯಾರಿಗೂ ಸಾಕ್ಷ್ಯಾಧಾರಗಳೇ ಸಿಗದಂತೆ ಜಾಗರೂಕತೆ ವಹಿಸಿ ಮುತ್ಸದ್ಧಿತನ ತೋರಿದ್ದಳು.
ಪಟ್ಟಾಭಿಷೇಕದ ನಂತರ ರಾಯದುರ್ಗದ ಕೃಷ್ಣಪ್ಪನಾಯಕ ದುರ್ಗದ ಮೇಲೆ ಲಡಾಯಿ ಸಾರಿ, ಸಹಸ್ರಾರು ದನಕರುಗಳನ್ನು ಕದ್ದೊಯ್ದ. ಇದರಿಂದ ರೊಚ್ಚಿಗೆದ್ದ ಗಂಡೋಬಳವ್ವ ಗಂಡುಗಲಿಯಂತೆ ವೀರಗಚ್ಚೆ ಬಿಗಿದು ಎದೆಗೆ ಉಕ್ಕಿನ ಕವಚ ಕಟ್ಟಿಕೊಂಡು, ತಲೆಗೆ ಶಿರಸ್ತ್ರಾಣ ತೊಟ್ಟು ಗಂಡುಗೊಡಲಿ ಹಿಡಿದು, ಸೊಂಟಕ್ಕೆ ಕಿರುಗತ್ತಿ ಹಿರಿಗತ್ತಿ ಕಟ್ಟಿ ಕುದುರೆಯೇರಿ, ಮದಕರಿನಾಯಕನ ಕೈಗೂ ಬಿಚ್ಚುಗತ್ತಿ ಕೊಟ್ಟು ರಾಯದುರ್ಗದ ದಳಪತಿ ಕೃಷ್ಣಪ್ಪನಾಯಕನ ಸೇನೆಯನ್ನು ತರಗಲೆಯಂತೆ ಸದೆಬಡಿದಳು. ಆಕೆಯ ಜೊತೆಗಿದ್ದ ಸ್ತ್ರೀ ಪಡೆ ಪೊರಕೆ, ಮುದ್ದೆಕೋಲು, ಒನಕೆ ಹಿಡಿದು ಕೃಷ್ಣಪ್ಪನ ಸೈನಿಕರನ್ನು ಅಟ್ಟಾಡಿಸಿ ರಾಯದುರ್ಗದವರನ್ನು ಧೂಳಿಪಟವೆಬ್ಬಿಸಿದರು.
ಇಂಥ ವೀರಮಾತೆಯ ಐತಿಹಾಸಿಕ ಕಾದಂಬರಿಯನ್ನು ಬಿ.ಎಲ್. ವೇಣು ಕನ್ನಡಿಗರಿಗೆ ನೀಡುತ್ತಿದ್ದಾರೆ. 'ನನ್ನ ಐತಿಹಾಸಿಕ ಕಾದಂಬರಿಗಳ ರಚನೆಗೆ ಮೊದಲಿನಿಂದ ಇಂಬುಕೊಟ್ಟವರು ಇತಿಹಾಸ ಸಂಶೋಧಕ ಪ್ರೊ. ಲಕ್ಷ್ಮಣ ತೆಲಗಾವಿ. ಅವರು ನೀಡಿದ ಆಕರ ಗ್ರಂಥಗಳು, ಸಲಹೆ ಸೂಚನೆಗಳ ಪ್ರಭಾವವೂ ನನಗಿದೆ' ಎನ್ನುವ ವೇಣು ಪುನಃ ನಮ್ಮನ್ನು ಇತಿಹಾಸದ ಬೆಳಕಿನೆಡೆಗೆ ಕರೆದೊಯ್ಯುತ್ತಿದ್ದಾರೆ.


- ಕ.ಮ. ರವಿಶಂಕರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com