ಟಪ್ಪಂಗುಚ್ಚಿ ಸಿನೆಮಾ ಮಜಾ

ಟಪ್ಪಂಗುಚ್ಚಿ ಸಿನೆಮಾ ಮಜಾ
Updated on: 

ನಮ್ಮ ಗಾಂಧಿನಗರ ಅರ್ಥಾತ್ ಕನ್ನಡ ಚಿತ್ರರಂಗ ಆವರಿಸಿರುವುದು ಬೃಹತ್ ಬೆಂಗಳೂರಿನಲ್ಲಿ. ಇಲ್ಲಿ ಚಿತ್ರಮಂದಿರಗಳಿಗೆ ಬರವಿಲ್ಲವಾದರೂ, ನಿರ್ಮಾಪಕರು ಕೆಜಿ ರೋಡ್‌ನ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ಹೊಡೆದಾಡುತ್ತಾರೆ. ಯಾಕೆಂದರೆ 'ಕಟ್ಕಂಡವ್ಳು ಕಡೆತನಕ, ಇಟ್ಕಂಡವ್ಳು ಇರೋತನಕ' ಅನ್ನೋ ಹಾಗೆ ನಿರ್ಮಾಪಕರಿಗೆ ಅಲ್ಪ ಸ್ವಲ್ಪ ದುಡ್ಡು ಸೇರುವುದು ಈ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಂದಲೇ.
ಈ ಮಲ್ಟಿಪ್ಲೆಕ್ಸ್ ಅನ್ನೋದು 100ರಿಂದ 200 ಆಸನ ಹೊಂದಿರಬಹುದಾದಂತಹ ನಾಲ್ಕೈದು ಚಿತ್ರಮಂದಿರಗಳ ಗುಂಪು. ಇವು ದುಡ್ಡು ಮಾಡಲು ಹುಟ್ಟಿಕೊಂಡಿರುವ ಹೊಸ ಆಯಾಮ ಅಂತಾನೂ ಹೇಳಬಹುದು. ಇಲ್ಲಿ ನೀವು ತಿನ್ನುವ ಮೀಡಿಯಂ ಸೈಜ್ ಪಾಪ್‌ಕಾರ್ನ್‌ಗೆ ಸಿಂಗಲ್ ಸ್ಕ್ರೀನ್‌ನಲ್ಲಿ ಒಂದು ಸಿನಿಮಾ ನೋಡಬಹುದು. ವೀಕೆಂಡ್‌ನಲ್ಲಿ ವಾರಕ್ಕೆ ಒಂದರಂತೆ ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ನೋಡುವ ಬದಲು, ವರ್ಷಾಂತ್ಯದಲ್ಲಿ ಅದೇ ದುಡ್ಡಿನಿಂದ ಒಂದು ಬಜಾಜ್ ಡಿಸ್ಕವರ್ ಕೊಳ್ಳಬಹುದು. ಒಂದ್ ಗೋಲ್ಡ್ ಕ್ಲಾಸ್- 750 ಅಥವಾ 750 ಕಿಲೋ ಅಕ್ಕೀನೂ ಸಿಗಬಹುದು. ಜೈ ಕರ್ನಾಟಕ.
ಜನ ಇತ್ತೀಚಿಗೆ ಮಲ್ಟಿಪ್ಲೆಕ್ಸ್ ಮೊರೆ ಹೋಗ್ತಿರೋದು ಸರ್ವೇಸಾಮಾನ್ಯವಾಗಿಬಿಟ್ಟಿದೆ. ಇದು ಆಡಂಬರದ ಪರಮಾವಧಿಯೋ ಏನೋ, ನಾ ಕಾಣೆ. ಅದೇನೇ ಇರಲಿ ಈ ಮಲ್ಟಿಪ್ಲೆಕ್ಸ್‌ಗಿಂತ ಸಿಂಗಲ್ ಸ್ಕ್ರೀನ್‌ನಲ್ಲಿ ಚಿತ್ರ ನೋಡೋ ಮಜಾನೆ ಬೇರೆ.
ಮಲ್ಟಿಪ್ಲೆಕ್‌ನಲ್ಲಿ ಎಷ್ಟೇ ಕಾಮಿಡಿ ಚಿತ್ರವಾದರೂ ನಗಲು ಜನ ಹಿಂದೆ-ಮುಂದೆ ನೋಡುತ್ತಾರೆ. ಹೀರೋ ಎಂಟ್ರಿ ಸಾಂಗ್ ಬಂದಾಗ ಯಾರೂ ಎದ್ದು ಹೋಗಿ ಸ್ಕ್ರೀನ್ ಮುಂದೆ ಡಾನ್ಸ್ ಮಾಡುವುದಿಲ್ಲ! ಮಾಡ್ತಾರ?
ಒಂದೊಮ್ಮೆ ನೀವು  ಸಿಂಗಲ್ ಸ್ಕ್ರೀನ್‌ಗೆ ಹೋದರೆ ಗೊತ್ತಾಗೋದು, ಫ್ಯಾನ್ಸ್- ಅಭಿಮಾನಿಗಳು ಅಂದ್ರೆ ಯಾರು ಅಂತ. ಮಾಸ್ ಚಿತ್ರವಾದರೆ ಸಿನಿಮಾ ಶುರುವಾದಾಗ ಶುರುವಾಗುವ ಸಿಳ್ಳೆಗಳು ಚಿತ್ರದ ಕೊನೆವರೆಗೂ ಮೊಳಗುತ್ತಿರುತ್ತವೆ. ಚಿತ್ರದ ಮುಂಚೆಯೇ ಹೀರೋ ಕಟ್‌ಔಟ್‌ಗೆ ಹೂವಿನ ಅಲಂಕಾರ, ಹಾಲಿನ ಮಜ್ಜನ ಎಲ್ಲವೂ ಆಗಿರುತ್ತವೆ. ಪಟಾಕಿ ಹೊಡೆಯುತ್ತಾರೆ. ಇಂತಹ ಅಪರೂಪದ ದೃಶ್ಯಗಳು ಕಾಣಸಿಗುವುದು  ಸಿಂಗಲ್ ಸ್ಕ್ರೀನ್ ಪ್ರೇಕ್ಷಕ ವರ್ಗದಿಂದಲೇ. ಟಪ್ಪಂಗುಚ್ಚಿ ಹಾಡಿದ್ದರಂತು ಪರದೆ ಮುಂದೆ ಕುಣಿಯಲೇಬೇಕು. ಚಿಲ್ಲರೆ ಕಾಸನ್ನ ಪರದೆ ಮುಂದೆ ಎರಚುವುದೂ ಉಂಟು.
ನಮ್ಮ ಹೋಬಳಿಯಲ್ಲಿ ಮೂರು ಥಿಯೇಟರ್ ಇದ್ದಾವೆ. ಸ್ವಲ್ಪ ಟೈಮ್ ಸಿಕ್ಕರೆ ಫ್ರೆಂಡ್ಸ್ ಜತೆ ಅಲ್ಲಿ ಸಿನಿಮಾ ನೋಡೋದು ನನಗೆ ರೂಢಿ. ಇತ್ತೀಚಿಗೆ ಬಿಡುಗಡೆ ದಿನವೇ ಇಲ್ಲೂ ಚಿತ್ರಗಳು ಬಿಡುಗಡೆಯಾಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಒಂದೊಮ್ಮೆ ಯಾವ್ದೋ ಚಿತ್ರ ನೋಡಲು ಹೋದಾಗ ಆದ ಅನುಭವ- ಸಿನಿಮಾದಲ್ಲಿ ಹೀರೋಯಿನ್ ಎಂಟ್ರಿ ಆದ ಕೂಡಲೇ 'ಹೇ, ಇವಳು ನಮ್ಮ ಮರಿಗೌಡ್ರು ಮಗಳು ಇದ್ದಂಗ್ ಇಲ್ವಾ?' ಅಂದ ಒಬ್ಬ. ಅದಕ್ಕೆ ಉತ್ತರವಾಗಿ ಮತ್ತೊಬ್ಬ 'ಅಮಿಕಂಡ್ ಪಿಚ್ಚರ್ ನೋಡೋ ಮುಂಡೇದೆ' ಅಂದ. ಇವರಿಬ್ಬರ ಪೋಲಿ ಮಾತುಗಳು ನಡೆಯುತ್ತಲೇ ಇದ್ದವು. ಫೈಟ್ ಸೀನ್ ಬಂದಾಗ ಸಿಳ್ಳೆಗಳು ಜಾಸ್ತಿಯಾದವು. ಮುಗಿದ ತಕ್ಷಣ ಇವರಿಬ್ಬರ ಮಾತು ಶುರುವಾಯಿತು- 'ಈ ಬಡ್ಡೆತವ್ಕೆ ಏನ್ ಬಂದಿರುದು, ಆಪಾಟಿ ಕಾರ್ಗಳ ಹ್ಯಾಂಗ್ ಹಾಳ್ ಮಾಡುದ್ರು ನೋಡು' ಅಂದ, ಅದಿಕ್ಕೆ ಇನ್ನೊಬ್ಬ- 'ಮೂದೇವಿ, ಅದು ಡೂಪ್ಲಿಕೇಟ್ ಕಾರು ಕಲ, ಎಲ್ಲಾ ಪಿಚ್ಚರ್ಲೂ ಒಂದೇ ಕಾರ್ನೆಯ ಮ್ಯಾಕ್ಕೆ ಹಾರ್ಸುದು' ಅಂದ.
ಅದೇನೇ ಇರಲಿ, ಚಿತ್ರಗಳನ್ನು ಅನುಭವಿಸಿ ನೋಡಬೇಕಾದ್ರೆ ಒಮ್ಮೆಯಾದರೂ ಸಿಂಗಲ್ ಸ್ಕ್ರೀನ್ ಕಡೆಗೆ ಮುಖ ಮಾಡಲೇ ಬೇಕು.


-ಜಗದೀಶ್ ಕುಮಾರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com