

ವಿಶ್ವದಲ್ಲಿ ಅಸಂಖ್ಯ ಗ್ರಹಗಳಿದ್ದರೂ ಅವೆಲ್ಲ ಜೀವಪೋಷಕಗಳಲ್ಲ. ಎಲ್ಲೋ ಜೀವಾನುಕೂಲಿ ಗ್ರಹಗಳು ಇರಬಹುದಾದರೂ ಅವುಗಳ ಅಧಿಕೃತ ಸುಳಿವೂ ಮನುಷ್ಯನಿಗೆ ಈವರೆಗೆ ಲಭ್ಯವಾಗಿರಲಿಲ್ಲ. ಈಗ ಆ ದಿಸೆಯಲ್ಲಿ ಸಣ್ಣ ಭರವಸೆಯ ಕಿರಣ ಕಾಣುತ್ತಿದೆ. ಭೂಮಿಯಂತೆ ಜೀವಿಗಳನ್ನು ಹೊಂದಿರುವ ಗ್ರಹವನ್ನು ಖಗೋಲ ವಿಜ್ಞಾನಿಗಳು ಇತ್ತೀಚೆಗೆ ಪತ್ತೆ ಹಚ್ಚಿದರು. ಅದು ಭೂಮಿಗಿಂತ ಗಾತ್ರದಲ್ಲಿ 1.1 ಪಟ್ಟು ದೊಡ್ಡದಂತೆ.
ಅಂದಹಾಗೆ, ಈ ಗ್ರಹ ಸೌರವ್ಯೂಹದ್ದೇನಲ್ಲ. ಇದಕ್ಕೆ ವಿಜ್ಞಾನಿಗಳಿಟ್ಟಿರುವ ಹೆಸರು 'ಕೆಪ್ಲರ್ 186ಎಫ್'. ಅದನ್ನು ನಾವು ಸಂಕ್ಷಿಪ್ತವಾಗಿ ಕೆಪ್ಲರ್ ಎಂದು ಕರೆಯೋಣ. ಈ ಜೀವಂತ ಗ್ರಹವನ್ನು ಕಂಡುಹಿಡಿದದ್ದು ಅಮೆರಿಕದ ನಾಸಾದ ನಿಯಂತ್ರಣದಲ್ಲಿರುವ ಕೆಪ್ಲರ್ ಎಂಬ ಶಕ್ತಿಶಾಲಿ ದೂರದರ್ಶಕ. ಅದು ಭೂಮಿಯಿಂದ 65 ಮಿಲಿಯನ್ ಕಿ.ಮೀ. ದೂರದಲ್ಲಿ ಸುತ್ತುತ್ತಿರುವ ಕೃತಕ ಉಪಗ್ರಹವೊಂದರಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ದೂರದರ್ಶಕ ಪ್ರತಿ ಅರ್ಧ ಗಂಟೆಗೆ 1 ಲಕ್ಷ 50 ಸಾವಿರ ಗ್ರಹಗಳ ಪ್ರಖರತೆಯನ್ನು ಗುರುತಿಸಿ ಅಳತೆ ಮಾಡುತ್ತದೆ. ಇದು ಈಗಾಗಲೇ ಸರಿಸುಮಾರು ಭೂಮಿಯಷ್ಟೇ ಗಾತ್ರದ ನೂರಾರು ಗ್ರಹಗಳನ್ನು ಪತ್ತೆಹಚ್ಚಿದೆ. ಭೂಮಿಯಷ್ಟೇ ಗಾತ್ರದ, ಅಷ್ಟೇ ಪ್ರಮಾಣದ ಉಷ್ಣಾಂಶ ಹಾಗೂ ವಾತಾವರಣವುಳ್ಳ ಗ್ರಹಗಳಲ್ಲಿ ಜೀವಜಾಲ ಇರಬಹುದು ಎಂಬುದು ವಿಜ್ಞಾನಿಗಳ ತರ್ಕ. ಅದು ಪತ್ತೆ ಮಾಡಿದ ಗ್ರಹಗಳಲ್ಲೆಲ್ಲ, ಕೆಪ್ಲರ್ ಮಾತ್ರ ಜೀವಿಗಳಿಗೆ ಆಶ್ರಯ ನೀಡಿರಬಹುದು ಎಂದು ನಂಬಲಾಗಿದೆ.
ವಿಜ್ಞಾನಿ ಎಲಿಸಾ ಕ್ವಿಂಟಾನಾ ನೇತೃತ್ವದಲ್ಲಿನ ತಜ್ಞರ ತಂಡ ಕೆಪ್ಲರ್ ಗ್ರಹವನ್ನು ಪತ್ತೆ ಹಚ್ಚಿದೆ.
ಈ ಕೆಪ್ಲರ್ ಗ್ರಹವು ಎಲ್ಲ ರೀತಿಯಿಂದಲೂ ಜೀವಿಗಳ ಉತ್ಪತ್ತಿ, ಬೆಳವಣಿಗೆಗೆ ಸೂಕ್ತ ವಾತಾವರಣ ಹೊಂದಿದೆಯಂತೆ. ಜೀವವಾಸಕ್ಕೆ ಅತಿ ಮುಖ್ಯವಾದುದು ನೀರು. ಅದು ಕೆಪ್ಲರ್ನಲ್ಲಿ ಸಾಕಷ್ಟಿರಬಹುದು ಎನ್ನಲಾಗುತ್ತಿದೆ. ಸೌರ ಮಂಡಲದ ಹೊರಗಿನ ಗ್ರಹದಲ್ಲಿ ಜಲಮೂಲವನ್ನು ಪತ್ತೆ ಮಾಡಿದ ಮೊದಲ ಸಂಶೋಧನೆ ಇದು.
ಕೆಪ್ಲರ್ ತನ್ನ ಸೂರ್ಯನ ಸುತ್ತ ಸುತ್ತುವ ಪಥ ಭೂಮಿಗಿಂತ ಬಹಳ ಕಿರಿದು. ಆ ಸೂರ್ಯನ ತಾಪವೂ ನಮ್ಮ ಸೂರ್ಯನಿಗಿಂತ ಕಡಿಮೆ ಇದೆ. ಹೀಗಾಗಿ ಭೂಮಿ ಹಾಗೂ ಕೆಪ್ಲರ್ ಗ್ರಹಗಳಲ್ಲಿನ ಉಷ್ಣಾಂಶ ಸರಿಸುಮಾರು ಒಂದೇ ಆಗಿದೆ. ಅಲ್ಲಿನ ಸೂರ್ಯ ನಮ್ಮ ಸೂರ್ಯನಿಗಿಂತ ಕೆಂಪಗಿದ್ದಾನೆ. ಹೀಗಾಗಿ ಕೆಪ್ಲರ್ ಹಳದಿ ಮಿಶ್ರಿತ ಕೇಸರಿ ಗ್ರಹವಾಗಿ ಗೋಚರಿಸುತ್ತದೆ. ಅಲ್ಲಿನ ಸರೋವರಗಳ ಬಣ್ಣವೂ ಭೂಮಿಯ ಸರೋವರಗಳ ಬಣ್ಣದ ನೀಲಿಗಿಂತ ತಿಳಿಯಾಗಿರುತ್ತದೆ ಎಂದು ಊಹಿಸಲಾಗಿದೆ. ಅಲ್ಲೂ ಮೋಡ, ನೀರ್ಗಡ್ಡೆಗಳು ಇರಬಹುದು. ಅವುಗಳ ಮೇಲೂ ಗ್ರಹದ ಬಣ್ಣ, ಪ್ರಭಾವ ಬೀರುತ್ತದೆ. ಈ ಗ್ರಹದ ಬಗ್ಗೆ ಇನ್ನಷ್ಟು ನಿಖರ ಮಾಹಿತಿ ಸಂಗ್ರಹಿಸಲು ಇನ್ನೂ ನಾಲ್ಕಾರು ವರ್ಷ ಬೇಕಾಗಬಹುದು.
2018ರಲ್ಲಿ ಇನ್ನಷ್ಟು ಶಕ್ತಿಶಾಲಿಯಾದ 'ಜೇಮ್ಸ್ ವೆಬ್ಸಟನ್ ಟೆಲಿಸ್ಕೋಪ್' ಅನ್ನು ಸ್ಥಾಪಿಸುವ ಯೋಜನೆ ವಿಜ್ಞಾನಿಗಳದ್ದು. ಮುಂದಿನ 20 ವರ್ಷಗಳಲ್ಲಿ ಇನ್ನಷ್ಟು ಜೀವಪೋಷಕ ಗ್ರಹಗಳನ್ನು ಕಂಡುಹಿಡಿಯಬಹುದು. ಸಂಶೋಧನಾ ತಂಡದ ಬಾಕ್ಲರ್ ಎಂಬ ವಿಜ್ಞಾನಿ ಕೆಪ್ಲರ್ನ ಸ್ವರೂಪವನ್ನು ಕಲಾವಿದರಿಗೆ ವಿವರಿಸಿ, ಅದರ ಚಿತ್ರಗಳನ್ನು ಸಿದ್ಧಪಡಿಸಿದ್ದಾನೆ.
ನಮ್ಮ ಭೂಮಿ ತನ್ನ ತಾಯಿಯಾದ ಸೂರ್ಯನನ್ನು ಒಂದು ಸುತ್ತು ಸುತ್ತಲು 365.25 ದಿನಗಳನ್ನು ತೆಗೆದುಕೊಳ್ಳುತ್ತದೆ. ಕೆಪ್ಲರ್ ಗ್ರಹ ತನ್ನ ಸೂರ್ಯನನ್ನು ಒಂದು ಸಲ ಸುತ್ತಲು 130 ದಿನಗಳು ಸಾಕು. ಕೆಪ್ಲರ್ ಗ್ರಹದ ಒಂದು ವರ್ಷ ಎಂದರೆ 130 ದಿನಗಳು ಮಾತ್ರ. ನಮ್ಮ ಸೂರ್ಯನ ಕುಟುಂಬಕ್ಕಿಂತ ಕೆಪ್ಲರ್ ಗ್ರಹದ ಸೂರ್ಯನ ಕುಟುಂಬ ಚಿಕ್ಕದು. ಅಲ್ಲಿರುವುದು ಕೇವಲ 5 ಗ್ರಹಗಳು ಮಾತ್ರ. ಕೆಪ್ಲರ್ ತನ್ನ ಸೂರ್ಯನಿಂದ ಅತಿ ದೂರದಲ್ಲಿ ಸುತ್ತುವ ಗ್ರಹ. ಉಳಿದ 4 ಗ್ರಹಗಳು ಒಂದು ಸುತ್ತು ಪೂರೈಸಲು 3ರಿಂದ 21 ದಿನಗಳನ್ನು ತಗೆದುಕೊಳ್ಳುತ್ತವೆ.
-ಸುಭಾಸ ಯಾದವಾಡ
sbyadawad@gmail.com