ಮಗಳೆಂಬ ಕನಸು ಅಪ್ಪನೆಂಬ ನಿಜ

ಮಗಳೆಂಬ ಕನಸು ಅಪ್ಪನೆಂಬ ನಿಜ
Updated on: 

ಅಪ್ಪ ಮತ್ತು ಮಗಳ ಸಂಬಂಧ ಹಾಗೂ ಅವರಿಬ್ಬರ ಪಯಣ ಇದೆಯಲ್ಲ, ಅದೊಂದು ಬ್ಯೂಟಿಫುಲ್ ಜರ್ನಿ. ಯಾರಿಗೂ ದಕ್ಕದ ಅನುಭೂತಿ. ನಾನು ಹುಟ್ಟಿದಾಗ ನನ್ನ ಅಮ್ಮ ನನಗೆ ಪ್ರಕಾಶ್ ರೈ ಅಂತ ಹೆಸರಿಟ್ಟಳು. ಅಲ್ಲಿಂದ ನಾನು ಕೇವಲ ಪ್ರಕಾಶ್ ರೈ ಆಗಿಯೇ ಇದ್ದೆ. ಆದರೆ, ಮಗಳು ಹುಟ್ಟಿದಾಗ 'ಕೇವಲ ಪ್ರಕಾಶ್ ರೈ' ಅಪ್ಪ ಅನಿಸಿಕೊಂಡ.
ನಿಜಕ್ಕೂ ಹೇಳಬೇಕು ಅಂದರೆ ಅಪ್ಪಂದಿರ ದಿನಾಚರಣೆ ಅನ್ನೋದು ನಮ್ಮ ಮಕ್ಕಳಿಗೆ ಸಲ್ಲಬೇಕಾದದ್ದು. ಅದು ನಮ್ಮ ಸಂಭ್ರಮವಲ್ಲ, ನಮ್ಮನ್ನು ತಂದೆಯಾಗಿಸಿದ ಮಕ್ಕಳ ಸಂಭ್ರಮ. ನಾನಂತೂ 'ಅಪ್ಪನ ದಿನ'ವನ್ನು ಮಗಳ ಸಂಭ್ರಮದ ದಿನ ಅಂತಲೇ ಕರೆಯುತ್ತೇನೆ. ಮಗ ಅಥವಾ ಮಗಳು ಹುಟ್ಟಿದಾಗ ಒಬ್ಬ ತಂದೆ ಹುಟ್ಟುತ್ತಾನೆ ಎಂಬುದು ಎಲ್ಲರೂ ಒಪ್ಪುವಂಥ, ಜಗತ್ತಿನ ಅತ್ಯಂತ ಸತ್ಯವಾದ ಮಾತು. ನನ್ನ ಕುಟುಂಬಕ್ಕೆ ಒಬ್ಬ ಮಗ ಬಂದಾಗಿನ ಗಳಿಗೆ ಇದೆಯಲ್ಲ, ಅದು ನನ್ನೊಳಗಿನ ತಂದೆ ಹುಟ್ಟಿಕೊಂಡ ಅದ್ಭುತ ಕ್ಷಣ.
 ನನಗೆ ಇಬ್ಬರು ಹೆಣ್ಣು ಮಕ್ಕಳು ಮೇಘನಾ, ಪೂಜಾ. ಒಬ್ಬ ಮಗ ಸಿದ್ಧು ಅಂತ. ಈಗ ಮಗ ಇಲ್ಲ. ಆ ನೋವು ಈಗಲೂ ನನ್ನನ್ನು ಕಾಡುತ್ತಿದೆ. ಮಗ ನೆನಪಾಗುತ್ತಾನೆ. ಕಣ್ಣಲ್ಲಿ ಎರಡು ಹನಿ ಹಾಕಿಸುತ್ತಾನೆ. ಅದೇ ಸಂದರ್ಭದಲ್ಲಿ ಮಗಳು ಬಂದು, 'ಹಾಯ್ ಡ್ಯಾಡಿ' ಎಂದಾಗ ಎಲ್ಲ ನೋವು ಕ್ಷಣ ಮಾತ್ರದಲ್ಲೇ ಮಾಯವಾಗಿ ಬಿಡುತ್ತದೆ. ನಿಮಗೆ ಗೊತ್ತಿರಲಿ, ಅಪ್ಪನ ಜನ್ಮಕ್ಕೆ ಕಾರಣವಾದ ಮಗ ಅಥವಾ ಮಗಳು ಅದೇ ಅಪ್ಪನಲ್ಲಿ ನಡೆಯುವ ಸಾಕಷ್ಟು ಬದಲಾವಣೆಗಳಿಗೆ ಕಾರಣವಾಗುತ್ತಾರೆ. ಮಗನನ್ನು ಕಳೆದುಕೊಂಡ ಮೇಲೆ ನಾನು ತಂದೆ ಅನಿಸಿಕೊಂಡಿದ್ದು ಮಗಳಿನಿಂದಲೇ. ನನ್ನ ಮತ್ತು ನನ್ನ ಮಗಳ ನಡುವಿನ ಪಯಣ ಪದಗಳಲ್ಲಿ ಹೇಳಿಕೊಳ್ಳಲಾಗದ ಸಂಭ್ರಮದ ದಿನಗಳು.
ನಿಮಗೊಂದು ಸತ್ಯ ಹೇಳುತ್ತೇನೆ ಕೇಳಿ, ಅಪ್ಪ ಮತ್ತು ಮಕ್ಕಳ ಪಯಣದಲ್ಲಿ ಮಗ ಅಥವಾ ಮಗಳು ಬೆಳೆಯುತ್ತ ಹೋಗುತ್ತಾರೆ. ಆದರೆ, ಅಪ್ಪ ಮಾತ್ರ ಬೆಳೆಯಲ್ಲ. ಯಾಕೆ ಮತ್ತು ಹೇಗೆ? ಎನ್ನುವುದೇ 'ನಾನು ನನ್ನ ಕನಸು' ಚಿತ್ರದ ಕಥಾವಸ್ತು. ನೀವು ಆ ಚಿತ್ರವನ್ನು ನೋಡಿದ್ದರೆ ನಿಮಗೆ ಗೊತ್ತಾಗುತ್ತದೆ, ಪ್ರಕಾಶ್ ರೈ ಒಳಗಿನ ಅಪ್ಪ ಅನಿಸಿಕೊಂಡವನ ಮನಸ್ಥಿತಿ, ತೀವ್ರತೆಯನ್ನು ನಿಮ್ಮ ಮನಸ್ಸಿಗೆ ಮುಟ್ಟಿಸುತ್ತದೆ.
 ಇನ್ನು ನನ್ನ ಮತ್ತು ನನ್ನ ಮಗಳ ವಿಚಾರಕ್ಕೆ ಬರುವುದಾದರೆ, 'ನೀನು ಈಗ ಅಪ್ಪ' ಎಂದು ಗುರುತಿಸಿದ್ದು ಮಾತ್ರವಲ್ಲ, ಮರೆತು ಹೋದ ನನ್ನ ಬಾಲ್ಯವನ್ನೂ ನೆನಪಿಸಿದ ಮಗಳು ಆಕೆ. ಅವಳ ಪ್ರಾಮಾಣಿಕತೆ, ಮುಗ್ಧತೆ, ನಗು, ಪ್ರತಿಯೊಂದನ್ನು ಪ್ರಶ್ನಿಸುವ ಮತ್ತು ಕುತೂಹಲದಿಂದ ನೋಡುವ, ಒಂದನ್ನು ಹತ್ತು ಬಾರಿ ಕೇಳುವ ನನ್ನ ಮಗಳು ನನಗೇ ಗೊತ್ತಿಲ್ಲದಂತೆ ನನ್ನನ್ನು ಪುಟ್ಟ ಕಂದನನ್ನಾಗಿಸಿತು. ಈ ಜಗತ್ತಿನಲ್ಲಿ ನಾವು ಯಾರನ್ನಾದರೂ ಅಥವಾ ಯಾವುದನ್ನಾದರೂ ಒಂದೇ ಒಂದು ಚಿಕ್ಕ ಷರತ್ತೂ ಇಲ್ಲದೆ ನಂಬುವುದಾದರೆ ಅದು ಮಗ ಅಥವಾ ಮಗಳನ್ನ. ನೋಡಿ, ಇಡೀ ದಿನ ಕೆಲಸ ಮುಗಿಸಿಕೊಂಡು ಸಿಟ್ಟು, ಬೇಸರ ತುಂಬಿಕೊಂಡು ಮನೆಗೂ ಅದೇ ಸಿಡುಕು ಮುಖ ಹೊತ್ತು ಬರುವ ಅಪ್ಪನನ್ನು ಅಲ್ಲೆಲ್ಲೋ ಆಟವಾಡುತ್ತಿರುವ ಮಗಳು, 'ಅಪ್ಪಾ...' ಅಂತ ತಬ್ಬಿಕೊಂಡಾಗ ನಿಮ್ಮನ್ನು ನೀವೇ ಮರೆಯುತ್ತೀರಿ. ಹಾಗೆ ನನ್ನ ಮಗಳು ನನ್ನ 'ಅಪ್ಪ' ಅಂತ ಭುಜದ ಮೇಲೆ ಹತ್ತಿಕೊಂಡಾಗ ನಾನು ಥ್ಯಾಂಕ್ಸ್ ಹೇಳಿದ್ದು ನನ್ನ ತಾಯಿಗೆ. ಯಾಕೆಂದರೆ ನನ್ನ ತಾಯಿ ಕೂಡ ನನ್ನ ಹೀಗೆ ನೋಡಿಕೊಂಡಿದ್ದರಲ್ಲವೇ?
ನಾನು ನನ್ನ ಮಗಳ ಜೊತೆ ಅವಳಂತೆ ಪುಟ್ಟ ಕಂದನಾಗಿದ್ದಾಗಲೇ ಅವಳ ಬದಲಾವಣೆಗಳನ್ನು ಗಮನಿಸುತ್ತ ಬಂದೆ. ಏಳು ಅಥವಾ ಎಂಟನೇ ವಯಸ್ಸಿಗೆ ಚಿಕ್ಕ ಪುಟ್ಟ ಸೀಕ್ರೆಟ್‌ಗಳನ್ನು ಮಕ್ಕಳು ಮೇಂಟೈನ್ ಮಾಡಿಕೊಳ್ಳುತ್ತಾನೆ. ಅವು ತಕ್ಷಣಕ್ಕೆ ನಮಗೆ ಗೊತ್ತಾಗಲ್ಲ. ಯಾವುದೋ ಹಳೇ ಪುಸ್ತಕದಲ್ಲಿ ನವಿಲು ಗರಿ ಬಚ್ಚಿಟ್ಟುಕೊಳ್ಳುವುದು, ಯಾರೋ ಕೊಟ್ಟ ಚಿಲ್ಲರೆ ಹಣವನ್ನು ಡಬ್ಬಿಯಲ್ಲಿ ಹಾಕಿಟ್ಟು ಅಪರೂಪಕ್ಕೆ ಒಮ್ಮೆ ಅದನ್ನು ಮೂಲೆಯಲ್ಲಿ ಕೂತು ಲೆಕ್ಕ ಹಾಕುವುದು... ಇಂಥ ಸೀಕ್ರೆಟ್‌ಗಳನ್ನು ನೀವೂ ಕೂಡ ನಿಮ್ಮ ಮಕ್ಕಳಲ್ಲಿ ನೋಡಿರುತ್ತೀರಿ. ನಾನಂತೂ ನೋಡಿದ್ದೇನೆ. ಆದರೆ, ಬರಬರುತ್ತ ಮಕ್ಕಳ ಸೀಕ್ರೆಟ್‌ಗಳ ಮುಂದೆ ಅಪ್ಪ ನಿಸ್ಸಹಾಯಕನಾಗುತ್ತಾನೆ. ಇದ್ದಕ್ಕಿದ್ದಂತೆ ಹೆದರಿಕೆ ಶುರುವಾಗುತ್ತದೆ. ಯಾಕೆ ಈ ಹೆದರಿಕೆ? ಗೊತ್ತಿಲ್ಲ. ಆದರೆ, ನನ್ನ ಮಗಳನ್ನು ನಾನು ಮಾತ್ರ ಬೆಳೆಸುತ್ತಿಲ್ಲ, ತಾಯಿ, ಅಜ್ಜ, ಅಜ್ಜಿ, ಮಾಮ, ಅಣ್ಣ ಹೀಗೆ ತೀರ ಹತ್ತಿರದ ಸಂಬಂಧಗಳ ಜೊತೆಗೆ ಸುತ್ತಲಿನ ಪರಿಸರ, ಇವೆಲ್ಲವೂ ಅವಳ ಮೇಲೆ ಪ್ರಭಾವಿಸುತ್ತಿವೆ. ಮತ್ತು ಅವುಗಳಿಂದ ಆಕೆ ಬೆಳೆಯುತ್ತಿದ್ದಾಳೆ. ಅಪ್ಪ ಅನಿಸಿಕೊಂಡವ ಅದನ್ನ ಗುರುತಿಸಲ್ಲ ನೋಡಿ!
ಹೀಗಾಗಿ ನನ್ನ ಮಗಳು ನನ್ನ ಬಿಟ್ಟು ಓದಲು ಹಾಸ್ಟಲ್‌ಗೆ ಸೇರಿದಾಗ ಏನೋ ಸಂಕಟ, ದುಗುಡ, ಒಂಚೂರು ಹೊಟ್ಟೆ ಕಿಚ್ಚು ಶುರುವಾಯಿತು. ಮಗಳು ಇನ್ನು ಮುಂದೆ ಪ್ರತಿ ಕ್ಷಣವೂ ನನ್ನ ಮುಂದೆ ಇರಲ್ಲ ಅಂತ. ನಿಜ ಹೇಳಬೇಕು ಅಂದರೆ, 16, 17, 18ನೇ ವಯಸ್ಸಿನ ಮಕ್ಕಳಿಗೆ ಯಾರೂ ಬೇಕಿರಲ್ಲ. ಆ ವಯಸ್ಸಿನಲ್ಲಿ ಅವರ ಬದುಕಿನ ತಯಾರಿಗಳನ್ನು ಅವರೇ ಮಾಡಿಕೊಳ್ಳುತ್ತಾರೆ. ನನ್ನ ಮಗಳನ್ನು ತುಂಬಾ ಹತ್ತಿರದಿಂದ ಗಮನಿಸುತ್ತಿದ್ದೆ. ಅವಳು ಹಾಸ್ಟಲ್‌ಗೆ ಸೇರಿದಾಗ ಅಪ್ಪ ನೆನಪಾಗಲೇ ಇಲ್ಲ. ಅವಳ ಬೇಕು ಬೇಡಗಳನ್ನು ಅವಳೇ ನಿರ್ಧರಿಸುವಷ್ಟು ಬೆಳೆದಿದ್ದಳು. ಆದರೆ, 'ಮಗಳು ನನ್ನ ಕೈ ತಪ್ಪಿದ್ದಾಳಲ್ಲ?' ಎನ್ನುವ ಮನಸ್ಥಿತಿಯಲ್ಲಿ ಅಪ್ಪನಾಗಿದ್ದ ನನ್ನಂಥವರು ಅಪ್ಪನಾಗಿಯೇ ಉಳಿಯುತ್ತಾರೆ. ಅವರು ಬೆಳೆಯಲ್ಲ.
ನಾನು ನಿಮಗೆ ಒಂದು ಪುಟ್ಟ ಉದಾಹರಣೆ ಹೇಳಬೇಕಿದೆ. ಹದಿನಾರನೇ ವಯಸ್ಸಿನ ತನಕ ನಿಮ್ಮ ಮಗಳು ಪ್ರತಿಯೊಂದನ್ನೂ ನಿಮ್ಮನ್ನು ಕೇಳಿ ಪಡೆಯುತ್ತಾಳೆ. ಶಾಪಿಂಗ್‌ಗೆ ಹೋದಾಗ, 'ಡ್ಯಾಡಿ ನನಗೆ ಅದು ಕೊಡಿಸು, ಇದು ಬೇಕು, ಅದೇನು?' ಹೀಗೆ ಒಂದೇ ಒಂದು ಕ್ಷಣವೂ ಬಿಡುವು ಕೊಡದೇ ನಿಮ್ಮ ಜೊತೆ ಶಾಪಿಂಗ್ ಮಾಡುತ್ತಾಳೆ. ಅದೇ ಮಗಳು ಈಗ ಹದಿನಾರು ದಾಟಿದ್ದಾಳೆ. ಶಾಪಿಂಗ್‌ಗೆ ಹೋಗುತ್ತೀರಿ. ಎಲ್ಲವೂ ತೆಗೆದುಕೊಂಡ ಮೇಲೆ ಮಗಳು, 'ಅಪ್ಪಾ ಒಂದ್ ನಿಮಿಷ ನೀನು ಇಲ್ಲೇ ಇರು ಬಂದೆ' ಅಂತ ಅಂಗಡಿ ಒಳಗೆ ಹೋದಾಗಿನ ಕ್ಷಣ ನಿಮ್ಮಲ್ಲಿ ಉಂಟಾಗುವ ಸಂಕಟ, 'ಅರೇ ನಾನು ಯಾಕೆ ಇಲ್ಲೇ ಇರಬೇಕು?' ಎನ್ನುವ ಮನಸ್ಥಿತಿಯೇ ಅಪ್ಪನನ್ನು ಅಪ್ಪನಾಗಿ ಉಳಿಸಿಬಿಡುತ್ತದೆ. ಇದು ನನ್ನ ಮಗಳ ಜೊತೆಗೆ ನಾನು ಕಂಡುಕೊಂಡ ಸತ್ಯ.
ಆದರೆ, ವಾಸ್ತವ ಏನೆಂದರೆ, 'ಅಪ್ಪ ನೀನು ಇಲ್ಲೇ ಇರು' ಎಂದಾಗ ಆಕೆ ತಂದೆಯ ಉಸ್ತುವಾರಿ ಬಯಸುತ್ತಿಲ್ಲ. ಬದಲಾಗಿ ಸ್ವಾತಂತ್ರ್ಯಕೇಳುತ್ತಿದ್ದಾಳೆ. ಅಂಥ ಸ್ವಾತಂತ್ರ್ಯವನ್ನು ಎಷ್ಟು ಮಂದಿ ಅಪ್ಪಂದಿರು ಕೊಡಲು ಸಾಧ್ಯ? ಆಕೆ ಕೇಳುವ ಸ್ವಾತಂತ್ರ್ಯದಲ್ಲಿ 'ಅಪ್ಪ, ಇಡೀ ಜಗತ್ತೇ ನನ್ನ ನಂಬದಿದ್ದರೂ ಪರರ್ವಾಗಿಲ್ಲ. ನೀನು ನನ್ನ ನಂಬು ಅಪ್ಪ' ಎನ್ನುವ ಪುಟ್ಟ ವಿನಂತಿ ಅಡಗಿದೆ. ಮತ್ತೊಂದು ವಿಷಯ ಹೇಳಬೇಕಿದೆ. ಅಪ್ಪನಿಂದ ಸ್ವಾತಂತ್ರ್ಯ ಬಯಸಿದಾಗಲೇ ಅಪ್ಪ ಮತ್ತು ಮಕ್ಕಳ ನಡುವೆ ಅಂತರ ಬೆಳೆಯುತ್ತದೆ. ಅದು ಹೊರ ಜಗತ್ತಿಗೆ ಗೊತ್ತಿಲ್ಲದ ಅಂತರ. ಆ ಹಂತದಲ್ಲಿ ಮಗ- ಮಗಳನ್ನು ಅಪ್ಪನಾದವನು ನಿಯಂತ್ರಿಸಬಾರದು. ಒಂದು ಕೊಳಲಿನಿಂದ ಹೊರಟ ಹಾಡು, ಅದು ತನ್ನದೇ ಅಂತ ಕೊಳಲಿಗೂ ಗೊತ್ತು. ಹಾಗಂತ ಹೇಳಿಕೊಳ್ಳುವ ಹಕ್ಕು ಕೂಡ ಅದಕ್ಕಿದೆ. ಆದರೆ, ಆ ಹಾಡನ್ನು ನಿಯಂತ್ರಿಸಿದರೆ, ಕೊಳಲಿನ ಹಾಡು ಕೇಳುಗರಿಗೆ ದಕ್ಕುವುದಿಲ್ಲ ನೋಡಿ. ನನ್ನ ಮತ್ತು ನನ್ನ ಮಗಳ ನಡುವಿನ ಅಂತರ ಮತ್ತು ಸ್ವಾತಂತ್ರ್ಯ ಈ ಕೊಳಲು ಮತ್ತು ಅದರ ಹಾಡಿನಂತೆ.
ನನ್ನ ಮತ್ತು ಮಗಳ ನಡುವೆ ನಡೆದ ಒಂದು ಭಾವುಕ ಸನ್ನಿವೇಶವನ್ನು ನಿಮಗೆ ಇಲ್ಲಿ ಹೇಳಬೇಕಿದೆ. ನಾನು ನನ್ನ ಮಗನನ್ನು ಕಳೆದುಕೊಂಡಾಗ, 'ನಿನಗೆ ಇನ್ನು ಮುಂದೆ ತಮ್ಮ ಇಲ್ಲ' ಎನ್ನುವ ಸತ್ಯವನ್ನು ಮಗಳಿಗೆ ಹೇಳಲು ಒಂದು ಲಾಂಗ್ ಡ್ರೈವ್ ಕರೆದುಕೊಂಡು ಹೋದೆ. ಅವತ್ತು ನಾನು ಮಗಳಿಗೆ ತಮ್ಮನಿಲ್ಲದ ಸಂಗತಿ ಹೇಗೆ ಹೇಳಿದೆ ಅಂತ ತಿಳಿಯದು. ಆದರೆ, ಮಗ ತೀರಿಕೊಂಡು ಕೆಲ ದಿನಗಳಾದ ಮೇಲೆ ಮಗಳು ಒಂದು ಪೇಯಿಂಟಿಂಗ್ ಹಾಕಿಕೊಂಡು ಬಂದಳು. ಒಂದು ಶಾಲೆ, ಅದರಲ್ಲಿನ ಖಾಲಿ ಬೆಂಚ್‌ಗಳು, ಅದರ ಬಾಗಿಲಲ್ಲಿ ಒಬ್ಬ ಬಾಲಕ. ನಾನು, 'ಯಾರು ಮಗಳೇ ಇದು?' ಅಂತ ಕೇಳಿದಾಗ, 'ಡ್ಯಾಡಿ ಇದು ಸಿದ್ಧು' ಅಂತ ಅತ್ಯಂತ ಮುಗ್ಧವಾಗಿ ಹೇಳಿದಳು. ಆ ಕ್ಷಣ ನನಗೆ ದುಃಖ ಉಮ್ಮಳಿಸಿ ಬಂತು. ನನಗೇ ತಿಳಿಯದೆ ಕಣ್ಣೀರು ಕೆನ್ನೆ ಮೇಲೆ ಇಳಿದಿತ್ತು. ಆಗ ಅಂದುಕೊಂಡೆ, ಚಿಕ್ಕ ವಯಸ್ಸಿನಲ್ಲೇ 'ನಿನಗೆ ತಮ್ಮ ಇಲ್ಲ' ಅಂತ ಹೇಳಿದ್ದನ್ನು ಎಷ್ಟು ಚೆನ್ನಾಗಿ ತನ್ನ ಮನಸ್ಸಿನಲ್ಲಿ ಉಳಿಸಿಕೊಂಡಿದ್ದಾಳೆ, ನನ್ನ ನೋವು ಆಕೆ ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಳೆ ಅಂತ. ಆ ಪೇಯಿಟಿಂಗ್ ನೋಡಿದಾಗ ಅರ್ಥ ಮಾಡಿಕೊಂಡೆ.
ಈಗ ನಾನು ಮತ್ತು ನನ್ನ ಮಗಳು ಹೇಗಿದ್ದೇವೆ ಅಂದರೆ, ನನ್ನ ತಾಯಿ ಅಥವಾ ಹೆಂಡತಿ ಬಳಿ ಹೇಳಿಕೊಳ್ಳದ ವಿಷಯಗಳನ್ನೂ ಆಕೆ ಬಳಿ ಹೇಳಿಕೊಂಡು ಹಗುರವಾಗುತ್ತೇನೆ. ನೊಂದು, ಬೆಂದ ಈ ಅಪ್ಪನಿಗೆ ಮಗಳು ಸ್ನೇಹಿತೆಯಾಗಿದ್ದಾಳೆ. 'ಅಪ್ಪ ಈ ಚೂಯಿಂಗ್ ಗಮ್ ತಿಂದು ಹೀಗೆ ಬಿಸಾಕಿದರೆ ಅದನ್ನು ಕಾಗೆಗಳು ತಿಂದರೆ ಅವುಗಳ ಗಂಟಲಲ್ಲಿ ಸಿಕ್ಕಿ ಹಾಕಿಕೊಳ್ಳುತ್ತದೆ' ಎಂದು ನನ್ನ ದೊಡ್ಡತನಕ್ಕೆ ಬುದ್ಧಿ ಹೇಳಿದ ಮಗಳು, 'ಹೌದು, ನೀನ್ಯಾಕೆ ಯಾವಾಗಲೂ ವಿಲನ್ ಆಗಿಯೇ ನಟಿಸುತ್ತೀಯಾ?' ಎಂದು ಪ್ರಶ್ನಿಸಿದ ನನ್ನ ಕಂದ, 'ನೀನು ತುಂಬಾ ಸಿಂಪಲ್ ಪಪ್ಪ' ಎಂದು ಭುಜ ತಟ್ಟಿದ ಮಗಳು, ಇತ್ತೀಚೆಗೆ 'ಒಗ್ಗರಣೆ' ಚಿತ್ರ ನೋಡಿ, 'ಮೈ ಡ್ಯಾಡಿ ರೋಮ್ಯಾಂಟಿಕ್ ಯಂಗ್ ಬಾಯ್‌' ಅಂತ ಆಕೆಯ ಸ್ನೇಹಿತರ ಮುಂದೆ ಚೇಷ್ಟೆ ಮಾಡಿದ ಮಗಳು ಓದಲಿಕ್ಕೆ ಲಂಡನ್‌ಗೆ ಹೊರಟು ನಿಂತಿದ್ದಾಳೆ. ನನ್ನ ಅಪ್ಪನಾಗಿ ಇಲ್ಲಿಯವರೆಗೂ ಬೆಳೆಸಿದ ಮಗಳು ನಾಲ್ಕು ವರ್ಷ ನನ್ನ ಜೊತೆ ಇರಲ್ಲ. ಆಕೆ ಜೊತೆ ನಾನು ನಾಲ್ಕು ದಿನ ಪ್ರಯಾಣ ಮಾಡುತ್ತೇನೆ. ಈ ನಾಲ್ಕು ದಿನ ಆಕೆ ಜೊತೆ ನಾನೇನು ಮಾತನಾಡುತ್ತೇನೆ, ಆಕೆ ನನ್ನ ಏನು ಕೇಳಬಹುದು? ಆ ಕುತೂಹಲದಲ್ಲಿದ್ದೇನೆ. ಹೆಣ್ಣಾಗಿ ಬೆಳೆಯುತ್ತಿರುವ ಮಗಳನ್ನು ನೋಡಿ ಸಂಭ್ರಮಿಸುವುದರ ಹೊರತಾಗಿ ಅಪ್ಪನಾಗಿ ನನಗೆ ಇನ್ನೇನು ಬೇಕು ಹೇಳಿ?


 -ಪ್ರಕಾಶ್ ರೈ
ಚಲನಚಿತ್ರ ನಟ ಮತ್ತು ನಿರ್ದೇಶಕ
q4prakash@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com