

ಆ್ಯಂಡ್ರಾಯ್ಡ್ ಎಂಬ ಸಾಫ್ಟ್ವೇರ್ ಜಗತ್ತನ್ನು ಯಾವ ಪ್ರಮಾಣದಲ್ಲಿ ಆವರಿಸಿಕೊಳ್ಳುತ್ತಿದೆ ಎಂದರೆ, ಬೇರೆ ಯಾವ ಸಾಫ್ಟ್ವೇರ್ ಕೂಡ ನಮ್ಮ ದಿನನಿತ್ಯದ ಜೀವನವನ್ನು ಈ ಪರಿ ಪ್ರಭಾವಿಸಿರಲಿಲ್ಲ. ಆ್ಯಂಡ್ರಾಯ್ಡ್ ಅಂದರೆ ನಾವು ಹೇಳಿದಂತೆ ಕೇಳುವ ಹೆಂಡತಿ ಅಥವಾ ಗಂಡ ಇದ್ದಂತೆ. ಎಲ್ಲರಿಗೂ ಇಷ್ಟವಾಗುವುದು ನಾವು ಹೇಳಿದಂತೆ ಕೇಳುವ ಹೆಂಡತಿ ಅಥವಾ ಗಂಡನೇ ಎಂಬುದಕ್ಕೆ ಆ್ಯಂಡ್ರಾಯ್ಡ್ ಜನಪ್ರಿಯತೆಯೇ ಸಾಕ್ಷಿ!
ಮೊಬೈಲು, ಟ್ಯಾಬ್ಲೆಟ್, ಕ್ಯಾಮರಾ, ಫ್ರಿಡ್ಜ್, ಟಿವಿ, ಸೆಟ್ಟಾಪ್ ಬಾಕ್ಸ್, ಬಹುಶಃ ಇನ್ನು ಮುಂದೆ ನಮ್ಮ ನಿಮ್ಮ ಕಾರಿನೊಳಗೂ ಆ್ಯಂಡ್ರಾಯ್ಡ್ ಬಂದು ಕುಳಿತುಕೊಳ್ಳಬಹುದು. ಯಾಕೆಂದರೆ ಆ್ಯಂಡ್ರಾಯ್ಡ್ ಎಂಬ ಸಾಫ್ಟ್ವೇರ್ ಜಗತ್ತನ್ನು ಆ ಪ್ರಮಾಣದಲ್ಲಿ ಆವರಿಸಿಕೊಳ್ಳುತ್ತಿದೆ. ಬೇರೆ ಯಾವ ಸಾಫ್ಟ್ವೇರ್ ಕೂಡ ಜಗತ್ತನ್ನು ಮತ್ತು ನಮ್ಮ ದಿನನಿತ್ಯದ ಜೀವನವನ್ನು ಈ ಪ್ರಮಾಣದಲ್ಲಿ ಆವರಿಸಿಕೊಂಡಿಲ್ಲ.
ಇದು ಬಹುಶಃ ನಮ್ಮ ಕಾಲದ ಅತ್ಯಂತ ದೊಡ್ಡ ಯಶಸ್ಸಿನ ಕಥನ. ಹೊಸ ರೀತಿಯ ಉದ್ಯಮ ಮಾದರಿ. ಈವರೆಗೆ ಇಂತಹ ಪ್ರಯೋಗವೊಂದು ನಡೆದಿರಲಿಲ್ಲ ಅಥವಾ ಯಶಸ್ವಿಯಾಗಿರಲಿಲ್ಲ. ಆ್ಯಂಡ್ರಾಯ್ಡ್ ಎಂಬುದು ನಮ್ಮ ಕಣ್ಣೆದುರೇ ಹುಟ್ಟಿ, ಅಂಬೆಗಾಲಿಕ್ಕಿ, ಬೆಳೆದು ದೊಡ್ಡದಾಗಿ, ನೋಡನೋಡುತ್ತಿದ್ದಂತೆ ವಿಶ್ವವನ್ನೇ ಆವರಿಸಿ ನಮ್ಮನ್ನೇ ಬೆರಗುಗೊಳಿಸಿದ ಕೂಸು. ನಮ್ಮ ಕೈನಲ್ಲೇ ಇರುವುದರಿಂದ ನಮ್ಮ ಕೈಗೂಸು!
ಇದು ನಾವು ಹೇಳಿದಂತೆಯೂ ಕೇಳುತ್ತದೆ. ಕೆಲವೊಮ್ಮೆ ಅದು ಹೇಳಿದಂತೆ ನಮ್ಮನ್ನು ಕೇಳುವಂತೆಯೂ ಮಾಡುತ್ತದೆ! ಮೂರ್ತಿ ಚಿಕ್ಕದಾದರೂ ಕೀರ್ತಿದೊಡ್ಡದು!!
ಇಂದು ವಿಶ್ವದ ಮೊಬೈಲ್ ಮಾರುಕಟ್ಟೆಯ ಶೇ.80ಕ್ಕಿಂತ ಹೆಚ್ಚಿನ ಪಾಲನ್ನು ಆ್ಯಂಡ್ರಾಯ್ಡ್ ಆವರಿಸಿಕೊಂಡಿದೆ. 2009ರಲ್ಲಿ ಈ ಪಾಲು ಕೇವಲ ಶೇ.2.8ರಷ್ಟಿತ್ತು! ಹಿಂದೆಂದೂ ಈ ಪ್ರಮಾಣದಲ್ಲಿ ಯಾವುದೇ ಸಾಫ್ಟ್ವೇರ್ ಅಥವಾ ಆಪರೇಟಿಂಗ್ ಸಿಸ್ಟಂ ಈ ಪ್ರಮಾಣದಲ್ಲಿ ಮಾರುಕಟ್ಟೆಯನ್ನು ಆವರಿಸಿಕೊಂಡಿರಲಿಲ್ಲ. ಆವರಿಸಿಕೊಂಡಿದ್ದರೂ ಬಳಕೆದಾರರ ಸಂಖ್ಯೆ ತುಂಬ ಕಡಿಮೆ ಇತ್ತು. ಬಹುಶಃ ಇದು ಆ್ಯಂಡ್ರಾಯ್ಡ್ನ ಉಚ್ಛ್ರಾಯ ಸ್ಥಿತಿಯೂ ಹೌದು.
ಆ್ಯಂಡ್ರಾಯ್ಡ್ ಮಾರುಕಟ್ಟೆಯಲ್ಲಿ (ಗೂಗಲ್ ಪ್ಲೇ) ಅಪ್ಲಿಕೇಶನ್ಗಳ (ಎಪಿಪಿ) ಸಂಖ್ಯೆ 12,71,054! ಈ ಪ್ರಮಾಣದ ಅಪ್ಲಿಕೇಶನ್ಗಳು ಬೇರೆ ಯಾವ ಎಪಿಪಿ ಸ್ಟೋರ್ನಲ್ಲೂ ಇಲ್ಲ. ತಿಂಗಳಿಂದ ತಿಂಗಳಿಗೆ ಆ್ಯಂಡ್ರಾಯ್ಡ್ ಸಾಫ್ಟ್ವೇರ್ ಆದಾಯ, ಮಾರುಕಟ್ಟೆ ವ್ಯಾಪ್ತಿ ಹೆಚ್ಚುತ್ತಿದೆ.
ಇದು ಕೇವಲ 10 ವರ್ಷಗಳಲ್ಲಾದ ಬದಲಾವಣೆ. ಕೇವಲ 10 ವರ್ಷಗಳ ಹಿಂದೆ ಅಪ್ಲಿಕೇಶನ್, ಆಪರೇಟಿಂಗ್ ಸಿಸ್ಟಂ, ಪ್ರೊಸೆಸರ್, ರ್ಯಾಮ್ ಇದೆಲ್ಲ ಮೊಬೈಲ್ನಲ್ಲಿದೆ ಎಂಬುದೇ ಗೊತ್ತಿರಲಿಲ್ಲ. ಮೊಬೈಲ್ ಅಂದರೆ ಅದರಲ್ಲಿ ಕಾಲ್ ಮತ್ತು ಎಸ್ಎಂಎಸ್ ಮಾಡಬಹುದು ಎಂಬುದಷ್ಟೇ ಗೊತ್ತಿತ್ತು. ಆಗ ಇದ್ದ ಸೌಲಭ್ಯಗಳೂ ಅಷ್ಟೇ.
ಆದರೆ ಈಗ ಮೊಬೈಲ್ ಖರೀದಿ ಮಾಡಬೇಕೆಂದರೆ ಎಷ್ಟೆಲ್ಲ ತಲೆಕೆಡಿಸಿಕೊಳ್ಳಬೇಕು. ಅದರ ಬಗ್ಗೆ ತಿಳಿದುಕೊಳ್ಳಬೇಕು. ತೆಗೆದುಕೊಂಡ ನಂತರ ಅದರಲ್ಲಿರುವ ಎಷ್ಟೋ ಆಯ್ಕೆ, ಅವಕಾಶಗಳನ್ನು ತಿಳಿದುಕೊಳ್ಳಬೇಕು. ಉಫ್!
ಇದಕ್ಕೆಲ್ಲ ಕಾರಣವಾಗಿದ್ದು ಆ್ಯಂಡ್ರಾಯ್ಡ್. ಅಲ್ಲಲ್ಲ ಆ್ಯಪಲ್ ಅಂತ ಕೆಲವರು ವಾದ ಮಾಡಬಹುದು. ಆದರೆ ಇಂದು ಸ್ಮಾರ್ಟ್ಫೋನ್ಗಳು ಈ ಪರಿ ಫೇಮಸ್ ಆಗಲು, ಪ್ರತಿಯೊಬ್ಬರ ಕೈಲೂ ಕಾಣಲು, ಆಪರೇಟಿಂಗ್ ಸಿಸ್ಟಂ ಮಾಸ್ ಅಪೀಲಿಂಗ್ ಕಾರಣವೇ ಆ್ಯಂಡ್ರಾಯ್ಡ್. ಹಾಗೆ ಹೇಳಲು ಕಾರಣವೂ ಇದೆ.
ಐಒಎಸ್ ಅಥವಾ ಆ್ಯಪಲ್ ಆಪರೇಟಿಂಗ್ ಸಿಸ್ಟಂ ಇಂದಿಗೂ ಒಂದು ಕಂಪನಿಗೆ ಮಾತ್ರ ಸೀಮಿತ. ಒಂದು ಹೊಸ ಮೊಬೈಲ್ ಖರೀದಿ ಮಾಡಬೇಕು ಅಂದರೆ ಆ್ಯಪಲ್ ಕಂಪನಿ ಹೊಸ ಮೊಬೈಲ್ ಮಾರುಕಟ್ಟೆಗೆ ಬಿಡುವುದನ್ನೇ ಕಾಯಬೇಕು. ಒಂದು ಹಾಡು ಶೇರ್ ಮಾಡಿಕೊಳ್ಳಬೇಕೆಂದರೆ ಹೆಣಗಬೇಕು. ಬೇರೆಯವರಿಂದ ಕಾಂಟ್ಯಾಕ್ಟ್ ತರಿಸಿಕೊಂಡರೆ ಸೇವ್ ಆಗುವುದಿಲ್ಲ. ಆ್ಯಪಲ್ ಆಪರೇಂಟಿಂಗ್ ಸಿಸ್ಟಂ ಬಿಟ್ಟು ಬೇರೆ ಆಪರೇಟಿಂಗ್ ಸಿಸ್ಟಂಗಳನ್ನು ಅಕ್ಷರಶಃ ಅಸ್ಪೃಶ್ಯರಂತೆ ಕಾಣುತ್ತದೆ.
ಆ್ಯಪಲ್ನಲ್ಲಿ ಈಗ 5-6 ಮೊಬೈಲ್ಗಳ ಆಯ್ಕೆ ಮಾತ್ರ ಗ್ರಾಹಕನಿಗೆ ಲಭ್ಯವಿದೆ. ಅವುಗಳ ನಡುವೆಯೂ ಹೇಳಿಕೊಳ್ಳುವಂತಹ ವ್ಯತ್ಯಾಸವಿಲ್ಲ. ಗಾತ್ರ, ಶೈಲಿ, ರ್ಯಾಮ್ ಆಯ್ಕೆಗಳಿಲ್ಲ.
ಆದರೆ ಆ್ಯಂಡ್ರಾಯ್ಡ್ ಹಾಗಲ್ಲ. ಇದು ಒಂಥರ ತೆರೆದ ಮನಸ್ಸಿನ ವ್ಯಕ್ತಿಗಳಿದ್ದಂತೆ. ಒಳ್ಳೆಯದು (ಕೆಲವೊಮ್ಮೆ ಕೆಟ್ಟದ್ದು ಕೂಡ) ಯಾರಿಂದಲೇ ಬಂದರೂ ಅದನ್ನು ಸ್ವೀಕರಿಸುತ್ತದೆ. ಕಾಂಟ್ಯಾಕ್ಟ್, ಹಾಡು, ವೀಡಿಯೋ, ಮೆಸೇಜ್, ಇಮೇಲ್, ಅಪ್ಲಿಕೇಶನ್ ಎಲ್ಲವನ್ನೂ ಆ್ಯಂಡ್ರಾಯ್ಡ್ ತೆರೆದ ತೋಳಿನಿಂದ ಸ್ವಾಗತಿಸುತ್ತದೆ. ಆ್ಯಂಡ್ರಾಯ್ಡ್ನ ಕೂಭಿಯೇ ಅದರ ಓಪನ್ನೆಸ್.
ಕೇವಲ ನಮ್ಮ ಫೋನ್ ಏನು ಬೇಕೊ ಅದನ್ನು ಸೇರಿಸಿಕೊಳ್ಳಲು ಮಾತ್ರವಲ್ಲ, ಮೂಲತಃ ಆ್ಯಂಡ್ರಾಯ್ಡ್ ಸಾಫ್ಟ್ವೇರೇ ಮುಕ್ತ. ಯಾರು ಬೇಕಾದರೂ ಈ ಸಾಫ್ಟ್ವೇರ್ ಬಳಸಿ, ಅವರಿಗೆ ಬೇಕಾದಂತೆ ಬದಲಾಯಿಸಿ, ಬೇಕಾದ ಯೂಸರ್ ಇಂಟರ್ಫೇಸ್ (ಯುಐ) ಅಭಿವೃದ್ಧಿ ಪಡಿಸಿ, ಮೊಬೈಲ್ಗಳನ್ನು ಮಾರುಕಟ್ಟೆಗೆ ಬಿಡಬಹುದು. ಯಾವ ಕಾಪಿರೈಟ್ ಇಲ್ಲ. ಕೇಸುಗಳ ಜಂಜಾಟವಿಲ್ಲ. ಯಾರ ಪರವಾನಗಿಯೂ ಬೇಕಿಲ್ಲ. ಈ ಸಾಫ್ಟ್ವೇರ್ ಅಷ್ಟು ಓಪನ್.
ಆ್ಯಂಡ್ರಾಯ್ಡ್ ಜನಪ್ರಿಯತೆಯ ಇನ್ನೊಂದು ಕಾರಣವೆಂದರೆ ಅದು ಫ್ರೀ!
ಗೂಗಲ್ ಕಂಪನಿ ಈ ಸಾಫ್ಟ್ವೇರನ್ನು ಮಾರುಕಟ್ಟೆಯಲ್ಲಿ ಉಚಿತವಾಗಿ ಬಿಟ್ಟಿರುವುದರಿಂದಲೇ ಸ್ಮಾರ್ಟ್ಫೋನ್ಗಳು ಅತ್ಯಂತ ಕಡಿಮೆ ದರದಲ್ಲಿ ಸಿಗಲು ಸಾಧ್ಯವಾಗಿದ್ದು. ಲಕ್ಷಾಂತರ ಅಪ್ಲಿಕೇಶನ್ಗಳು ಬರಲು ಅನುಕೂಲವಾಗಿದ್ದು. ಇಲ್ಲವಾದಲ್ಲಿ ಸಾಫ್ಟ್ವೇರ್ಗೆ ಒಂದಷ್ಟು ಹಣ, ಹಾರ್ಡ್ವೇರ್ ವೆಚ್ಚ ಸೇರಿ ಕಡಿಮೆ ದರದ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಗೆ ಬರುವುದೇ ಸಾಧ್ಯವಿರಲಿಲ್ಲ. ಆ್ಯಂಡ್ರಾಯ್ಡ್ ಫ್ರೀ ಎಂಬ ಕಾರಣಕ್ಕೆ ಇಂದು 3 ಸಾವಿರದಿಂದ 50 ಸಾವಿರದವರೆಗೂ ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಹೊಂದಿರುವ ಮೊಬೈಲ್ಗಳಿವೆ. ಗಾತ್ರ, ಗುಣಮಟ್ಟ, ರ್ಯಾಮ್, ಕಡಿಮೆ ದರ, ದುಬಾರಿ ದರ, ಹೊಸ ಹೊಸ ಸೆನ್ಸರ್ಗಳನ್ನು ಹೊಂದಿದ, ಬೇರೇಬೇರೆ ಕಂಪನಿಗಳ ಹೀಗೆ ಎಲ್ಲ ಬಗೆಯ ಆಯ್ಕೆಗಳು ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಹೊಂದಿದ ಮೊಬೈಲ್ಗಳಲ್ಲಿ ಲಭ್ಯ. ಆರಂಭದಲ್ಲಿ ಫ್ರೀ ಎಂಬುದೊಂದೇ ಆ್ಯಂಡ್ರಾಯ್ಡ್ನ ಪ್ಲಸ್ ಪಾಯಿಂಟ್ ಆಗಿತ್ತು. ಆದರೆ ಈಗ ಐಒಎಸ್ಗೆ ಕಮ್ಮಿ ಇಲ್ಲದಂತೆ ಆ್ಯಂಡ್ರಾಯ್ಡ್ ಬೆಳೆದಿದೆ. ಕೆಲವು ಸಂಗತಿಗಳಲ್ಲಿ ಐಒಎಸ್ ಮೀರಿಸಿದೆ ಅಂದರೂ ತಪ್ಪಿಲ್ಲ.
ಅದೇ ಬೇರೆ ಆಪರೇಟಿಂಗ್ ಸಿಸ್ಟಂಗಳಲ್ಲಿ ಈ ಪ್ರಮಾಣದ ಆಯ್ಕೆಯಿಲ್ಲ. ವಿಂಡೋಸ್ ಆಪರೇಟಿಂಗ್ ಸಿಸ್ಟಂನಲ್ಲಿ ಆಯ್ಕೆ ಇದೆಯಾದರೂ ಅದು ಬಳಕೆದಾರರ ಸ್ನೇಹಿಯಲ್ಲ. ಆದರೆ ಆ್ಯಂಡ್ರಾಯ್ಡ್ನಲ್ಲಿ ಮೊಬೈಲ್ ಬಳಕೆದಾರರು ಬಯಸಬಹುದಾದ ಎಲ್ಲ ರೀತಿಯ ಆಯ್ಕೆಗಳಿವೆ. ಬೇಕಾದ ಸ್ಕ್ರೀನ್, ಸ್ಕ್ರೀನ್ ಸೇವರ್, ಯಾವುದೇ ಚಿತ್ರವನ್ನು ಸ್ಕ್ರೀನ್ ಸೇವರ್ ಆಗಿ ಮಾಡಿಕೊಳ್ಳ ಬಹುದು, ಹೋಂ ಸ್ಕ್ರೀನ್ಗಳನ್ನು ನಮಗೆ
ಬೇಕಾದಂತೆ ರೂಪಿಸಿಕೊಳ್ಳಬಹುದು. ಪ್ರತಿ ಹೋಂ ಸ್ಕ್ರೀನ್ ಸ್ವೈಪ್ ಮಾಡಿದಾಗ ಇನ್ನೊಂದು ಹೋಂಸ್ಕ್ರೀನ್ ಮೊಬೈಲ್ನಲ್ಲಿ ಮೂಡುವಂತೆ ಮಾಡಿಕೊಳ್ಳಬಹುದು. ಬೇಕಾದ ರಿಂಗ್ಟೋನ್ ಹಾಕಿಕೊಳ್ಳಬಹುದು. ಇಷ್ಟೆಲ್ಲ ಸ್ವಾತಂತ್ರ್ಯ ಇರುವುದು ಆ್ಯಂಡ್ರಾಯ್ಡ್ ಫೋನ್ಗಳಲ್ಲಿ ಮಾತ್ರ.
ಇನ್ನೂ ಸರಳವಾಗಿ ಹೇಳಬೇಕೆಂದರೆ ಇತರೆ ಆಪರೇಟಿಂಗ್ ಸಿಸ್ಟಂಗಳು ತಾನು ಹೇಳಿದ್ದನ್ನೇ ಮಾಡುವ ಹೆಂಡತಿಯಿದ್ದಂತೆ. ಕೆಲವು ಸಂಗತಿಗಳಿಗೆ ನಾವು ಹೊಂದಿಕೊಳ್ಳಬೇಕು. ಆದರೆ ಆ್ಯಂಡ್ರಾಯ್ಡ್ ಅಂದರೆ ನಾವು ಹೇಳಿದಂತೆ ಕೇಳುವ ಹೆಂಡತಿ ಅಥವಾ ಗಂಡ ಇದ್ದಂತೆ. ಎಲ್ಲರಿಗೂ ಇಷ್ಟವಾಗುವುದು ನಾವು ಹೇಳಿದಂತೆ ಕೇಳುವ ಹೆಂಡತಿ ಅಥವಾ ಗಂಡನೇ ಎಂಬುದಕ್ಕೆ ಆ್ಯಂಡ್ರಾಯ್ಡ್ ಜನಪ್ರಿಯತೆಯೇ ಸಾಕ್ಷಿ!
ಇದರ ಜತೆಗೆ ಆ್ಯಂಡ್ರಾಯ್ಡ್ ಸಾಫ್ಟ್ವೇರ್ ಮೊಬೈಲನ್ನೂ ಮೀರಿ ವ್ಯಾಪಿಸುತ್ತಿದೆ. ಗ್ಯಾಲಕ್ಸಿ ಕ್ಯಾಮರಾದಲ್ಲಿ ಈಗಾಗಲೇ ಆ್ಯಂಡ್ರಾಯ್ಡ್ ಕೆಲಸ ಮಾಡುತ್ತಿದೆ. ಸ್ಯಾಮಸಂಗ್ ಕಂಪನಿ ಆ್ಯಂಡ್ರಾಯ್ಡ್ ಹೊಂದಿರುವ ಫ್ರಿಡ್ಜ್ ತಯಾರಿಸಿದೆ. ಗೇಮ್, ಕನ್ಸೋಲ್, ಆ್ಯಂಡ್ರಾಯ್ಡ್ ಟಿವಿ ಎಂಬ ಸಾಧನಗಳಲ್ಲೂ ತನ್ನ ಕರಾಮತ್ತು ತೋರಿದೆ. ಇನ್ನು ಮುಂದೆ ನಿಮ್ಮ ಟಿವಿ ಕೂಡ ಆ್ಯಂಡ್ರಾಯ್ಡ್ ಸಾಫ್ಟ್ವೇರ್ ತುಂಬಿಕೊಂಡೇ ಬಂದರೂ ಅಚ್ಚರಿಯಿಲ್ಲ.
ಮಾಡಲು ಹೊರಟಿದ್ದು ಕ್ಯಾಮೆರಾ ಸಾಫ್ಟ್ವೇರ್!
ವಿಚಿತ್ರ ಆದರೂ ಸತ್ಯ. ಆ್ಯಂಡ್ರಾಯ್ಡ್ ಸಾಫ್ಟ್ವೇರ್ ತಯಾರಿಸಿದವರು ಮೂಲತಃ ಮಾಡಲು ಆರಂಭಿಸಿದ್ದು ಕ್ಯಾಮೆರಾ ಸಾಫ್ಟ್ವೇರ್! 2003ರಲ್ಲಿ ಆ್ಯಂಡಿ ರುಬಿನ್ (ಡೇಂಜರ್ ಕಂಪನಿಯ ಸಹ ಸ್ಥಾಪಕ), ರಿಚ್ ಮೈನರ್ (ವೈಲ್ಡ್ಫೈರ್ ಕಮ್ಯುನಿಕೇಷನ್ಸ್ ಸಹ ಸ್ಥಾಪಕ), ನಿಕ್ ಸೀರ್ (ಟಿ-ಮೊಬೈಲ್ ಮಾಜಿ ಉಪಾಧ್ಯಕ್ಷ), ಕ್ರಿಸ್ ವೈಟ್ (ವೆಬ್ ಟಿವಿ ಕಂಪನಿಯಲ್ಲಿ ಡಿಸೈನ್ ಮತ್ತು ಇಂಟರ್ಫೇಸ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದ) ಸೇರಿ ಆ್ಯಂಡ್ರಾಯ್ಡ್ ಐಎನ್ಸಿ ಸ್ಥಾಪಿಸಿದರು. ಅವರು ಕಂಪನಿ ಸ್ಥಾಪಿಸಿದಾಗ ಅವರ ಮೂಲ ಉದ್ದೇಶ ಇದ್ದಿದ್ದು ಕ್ಯಾಮೆರಾಗಳಿಗೆ ಆಧುನಿಕ ಸಾಫ್ಟ್ವೇರ್ ಒಂದನ್ನು ಸಿದ್ಧಪಡಿಸಬೇಕು ಎಂದು.
ಆದರೆ ಕೆಲಸ ಆರಂಭಿಸಿದ ನಂತರ ಕ್ಯಾಮೆರಾ ಮಾರುಕಟ್ಟೆ ಅತ್ಯಂತ ಸೀಮಿತವಾದದ್ದು ಎಂಬುದು ಅವರ ಅರಿವಿಗೆ ಬಂತು. ಆಗ ಅವರು ಮೊಬೈಲ್ ಆಪರೇಟಿಂಗ್ ಸಿಸ್ಟಂ ಬಗ್ಗೆ ಗಮನ ಕೇಂದ್ರೀಕರಿಸಿದರು. ಆದರೆ ರುಬಿನ್ಗೆ ಹಣದ ಕೊರತೆ ಎದುರಾಯಿತು. ಆಗ ರುಬಿನ್ ಗೆಳೆಯ ಸ್ಟೀವ್ ಪರ್ಲ್ಮೆನ್ ಎಂಬಾತ 10 ಸಾವಿರ ಡಾಲರ್ಗಳನ್ನು ಸಹಾಯ ರೂಪದಲ್ಲಿ ನೀಡಿದ. ಆದರೆ ಕಂಪನಿಯಲ್ಲಿ ಪಾಲುದಾರಿಕೆ ಪಡೆಯಲು ನಿರಾಕರಿಸಿದ. ಇಷ್ಟೆಲ್ಲ ಆದರೂ ಆ್ಯಂಡ್ರಾಯ್ಡ್ ಕಂಪನಿ ಮೊಬೈಲ್ ಸಾಫ್ಟ್ವೇರ್ ಸಿದ್ಧಪಡಿಸುತ್ತಿದೆ ಎಂಬುದಷ್ಟೇ ಗೊತ್ತಿತ್ತು. 2005ರ ಆಗಸ್ಟ್ 17ರಂದು ಗೂಗಲ್ ಕಂಪನಿ ಆ್ಯಂಡ್ರಾಯ್ಡ್ ಕಂಪನಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಕಂಪನಿ ಸ್ಥಾಪಕರೆಲ್ಲ ಗೂಗಲ್ ಅಧೀನದಲ್ಲಿ ಅದೇ ಕಂಪನಿಯಲ್ಲಿ ಮುಂದುವರಿದರು. ಅಲ್ಲಿಯವರೆಗೆ ಆ್ಯಂಡ್ರಾಯ್ಡ್ ಎಂದರೇನು ಎಂಬುದು ಯಾರಿಗೂ ಗೊತ್ತಿರಲಿಲ್ಲ.
ಆದರೆ ಆ್ಯಂಡ್ರಾಯ್ಡ್ ಖರೀದಿ ಮಾಡಿದ ನಂತರ ಗೂಗಲ್ ಕಂಪನಿ ಅತ್ಯಂತ ಚುರುಕಾಗಿ ಕೆಲಸ ಮಾಡಿತು. ಮೊಬೈಲ್ ಹ್ಯಾಂಡ್ಸೆಟ್ ತಯಾರಕರನ್ನು ಸಂಪರ್ಕಿಸಿ, ತುಂಬ ಅನುಕೂಲವಾಗಿರುವ, ಕಡಿಮೆ ದರದ ಅಥವಾ ಉಚಿತವಾದ ಆಪರೇಟಿಂಗ್ ಸಿಸ್ಟಂ ನೀಡುವ ಭರವಸೆ ನೀಡಿ, ಅವರ ಸಹಕಾರ ಕೇಳಿತು. ಅದೇ ರೀತಿ ಹಲವು ಹಾರ್ಡ್ವೇರ್ ತಯಾರಿ ಕಂಪನಿಗಳನ್ನು ಕೂಡ ಜತೆಗೆ ಸೇರಿಸಿಕೊಂಡಿತು. ಇದು ಆ್ಯಂಡ್ರಾಯ್ಡ್ ಬೆಳವಣಿಗೆಗೆ ವೇಗ ನೀಡಿತು. ಈ ಮೂಲಕ ಆ್ಯಪಲ್ಗೆ ಪೈಪೋಟಿ ನೀಡುವುದು ಗೂಗಲ್ ಕಂಪನಿಯ ಉದ್ದೇಶವಾಗಿತ್ತು.
2007ರ ನವೆಂಬರ್ 5ರಂದು ಗೂಗಲ್ ಕಂಪನಿ ನೇತೃತ್ವದಲ್ಲಿ ಮೊಬೈಲ್ ತಯಾರಕರಾದ ಸೋನಿ, ಸ್ಯಾಮ್ಸಂಗ್, ಎಚ್ಟಿಸಿ, ಹಾರ್ಡ್ವೇರ್ ಕಂಪನಿಗಳಾದ ಕ್ವಾಲ್ಲಕಾಂ, ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಮುಂತಾದ ಕಂಪನಿಗಳು ಒಟ್ಟು ಸೇರಿ ಓಪನ್ ಹ್ಯಾಂಡ್ಸೆಟ್ ಅಲಯನ್ಸ್ ಸ್ಥಾಪಿಸಿದವು. ಆ ಸಭೆಯಲ್ಲಿ ಗೂಗಲ್ ಕಂಪನಿ ಆ್ಯಂಡ್ರಾಯ್ಡ್ ಪ್ರದರ್ಶಿಸಿತು. ಅವತ್ತೇ ಆ್ಯಂಡ್ರಾಯ್ಡ್ ಅಧಿಕೃತವಾಗಿ ಜನ್ಮ ತಾಳಿತು.
ಮೊದಲ ಮೊಬೈಲ್ ಎಚ್ಟಿಸಿ ಡ್ರೀಮ್
ಆ್ಯಪಲ್ ಕಂಪನಿಗೆ ಸೆಡ್ಡು ಹೊಡೆಯುವುದು ಆಗ ದೊಡ್ಡ ಕನಸಾಗಿತ್ತು. ಅದೇ ಅರ್ಥದಲ್ಲಿ ಎಚ್ಟಿಸಿ ಡ್ರೀಮ್ ಎಂಬ ಮೊಬೈಲನ್ನು 2008ರ ಅಕ್ಟೋಬರ್ 22ರಂದು ಬಿಡುಗಡೆ ಮಾಡಲಾಯಿತು. ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಹೊಂದಿದ ಅಧಿಕೃತ ಮೊದಲ ಮೊಬೈಲ್ ಇದು. ಅದಕ್ಕೂ ಮೊದಲು 'ಸೂನರ್' ಎಂಬ ಮೊಬೈಲನ್ನು ಸಿದ್ಧಪಡಿಸಲಾಗಿತ್ತಾದರೂ ಅದರಲ್ಲಿ ಟಚ್ಸ್ಕ್ರೀನ್ ಬದಲು ಕೀಬೋರ್ಡ್ ಇತ್ತು. ನಂತರ ಅದನ್ನು ಟಚ್ಸ್ಕ್ರೀನ್ಗೆ ಅಪ್ಗ್ರೇಡ್ ಮಾಡಲಾಯಿತಾದರೂ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿರಲಿಲ್ಲ.
ಬಾಯಲ್ಲಿ ನೀರೂರಿಸೋ ಹೆಸರುಗಳು
ಆ್ಯಂಡ್ರಾಯ್ಡ್ನ ಇನ್ನೊಂದು ವಿಶೇಷವೆಂದರೆ ಅವುಗಳ ಹೆಸರು ಸಾಮಾನ್ಯ ಜನರ ಬಾಯಲ್ಲೂ ನೀರೂರಿಸುತ್ತವೆ. ಈವರೆಗೆ ಸಾಫ್ಟ್ವೇರ್ಗಳಿಗೆ ಇಂತಹ ಹೆಸರು ನೀಡುವ ಪದ್ಧತಿಯೇ ಇರಲಿಲ್ಲ. ಆದರೆ ಆ್ಯಂಡ್ರಾಯ್ಡ್ ಸಾಫ್ಟ್ವೇರ್ಗಳಿಗೆ ಒಂದೊಂದು ವರ್ಶನ್ಗಳಿಗೂ ಒಂದೊಂದು ಪ್ರಸಿದ್ಧ ತಿಂಡಿಯ ಹೆಸರು ನೀಡಲಾಗಿದೆ.
ಸಾರ್ವಜನಿಕವಾಗಿ ಸ್ವಲ್ಪ ಪರಿಚಿತ ಆರಂಭದ ಸಾಫ್ಟ್ವೇರ್ ಫ್ರೊಯೊದಿಂದ (ಯೋಗರ್ಟ್ನಿಂದ (ಗಟ್ಟಿಯಾದ ಮೊಸರು) ತಯಾರಿಸಿದ್ದು) ಆರಂಭಿಸಿ, ಕಿಟ್ಕ್ಯಾಟ್ ತನಕ ಎಲ್ಲವೂ ತಿಂಡಿಯ ಹೆಸರೇ. ಫ್ರೊಯೊ ನಂತರ ಬಂದಿದ್ದು ಜಿಂಜರ್ಬ್ರೆಡ್, ಐಸ್ಕ್ರೀಂ ಸ್ಯಾಂಡ್ವಿಚ್, ಜೆಲ್ಲಿಬೀನ್. ಇವೆಲ್ಲವೂ ಪ್ರಸಿದ್ಧ ತಿನಿಸುಗಳೇ. ಮುಂದೆ ಬರಲಿರುವುದು ಕೂಡ. ಫ್ರೊಯೊಗಿಂತ ಮೊದಲು ಆ್ಯಸ್ಟ್ರೊ, ಬೆಂಡರ್, ಕಪ್ ಕೇಕ್, ಡುನಟ್, ಅದರ ನಂತರ ಬಂದಿದ್ದು ಫ್ರೊಯೊ. ಇಂಗ್ಲಿಷ್ ಅಕ್ಷರ ಮಾಲೆ ಸರದಿಯಲ್ಲೇ ಇವೆ.
ಎಪಿಪಿಗಳ ಜಾತ್ರೆ
ಆ್ಯಂಡ್ರಾಯ್ಡ್ ಮಾರುಕಟ್ಟೆಯಲ್ಲಿ ಅಪ್ಲಿಕೇಶನ್ಗಳ ಜಾತ್ರೆಯೇ ನೆರೆದಿದೆ. ನಿಮ್ಮ ವ್ಯಾಯಾಮದಿಂದ ಆರಂಭಿಸಿ, ನಿದ್ರೆಯವರೆಗೆ ನೀವು ಏನೇನು ಮಾಡುತ್ತಿರೋ, ಮಾಡುವುದಿಲ್ಲವೋ, ಮಾಡಬೇಕು ಅಂದುಕೊಳ್ಳಬಹುದೋ ಅದಕ್ಕೆಲ್ಲ ಕನಿಷ್ಠ 10 ಅಪ್ಲಿಕೇಶನ್ಗಳಿವೆ. ಆ್ಯಂಡ್ರಾಯ್ಡ್ನಲ್ಲಿ ಇಷ್ಟೆಲ್ಲ ಅಪ್ಲಿಕೇಶನ್ಗಳಿರಲೂ ಕೂಡ ಆ್ಯಂಡ್ರಾಯ್ಡ್ನ ಓಪನ್ನೆಸ್ ಕಾರಣ. ಉಳಿದ ಆಪರೇಟಿಂಗ್ ಸಿಸ್ಟಂಗಳಿಗೆ ಅಪ್ಲಿಕೇಶನ್ಗಳನ್ನು ನಿರ್ಮಿಸಬೇಕೆಂದರೆ ಅವುಗಳ ಸೋರ್ಸ್ಕೋಡ್ ಸೇರಿದಂತೆ ಹಲವು ತಾಂತ್ರಿಕ ಮಾಹಿತಿ ಪಡೆಯಬೇಕು. ಆದರೆ ಆ್ಯಂಡ್ರಾಯ್ಡ್ನಲ್ಲಿ ಈ ಮಾಹಿತಿಗಳು ಉಚಿತವಾಗಿ ಮತ್ತು ತ್ವರಿತವಾಗಿ ದೊರೆಯುತ್ತವೆ. ಇದರಿಂದಾಗಿಯೇ ಆ್ಯಂಡ್ರಾಯ್ಡ್ನಲ್ಲಿ ಅಪ್ಲಿಕೇಶನ್ಗಳ ಜಾತ್ರೆಯೇ ನೆರೆದಿದೆ. ಅಪ್ಲಿಕೇಶನ್ಗಳಷ್ಟನ್ನೇ ನೋಡಲೂ 15-20 ದಿನವಾದರೂ ಬೇಕಾದೀತು.
-ವಿನಾಯಕ ಭಟ್ಟ ಮೂರೂರು
vakradanta@gmail.com