ಸೈತಾನನ ವಂಚನೆ ನಡೆಯಲಿಲ್ಲ

Updated on: 

ನಾನು 2009ರ ಏಪ್ರಿಲ್‌ನಲ್ಲಿ ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆದ ಶ್ರೀ ಶಿವಕುಮಾರ ಸ್ವಾಮಿಗಳ 102ನೇ ಜನ್ಮದಿನಾಚರಣೆಯಲ್ಲಿ ಭಾಗವಹಿಸಿದೆ. ಸಮಾರಂಭದ ಕೊನೆಯಲ್ಲಿ ಸ್ವಾಮಿಗಳು 15 ನಿಮಿಷಗಳ ಆಶು ಭಾಷಣವೊಂದನ್ನು ಮಾಡಿ ಭಕ್ತಾದಿಗಳನ್ನು ಆಶೀರ್ವದಿಸಿದರು. ಅವರು ಜನತೆಗೆ ಕೊಟ್ಟ ಸಂದೇಶದ ಸಾರಾಂಶ ಹೀಗಿತ್ತು: 'ನನ್ನ ನೂರು ವರುಷಗಳ ಅನುಭವದಿಂದ ಹೇಳುವುದಾದರೆ ಸುಖ ಸಂತೋಷಗಳಿಂದಲೂ ನೆಮ್ಮದಿಯಿಂದಲೂ ಬಾಳುವ ಸಮಾಜವನ್ನು ಕಟ್ಟುವ ನಿಮಿತ್ತ ಪ್ರತಿಯೊಬ್ಬನೂ ಎರಡು ಗುಣಗಳನ್ನು ರೂಢಿಸಿಕೊಳ್ಳಬೇಕು. ಒಂದು ಬುದ್ಧಿಮತ್ತೆ ಹಾಗೂ ಇನ್ನೊಂದು ಮಾನವೀಯ ಅನುಕಂಪ. ಮಕ್ಕಳನ್ನು ಸದ್ಗುಣಿಗಳನ್ನಾಗಿಯೂ ಸಾಮರ್ಥ್ಯವಂತರನ್ನಾಗಿಯೂ ಬೆಳೆಸುವ ಪೋಷಕರಿಂದ, ಉತ್ತಮ ಶಿಕ್ಷಕರಿಂದ, ಉತ್ತಮ ಪುಸ್ತಕಗಳಿಂದ ಹಾಗೂ ಉತ್ತಮರ ಸಹವಾಸದಿಂದ ಈ ಗುಣಗಳು ಪ್ರಾಪ್ತವಾಗುತ್ತವೆ. ಇವುಗಳೆಲ್ಲ ಸಮರ್ಪಕವಾದ ವಯಸ್ಸಿನಲ್ಲಿ ಸಿಗದೇ ಹೋದರೆ ಮನುಷ್ಯರು ಸೈತಾನರಾಗಿ ಬದಲಾಗಬಹುದು. ಅದರಲ್ಲೂ ವಿಶೇಷವಾಗಿ ಮಾನವತೆ ಇಲ್ಲದ ಬುದ್ಧಿವಂತನೊಬ್ಬನು ಕಾರ್ಯೋನ್ಮುಖನಾದಾಗ ಇದು ಇನ್ನೂ ಹೆಚ್ಚು'. ಈ ಸಂದೇಶವನ್ನು ನಾವು ತೆಗೆದುಕೊಂಡು, ದೇಶದ ಯುವ ಜನಾಂಗದಲ್ಲಿ ಈ ಗುಣಗಳನ್ನು ತುಂಬಬೇಕು.
ಉತ್ತಮ ಮನುಷ್ಯರು ಎಂದಾಗ ನನಗೆ ಇಮಾಂ ಘಜಲಿ ಅವರ ಈ ಕಥೆ ನೆನನಾಗುತ್ತದೆ.
ಇಮಾಂ ಘಜಲಿಯವರು 12ನೇ ಶತಮಾನದಲ್ಲಿ ಜೀವಿಸಿದ್ದ ಒಬ್ಬ ಸಂತ. ಹಾಗೂ ಬೋಧಕ. ಈ ಕಥೆ ನನ್ನ ತಂದೆಯವರು ನನಗೆ ಹೇಳಿದ್ದು. ಸೈತಾನನು ಒಮ್ಮೆ ಇಮಾಂ ಘಜಲಿಯನ್ನು ಪರೀಕ್ಷೆ ಮಾಡಲು ಬಂದ. ಇಮಾಂ ಘಜಲಿಯವರು ಒಂದು ದಿನ ಮಘ್ರಿಬ್ ಪ್ರಾರ್ಥನೆಗಾಗಿ ಚಾಪೆಯನ್ನು ಬಿಚ್ಚುತ್ತಿರುವಾಗ ಸೈತಾನನು ಮುಂದೆ ಬಂದು ಹೀಗೆ ಹೇಳಿದ: 'ಗೌರವಾನ್ವಿತರಾದ ಇಮಾಂ ಸಾಹೇಬರೇ, ನಾನು ಈಗ ನೇರವಾಗಿ ಸ್ವರ್ಗದಿಂದ ಬಂದಿದ್ದೇನೆ. ಅಲ್ಲಿ ಭೂಲೋಕದಲ್ಲಿನ ಮಹಾನ್ ವ್ಯಕ್ತಿಗಳು ಯಾರೆಲ್ಲ ಎಂದು ಚರ್ಚೆಯಾಯಿತು. ಭೂಲೋಕದಲ್ಲಿ ನೀವೇ ಅತ್ಯಂತ ಶ್ರೇಷ್ಠ ಮಾನವರೆಂದು ತೀರ್ಮಾನವಾಗಿದೆ. ನಿಮ್ಮ ಈ ಮಹಾನ್ ಸ್ಥಾನ ಮಾನವನ್ನು ಪರಿಗಣಿಸಿ ನೀವು ಇನ್ನು ಮುಂದೆ ನಮಾಜ್ ಮಾಡುವ ತೊಂದರೆಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲವೆಂದು ತೀರ್ಮಾನಿಸಲಾಗಿದೆ.'
ನಮಾಜಿನ ಸಮಯ ಹತ್ತಿರವಾಗುತ್ತಿದ್ದುದರಿಂದ ಇಮಾಂ ಘಜಲಿಯವರು ಚಡಪಡಿಸುತ್ತಿದ್ದರು. ಅವರು ಸೈತಾನನತ್ತ ತಿರುಗಿ ಹೀಗೆಂದರು: 'ಸೈತಾನ್ ಸಾಹೇಬರೇ, ಅಷ್ಟಕ್ಕೂ ನಮಾಜು ಮಾಡುವುದು ನನಗೆ ತೊಂದರೆಯ ವಿಷಯವೇ ಅಲ್ಲ. ದಿವಸದಲ್ಲಿ ಐದು ಸರ್ತಿ ನಮಾಜು ಮಾಡುವುದರಿಂದ ಪ್ರವಾದಿ ಮಹಮ್ಮದರಿಗೆ ಸಹಾ ವಿನಾಯಿತಿ ಇರಲಿಲ್ಲ. ಆದ್ದರಿಂದ ಬಡ ಇಮಾಮನಾದ ನನಗೆ ಅದರಿಂದ ವಿನಾಯಿತಿ ಸಿಗಲು ಹೇಗೆ ಸಾಧ್ಯ?' ಹೀಗೆ ಹೇಳುತ್ತ ಇಮಾಂ ನಮಾಜ್ ಆರಂಭಿಸಿದರು. ನಮಾಜ್ ಮುಗಿದ ಮೇಲೆಯೂ ಸೈತಾನ ಅಲ್ಲೇ ನಿಂತಿದ್ದುದನ್ನು ನೋಡಿ ಇಮಾಂ ಘಜಲಿಯವರು 'ನೀವಿನ್ನೂ ಯಾಕೆ ನಿಂತಿದ್ದೀರಿ?' ಎಂದು ಕೇಳಿದರು.
ಅದಕ್ಕೆ ಸೈತಾನನು, 'ಓ ಇಮಾಮರೇ, ನೀವು ದೇವರಿಗೆ ಅತ್ಯಂತ ಪ್ರೀತಿಯ ಪ್ರವಾದಿಯಾದ ಆದಮರನ್ನೂ ಸಹ ಮೀರಿಸಿದ್ದೀರಿ. ನನ್ನ ಮೋಸವನ್ನು ಅರಿಯಲು ಆದಮರಿಂದ ಆಗಲಿಲ್ಲ. ಅವರು ನಿಷಿದ್ಧ ಫಲವನ್ನು ಸೇವಿಸುವಂತೆ ನಾನು ಮಾಡಿದೆ' ಎಂದ. ಸೈತಾನನು ತನ್ನನ್ನು ಹೊಗಳುತ್ತಿರುವುದನ್ನು ತಿಳಿದು ಇಮಾಂ ಘಜಲಿಯವರು ಅಲ್ಲಾಹುವನ್ನು ಕುರಿತು ಹೀಗೆ ಪ್ರಾರ್ಥಿಸಿದರು: 'ಓ ಸರ್ವಶಕ್ತನೇ, ನನಗೆ ಸಹಾಯ ಮಾಡು. ಪ್ರಶಂಸೆಯೆಂಬ ಮೋಸದ ಬಲೆಯಿಂದ ನನ್ನನ್ನು ಪಾರು ಮಾಡು.' ಸೈತಾನನು ತನ್ನ ಕೆಲಸವೇನೂ ಸಾಗದೆ ನಿರಾಸೆಯಿಂದ ಕಣ್ಮರೆಯಾದ.
ಕೃತಿ: ಕಲಾಂ ಅವರ ಕನಸು- ಸಂಪನ್ನ ಭಾರತ ಸಮೃದ್ಧ ಭಾರತ
ಕನ್ನಡಕ್ಕೆ: ಜಿ.ಕೆ.ಮಧ್ಯಸ್ಥ
ಪುಟ: 164, ಬೆಲೆ: 140
ಪ್ರ: ವಸಂತ ಪ್ರಕಾಶನ,
ನಂ.360, 10ನೇ ಬಿ ಮುಖ್ಯರಸ್ತೆ,
ಜಯನಗರ, ಬೆಂಗಳೂರು-11
-ಡಾ.ಎಪಿಜೆ ಅಬ್ದುಲ್ ಕಲಾಂ ಅಜಾದ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com