

ದಕ್ಷಿಣ ಭಾರತದಲ್ಲಿ ವೀರಪ್ಪನ್ ಭಯದ ನೆರಳು ಸೃಷ್ಟಿಸಿದರೆ, ಉತ್ತರ ಭಾರತದಲ್ಲಿ ಡಕಾಯಿತೆ ಫೂಲನ್ದೇವಿ ಆ ಹೊಣೆ ಹೊತ್ತಳು. ರಕ್ಷಣಾ ಪಡೆಗಳನ್ನು ಎದುರುಹಾಕಿಕೊಂಡು ಮಹಿಳೆಯೊಬ್ಬಳು 'ವಿಲನ್' ಆಗಿ ವರ್ತಿಸಿದ್ದೂ ದೇಶಕ್ಕೆ ಮೊದಲ ಉದಾಹರಣೆ. ಪಾಪದ ಹೂವುಗಳು ರಾಜಕೀಯದಲ್ಲಿ ಸಲ್ಲುತ್ತವೆ ಎಂಬುದಕ್ಕೂ ಫೂಲನ್ದೇವಿ ಕೂಡ ಒಂದು ಉದಾಹರಣೆ. ಫೂಲನ್ ಅನುಭವಿಸಿದ ದೈಹಿಕ ಹಿಂಸೆಗಳು, ಸಾಮೂಹಿಕ ಅತ್ಯಾಚಾರಗಳು, ನಿಂದನೆಗಳು, ಹಸಿವು ಹಾಹಾಕಾರಗಳು ಎಲ್ಲವೂ ಘೋರ. ನಿಜ. ಹಾಗಂತ ಆಕೆ ಮಾಡಿದ ಕೊಲೆಗಳು ಸುಲಿಗೆಗಳು ಪ್ರತಿಕಾರಗಳು ಅವಕ್ಕೆ ಸಮರ್ಥನೆ ಆಗಲಾರವು. ತಪ್ಪೊಪ್ಪಿಕೊಂಡು ಶರಣಾದಳೆಂದ ಮಾತ್ರಕ್ಕೆ ಆಕೆ ರಾಜಕೀಯ ನಾಯಕಿಯಾಗಲು ಅರ್ಹಳಾಗಲಾರಳು. ಆದರೆ ಅವೆಲ್ಲವೂ ಭಾರತದಲ್ಲಿ ಸಾಧ್ಯ. ಫೂಲನ್ಳ ಪೂರ್ವವೃತ್ತಾಂತದ ಬಗೆಗಿನ ಭಾವನಾತ್ಮಕ ದೃಷ್ಟಿಕೋನದ ಕತೆಗಳು ಆಕೆಯನ್ನು ಹೀರೋಯಿನ್ನಾಗಿಸಿದ್ದು ಹೌದು. ಅದೇ ಕಾರಣಕ್ಕೆ ಆಕೆ ಸಂಸದೆಯೂ ಆಗಿ ಬಿಟ್ಟಳು.
ಕುಖ್ಯಾತರ ಬಗೆಗಿನ ಚಿತ್ರಗಳಲ್ಲಿ ಆಗುವ ಅವರ ವೈಭವೀಕರಣಗಳು, ಅವರು ತಮ್ಮ ಜೀವನದ ಪ್ರಥಮಾರ್ಧದಲ್ಲಿ ಅನುಭವಿಸಿದ ಕೋಟಲೆಗಳೇ ಅವರು ದುಷ್ಟಶಕ್ತಿಯಾಗಲು ಕಾರಣ ಎಂದು ಬಿಂಬಿಸುವಿಕೆ ಜನರನ್ನು ಸಾಕಷ್ಟು ತಪ್ಪು ತಿಳಿವಳಿಕೆಗಳಿಗೆ ಎಡೆಮಾಡಿಕೊಟ್ಟಿದೆ.
ಕಳೆದ ಶತಮಾನದ ಅಂತ್ಯಕ್ಕೆ ಬಂದಿದ್ದ 'ಬ್ಯಾಂಡಿಟ್ಕ್ವೀನ್' ಚಿತ್ರದಲ್ಲಿ ಆದದ್ದೂ ಹೀಗೆಯೇ. ಫೂಲನ್ ಎಂಬ ಉತ್ತರ ರಾಜ್ಯದ ಎಂಬ ಅಮಾಯಕ ಹೆಣ್ಣುಮಗಳು ಬಡತನದ ಬೇಗೆಯಿಂದ ಕುಟುಂಬದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿ, ಪ್ರಾಪ್ತೆಯಾದಾಗ ಮೇಲ್ಸಮಾಜದ ತುಳಿತಕ್ಕೆ, ದೈಹಿಕ ಅತ್ಯಾಚಾರಕ್ಕೆ ಒಳಗಾಗಿ, ನ್ಯಾಯ ಕೇಳಲು ಹೋಗಿ ಪೊಲೀಸರಿಂದಲೂ ಶೋಷಿಸಲ್ಪಟ್ಟು, ಸತತ ಹತ್ತು ವರ್ಷಗಳ ಹಿಂಸೆಗೆ 'ಇನ್ನಾಗದು' ಎಂದು ತಿರುಗಿ ಬಿದ್ದು ಇಡೀ ಸಮಾಜದ ವಿರುದ್ಧ ಸೇಡು ತೀರಿಸಿಕೊಳ್ಳುವ ಜೀವನಗಾಥೆ, ಆಕೆ ಚಂಬಲ್ ಕಣಿವೆಯ ಡಕಾಯಿತೆಯಾಗುವುದಕ್ಕೆ ಸಮರ್ಥನೆ ನೀಡುತ್ತದೆ. ಅಂತಿಮವಾಗಿ ಆಕೆ ಸರ್ಕಾರಕ್ಕೆ ಶರಣಾಗುತ್ತಾಳೆ. ಆಕೆಯ ತಪ್ಪುಗಳನ್ನೆಲ್ಲ ಸರ್ಕಾರ ಮನ್ನಾ ಮಾಡಿ ಸಮಾಜಮುಖಿಯಾಗಿ ಬದುಕಲು ಅವಕಾಶ ಮಾಡಿಕೊಡುತ್ತದೆ.
ಪ್ರಸ್ತುತ ತೆರೆಗೆ ಬರಲು ರೆಡಿಯಿರುವ 'ಗುಲಾಬ್ ಗ್ಯಾಂಗ್' ಚಿತ್ರ ಕೂಡ ಇದೇ ಥರದ ಶೋಷಿತ ಮಹಿಳೆಯರು ಕಾನೂನು ಕೈಗೆತ್ತಿಕೊಳ್ಳುವ ವಿಷಯವನ್ನೇ ಹೊಂದಿದ್ದು, ಮಹಿಳೆಯರನ್ನು ಭಾವನಾತ್ಮಕವಾಗಿ ಸೆಳೆಯುವುದರಲ್ಲಿ ಅನುಮಾನವಿಲ್ಲ. ಆದರೆ ಸತ್ಯಗಳು ಅರ್ಧಸತ್ಯಗಳಾಗಿ ಉಳಿದು ಹೋಗುವುದರಿಂದ ಸಮಾಜದ ಮೇಲೆ ಇಂಥ 'ನೈಜ ಘಟನೆಯಾಧಾರಿತ' ಎಂದು ಬರುವ ಸಿನಿಮಾಗಳು ವ್ಯತಿರಿಕ್ತ ಪರಿಣಾಮ ಬೀರುವುದು ವಿಷಾದನೀಯ ಸಂಗತಿ.
-ನವೀನ್