ಖುಷಿ

ಸಂಬಂಧಪಟ್ಟವರಿಗೆ...!

ಸಂಬಂಧಪಟ್ಟವರಿಗೆ...!
Published On :

ಸಂಬಂಧಗಳು; ಅತ್ಯಪೂರ್ವ ಕಾವ್ಯರಸಧಾರೆಯ ಬೊಗಸೆಯಲ್ಲಿ ಮೊಗೆಮೊಗೆದು ಕುಸಿದ ಬಳಿಕ ದೊರೆಯುವ ಆಹ್ಲಾದಕರ ತೃಪ್ತಿಯ ಮೂಲಸೆಲೆ.
ಅದು ಹಾಗೆಯೇ, ನವಿರಾದಷ್ಟೂ ನವಿರಾಗಿ ಜೀವನವ ಮೀಟಿ ಮೀಟಿ ಉದ್ವೇಗಿಸುತ್ತದೆ. ಆ ಬಳಿಕದ ಉನ್ಮಾದ ಜೀವನೋತ್ಸಾಹವನ್ನು ಆಂತರ್ಯದಿಂದ ಪುಟಿಸುತ್ತವೆ. ಉಕ್ಕಿ ಬರುವ ಪ್ರೀತಿ ಸೆಲೆಯಲ್ಲಿನ ಸವಿಬುಗ್ಗೆಯಂತೆ ಬದುಕ ದಾಹವನ್ನೇ ತಣಿಸಿಬಿಡುತ್ತದೆ.
ಇಹದ ಈ ಪರಿಯ ಸಂಬಂಧಗಳಿಗೆ ಎಲ್ಲೆಯೆಂಬುದೇ ಇಲ್ಲ. ಎಲ್ಲ ಎಲ್ಲೆಗಳ ಮೀರಿ ದಿಗ್ದಿಗಂತಗಳನ್ನು ಬೆಸೆದು ಅದರಾಚೆಗೊಂದು ಇಣುಕು ಹಾಕುವಷ್ಟು ಭೀಮಬಲವನ್ನು ನಮಗರಿಯದೇ ತಂದಿಟ್ಟುಬಿಟ್ಟಿರುತ್ತವೆ. ಸಂಬಂಧಗಳ ಬೆಸುಗೆ ಆ ಕ್ಷಣದ ಸಂವೇದನೆಗಳ ಮೇಲೆ, ಮುಂದಿನ ಗುಣಧರ್ಮಗಳೆಲ್ಲವೂ ನಿರ್ಧರಿತ. ಜಗದ ಸಾರ ಸರ್ವಸ್ವಗಳೊಂದಿಗಿನ ನಂಟಿದು. ಸೃಷ್ಟಿಯ ಅತ್ಯಪೂರ್ವ ಕೊಡುಗೆಯಾಗಿ ಅದು ಮಾನವನಿಗೆ ದೊರೆತಿದೆ. ಆಧುನಿಕತೆಯ ಜಂಜಡದಲ್ಲಿ ಪತರಗುಟ್ಟಿ ಹೋಗಿರಬಹುದಾದ ವ್ಯಕ್ತಿ ತನ್ನ ಅಸ್ತಿತ್ವದ ಗುರುತಿಸಿಕೊಳ್ಳುವಿಕೆಗೆ ಹೆಣಗಾಡಬೇಕಾದದ್ದು ಅನಿವಾರ್ಯ. ಇಂಥದ್ದೊಂದು ಈ ಯುಗದ ಭೀಕರ ಸಮಸ್ಯೆಗೆ, ಪರಂಪರೆ ಆಧುನಿಕತೆಯ ನಡುವಿನ ಸಂಘರ್ಷಕ್ಕೆ ಮೀರಿ ನಿಂತ ಏಕೈಕ ಎಳೆಯಾಗಿ ಸಂಬಂಧಗಳು ಪ್ರಜ್ವಲಿಸುತ್ತವೆ; ಕತ್ತಲೆಯಲ್ಲಿ ಮಿನುಗುವ ಮಿಂಚುಹುಳುಗಳಂತೆ. ಘಾತ ಮನದ ಮೇಲೆ ತಣ್ಣನೆಯ ನೀರು ಸುರಿದಂತೆ ಸಂತೈಸಬಲ್ಲ ಶಕ್ತಿಯದು. ತೀರಾ ಜಟಿಲ, ಜಡ, ಸಂದಿಗ್ಧಗಳಲ್ಲೂ ಇಂಥದ್ದೊಂದು ಆತ್ಮೀಯತೆಯ ಸ್ಪರ್ಶಕ್ಕೆ ಮನ ಹಾತೊರೆದರೆ ಅದು ಜೀವಿ ಸಹಜ ಪ್ರವೃತ್ತಿ. ತನ್ನೊಳಗೆ ತನ್ನ ಕಂಡುಕೊಳ್ಳಲು ಬಯಸುವ ಪ್ರತಿಯೊಬ್ಬನೂ ಜಗದಗಲ ಹರವಿಕೊಂಡಿರಬಹುದಾದ ಸಂಬಂಧಗಳಿಗೆ ಸ್ವತಃ ತೆರೆದುಕೊಳ್ಳುತ್ತ ಹೋಗುತ್ತಾನೆ. ಅದರ ಇಂಚಿಂಚೂ ಸಿಹಿಕಹಿಗಳನ್ನು ಅನುಭವಿಸುತ್ತಾನೆ.
ಮಾನವೀಯ ಸವಿ ಸಂಬಂಧಗಳೆಂದರೆ ಮುಂಜಾವ ಸೂರ್ಯನ ಮೊದಲ ಕಿರಣಗಳಂತೆ. ಯಾವತ್ತೂ ಯಾರನ್ನೂ ದಹಿಸದು. ಆದರೆ ಎಲ್ಲಿ ಸಾಧ್ಯವೋ ಅಲ್ಲೆಲ್ಲ ತೂರಿಕೊಂಡುಬಿಡುತ್ತದೆ... ಕತ್ತಲೆಯೆಂಬೋ ರಹಸ್ಯಕ್ಕೆ ಸಂಬಂಧದ ಸೂರ್ಯೋದಯದ ಬಳಿಕ ಅಸ್ತಿತ್ವವೇ ಇಲ್ಲ. ಹೌದು, ಇಬ್ಬರ ನಡುವಿನ ಉತ್ಕಟ ಸಂಬಂಧದ ಸಂದರ್ಭಕ್ಕೆ ವೈಯಕ್ತಿಕವೆಂಬುದೇನೂ ಉಳಿಯುವುದೇ ಇಲ್ಲ. ಎಲ್ಲವೂ ನಗ್ನ, ಬೋಳು ಬೆತ್ತಲೆ. ಪ್ರೀತಿ ಪ್ರೇಮ, ಸ್ನೇಹ, ವಾತ್ಸಲ್ಯ, ಸೋದರತೆ, ಮಾನವೀಯತೆ ಅದೇನೆಂದಾದರೂ ಅಂದುಕೊಳ್ಳಿ. ಇದರ ಒಟ್ಟಾರೆ ಹೂರಣ ಮಧುರ, ಮಾರ್ದವ. ಅಸಲಿಗೆ ಸಂಬಂಧದ ಮಾರ್ದವತೆಯ ಉತ್ತುಂಗ ಕಂಡುಕೊಂಡವರು ಕೆಲವೇ ಕೆಲವರು.
ಆದರೆ ಆಧುನಿಕ ಸನ್ನಿವೇಶದಲ್ಲಿ 'ಸಂಬಂಧ'ವೆಂಬುದು ಕೇವಲ ಪದವಾಗಿ ಉಳಿದಿರುವುದು ದುರಂತ. ಹೆಚ್ಚೆಂದರೆ ಒಂದು ಸುಂದರ ಕಾವ್ಯದಲ್ಲಿ, ಸುಮಧುರ ಕಥೆಯಲ್ಲಿ, ಪ್ರಭಾವಶಾಲಿ ಪರ್ಸನಾಲಿಟಿ  ಡೆವಲಪ್ಮೆಂಟ್ ಭಾಷಣಗಳಲ್ಲಿ ಬಳಕೆ ಕಂಡಿರಬಹುದು. ವಾಸ್ತವದಲ್ಲಿ 'ಗಾಢ ಸಂಬಂಧಗಳ' ಸವಿಯನ್ನು ಅನುಭಾವವಾಗಿಸಿಕೊಳ್ಳಲು ನಾವು ನಿಜವಾಗಿ ವಿಫಲರಾಗಿದ್ದೇವೆ. ಬದುಕಿನ ದ್ವಂದ್ವ, ತೀರಾ ಸಂಕೀರ್ಣ ಮನೋಭಾವಗಳೇ ಇದಕ್ಕೆ ಕಾರಣವೆಂಬುದು ದಿಟ. ಹೀಗಾಗಿ ಅದೊಂದು ವ್ಯಾವಹಾರಿಕ ಪದ.
ದ್ವೇಷ, ಅಸೂಯೆ, ವೈಷಮ್ಯಗಳೇ ತಾಂಡವವಾಡುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಮತ್ತೊಮ್ಮೆ ಮಾನವೀಯ ಸಂಬಂಧಗಳಿಗೆ ಹೊಸ ವ್ಯಾಖ್ಯಾನ ಬರೆಯವ ಜರೂರತ್ತಿಗಾಗಿ ಇಲ್ಲಿದೆ ಒಂದಷ್ಟು 'ಸಂಬಂಧಿ'ಸಿದ ಕಿವಿಮಾತು.
=
ನೈಜ ಸಂಬೋಧನೆ ಕಂಡುಕೊಳ್ಳಿ
ಹುಡುಗ ಹುಡುಗಿ ಒಂದೇ ಬೈಕ್ನಲ್ಲಿ ಒಬ್ಬರಿಗೊಬ್ಬರು ಒತ್ತೊತ್ತಿ ಕುಳಿತು ಹೊರಟಾಗ, ದಿಢೀರನೆ ಎದುರಿಗೆ ಸಿಕ್ಕ ಪರಿಚಿತರಿಗೋ, ಸ್ನೇಹಿತರಿಗೋ 'ಕಸಿನ್' ಎಂದು ಪರಿಚಯಿಸಿ, ಆಕ್ಷಣ ಬಚಾವಾಗುವ ರೀತಿಯಲ್ಲೇ, ನಗರವಾಸಿ ಮಕ್ಕಳಿಗೆ ಸರ್ವತ್ರ 'ಅಂಕಲ್' 'ಆಂಟಿ'ಗಳಾಗಿರುವ ಹಾಗೆಯೇ ಸಂಬಂಧಗಳನ್ನು ಸಾರ್ವತ್ರಿಕ ಗೊಳಿಸಿಬಿಟ್ಟಿದ್ದೇವೆ. ಹಾಗಾಗಿಯೇ ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿನ ಅಜ್ಜ, ಮುತ್ತಜ್ಜಿ, ಅಣ್ಣ, ಅತ್ತಿಗೆ, ಮಾವ, ಚಿಕ್ಕಪ್ಪ, ದೊಡ್ಡಮ್ಮ, ಅತ್ತೆ, ಭಾವ, ಮೈದುನ, ಸೋದರ ಸಂಬಂಧಗಳು... ಹೀಗೆ ನೂರಾರು ಸಂಬಂಧ ಸೂಚಕಗಳ ವೈವಿಧ್ಯವೂ ಮರೆಯಾಗಿ ಹೋಗಿವೆ. ಸಂಬಂಧಗಳಲ್ಲಿ ಇರಬೇಕಾದ ಶುದ್ಧತೆಯೂ ಉಳಿಯದ ಪರಿಣಾಮ ಅಲ್ಲೆಲ್ಲ ಕಸಿನ್ಗಳೋ, ಅಂಕಲ್ಗಳೋ ಹುಟ್ಟಿಕೊಂಡಿದ್ದಾರೆ. ಹೀಗಾದಾಗ ಸಂಬಂಧದಲ್ಲಿನ ಆ ಮಾರ್ದವತೆ, ಸೌಂದರ್ಯ, ಸುವಾಸನೆಗಳು ಹೇಗೆ ತಾನೆ ಜಿನುಗಲು ಸಾಧ್ಯ? ನೀವು ಕಂಡುಕೊಳ್ಳುವ, ನಿಮ್ಮೊಂದಿಗಿನ ಇನ್ನೊಬ್ಬರ ಸಂಬಂಧಕ್ಕೆ ಸ್ಪಷ್ಟತೆಯಿರಲಿ. ಅದು ಕನಿಷ್ಠ ನಿಮ್ಮ ವ್ಯಾಖ್ಯಾನಕ್ಕಾದರೂ ಸಿಗುವಂತಿರಲಿ. ಸಂಬಂಧದಲ್ಲಿ ಆತ್ಮವಂಚನೆ, ದ್ವಂದ್ವ, ಅನಗತ್ಯ ಗೋಪ್ಯತೆ ಬೇಡ.
ಒಂಟಿಯನ್ನಾಗಿಸದು
ನೈಜ ಸಂಬಂಧಗಳ ಸಾಮೀಪ್ಯ ನಮ್ಮನ್ನೆಂದೂ ಒಂಟಿಯನ್ನಾಗಿಸದು. ಬದುಕಿನ ಕ್ಷಣಗಳನ್ನು ಅದು ವ್ಯರ್ಥವಾಗಲೂ ಬಿಡದು. ಅತ್ಯಂತ ಹಸಿಹಸಿಯಾದ ತುಡಿತ ನಮ್ಮ ಹೃದಯವನ್ನಾವರಿಸಿಕೊಳ್ಳುವುದು ನೈಜ ಸಂಬಂಧದ ಸಂದರ್ಭದಲ್ಲಿ ಮಾತ್ರ. ಹೀಗಾಗಿ ನಮ್ಮೊಳಗಿನ ಎಲ್ಲವನ್ನೂ ಮುಚ್ಚುಮರೆಯಿಲ್ಲದೇ ಪರಸ್ಪರ ಹಂಚಿಕೊಳ್ಳಲು ಸಿದ್ಧವಾಗಿರಬೇಕು. ನಮ್ಮೆಲ್ಲ ಕೀಳುತನ, ಸಣ್ಣತನಗಳನ್ನು ಹೊರಚೆಲ್ಲಿ ಮನದ ತುಂಬ ಹಸಿಜೇನ ತುಂಬಿಸಿಕೊಂಡು ಎದುರಿನವರಿಗೆ ಧಾರೆ ಎರೆಯುವ ಕಾಯಕ ತೀರಾ ಕಠಿಣ. ಆಂತರ್ಯದ, ಅಂತಃಕರಣದ ದಾರಿದ್ರ್ಯ ಬದಿಗೊತ್ತಿಬಿಡಿ.  
ಅಪಾರತೆ ಅರಿಯಿರಿ
ಸಂಬಂಧಗಳ ಅಪಾರತೆಯನ್ನು ಅರಿಯಿರಿ. ಖಾಲಿ ಹೃದಯಗಳನ್ನು ಭರಪೂರ ಪ್ರೀತಿಯ ಪ್ರವಾಹದಲ್ಲಿ ತೊಯ್ಯಿಸಿಕೊಳ್ಳಿ. ಇದು ಸಾಧ್ಯವಾಗದ ವ್ಯಕ್ತಿ ಆರ್ಥಿಕವಾಗಿ ಎಷ್ಟೇ ಶ್ರೀಮಂತನಾಗಿರಲಿ, ಅಂಥವನನ್ನು ದಟ್ಟ ದರಿದ್ರನೆಂದೇ ಗುರುತಿಸುವುದು ಅನಿವಾರ್ಯ. ಏಕೆಂದರೆ ವಿಶ್ವ ಭ್ರಾತೃತ್ವ ಭಾರತೀಯರ ಸಾಂಕೇತಿಕ ಸ್ವಭಾವ. ಅರ್ಥವೈಶಾಲ್ಯದ ದೃಷ್ಟಿಯಿಂದ ಇದಕ್ಕೆ ಸಾಟಿಯೆಂಬುದೇ ಸಿಗಲಾರದು. ಈ ಜಗದ ಜೀವಿಗಳೆಲ್ಲರೂ ಸೋದರ ಸೋದರಿಯರೇ. ಹಿಡಿತಕ್ಕೆ ಸಿಗದ ಈ ಬಗೆಯ ಕಲ್ಪನೆಗೆ ಮಾನವೀಯ ನೆಲೆಯೊಂದೇ ಆಧಾರ. ಜೀವಿಗಳೆಲ್ಲವೂ ತನ್ನೊಂದಿಗೆ ಬದುಕುವ ಸಂದರ್ಭದಲ್ಲಿ, ತನ್ನೊಂದಿಗೆ ಅವುಗಳ ಬದುಕಿನ ಹಕ್ಕನ್ನೂ ಪ್ರತಿಪಾದಿಸುವುದು ಇದರ ಸಾರ.
ನೋವಾಗುಳಿಯದಿರಲಿ
ಸಂಬಂಧಗಳ ಪೊರೆ ಕಳಚಿಕೊಂಡು ಬೆತ್ತಲಾದವ ಖಂಡಿತಾ ಸುಖಿಯಾಗಿರಲಾರ. ಬದುಕಿನ ಅನುಭವದ ನೆರಿಗೆಗಳ ಬಿಡಿಸಿ ನೋಡಿದರೆ ಅಲ್ಲಿ ಅದೆಷ್ಟೋ ಸಂಬಂಧಗಳು ಬಿಟ್ಟುಹೋಗಿರುವ ಕಲೆಗಳು ತಮ್ಮ ಕಥೆಯನ್ನು ಹೇಳಿಕೊಂಡಾವು. ಅವುಗಳ ಸಾತತ್ಯ ಸಾಧಿಸಲಾಗದೇ ಮತ್ತದೇ ತೊಳಲಿಕೆಯಲ್ಲಿ ನಾವು ಉಳಿದುಬಿಡುತ್ತೇವೆ. ಅದರ ಹಿಂದಿನ ತುಡಿತಗಳನ್ನು ಅರ್ಥ ಮಾಡಿಕೊಳ್ಳುವ ಗೋಜಿಗೇ ಹೋಗುವುದಿಲ್ಲ. ಅಲ್ಲೊಂದು ಮಿಡಿದ ಹೃದಯದ ಕಾವ್ಯಕ್ಕೆ ಭಾಷ್ಯ ಬರೆಯಲು ಅಣಿಯಾಗಿ. ಹೊಸತೊಂದು ಬಂಧುರ ಅಲ್ಲಿ ಚಿಗುರಿ, ಸಾಮರಸ್ಯದ ಸಮೃದ್ಧಿ ಕಟ್ಟಿಕೊಟ್ಟೀತು. ಗಾಳಿಗೆ ಮೈಯೊಡ್ಡಿ ಆಹ್ಲಾದಿಸುವ ರೀತಿಯಲ್ಲೇ, ಬಿರುಗಾಳಿಗೆ ಸೆಟೆದು ನಿಲ್ಲಲಾದೀತೆ? ತಲೆ ತಗ್ಗಿಸಿ ಬಿರುಗಾಳಿಗೆ ಹಾದಿಬಿಟ್ಟು, ಪುನಃ ತಲೆ ಎತ್ತುವುದೇ ಜಾಣತನ. ನಿನ್ನೆಯದು ಇಂದಿನ ಹೆಜ್ಜೆಗಳನ್ನು ಕಲಿಸುತ್ತವೆಂಬುದು ಸಂಬಂಧಗಳ ಮಟ್ಟಿಗೂ ನಿತ್ಯ ಸತ್ಯ.
ಧೈರ್ಯ ತೋರಿ
ಪುಕ್ಕಲುತನ ತೊರೆದು ಸಂಬಂಧಗಳನ್ನು ಸುರಕ್ಷಿತವಾಗಿಸಿಕೊಳ್ಳುವ ಧೈರ್ಯ ಬಹುತೇಕರಲ್ಲಿರುವುದೇ ಇಲ್ಲ. ಪ್ರೀತಿ, ಪ್ರೇಮಗಳೂ ಸೇರಿದಂತೆ ಕಡಿದುಹೋಗಬಹುದಾದದ್ದನ್ನು ಹಿಡಿದಿಡಬಲ್ಲ, ಸತ್ತ ಸಂಬಂಧಗಳಿಗೆ ಪುನರ್ಜೀವ ನೀಡಬಲ್ಲ ಸಂಜೀವಿನಿ ನಮ್ಮ ಮನಸ್ಸಿನಲ್ಲಿದೆ. ಹಠಮಾರಿತನವನ್ನು ತೊರೆದು ಇದರ ಬಳಕೆಗೆ ಮುಂದಾಗಬೇಕಿದೆ. ಮನದೊಳಗಣ ಕೋಣೆಗಳ ನಡುವೆ ಬಾಡಿಗೆ ಮನೆಯಂತೆ ನಮ್ಮ ನಿರ್ಧಾರಗಳನ್ನು ಬದಲಿಸುವುದನ್ನು ನಿಲ್ಲಿಸಬೇಕು. ಸಂಘರ್ಷರಹಿತ ಮನಸ್ಸು ಮಾತ್ರವೇ ಬಂಧುರವನ್ನು ಬೇಡವೆನ್ನದೇ ಅದನ್ನು ಗಟ್ಟಿಗೊಳಿಸುತ್ತದೆ. ಕಂಡದ್ದೆಲ್ಲವನ್ನೂ ಕಿತ್ತುಕೊಳ್ಳುವ ಆತುರ ಬಿಟ್ಟು ಅದರ ಸ್ಥಾನದಲ್ಲೇ ಅದನ್ನು ಅರ್ಥೈಸಿಕೊಳ್ಳಲು ಯತ್ನಿಸಿ, ಸಂಬಂಧ ಉಳಿಯುತ್ತದೆ.
ಸ್ನೇಹದ ಕಡಲಲ್ಲಿ
ಸವಿಯುವ ಮನಸ್ಸುಗಳಿಗೆ ಅವಿರತ ಸಿಹಿಯುಣ್ಣಿಸುವ ಸ್ನೇಹಕ್ಕೆ ಸಾಟಿಯಾದ ಇನ್ನೊಂದು ಸಂಬಂಧ ಇಹದಲ್ಲಿಲ್ಲ. ಕಾಲ, ದೇಶ, ಭಾಷೆ, ಜಾತಿ, ಲಿಂಗಗಳ ಚೌಕಟ್ಟನ್ನು ಮೀರಿ ಬೆಳೆಯುವ, ಬೆಸೆದುಕೊಳ್ಳುವ ಸ್ನೇಹಕ್ಕೆ ಅದೊಂದೇ ಸಾಟಿ. ಇಂಥದ್ದೊಂದು ಆಕಾರಹೀನ ಅನುಭಾವವನ್ನು ಯಾವುದೇ ಕ್ಷುಲ್ಲಕ ಕಾರಣಕ್ಕೆ ಬಲಿಗೊಡದಿರಿ. ಸಖ್ಯ, ಸಾಹಚರ್ಯ, ಗೆಳೆತನ, ಮಿತ್ರತ್ವ ಇತ್ಯಾದಿ ಪದಪರಿಧಿಯಲ್ಲಿ ಗುರುತಿಸಿಕೊಳ್ಳುವ ಇದು ವಿಶಾಲ ತಳಹದಿಯಲ್ಲಿ ಸೃಷ್ಟಿಗೊಂಡ ಸುದೀರ್ಘ ಪರಂಪರೆ. ಗೆಳತನ ಮಾನವೇತಿಹಾಸದ ದ್ಯೋತಕ.
ಜರಡಿಯಾಡಿಸಿಕೊಳ್ಳಿ
ಸಖ್ಯವೆಂಬುದು ಜರಡಿಯಿದ್ದಂತೆ. ಜೀವನದಲ್ಲಿ ಅನೇಕರು ಬಂದುಹೋಗಬಹುದು. ಅವರೆಲ್ಲರೂ ನಮ್ಮವರೇ ಆಗುಳಿಯಲು ಸಾಧ್ಯವಿಲ್ಲ. ಮನಸ್ಸಿನ ಜರಡಿಯಲ್ಲಿ ಬಹುತೇಕರು ಬಿದ್ದುಹೋಗಿ ಕೆಲವರು ಮಾತ್ರವೇ ಉಳಿದುಕೊಳ್ಳುತ್ತಾರೆ. ಅವರು ಸಮಾನವಯಸ್ಕರೇ ಆಗಿರಬೇಕೆಂದೇನೂ ಇಲ್ಲ. ಆಯ್ಕೆ ಮನಸ್ಸಿನದು. ಎಲ್ಲ ವಿಚಾರದಲ್ಲೂ ಇದು ಇದ್ದದ್ದೇ. ಉತ್ತಮ, ಮುಖ್ಯವೆನಿಸಿದವುಗಳನ್ನು ಮಾತ್ರ ನಾವು ಆಯ್ದು ಇಟ್ಟುಕೊಳ್ಳುತ್ತೇವೆ. ಅದನ್ನು ಕಾಪಿಡುತ್ತೇವೆ. ಹಾಗೆಯೇ ಸ್ನೇಹ- ಸಂಬಂಧದ ವಿಚಾರದಲ್ಲೂ ಉತ್ತಮವಾದುದನ್ನು ನಮ್ಮ ಸಂಗ್ರಹಕ್ಕೆ ಸೇರಿಸಿಕೊಂಡು ಶ್ರೀಮಂತಿಕೆ ಮೆರೆಯೋಣ.
ಮುಕ್ತತೆ ಇರಲಿ, ಸಂಘರ್ಷಕ್ಕೂ
ಸಂಘರ್ಷರಹಿತ ಸಂಬಂಧ ರುಚಿಯಿಲ್ಲದ ಹಣ್ಣಿನಂತೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು, ವಿರೋಧ, ವಾದ ಬೇಕೇ ಬೇಕು. ಎಲ್ಲರೂ, ಎಲ್ಲವೂ ಒಂದೇ ರೀತಿಯಲ್ಲಿರಲು ಅಸಾಧ್ಯ. ಆದರೆ ಕೆಲವೊಮ್ಮೆ ಸಂಘರ್ಷಗಳೇ ನಮ್ಮ ಸಂವೇದನಾಶೀಲತೆಯನ್ನು ಚಿವುಟಿ ಹಾಕಿಬಿಡುವ ಅಪಾಯಗಳಿರುತ್ತವೆ. ಆ ಬಗ್ಗೆ ಎಚ್ಚರಿಕೆ ಅಗತ್ಯ. ವೈರುಧ್ಯವೇ ನಮ್ಮ ಆಯ್ಕೆಯಾಗದಿರಲಿ. ಈ ಹಂತದಲ್ಲಿ ಮುಕ್ತತೆ ಇಲ್ಲದೇ ಹೋದರೆ ಸಂಬಂಧಗಳು ಹಳಸಲಾಗಿಬಿಡುತ್ತವೆ. ಇದೇ ಕಾರಣಕ್ಕೆ ಬಹುಕಾಲದ ಸ್ನೇಹಿತರು, ಹತ್ತಿರದ ಬಂಧುಗಳೂ ಸಣ್ಣ ವಿಚಾರಕ್ಕೆ ದೂರಾಗಿಬಿಡುತ್ತಾರೆ.
ಅಹಮಿಕೆಯಿಂದ ದೂರವಿರಿ
ಯಾವುದೇ ವಿಚಾರವಿರಲಿ, 'ನಾನೇ ಶ್ರೇಷ್ಠ, ನನ್ನದೇ ಸರಿ' ಎಂಬ ಅಹಮಿಕೆ ಸಂಬಂಧಕ್ಕೆ ಮಾರಕ. ನಮ್ಮ ಇಂಥ ವಿಚಿತ್ರ ಧಿಮಾಕು ಎಂಥದೇ ಸುಮಧುರ ಬಾಂಧವ್ಯವನ್ನಾದರೂ ಹಾಳುಗೆಡವಿಬಿಡಬಲ್ಲುದು. ಇದು ನಮ್ಮ ಅಜ್ಞಾನದ ಫಲ. ಯಾವುದೇ ವಿಚಾರದಲ್ಲಿ ಪರಸ್ಪರ ತುಲನೆಯೂ ಸಂಬಂಧವನ್ನು ಕೆಡಿಸುತ್ತದೆ. ಭೇದರಹಿತ, ಸಮಾನ ನೆಲೆಯ ವೈಚಾರಿಕ ಮನಸ್ಸು ಮಾತ್ರ ಇವೆಲ್ಲದರಿಂದ ಹೊರತಾಗಿ ಸುಂದರ ಬಾಂಧವ್ಯವನ್ನು ಉಳಿಸಿಕೊಳ್ಳುತ್ತದೆ. ನಿರಂತರ ಸಂವಾದದೊಂದಿಗೆ ಇತರರ ಆಲೋಚನೆಗಳನ್ನೂ ಸ್ವೀಕರಿಸಿ, ಗೌರವಿಸುವುದು ಅತ್ಯಂತ ಅಗತ್ಯ.
ಅವಲಂಬನೆ ಬೇಡ
ತೀರಾ ಅವಲಂಬನೆ ಸಂಬಂಧವನ್ನು ಘಾಸಿಗೊಳಿಸಬಹುದು. ಬಂಧುಗಳ, ಸ್ನೇಹಿತರ ನಡುವೆ ಅತಿ ಅವಲಂಬನೆ ಪ್ರತಿರೋಧಕ್ಕೆ, ಜಿಗುಪ್ಸೆಗೆ ಮಾರ್ಗವಾಗುತ್ತದೆ. ನಾವು ಪಡೆಯುವ ನೆರವು ನಮ್ಮ ಪ್ರಯತ್ನಕ್ಕೆ ಪೂರಕವಾಗಿಯಷ್ಟೇ ಇರಬೇಕು. ಸ್ವಪ್ರಯತ್ನವಿಲ್ಲದ, ಪ್ರತಿಫಲ ನೀಡದ ಸ್ವಾರ್ಥ ಗುಲಾಮತನವೆಂದೂ ಕರೆಸಿಕೊಳ್ಳುತ್ತದೆ. ನಮ್ಮ ಖಾಲಿತನವನ್ನು ಪ್ರದರ್ಶಿಸಿದಂತೆಲ್ಲ ನಮ್ಮಿಂದ ಇತರರು ದೂರಾಗಿಬಿಡುವ ಅಪಾಯಗಳಿವೆ. ಹೃದಯದ ವ್ಯಾಪಾರವಾಗಿ ಬಾಂಧವ್ಯ ಬೆಳೆಯದಿದ್ದರೆ ಇನ್ನೊಬ್ಬರ ಆಗು ಹೋಗುಗಳನ್ನು ಗಮನಿಸಲು ನಮಗೆ ಪುರುಸೊತ್ತಿಲ್ಲದಂತಾಗುತ್ತದೆ. ಅಷ್ಟು ಜಡತ್ವವೂ ಸಲ್ಲ.
ಸಂಬಂಧ ನಿರ್ವಹಣೆಗೆ ಸಹಕಾರಿ ಗುಣ
    ಮೃದು, ಮಧುರ, ಸಂದರ್ಭೋಚಿತ ಮಾತಿರಲಿ.
    ಅಹಂ, ಕಪಟತೆ, ತೀಕ್ಷ.್ಣ ಮಾತು ಬೇಡ.
    ಮೌನ ಆತ್ಮವಿಮರ್ಶೆಗೆ ಅನುಕೂಲ. ನೀವು ಕೇಳುಗರಾಗಿ.
    ಪ್ರತಿಕ್ರಿಯಿಸಬೇಕಾದ ಸಂದರ್ಭದಲ್ಲಿ ಮೌನ ಉಚಿತವಲ್ಲ.
    ನೆರವು, ಅಗತ್ಯದ ಸಂದರ್ಭದಲ್ಲಿ ಹಣದಅಗತ್ಯವಿದೆ.
    ಸಂಬಂಧಗಳನ್ನು ಕೇವಲ ಹಣ, ಅಂತಸ್ತಿನಲ್ಲೇ ಅಳೆಯಲಾಗದು.
    ಸಮಯಕ್ಕನುಸಾರವಾಗಿ ಜವಾಬ್ದಾರಿಗಳ ನಿರ್ವಹಣೆ ಅಗತ್ಯ.
    ಆದರೆ ಸಮಯ ಸಾಧಿಸಿ ವರ್ತಿಸುವುದು ಅವಕಾಶವಾದಿತನವಾದೀತು.
    ತ್ಯಾಗ, ಪ್ರೀತಿ, ಕಾಳಜಿ, ಸಹನೆ, ಹೊಂದಾಣಿಕೆ ಮಾನವೀಯ ದ್ಯೋತಕ.
    ಆತ್ಮಗೌರವಕ್ಕೆ ಧಕ್ಕೆ ತಂದುಕೊಂಡು ಸಂಬಂಧ ನಿರ್ವಹಣೆ ಅಗತ್ಯವೇ?
    ಎಲ್ಲರೂ ನನ್ನ ಗುರುತಿಸಿ, ಗೌರವಿಸಲಿ, ನನ್ನ ಮುಂದೆ ಎಲ್ಲರು ಕೀಳು ಎಂಬ ಭಾವವನ್ನು ಬಿಡಿ.
    ಹಾಗೆಂದು ಎಲ್ಲರಿಂದ ನಿರ್ಲಕ್ಷಿತರಾಗಿ ಕೀಳರಿಮೆ ಅನುಭವಿಸಬೇಡಿ.
    ಬೇರೆಯವರ ಅನುಕೂಲ- ಸೌಲಭ್ಯ ನೆನೆದು ಕರುಬಬೇಡಿ.
    ಅವರಂತೆ ನಾನಾಗಬೇಕೆಂದು ಪ್ರಯತ್ನಮುಖಿಗಳಾಗುವುದು ತಪ್ಪಲ್ಲ.
    ಖುಷಿ ನೀಡುವ ಸಂಗತಿಗಳನ್ನು ಮನಃಪೂರ್ವಕ ಹಂಚಿಕೊಳ್ಳಿ.
    ಅತಿ ವಾಚಾಳಿತನ, ಎಲ್ಲ ಗೋಳನ್ನು ತೋಡಿಕೊಳ್ಳುವುದು ಸರಿಯಲ್ಲ.
    ಸದಾ ನಿಮ್ಮ ಕಾರ್ಯದಲ್ಲೇ ಮಗ್ನರಾಗಿ ಇತರರನ್ನು ನಿರ್ಲಕ್ಷಿಸದಿರಿ.
    ಊರಿಗೆ ಉಪಕಾರಿ, ಮನೆಗೆ ಮಾರಿ ಎಂದಾಗುವುದರಲ್ಲಿ ಅರ್ಥವಿಲ್ಲ.
    ಉತ್ತಮ ಸ್ವಭಾವಗಳು ಯಾರಲ್ಲಿಯೇ ಇರಲಿ, ಶ್ಲಾಘಿಸಿ.
    ಮುಖಸ್ತುತಿಯಲ್ಲೇ ಲಾಭ ಪಡೆಯುವುದು ಸೋಗಲಾಡಿತನ.
    ಬೇರೆಯವರಿಂದ ನಾವು ನಿರೀಕ್ಷಿಸುವುದು ತಪ್ಪೇನಲ್ಲ. ಆದರದು ಅತಿಯಾಗದಿರಲಿ. ಸ್ವಾವಲಂಬನೆ ಸಂಬಂಧಕ್ಕೆ ಪೂರಕ.
    ಹಾಗೆಂದು ಪ್ರೀತಿಯಿಂದ ನೆರವು ಚಾಚಿದಾಗ ನಿರಾಕರಿಸುವ ದಾಷ್ಟ್ಯ ಒಳ್ಳೆಯದಲ್ಲ.
    ಪರಸ್ಪರ ಕಾಳಜಿ, ಸಂಬಂಧದ ಸೋಪಾನ.
    ನಿಮ್ಮ ಅತಿ ಆಸಕ್ತಿ ಬೇರೆಯವರಿಗೆ ಕಿರಿಕಿರಿ ಆದೀತು.
    ತಪ್ಪೊಪ್ಪಿಕೊಳ್ಳುವಲ್ಲಿ ಹಿಂಜರಿಕೆ, ಅಹಂ, ಪ್ರತಿಷ್ಠೆ ಬೇಡ. ಮುನಿಸಿನ ಸಂದರ್ಭದಲ್ಲಿ ನೀವೇ ಮೊದಲಾಗಿ ಕ್ಷಮೆ ಕೇಳಿ.
    ನಿಮ್ಮದಲ್ಲದ ಆರೋಪಗಳನ್ನು ನೀವೇ ಹೊತ್ತು ಸಂಬಂಧ ಉಳಿಸಿಕೊಳ್ಳುವಷ್ಟು ಅದು ಮುಖ್ಯವೇ? ಯೋಚಿಸಿ.
    ತಪ್ಪುಗಳು ಎಲ್ಲರಿಂದಲೂ ಆಗುತ್ತವೆ. ಕ್ಷಮೆಯ ಔದಾರ್ಯ ತೋರಿ.
    ನಿಮ್ಮ ಕ್ಷಮೆ ದುರುಪಯೋಗ ಆಗುತ್ತಿದ್ದರೆ ಖಂಡಿತಾ ಅವರು ಸಂಬಂಧಕ್ಕೆ ಅರ್ಹರಲ್ಲ.
    ನಿಮ್ಮವರಿಗಾಗಿ ಅವರು ಮೆಚ್ಚುವಂತೆ ಕೆಲವು ಬದಲಾವಣೆ ಮಾಡಿಕೊಳ್ಳಿ. ಸಂಬಂಧ ದೃಢವಾಗುತ್ತದೆ.
    ಆದರೆ ಆತ್ಮಸಾಕ್ಷಿ ಒಪ್ಪದ, ಜಗ ಮೆಚ್ಚಿಸಲಷ್ಟೇ ಬದುಕು ಅರ್ಥಹೀನ.
    ಭಿನ್ನ ಅಭಿರುಚಿ, ವಿಚಾರ, ಅಭ್ಯಾಸ, ಸಂಪ್ರದಾಯ, ನಡವಳಿಕೆಗಳನ್ನು ಒಪ್ಪಿ ಗೌರವಿಸಿ.
    ವಿರೋಧಾಭಾಸವೇ ಸಂಬಂಧದ ತಿರುಳಾದರೆ ಅರ್ಥಹೀನ.
    ಪರಸ್ಪರ ಕೀಳರಿಮೆ, ಅಪನಂಬಿಕೆ, ದೂಷಣೆ, ಆರೋಪ ಇಲ್ಲದಿರಲಿ.
    ತಪ್ಪಿನ ಸಂದರ್ಭದಲ್ಲಿ ನೇರವಾಗಿ ಹೇಳದೇ ಇರುವುದು, ಮುಚ್ಚಿಡುವುದು ದ್ರೋಹವಾದೀತು.
    ಸಮಾನ ಹವ್ಯಾಸ, ಅಭಿರುಚಿ, ಯೋಚನೆಗಳನ್ನು ಗುರುತಿಸಿ.
    ನನ್ನ ಹಾಗೇ ಎಲ್ಲರೂ ಇರಬೇಕು ಎಂದು ಮೂಗಿನ ನೇರಕ್ಕೆ ವಾದಿಸುವುದು ಮೂರ್ಖತನ.
    ಸೋಲಿನ, ಸಂಕಷ್ಟದ ಸಂದರ್ಭದಲ್ಲಿ ಟೀಕೆ, ಕಟು ವರ್ತನೆ ಬೇಡ.
    ಸಹಾನುಭೂತಿಯ ನೆಪದಲ್ಲಿ ಮಿತಿ ಮೀರಿದ ಅನುಕಂಪವೂ ಮಾರಕ.
    ನಿಮ್ಮ ಎಲ್ಲ ವಿಷಯಗಳನ್ನು ಹಂಚಿಕೊಳ್ಳುವ ಮುಕ್ತತೆ ಇರಲಿ.
    ಹಾಗೆಂದು ವಿನಾಕಾರಣ ಬೇರೆಯವರ ವಿಷಯದಲ್ಲಿ ಮೂಗು ತೂರಿಸಬೇಡಿ.
ಕಲ್ಮಶ ರಹಿತರಾಗಿ
ಇತರರ ಮನಸ್ಸು ಒತ್ತೊಟ್ಟಿಗಿರಲಿ, ನಮ್ಮ ಆಂತರ್ಯ ಕಲ್ಮಶ, ಸ್ವಾರ್ಥರಹಿತವಾಗಿದೆ ಎಂದರೆ ಅದು ಸದಾ ಜತೆಗಾರರನ್ನು ಬಯಸುತ್ತಲೇ ಇರುತ್ತದೆ. ಸಂಬಂಧಗಳಿಗೆ ಹಾತೊರೆಯುವುದು ಅದರ ಸಹಜ ಗುಣ. ಅದರಿಂದ ದೊರಕಿದ, ದೊರಕಬಹುದಾದ ನೋವು ನಲಿವುಗಳೆಲ್ಲವೂ ಶ್ರೀಮಂತ ಅನುಭವಗಳನ್ನು ಕಟ್ಟಿಕೊಡುತ್ತಲೇ ಸಾಗುತ್ತವೆ. ಅವುಗಳ ಸೂಕ್ಷ್ಮ ಗ್ರಹಿಕೆಗಳನ್ನು ಮಾತ್ರ ನಾವು ರೂಢಿಸಿಕೊಳ್ಳಬೇಕು. ಸಂಬಂಧಗಳ ಪ್ರವಾಹದಲ್ಲಿ ನಮ್ಮೆಲ್ಲ ಸ್ವಾರ್ಥವೂ ನಿಸ್ಸಂಶಯವಾಗಿ ಕೊಚ್ಚಿಹೋಗುತ್ತದೆ.



- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.