4ನೇ ತರಗತಿಯ ವಿದ್ಯಾರ್ಥಿ ಶ್ರವಣ 2 ಕಿ.ಮೀ. ನಡೆದು ಸರ್ಕಾರಿ ಶಾಲೆಗೆ ಹೋಗುತ್ತಿದ್ದ. ಈತ ಎಲ್ಲ ಶಿಕ್ಷಕರಿಗೂ ಅಚ್ಚುಮೆಚ್ಚು. ಅಮ್ಮ ಮನೆಯ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ಊದುಕಡ್ಡಿಯನ್ನು ಹೊಸೆದು ಕಷ್ಟಪಡುತ್ತಿದ್ದಳು. ಗಂಡನು ಕೋಳಿ ಕೂಗುವ ಮೊದಲೇ ಎದ್ದು ಹೊಸೆದ ಊದುಕಡ್ಡಿಗಳನ್ನು ಹಿಡಿದು ಪಟ್ಟಣದ ಅಂಗಡಿಗಳಿಗೆ ಮುಟ್ಟಿಸುತ್ತಿದ್ದ. ಅದರಿಂದ ಬೇಕಾದ ದಿನಸಿ ಕೊಂಡು, ರಾತ್ರಿ ವಾಪಸಾಗುತ್ತಿದ್ದ.
ನಿತ್ಯ ಶಾಲೆಗೆ ಹೋಗುತ್ತಿದ್ದ ಮಗನಿಗೆ ಅಮ್ಮ ಬುತ್ತಿಯಲ್ಲಿ ಮೂರು ರಾಗಿ ರೊಟ್ಟಿಗಳನ್ನಿಟ್ಟು ಕಳುಹಿಸುತ್ತಿದ್ದಳು. ನಡೆದು ಹೋಗುವ ಮಗ ಅದನ್ನು ಶಾಲೆ ಮುಟ್ಟಿದ ಮೇಲೆ ತಿನ್ನಲಿ ಎಂಬ ಆಶಯ ತಾಯಿಗೆ. ಹೇಗೂ ಮಧ್ಯಾಹ್ನದ ವೇಳೆ ಸರ್ಕಾರ ಬಿಸಿಯೂಟ ಕೊಡುತ್ತದಲ್ಲ. ಈ ಶ್ರವಣ ನಡೆದು ಹೋಗುವ ದಾರಿಯಲ್ಲಿನ ಚಿಕ್ಕ ಪೆಟ್ಟಿಗೆ ಅಂಗಡಿಯ ವಯಸ್ಸಾದ ಮಾಲೀಕ ಶಂಭುವಿಗೂ ವ್ಯಾಪಾರದ ಸೇತುವೆಯಾಗಿದ್ದ. ಅವನಿಗೆ ಅಗತ್ಯ ಸೇವೆ ಮಾಡುತ್ತಿದ್ದ.
ಅದೊಂದು ದಿನ ಅಮ್ಮ, 'ಚಪ್ಪಲಿ ಇಲ್ಲದೆ ಬಿಸಿಲಲ್ಲಿ ತಿರುಗುತ್ತೀರಲ್ಲ. ಒಂದು ಜೊತೆ ಚಪ್ಪಲಿ ಕೊಳ್ಳಬಹುದಲ್ಲ? ಆದಷ್ಟು ಬೇಗ ಖರೀದಿಸಿ' ಎಂದು ಗಂಡನಿಗೆ ಹೇಳಿದಳು. ಅದಕ್ಕೆ ಆತ, 'ನೀನು ಹರಿದ ಸೀರೆಯಲ್ಲೇ ದಿನ ದೂಡುತ್ತಿರುವಾಗ ನಾನು ಹೊಸ ಚಪ್ಪಲಿ ಕೊಂಡು ಮೆರೆಯಲೇ? ನೋಡೋಣ, ಕಾಲ ಬರಲಿ... ಕೊಂಡರಾಯ್ತು' ಎಂದನು.
ಈ ಎಲ್ಲ ಸಂಭಾಷಣೆಗಳು ಶ್ರವಣನ ಕಿವಿಗೆ ಬಿದ್ದವು. ಅಲ್ಲಿಯವರೆಗೂ ಈ 'ಇಲ್ಲ'ಗಳ ಬಗ್ಗೆ ಅವನಿಗೆ ಗಮನವೇ ಇರಲಿಲ್ಲ.
ಶ್ರವಣನಿಗೊಂದು ಉಪಾಯ ಹೊಳೆಯಿತು. ಶಾಲೆಗೆ ಹೋಗುವಾಗ ಸೀದಾ ಶಂಭುವಿನ ಅಂಗಡಿಗೆ ಹೋದ; 'ಶಂಭಜ್ಜ, ನೀವು ದಿನವೂ ಬೆಳಗ್ಗೆ ತಿಂಡಿ ತಿನ್ನುವುದಿಲ್ಲವಾ?' ಕೇಳಿದ. 'ದುಡ್ಡು ಕೊಟ್ಟರೂ ಇಲ್ಲಿ ಎಲ್ಲೂ ತಿಂಡಿ ಸಿಗುವುದಿಲ್ಲ ಮರೀ' ಎಂದನು ಆ ತಾತಾ. 'ಸರಿಯಜ್ಜ, ನಾನು ದಿನಾ ನಿನಗೆ 3 ರಾಗಿ ರೊಟ್ಟಿಗಳನ್ನು ತಂದುಕೊಡ್ತೀನಿ. ಎಷ್ಟು ದುಡ್ಡು ಕೊಡ್ತೀರಿ' ಎಂದು ಕೇಳಿದ. ತಡಮಾಡದೆ ಶಂಭಜ್ಜ, '5 ರುಪಾಯಿ ಕೊಡ್ತೀನಪ್ಪ' ಎಂದ. ಶ್ರವಣನಿಗೆ ಖುಷಿಯಾಯಿತು. 'ಅಜ್ಜಾ, ಇಂದಿನಿಂದಲೇ ತಗೊಳ್ಳಿ' ಎಂದು ಬುತ್ತಿಯನ್ನು ಅಜ್ಜನ ಕೈಗಿಟ್ಟು 5 ರುಪಾಯಿ ಪಡೆದ. ಈ ತಿಂಡಿ ಪ್ರಕ್ರಿಯೆ ಸುಮಾರು ದಿನಗಳವರೆಗೆ ನಡೆಯಿತು. ಆ 5 ರುಪಾಯಿಗಳೆಲ್ಲ ಕೂಡಿ, ಅಮ್ಮನಿಗೆ ಸೀರೆ, ಅಪ್ಪನಿಗೆ ಚಪ್ಪಲಿ ತರಲು ಸಾಕಾಗುವ ಹೊತ್ತಿಗೆ ಶ್ರವಣನಿಗೆ ಮತ್ತೊಂದು ಚಿಂತೆ. ಅಪ್ಪನ ಚಪ್ಪಲಿ ಅಳತೆ ಬೇಕಲ್ಲ. ಏನು ಮಾಡುವುದು? ಹಳೆಯದೊಂದೂ ಮಾದರಿ ಇಲ್ಲ.
ಆಗ ಶ್ರವಣನಿಗೆ ಉಪಾಯ ಹೊಳೆಯಿತು. ಅಪ್ಪ ಪೇಟೆಯಿಂದ ಬಂದು ಗುಡಿಸಿಲಿನ ಒಳಗೆ ಕಾಲಿಡುವ ಜಾಗಕ್ಕೆ ಒಂದು ಹಳೇ ನ್ಯೂಸ್ಪೇಪರ್ ಹರಡಿದ. ಅಪ್ಪ ಒಳಹೋದ ಮೇಲೆ ನೋಡಿದರೆ ಅಲ್ಲಿ ಕೆಸರಿನಿಂದ ಕೂಡಿದ ಹೆಜ್ಜೆ ಅಚ್ಚಾಗಿತ್ತು. ಅದನ್ನು ಜೋಪಾನ ಮಾಡಿ, ಮಾರನೇ ದಿನ ಶಾಲೆಯನ್ನು ಮುಗಿಸಿ ಸಂತೆಗೆ ಹೋದ. ಅಪ್ಪನ ಕಾಲಿನ ಅಳತೆಯ ಒಂದು ಜೊತೆ ಚಪ್ಪಲಿ, ಅಮ್ಮನಿಗೊಪ್ಪುವ ಒಂದು ಜೊತೆ ಸೀರೆ ತಂದ. ಆದರೆ, ತೊಂದರೆಯಾಗಿದ್ದು ಎರಡನ್ನೂ ಅಪ್ಪ- ಅಮ್ಮನಿಗೆ ಕೊಟ್ಟ ನಂತರವೇ? 'ಇದನ್ನು ಎಲ್ಲಿ ಕದ್ದು ತಂದೆ?' ಎಂದು ಇಬ್ಬರೂ ಬಡಿದು ಪ್ರಶ್ನಿಸಿದರು. ನಿಜ ಸಂಗತಿಯನ್ನು ತಿಳಿಸಿದ. ನಂಬಿಕೆ ಬರದಿದ್ದರೆ ಶಂಭಜ್ಜನನ್ನು ವಿಚಾರಿಸಿ ಎಂದ. ಮಗನ ವಾತ್ಸಲ್ಯ ಕಂಡು ಅಪ್ಪ- ಅಮ್ಮ ಮೂಕರಾದರು.
-ಸಂಕೇತ್