

ಕನ್ನಡ ಚಿತ್ರರಂಗದಲ್ಲೂ ಒಂದು ಕುಟುಂಬವಿದೆ. ಅಲ್ಲಿ ಯಜಮಾನ, ಅಪ್ಪ, ಅಮ್ಮ, ತಂಗಿ, ಮಾವ ಎಲ್ಲರೂ ಇದ್ದಾರೆ. ಈ ಪಾತ್ರಗಳೂ ಒಂದು ಅವಿಭಕ್ತ ಕುಟುಂಬದ ಭಾಗಗಳು...
ಕನ್ನಡ ಚಿತ್ರರಂಗಕ್ಕೀಗ 'ಅಮ್ಮ'ನೂ ಇಲ್ಲ 'ಅಪ್ಪ'ನೂ ಇಲ್ಲ. ತಂದೆ, ತಾಯಿ ಇಲ್ಲದ ಬಡಕೂಸನ್ನು ಸಾಕಿ ಮುನ್ನೆಡಸಬೇಕಾದ 'ಯಜಮಾನ' ಹೋಗಿ ಬಹಳ ಕಾಲವಾಗಿದೆ. ಇನ್ನು 'ಅಣ್ಣ'ನನ್ನು ಎಂದೋ ಕಳೆದುಕೊಂಡಿದ್ದೇವೆ. ಹೋಗ್ಲಿ ಅಕ್ಕ, ತಂಗಿಯಾದರೂ ಕಾಣುತ್ತಾರಾ ಎಂದರೆ ಅವರೂ ನಾಪತ್ತೆ. ಒಂದುವೇಳೆ ಅವರು ಕಂಡರೂ ಇದ್ದಕ್ಕಿದ್ದ ಹಾಗೆ ದುಷ್ಟ ಖಳನಾಯಕನೋ, ಆತನ ಸೋದರ ಅಥವಾ ಮಗನಿಂದಲೋ ಅತ್ಯಾಚಾರಕ್ಕೊಳಗಾಗಿ, ಅವಮಾನ ತಡೆಯಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಳೆ. ಇನ್ನು 'ಅಪ್ಪ ಅಪ್ಪ ನನ್ಗೆ ನೀನು ಬೇಕಪ್ಪ...' ಎಂದು ಎಮೋಷನಲ್ ಆಗುವ ಮಗ (ನಾಯಕ) ನನ್ನ ಯಾವ ಚಿತ್ರದಲ್ಲೂ ನೋಡಲಾಗದು. ಯಾಕೆಂದರೆ ಅವನು ಶಿವಾಜಿನಗರದಿಂದಲೋ, ಕಲಾಸಿಪಾಳ್ಯದಿಂದಲೋ, ಶ್ರೀರಾಮಪುರದಿಂದಲೋ ಅಥವಾ 18ನೇ ಕ್ರಾಸ್ನಿಂದಲೋ ಎದ್ದು ಬಂದ ಅನಾಥ! ಅವನಿಗೆ ಪ್ಯಾಮಿಲಿ ಎಲ್ಲಿಂದ ಬರಬೇಕು!?
ಕುಟುಂಬದ ಮುಖ್ಯ ಪಿಲ್ಲರ್ಗಳನ್ನೇ ಕಳೆದುಕೊಂಡಿರುವ ಚಿತ್ರರಂಗದಲ್ಲಿ 'ಫ್ಯಾಮಿಲಿ ಸಿನಿಮಾ'ಗಳನ್ನು ನಿರೀಕ್ಷಿಸುವುದು ಅಕ್ಷಮ್ಯ ಅಪರಾಧ! ಆದರೂ ಪ್ರತಿ ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ಆಯಾ ಚಿತ್ರತಂಡದವರ ಬಾಯಿಯಿಂದ ಕೇಳಿಬರುವ ಕಾಮನ್ ಡೈಲಾಗ್, 'ನಾವೆಲ್ಲ ಒಂದೇ ಕುಟುಂಬದಂತೆ ಇದ್ವಿ' ಎನ್ನುವುದು. ಈ ಮಾತು ಎಕ್ಸ್ಪೈರ್ ಡೇಟ್ ಇಲ್ಲ. ಚಿತ್ರದ ಮುಹೂರ್ತ ಇರಲಿ, ಆಡಿಯೋ ಬಿಡುಗಡೆಯಿರಲಿ, ಚಿತ್ರ ಬಿಡುಗಡೆಯ ಸಮಾರಂಭವಿರಲಿ, ಚಿತ್ರದ ಯಶಸ್ಸಿನ ಸಂಭ್ರಮ ಇರಲಿ. ಎಲ್ಲ ಸಂದರ್ಭಗಳಲ್ಲೂ ಈ ಡೈಲಾಗ್ ಚಿತ್ರದ ನಾಯಕನಿಂದ ಆರಂಭಿಸಿ ಸೆಟ್ಬಾಯ್ ತನಕ ಜೀವ ಪಡೆದುಕೊಳ್ಳುತ್ತದೆ. ಆದರೆ, ಸಿನಿಮಾ ನೋಡಿದಾಗ ಅಲ್ಲಿ ಯಾವ ಕೌಟುಂಬಿಕತೆಯೂ ಕಾಣಲ್ಲ. ಮುಗ್ಧ ನಾಯಕ. ನಿತ್ಯಕಣ್ಣೀರು ಸುರಿಸುವ ಅಮ್ಮ, ಖಳನಾಯಕನಿಂದ ಅತ್ಯಾಚಾರ ಮಾಡಿಸಿಕೊಳ್ಳಲೆಂದೇ ಹುಟ್ಟಿಕೊಂಡಂತಿರುವ ನಾಯಕನ ತಂಗಿ. ನಾಯಕನ ಕುಟುಂಬದಲ್ಲಿ ಆಕಸ್ಮಿಕ ಸಾವು. ಸಿಟ್ಟಾಗುವ ನಾಯಕ ಮಚ್ಚು ಹಿಡಿದು ಬೆಂಗಳೂರಿಗೆ ಬರುವುದು. ಮುಂದೆ ಮಾರಮ್ಮನ ಜಾತ್ರೆಯಲ್ಲಿ ಕುರಿ ಕಡಿದಂತೆ ರೌಡಿಗಳ ರುಂಡ ಚೆಂಡಾವುದೇ ಕಥೆ.
ಅಮ್ಮ ಎಂದರೆ...
ಹೀಗೆ ವೈಲೆನ್ಸ್ಗೆ ಹೆಚ್ಚು ಮೈಲೇಜ್ ಕೊಟ್ಟಿರುವ 'ರಕ್ತ'ಚರಿತ್ರೆಯ ಚಿತ್ರಗಳಲ್ಲಿ ಫ್ಯಾಮಿಲಿ ಪರಂಪರೆಯನ್ನು ನೋಡುವುದು ಅಸಾಧ್ಯ ಬಿಡಿ. ಆದರೆ, ಕನ್ನಡ ಚಿತ್ರರಂಗದ ಅಮ್ಮ, ಅಪ್ಪ, ಅಣ್ಣ, ಸೋದರ, ಅತ್ತೆ, ಯಜಮಾನ, ತಾತ ಎಂದಾಕ್ಷಣ ಕೆಲವರು ನೆನಪಾಗುತ್ತಾರೆ. ಆ ಪೈಕಿ 'ಅಮ್ಮ' ಅಂದಾಕ್ಷಣ ಕಣ್ಮುಂದೆ ಬರುವ ಚಿತ್ರ, ಪಂಡರಿಬಾಯಿ. 'ಗುಣ ಸಾಗರಿಕ' ಮೂಲಕ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಬಹುಶಃ ಪ್ರೇಕ್ಷಕನಿಗ್ಯಾಕೋ ಇವರನ್ನು 'ನಾಯಕಿ' ಎಂದು ಗುರುತಿಸುವುದಕ್ಕಿಂತ 'ಅಮ್ಮ' ಎಂದು ಕರೆದರೇನೇ ಸೂಕ್ತ ಅಂತನ್ನಿಸಿತೋ ಏನೋ. 'ಕಲಿಯುಗ ಭೀಮ'ದ 'ಕೈ ತುತ್ತು ಕೊಟ್ಟವಳೆ...' ಹಾಡು ಇವತ್ತಿಗೂ ಎಲ್ಲ ಮಕ್ಕಳ ನಾಲಗೆಯ ಮೇಲಿದೆ. 'ಕೆರಳಿದ ಸಿಂಹ', 'ನಮ್ಮ ಮಕ್ಕಳು', 'ಅನುರಾಗ ಅರಳಿತು' ಚಿತ್ರಗಳಲ್ಲೂ ಅಂಥದ್ದೇ ವಾತ್ಸಲ್ಯ ಪಾತ್ರ ತೋರಿದರು. ಪಂಡರಿ ಬಾಯಿ ನಂತರ ನಟಿಯರಾದ ಜಯಶ್ರೀ, ಅದವಾನಿ ಲಕ್ಷ್ಮಿದೇವಿ, ಜಯಂತಿ, ಲೀಲಾವತಿ 'ಅಮ್ಮ'ನ ಸ್ಥಾನವನ್ನು ತುಂಬಿದರೂ 'ಚಂದನದ ಅಮ್ಮ' ಎಂದಾಗ ನೆನಪಾಗುವ ಏಕೈಕ ಹೆಸರು, ಪಂಡರಿ ಬಾಯಿ.
ನಿನ್ನಂಥ ಅಪ್ಪ ಇಲ್ಲ...
ಅಪ್ಪನ ಪಾತ್ರಗಳಲ್ಲಿ ಆರ್. ನಾಗೇಂದ್ರರಾಯರು, ಬಿ.ಆರ್. ಪಂತುಲು, ಡಿಕ್ಕಿ ಮಾಧವರಾವ್ ಹಾಗೂ ಈಗಿನ ತಲೆಮಾರಿನ ಅಪ್ಪನಾಗಿ ಅನಂತನಾಗ್, ಅಚ್ಯುತ್ ಕುಮಾರ್, ಶ್ರೀನಿವಾಸಮೂರ್ತಿ ಹೀಗೆ ಅನೇಕರು ತಂದೆಯಾಗಿ ತೆರೆ ತುಂಬಿಕೊಂಡವರು. ಆದರೂ 'ಕನ್ನಡದ ಶಾಶ್ವತ ಅಪ್ಪ' ಕೆ.ಎಸ್. ಅಶ್ವತ್ಥ್. 'ನಾಗರಹಾವು' ಚಿತ್ರದ ಚಾಮಯ್ಯ ಮೇಷ್ಟ್ರು ಮುಂದೆ ತಂದೆಯಾಗಿ ಹೆಚ್ಚು ಪ್ರಸಿದ್ಧಿಗೆ ಬರಲು ಕಾಣವಾಗಿದ್ದು, 'ನಮ್ಮ ಮಕ್ಕಳು', 'ಗಾಳಿ ಗೋಪುರ', 'ಮಗ- ಮೊಮ್ಮಗ', 'ತಂದೆ- ಮಕ್ಕಳು' ಚಿತ್ರಗಳು. ಅದರಲ್ಲೂ ಅಣ್ಣಾವ್ರಿಗೆ 'ಮೋಡದ ಮರೆಯಲ್ಲಿ' ಚಿತ್ರದಲ್ಲಿ ಅಪ್ಪನಾಗಿ ಕಾಣಿಸಿಕೊಂಡ ಅಶ್ವತ್ಥ್ರ ಸಹಜ ಅಭಿನಯವನ್ನು ಮರೆಯಲುಂಟೇ? ಕನ್ನಡ ಚಿತ್ರರಂಗ ಇನ್ನೂ ಕನವರಿಸುತಿದೆ... 'ನಿನ್ನಂಥ ಅಪ್ಪ ಬೇಕು' ಅಂತ!
ಅಣ್ಣ- ತಂಗಿ
ಅಣ್ಣ, ತಂಗಿಯಾಗಿ ಬ್ಲ್ಯಾಕ್ ಆ್ಯಂಡ್ ವೈಟ್ ಕಾಲದಲ್ಲಿ ಹೆಚ್ಚು ಪ್ರಸಿದ್ಧಿಯಾದವರು ಈ ತಲೆಮಾರಿಗೆ ತೀರಾ ಅಪರಿಚಿತ. ಆದರೆ, ಈಗ ಅಣ್ಣ- ತಂಗಿ ಅಂದಾಕ್ಷಣ ನೆನಪಾಗುವ ಜೋಡಿ ಶಿವರಾಜ್ಕುಮಾರ್- ರಾಧಿಕಾ. 'ಅಣ್ಣ ತಂಗಿ' ಚಿತ್ರದಲ್ಲಿ ಅಣ್ಣ ಮತ್ತು ತಂಗಿ ನಡುವಿನ ಗಾಢ ಸಂಬಂಧವನ್ನು ತೆರೆದಿಟ್ಟ ಈ ಚಿತ್ರ ಪ್ರೇಕ್ಷಕನನ್ನು ಭಾವನಾತ್ಮಕವಾಗಿ ಸೆಳೆಯಿತು. ಅಲ್ಲಿಂದ ಇಲ್ಲಿತನಕ ಶಿವರಾಜ್ ಕುಮಾರ್ ಹಾಗೂ ರಾಧಿಕಾ ಅಣ್ಣ, ತಂಗಿ ಪಾತ್ರಗಳಿಗೆ ಬ್ರ್ಯಾಂಡ್ ಅಂಬಾಸಿಡರ್ನಂತೆ. ಮುಂದೆ ಸೆಟ್ಟೇರಲಿರುವ 'ಬಂಗಾರದ ವಂಶ' ಚಿತ್ರದಲ್ಲೂ ಶಿವಣ್ಣ ಮತ್ತು ರಾಧಿಕಾ ಅಣ್ಣ, ತಂಗಿಯಾಗಲಿದ್ದಾರೆ.
ಯಜಮಾನನಿಲ್ಲದ ಮನೆ
ಕನ್ನಡ ಚಿತ್ರಜಗತ್ತಿಗೆ ಏಕೈಕ ಯಜಮಾನ ನಟ ವಿಷ್ಣುವರ್ಧನ್. ಡಾ. ರಾಜ್ಕುಮಾರ್ ನಂತರ ಚಿತ್ರರಂಗದ ಈ 'ವಂಶವೃಕ್ಷ' ದೊಡ್ಡ ದಿಕ್ಕಾಗಿ ಕಂಡಿತು. 'ವೀರಪ್ಪ ನಾಯ್ಕ', 'ಸೂರ್ಯವಂಶ', 'ಸೂರಪ್ಪ', 'ಜಮೀನ್ದಾರ್ರು', 'ಸಿಂಹಾದ್ರಿಯ ಸಿಂಹ' ಚಿತ್ರಗಳಲ್ಲಿ ವಿಷ್ಣುವರ್ಧನ್ರ ಹಿರಿತನ ಸಾಬೀತಾಗಿ, ಪ್ರೇಕ್ಷಕ ಅದನ್ನು ಮನಸ್ಸಾರೆ ಒಪ್ಪಿಯೂಬಿಟ್ಟ.
ಹುಳಿ ಹಿಂಡಲು ಬಂದರು...
ಇವೆಲ್ಲದರ ಹೊರತಾಗಿ ತಾತಾ, ಅತ್ತೆ, ಹುಳಿ ಹಿಂಡುವ ಕಂತ್ರಿಗಳೂ ಕುಟುಂಬದ ಭಾಗವೇ. 'ಕನ್ನಡದ ಶಾಶ್ವತ ತಾತಾ' ಬಾಲಣ್ಣರನ್ನು ನಾವೆಂದೋ ಕಳೆದುಕೊಂಡಿದ್ದೇವೆ. ಸದ್ಯ ಅತ್ಯುತ್ತಮ ತಾತಾ ಎಂದರೆ ಸದಾಶಿವ ಬ್ರಹ್ಮಾವರ್. ಹಿಂದೆ ಪ್ರತಿ ಚಿತ್ರಕ್ಕೂ ಅತ್ತೆಯದ್ದು ನಿರ್ಣಾಯಕ ಪಾತ್ರ. ಹಾಗೆ ಜೋರು ಸದ್ದುಮಾಡಿದ ಅತ್ತೆಯಂದಿರೆಂದರೆ, ರಮಾದೇವಿ, ಉಮಾ ಶಿವಕುಮಾರ್ ಹಾಗೂ ಸತ್ಯಭಾಮಾ. ಇಂಥ ಅಪರೂಪದ ಕುಟುಂಬದಲ್ಲಿ ಹುಳಿ ಹಿಂಡಿದವರೂ ಸಿಗುತ್ತಾರೆ. ಅದರಲ್ಲಿ ರಾಜಾಶಂಕರ್ (ಕಸ್ತೂರಿ ನಿವಾಸ), ಮುಸುರಿ ಕೃಷ್ಣಮೂರ್ತಿ, ಮೈಸೂರು ಲೋಕೇಶ್ ಫೇಮಸ್ಸು. ಮನೆಹಾಳು ಮಾವನಾಗಿ ಮುಸುರಿಗಿಂತ ಹೆಚ್ಚು ಕಾಡುವವರು ಬೇರೊಬ್ಬರಿಲ್ಲ. ಮನೆಹಾಳು ನೆಂಟನಾಗಿ ಮೈಸೂರು ಲೋಕೇಶ್ ಕೂಡ ಪ್ರೇಕ್ಷಕರ 'ಶಾಪ'ಕ್ಕೆ ಗುರಿಯಾದವರೇ.
- ಆರ್. ಕೇಶವಮೂರ್ತಿ
keshavarkm1@gmail.com