

ಕನ್ನಡ ಚಿತ್ರರಂಗದ ಸಜ್ಜನ ಸಂಗೀತ ನಿರ್ದೇಶಕನಾಗಿರುವ ವಿ.ಮನೋಹರ್, ತಮ್ಮ ಸಂಸಾರದಲ್ಲಿ ಸರಿಗಮ ನುಡಿಸಿರುವ ಪರಿ ಇದು.
'ಹೋದೆಯ ದೂರ ಓ ಜೊತೆಗಾರ...' ಹಾಡು ಬರೆದು ಹತ್ತಿರ ಬಂದ ಗೀತ ಸಾಹಿತಿ ವಿ.ಮನೋಹರ್. ಇಂದು ಅವರು ಏರಿರುವ ಎತ್ತರದಲ್ಲಿ ಸಾಹಿತ್ಯ, ಸಂಗೀತ, ನಟನೆ, ಗಾಯನದ ವೈವಿಧ್ಯತೆಗಳಿವೆ. ವಿದ್ಯೆ, ವಿನಯದ ಕತೆಗಳಿವೆ. ಮೌನದಲ್ಲೇ ಸಂಗೀತ ಹುಟ್ಟುತ್ತದೆ ಎನ್ನುವುದಕ್ಕೆ ಸರಳ ಮಾತಿನ ಮನೋಹರ್ ಉತ್ತಮ ಉದಾಹರಣೆ. ತನ್ನ ಎಷ್ಟೋ ವರ್ಷದ ಆತ್ಮೀಯರು ಇಂದು ಪರಿಚಯವಾದ ಅಭಿಮಾನಿಗಳೊಂದಿಗೆ ಅಂತರ ಕಲ್ಪಿಸದಷ್ಟು ಆತ್ಮೀಯವಾಗಿ ಮಾತನಾಡುವ ಒಬ್ಬ ಸೆಲೆಬ್ರಿಟಿ ಇರುವುದಾದರೆ ಅದು ಮನೋಹರ್ ಮಾತ್ರ. ಮನೆಯ ಹುಡುಗಿಗೆ ತನ್ನೊಂದಿಗೆ ಹೊಂದಿಕೊಳ್ಳುವ ಕಷ್ಟವೇಕೆ ಕೊಡಬೇಕೆಂದು ಮದುವೆಯೇ ಬೇಡ ಎಂದು ಕುಳಿತವರು. ಇದೇ ಏಪ್ರಿಲ್ 29ಕ್ಕೆ ಇವರ ಮದುವೆಯಾಗಿ ವರ್ಷ ಹತ್ತು ತುಂಬುತ್ತದೆ. ವೃತ್ತಿ ಬದುಕಿನಲ್ಲಿ ಮೂರು ದಶಕ ಪೂರೈಸಿರುವ ಈ ಸಜ್ಜನಿಗ ತಮ್ಮ ಸಂಗೀತ, ಸಂಗಾತಿ ಮತ್ತು ಸಂಸಾರದ ಸಂಗತಿಗಳನ್ನು ಅವರ ಜನುಮದ ಜೋಡಿಯೊಂದಿಗೆ ಸೇರಿ ಇಲ್ಲಿ ನಮ್ಮ ಜೊತೆ ಹಂಚಿಕೊಂಡಿದ್ದಾರೆ.
ಇನ್ನೆಷ್ಟೋ ದೊಡ್ಡ ಅವಕಾಶಗಳನ್ನು ಪಡೆಯುವ ಸಾಮರ್ಥ್ಯವಿದ್ದರೂ ನಿಮ್ಮ ಸರಳತೆಯಿಂದಲೇ ನೀವಾಗಿ ಬದಿಗೆ ಸರಿದಂತಿದೆ?
ಇಲ್ಲ. ಸರಳತೆ ಎಂದಿಗೂ ಮೈನಸ್ ಆಗದು. ಹಾಗಾಗಿ ಸರಳವಾಗಿರುವ ಕಾರಣ ಅವಕಾಶ ಕಳೆದುಕೊಂಡೆ ಎಂದು ನಾನು ಹೇಳುವುದಿಲ್ಲ. ಆದರೆ ನನ್ನನ್ನು ಹೇಗೆ ಫೋಕಸ್ ಮಾಡಿಕೊಳ್ಳಬೇಕು ಎಂಬ ಬಗ್ಗೆ ಸರಿಯಾದ ಜ್ಞಾನವಿಲ್ಲದೆ ಹೋದದ್ದು ಮಾತ್ರ ಸತ್ಯ. ಅದಕ್ಕೆ ನನ್ನ ದಡ್ಡತನವೇ ಕಾರಣ.
ಕನ್ನಡದ ಆಲ್ ಟೈಮ್ ರೆಕಾರ್ಡರ್ ಆಗಿರುವ ಜನುಮದ ಜೋಡಿಯ ಸಂಗೀತ ನಿರ್ವಹಿಸಿದ ಬಳಿಕವೂ ಇಷ್ಟೊಂದು ವಿನಮ್ರತೆಯನ್ನು ಹೇಗೆ ಉಳಿಸಿಕೊಂಡಿರಿ?
ಯಶಸ್ಸು ಸಾಧಿಸಿದ್ದೇನೆಂಬ ಗರ್ವ ಬಂದಾಗ ಮಾತ್ರ ಮನುಷ್ಯ ಮತ್ತೊಂದು ರೀತಿ ಬದಲಾಗಲು ಸಾಧ್ಯ. ಆದರೆ ನನಗೆ ಸಿಕ್ಕಿರೋದು ಯಾರಿಗೂ ಸಿಗದಷ್ಟು ದೊಡ್ಡ ಯಶಸ್ಸು ಎಂದು ನಾನೇನೂ ಅಂದುಕೊಂಡಿಲ್ಲ. ನನ್ನ ಆಶೆ, ಆಶಯಗಳೆಲ್ಲಾ ಬಹಳ ದೊಡ್ಡದಾಗಿರುವುದರಿಂದ ಈಗಲೂ ಏನನ್ನೂ ಸಾಧಿಸಿರುವುದಾಗಿ ನನಗೆ ಅನಿಸುತ್ತಿಲ್ಲ.
ನಿಮ್ಮ ಈಡೇರದಿರುವ ಆಶೆ-ಆಶಯಗಳೇನು?
ಆರಂಭದಲ್ಲಿ ಸಿನೆಮಾ ಫೀಲ್ಡ್ಗೆ ಬರುವುದೊಂದೇ ಗುರಿಯಾಗಿತ್ತು. ಛಾಯಾಗ್ರಾಹಕ ಸುಂದರನಾಥ್ ಸುವರ್ಣ್ಣರು ನನ್ನನ್ನು ಕಾಶೀನಾಥ್ಗೆ ಪರಿಚಯಿಸಿದರು. ಅನುಭವ ಚಿತ್ರಕ್ಕೆ ಹಾಡು ಬರೆದೆ. ಅನಾಮಿಕಕ್ಕೆ ಅಸಿಸ್ಟೆಂಟ್ ಡೈರೆಕ್ಟರಾದೆ. ಅನಂತನ ಅವಾಂತರಕ್ಕೆ ಅಸೋಸಿಯೇಟ್ ಕೂಡ ಆದೆ. ಮುಂದೆ ನಿರ್ದೇಶಕನಾಗುವ ಕನಸಿತ್ತು. ನನಗೆ ಸಂಗೀತದಲ್ಲಿರುವ ಆಸಕ್ತಿ ಅರಿತು ಹಂಸಲೇಖಾ ಕರೆಸಿಕೊಂಡರು. ಸಂಗೀತ ನಿರ್ದೇಶಕನೂ ಆದೆ. ಬಳಿಕ ಚಿತ್ರಗಳನ್ನೂ ನಿರ್ದೇಶಿಸಿದೆ. ಆದರೆ ನನ್ನ ನಿರೀಕ್ಷೆಯ ಚಿತ್ರಗಳನ್ನು ನಿರ್ದೇಶಿಸುವ ಅವಕಾಶ ಸಿಕ್ಕಿಲ್ಲ. ಅದೇ ರೀತಿ ತಯಾರು ಮಾಡಿರುವ ಹಲವಾರು ಟ್ಯೂನ್ಗಳಿವೆ. ಅವುಗಳನ್ನು ಕೂಡ ಬಳಸಲು ಸರಿಯಾದ ಸಂದರ್ಭಗಳು ಸಿಕ್ಕಿಲ್ಲ.
ನೀವು ಸಂಗೀತ ಕಲಿತಿದ್ದೇ ಹಂಸಲೇಖಾರಿಂದಲೇ?
ವಾಸ್ತವದಲ್ಲಿ ನಾನು ಆಗ ಶಾಸ್ತ್ರೀಯ ಸಂಗೀತ ಕಲಿತಿರಲಿಲ್ಲ. ಇಷ್ಟಕ್ಕೂ ಸಿನೆಮಾ ಗೀತೆಗೆ ರಾಗಸಂಯೋಜನೆ ಮಾಡಬೇಕಾದರೆ ಶಾಸ್ತ್ರೀಯ ಸಂಗೀತ ಕಲಿಯುವ ಅಗತ್ಯವಿಲ್ಲ. ಟ್ಯೂನ್ಗಳು ಅನಕ್ಷರಸ್ಥರಿಗೂ ಹೊಳೆಯಬಲ್ಲದು. ಅದಕ್ಕೆ ಜನಪದ ಗೀತೆಗಳೇ ಉದಾಹರಣೆ. ಅದಕ್ಕೆ ಹಾಡು ಕಟ್ಟುವುದು ಎನ್ನುತ್ತಾರೆ. ಕಾಲೇಜು ದಿನಗಳಿಂದಲೇ ನಾನು ಹೊಸ ಹೊಸ ಟ್ಯೂನ್ಗಳನ್ನು ಮಾಡುತ್ತಿದ್ದೆ. ಅವುಗಳನ್ನು ನೆನಪಿರಿಸಲು ಅದೇ ರಾಗದಲ್ಲಿ ಏನಾದರೊಂದು ಹಾಡನ್ನು ಬರೆದಿರಿಸಿಕೊಳ್ಳುತ್ತಿದ್ದೆ. 'ಓ ಚಂದಮಾಮ' ಹಾಡಿನ ಟ್ಯೂನ್ ನಾನು ಕಾಲೇಜು ದಿನದಲ್ಲೇ ತಯಾರಿಸಿದ್ದಾಗಿತ್ತು. ಹಂಸಲೇಖಾ ಬರಿ ಹಾಡು ಬರೆದರೆ ಸಾಲದು, ಸಾಹಿತ್ಯ ಮತ್ತು ಸಂಗೀತದಲ್ಲಿ ಏನಾದರೂ ವಿಶೇಷತೆಗಳಿದ್ದರಷ್ಟೇ ಅದು ನೆನಪುಳಿಯಲು ಸಾಧ್ಯ ಎಂದು ಹೇಳಿಕೊಟ್ಟರು. 87ರ ಕಾಲದಲ್ಲಿ ಸಂಗೀತದ ಬಗ್ಗೆ ಏನೇನೂ ಗೊತ್ತಿಲ್ಲದ ನನ್ನನ್ನು ಅವರ ಜೊತೆಗಿರಿಸಿಕೊಂಡು ಖರ್ಚಿಗೆ ನಿತ್ಯವೂ 100 ರುಪಾಯಿ ಕೊಟ್ಟು ನೋಡಿಕೊಂಡಿದ್ದರೆಂಬುದನ್ನು ಮರೆಯುವಂತಿಲ್ಲ.
ಮದುವೆಯೇ ಬೇಡವೆಂದು ಕುಳಿತಿದ್ದ ನೀವು ಪ್ರೇಮ ವಿವಾಹವಾದ ಬಗೆ ಹೇಗೆ?
ಅವಳ ಹೆಸರು ನಾಗವೇಣಿ. ಆರ್ಕೆಸ್ಟ್ರಾ ಹಾಡುಗಾರನಾದ ತನ್ನ ತಮ್ಮನನ್ನು ಕರೆದುಕೊಂಡು ಸಿನೆಮಾದಲ್ಲಿ ಹಾಡಿಸುವ ಅವಕಾಶ ಕೇಳಿ ಮನೆಗೆ ಬಂದಿದ್ದಳು. ಹಾಗೆ ಬಂದು ಹೋದ ಮೇಲೆಯೂ ಮನೆಯ ನಂಬರ್ಗೆ ಕರೆ ಮಾಡಿ ಆದರದಿಂದ ಮಾತನಾಡುತ್ತಿದ್ದರು. ಮನೆಗೂ ಆಹ್ವಾನಿಸಿದ್ದರು. ನಾನು ಮದುವೆ ಬೇಡ ಎಂದು ಕುಳಿತಿದ್ದರೂ ನಟ ಅವಿನಾಶ್, ಮಾಳವಿಕಾ, ಬಿ.ಆರ್.ಛಾಯಾ ಮೊದಲಾದವರು ಬೇಗ ಒಂದು ಮದುವೆಯಾಗಿ ಬಿಡು ಎಂದು ಸದಾ ಒತ್ತಾಯಿಸುತ್ತಿದ್ದರು. ನಾಗವೇಣಿಯನ್ನು ನೋಡಿದ ಮೇಲೆ ನನಗೂ ಇಂಥ ಹುಡುಗಿಯನ್ನು ಮದುವೆಯಾದರೆ ಅಡ್ಡಿಯಿಲ್ಲವೆನಿಸಿತು. ನೇರ ಮನೆಗೆ ಹೋಗಿ ಮಾತನಾಡಿಸಿದೆ. ಅವರು ಒಪ್ಪಿದರು. ಮದುವೆ ಪಳನಿಯ ದೇಗುಲದಲ್ಲಿ ಸರಳವಾಗಿಯೇ ನಡೆಯಿತು. ಈಗ ನಮಗೆ ಒಂದು ಮಗುವೂ ಇದೆ.
ನಿಮ್ಮ ಪತ್ನಿ ಹಾಡುವುದಿಲ್ಲವೇ?
ಹಾಡುತ್ತಾಳೆ. ಆಕೆಯ ತಮ್ಮನೂ ಹಾಡುತ್ತಾನೆ. ಆದರೆ ಇಬ್ಬರಿಗೂ ಸಿನೆಮಾದಲ್ಲಿ ಹಾಡಲು ಇನ್ನೂ ಅವಕಾಶಗಳು ಕೂಡಿ ಬಂದಿಲ್ಲ. ಇಷ್ಟಕ್ಕೂ ಹೊಸಬರಿಗೆ ಅವಕಾಶ ಕೊಡುವುದು ನನ್ನ ಒಬ್ಬನದೇ ನಿರ್ಧಾರವಾಗುವುದು ಸಾಧ್ಯವಿಲ್ಲವಲ್ಲ.
ಸಣ್ಣಮ್ಮಿಯ ಮಾತು
ನಂಗೆ ಅಪ್ಪ, ಅಮ್ಮ ಇಬ್ಬರೂ ಇಷ್ಟ. ಅಮ್ಮನಿಗಿಂತ ಅಪ್ಪ ತುಂಬಾನೇ ಇಷ್ಟ. ಯಾಕೆಂದರೆ ನನಗೆ ಯಾರಾದರೂ ಗಾಯ ಮಾಡಿದ್ದರೆ ಅವರು ಮಂತ್ರ ಹಾಕುತ್ತಾರೆ. ನೆಕ್ಸ್ಟ್ಡೇ ಗಾಯವೆಲ್ಲಾ ಮಾಯವಾಗಿರುತ್ತದೆ. ಅಪ್ಪನ ಎಲ್ಲಾ ಹಾಡುಗಳು ನನಗಿಷ್ಟ. ಆಮೇಲೆ ನನಗೆ ತಿಂಡಿಯಲ್ಲಿ ಇಡ್ಲಿ ಇಷ್ಟ. ಸ್ವೀಟ್ಗಿಂತ ಖಾರ ಅಂದ್ರೆ ಪ್ರೀತಿ. ಫ್ರುಟ್ಸ್ನಲ್ಲಿ ಆರೆಂಜ್ ಇಷ್ಟ.
ವಿಟ್ಲದ ಬಗ್ಗೆ
ಮನೋಹರ್ ಹೆಸರಿನ ಮುಂದಿರುವ 'ವಿ' ಸೂಚಿಸುವುದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲವನ್ನು. ಊರಿನಲ್ಲಿ ಸಂಬಂಧಿಕರು ಅಥವಾ ಮನೆ ಮಠ ಇಲ್ಲದೇ ಹೋದರೂ ವರ್ಷಕ್ಕೆರಡು ಬಾರಿ ಕುಟುಂಬ ಸಮೇತ ವಿಟ್ಲಕ್ಕೆ ಹೋಗುವುದನ್ನು ಅವರು ತಪ್ಪಿಸುವುದಿಲ್ಲ. ಬಳ್ಳಾರಿಯಲ್ಲಿ ಹುಟ್ಟಿ ಬೆಳೆದ ನನಗೆ ಅವರ ಕರಾವಳಿಯ ಊರನ್ನು ನೋಡುವುದೇ ಒಂದು ಚಂದದ ಅನುಭವ ಎನ್ನುತ್ತಾರೆ ಪತ್ನಿ ನಾಗವೇಣಿ. ಅಲ್ಲಿ ಹೋದಾಗ ಮನೋಹರ್ ಅವರ ಫ್ಯಾಮಿಲಿ ಫ್ರೆಂಡ್ಸನ್ನು ಭೇಟಿಯಾಗುತ್ತಾರಂತೆ. ಮನೋಹರ್ರ ತುಳು ಭಾಷೆಯನ್ನು ನಾನು ಕಲಿತಿಲ್ಲವಾದರೂ ಮಗು ಈಗಾಗಲೇ ವಣಸಾಂಡ, ಇಜ್ಜಿಪ್ಪಾ ಮೊದಲಾಗಿ ತುಳು ಮಾತನಾಡುತ್ತಿದ್ದಾಳೆ ಎಂದು ನಗುವಾಗುತ್ತಾರೆ ನಾಗವೇಣಿ.
ನಾಗವೇಣಿ ಜತೆ ಮಾತುಕತೆ
ಮನೋಹರ್ ಕಡೆಯಿಂದ ಮದುವೆ ಪ್ರಫೋಸಲ್ ಬಂದಾಗ ನಿಮಗೂ ಇಷ್ಟವಾಯಿತೇ?
ಖಂಡಿತಾ. ನನಗೆ ಆರಂಭದಿಂದಲೂ ಸಿನೆಮಾ ಹಾಡುಗಳೆಂದರೆ ಇಷ್ಟ. ರಾಜನ್ ನಾಗೇಂದ್ರ, ಹಂಸಲೇಖಾ ಹಾಡುಗಳನ್ನು ಇಷ್ಟಪಟ್ಟಿದ್ದ ನಾನು ಜನುಮದ ಜೋಡಿ, ಓ ಮಲ್ಲಿಗೆ ಬಳಿಕವಂತೂ ಮನೋಹರ್ ಹಾಡುಗಳಿಗೆ ಫ್ಯಾನ್ ಆಗಿದ್ದೆ. ನನ್ನ ತಮ್ಮನಿಗೆ ಅವಕಾಶ ಕೇಳಲೆಂದು ಮನೆಗೆ ಹೋದಾಗ ನನ್ನ ಜೊತೆ ತಮ್ಮನಿಗೂ ತುಂಬಾ ಟೆನ್ಶನ್ ಇತ್ತು. ಮೊದಲ ಬಾರಿ ಒಬ್ಬ ದೊಡ್ಡ ಸಿನೆಮಾ ಸಂಗೀತ ನಿರ್ದೇಶಕರನ್ನು ಭೇಟಿಯಾದ ಘಳಿಗೆ ಅದು. ಆದರೆ ಅವರು ನಮ್ಮೊಂದಿಗೆ ತುಂಬಾನೇ ಗೌರವಾದರಗಳಿಂದ ಮಾತನಾಡಿಸಿ ಬೀಳ್ಕೊಟ್ಟಾಗ ತುಂಬಾ ಅಚ್ಚರಿಯೆನಿಸಿತ್ತು. ಅನಂತರ ಎರಡು ದಿನ ನಾನು ಮತ್ತು ತಮ್ಮ ಸೇರಿ ಮನೆಯಲ್ಲಿ ಮನೋಹರ್ ಬಗ್ಗೆಯೇ ಮಾತನಾಡುತ್ತಿದ್ದೆವು. ಅಂಥವರು ನನ್ನನ್ನು ಇಷ್ಟಪಟ್ಟಿದ್ದೇ ದೊಡ್ಡ ಸಂಗತಿಯಾಗಿತ್ತು.
ಮದುವೆಗೆ ಮನೆಯಿಂದ ಎಲ್ಲರ ಸಮ್ಮತಿಯಿತ್ತೆ?
ನನ್ನ ತಂದೆ ಪ್ರತಾಪ್ ಅಂತ. ಅವರು ಬೆಂಗಳೂರಿನ ಆರಂಭದ ಆರ್ಕೆಸ್ಟ್ರಾ ತಂಡಗಳಲ್ಲೊಂದಾದ ನವಕರ್ನಾಟಕದಲ್ಲಿ ಗಾಯಕರಾಗಿದ್ದವರು. ತಾಯಿ ಅಮೃತಾ ವೀಣಾವಾದಕಿ. ತಾಯಿಯ ತಂದೆ ಬಳ್ಳಾರಿ ರಾಘವ ಸಿನೆಮಾ ನಟರಾಗಿದ್ದವರು. ಹಾಗಾಗಿ ಸಿನೆಮಾ ಮತ್ತು ಕಲೆಯ ಬಗ್ಗೆ ಮನೆಯಲ್ಲಿ ಸಹಜ ಗೌರವಾದರಗಳು ಇದ್ದವು. ಆದರೆ ನನ್ನ ಮದುವೆಗಿಂತ ಬಹಳ ಮೊದಲೇ ತಂದೆ ಮತ್ತು ತಾತ ತೀರಿಹೋಗಿದ್ದರು. ಜೊತೆಗೆ ಮನೋಹರ್ ಸಿನೆಮಾರಂಗದಲ್ಲಿ ದೊಡ್ಡ ಸ್ಥಾನದಲ್ಲಿರುವುದರಿಂದ ತಾಯಿಗೆ ಒಂದಷ್ಟು ಅಂಜಿಕೆಯಿತ್ತು. ಆದರೆ ಮನೋಹರ್ರ ಭರವಸೆಯ ಮಾತು ಎಲ್ಲ ಆತಂಕವನ್ನು ದೂರವಾಗಿಸಿತ್ತು. ಈಗಲಂತೂ ಮನೋಹರ್ರಂಥ ಗುಣವಂತರನ್ನು ಪತಿಯಾಗಿ ಪಡೆಯಲು ನಾನು ಮತ್ತು ತಂದೆಯಾಗಿ ಪಡೆಯಲು ನಮ್ಮ ಪಾಪು ಅದೃಷ್ಟ ಮಾಡಿದೆ ಎಂದುಕೊಳ್ಳುತ್ತಿದ್ದೇನೆ.
ನಿಮ್ಮ ಪಾಪುವಿನ ಬಗ್ಗೆ ಹೇಳಿ?
ಮಗಳ ಹೆಸರು ಪದ್ಮಾ ಶಾರ್ವರಿ. ಮೂರನೇ ತರಗತಿ. ಪದ್ಮಾ ಎಂಬುದು ಮನೋಹರ್ ತಾಯಿಯ ಹೆಸರು. ನೋಟದಲ್ಲಿ, ಗುಣದಲ್ಲಿ ತಾಯಿಯದೇ ಹೋಲಿಕೆ ಎಂದು ಮನೋಹರ್ ಹೇಳುತ್ತಿರುತ್ತಾರೆ. ಪ್ರಾಣಿ ಪಕ್ಷಿಗಳನ್ನು ಪ್ರೀತಿಸುವಲ್ಲಿ, ಗಿಡ ಬೆಳೆಸುವಲ್ಲಿ ತಾಯಿಯನ್ನೇ ಹೋಲುತ್ತಾಳೆ. ನಾವೆಲ್ಲಾ ಮುದ್ದಿನಿಂದ ಶಿಯಾ, ಚಿಯಾ ಎಂದು ಕರೆದರೂ ಮನೋಹರ್ ಮಗಳಿಗಿಟ್ಟಿರುವ ಹೆಸರು ಸಣ್ಣಮ್ಮಿ ಅಂತ.
- ಶಶಿಕರ ಪಾತೂರು
shashishashi82@gmail.com