ಹೆಂಡ್ತೀನೆ ಸಾಂಗು ಗುರು!

ಹೆಂಡ್ತೀನೆ ಸಾಂಗು ಗುರು!
Updated on: 

ಈ ಜೋಡಿಯ ಬಾಳೊಂದು ಸುಂದರ ಗೀತೆ. ಪತ್ನಿ ನಿಜಕ್ಕೂ ಪಲ್ಲವಿ. ಪ್ರತಿ ಚರಣ ಪತಿ ಗುರುಕಿರಣ. ಗುರುವಿಗೆ ಪತ್ನಿ ಸ್ಪೂರ್ತಿಯೆನ್ನುವುದಕ್ಕಿಂತಲೂ ಅದೃಷ್ಟ ಎನ್ನಬಹುದು. ಯಾಕೆಂದರೆ ಗಾಂಧಿನಗರದಲ್ಲಿ ಸಂಗೀತ ನಿರ್ದೇಶಕನಾಗಲು ದಶಕದಿಂದ ಪ್ರಯತ್ನಿಸಿದ್ದರು ಗುರು. ಆದರೆ ಸ್ವತಂತ್ರ ಸಂಗೀತ ನಿರ್ದೇಶಕನಾಗಿ ಮೊದಲ ಅವಕಾಶ, ಮೊದಲ ಯಶಸ್ಸು ಸಿಕ್ಕಿದ್ದು ಮದುವೆಯ ಬಳಿಕ. ಕನ್ನಡ ಸಿನಿಮಾಗಳ ನಾಯಕನಾಗಿದ್ದುಕೊಂಡು ಅಕಾಲದಲ್ಲಿ ತೀರಿಹೋದ ನಟ ಸುನೀಲ್‌ನ ಚಿಕ್ಕಮ್ಮನ ಮಗಳು ಈಕೆ. ಗುರು ಎಷ್ಟೋ ಬಾರಿ ಹೆಂಡ್ತಿ ಸ್ಫೂರ್ತಿಯಿಂದಲೇ ಹಿಟ್ ಹಾಡುಗಳನ್ನು ಕೊಟ್ಟಿದ್ದಾರೆ. ಗುರುವಿನ ಅದೃಷ್ಟ ದೇವತೆಯೆನಿಸಿದ ಪಲ್ಲವಿಯೊಂದಿಗಿನ ಮಾತುಕತೆ ಇಲ್ಲಿದೆ...

ಪಲ್ಲವಿ ಟಾಕ್
ನಿಮ್ಮದು ಪ್ರೇಮವಿವಾಹವೇ?

ಖಂಡಿತಾ ಅಲ್ಲ. ಆದರೆ ಸುನೀಲಣ್ಣ (ಚಿತ್ರನಟ ಸುನೀಲ್) ಮನೆಗೆ ಬರುವಾಗ ಅವರೊಂದಿಗೆ ಇವರನ್ನು ಜೊತೆಗೆ ನೋಡಿದ್ದೆ. ಆದರೆ ನಮ್ಮ ಮದುವೆ ನಡೆದಿದ್ದು ಸುನೀಲ್ ತೀರಿಕೊಂಡ ಮೂರು ವರ್ಷಗಳ ಬಳಿಕ. ಅದೂ ಅಚಾನಕ್ ಆಗಿ. ನಾನು ಬಿಎಸ್ಸಿ ಫೈನಲಿಯರ್‌ನಲ್ಲಿದ್ದಾಗ ಗೃಹಪ್ರವೇಶವೊಂದರಲ್ಲಿ ಗುರು ತಂದೆ ನನ್ನನ್ನು ನೋಡಿ ನನ್ನ ತಂದೆಯಲ್ಲಿ ವಿವಾಹದ ಬಗ್ಗೆ ಪ್ರಸ್ತಾಪಿಸಿದರಂತೆ. ಅದಕ್ಕೂ ಸ್ವಲ್ಪ ಮೊದಲು ನನ್ನ ತಂದೆಗೆ ಹೃದಯಾಘಾತ ಆಗಿತ್ತು. ನನಗೆ ಬೇಗ ಒಂದು ಮದುವೆ ಮಾಡಿಸಿಬಿಡುವ ಆಕಾಂಕ್ಷೆ ಅವರದಾಗಿತ್ತು. ಬಂಟ್ಸ್‌ರಲ್ಲಿ ವರದಕ್ಷಿಣೆಯೂ ಅಧಿಕವಿರುವ ದಿನಗಳಲ್ಲಿ ಅದ್ಯಾವುದನ್ನೂ ಬಯಸದೆ ಮುಂದೆ ಬಂದ ಇವರನ್ನು ನಾನೂ ಒಪ್ಪಿದೆ.
ಗುರು ಇಷ್ಟೆತ್ತರಕ್ಕೇರುತ್ತಾರೆಂದು ನಿರೀಕ್ಷಿಸಿದ್ದಿರಾ?
ನಿಜಕ್ಕೂ ಇವರಿಗೆ ಸಂಗೀತವೇ ಉಸಿರು ಎಂದು ನನಗೆ ತಿಳಿದಿರಲಿಲ್ಲ. ಅದೊಂದು ಹವ್ಯಾಸವಷ್ಟೇ ಎಂದು ಹೇಳಿದ್ದರು. ವಿದ್ಯಾಸಂಸ್ಥೆ, ರೆಸ್ಟೋರೆಂಟ್‌ಗಳನ್ನು ಹೊಂದಿದ್ದ ಇವರದು ಮಂಗಳೂರಲ್ಲೇ ಪ್ರತಿಷ್ಠಿತ ಮನೆತನ. ನನ್ನನ್ನು ಅವರ ಕದ್ರಿಯ ಮನೆಯಲ್ಲಿ ಬಿಟ್ಟು ಕೆಲಸದ ನಿಮಿತ್ತ ಪದೇಪದೇ ಬೆಂಗಳೂರಿಗೆ ಹೋಗುತ್ತಿದ್ದರು. ವರ್ಷದೊಳಗೆ 'ಎ' ಚಿತ್ರದ ಸಂಗೀತ ನಿರ್ದೇಶನದಿಂದ ದೊಡ್ಡ ಮಟ್ಟದಲ್ಲಿ ಜನಪ್ರಿಯರಾದರು. ಆಗಲೇ ಇವರಲ್ಲಿ ಇಷ್ಟೊಂದು ಸಂಗೀತದ ಪ್ರತಿಭೆ ಅಡಗಿತ್ತೆಂಬ ಸತ್ಯ ನನಗರಿವಾಗಿದ್ದು 'ಎ' ಚಿತ್ರ ಮಂಗಳೂರಲ್ಲೂ ಭರ್ಜರಿ ಗೆಲುವು ಕಂಡಾಗ ಫ್ರೆಂಡ್ಸ್, ಫ್ಯಾಮಿಲಿಯೊಂದಿಗೆ ಥಿಯೇಟರ್‌ಗೆ ಹೋಗಿ ಚಿತ್ರ ನೋಡಿ ಸಂಭ್ರಮಿಸುತ್ತಿದ್ದೆ.
ತಕ್ಷಣ ನೀವು ಬೆಂಗಳೂರಿಗೆ ಹೊರಡುವ ಮನಸ್ಸು ಮಾಡಿದಿರಾ?
ನನಗೆ ಬರಬೇಕೆಂದಿತ್ತು. ಆದರೆ, 'ನನ್ನದಿನ್ನೂ ಸ್ಟ್ರಗ್ಲಿಂಗ್ ಪಿರಿಯೆಡ್ ಮುಗಿದಿಲ್ಲ. ಇಂದು ನಿನಗೆ ಮಂಗಳೂರಲ್ಲಿ ಸಿಗುವಷ್ಟು ಸವಲತ್ತುಗಳನ್ನು ಬೆಂಗಳೂರಲ್ಲಿ ಒದಗಿಸುವುದು ಸಂದೇಹ. ಇನ್ನೂ ಸ್ವಲ್ಪ ವೆಯ್ಟ್ ಮಾಡು' ಎಂದು ಗುರು ನನ್ನನ್ನು ತಡೆದರು. ಆದರೆ, ಸಿನಿಮಾ ಅಂದರೆ ಬರೇ ಗ್ಲ್ಯಾಮರ್ರು, ಗಮ್ಮತ್ತು ಮಾತ್ರ ಎಂದುಕೊಂಡಿದ್ದ ನನಗೆ ಇಲ್ಲಿ ಇವರ ಕಷ್ಟವೇನಿರಬಹುದು ಎಂದು ಅರ್ಥವಾಗಿರಲಿಲ್ಲ. ಕೊನೆಗೆ 'ಚಿತ್ರ' ಸಿನಿಮಾದ ಬಳಿಕ ಗುರುವಿಗೆ ಕೈತುಂಬಾ ಚಿತ್ರಗಳು ಸಿಗತೊಡಗಿದವು. ಮೊದಲ ಮಗುವಿಗೆ ವರ್ಷ ದಾಟುತ್ತಿದ್ದ ಹಾಗೆ ನನ್ನನ್ನೂ ಬೆಂಗಳೂರಿಗೆ ಕರೆಸಿಕೊಂಡರು. ಆಗ ಇದ್ದಿದ್ದು ಬಾಡಿಗೆ ಮನೆ. ಪ್ರಸ್ತುತ ನಾವಿರುವ ಚಂದ್ರಾಲೇ ಔಟ್‌ನ ಸ್ಟುಡಿಯೋ ವ್ಯವಸ್ಥೆಯೊಂದಿಗಿರುವ ಮನೆಗೆ 3 ವರ್ಷದ ಹಿಂದೆ ಬಂದೆವು.
ಸಂಗೀತ ನಿರ್ದೇಶಕನ ಮಡದಿಯಾಗಿ ಹೇಗನಿಸಿದೆ? ಅಲ್ಲಿ ನಿಮ್ಮ ಪಾತ್ರವೇನು?
ನನ್ನ ಗಂಡನಿಗೆ ಮ್ಯೂಸಿಕ್ಕೇ ಪ್ರೊಫೆಶನ್ ಆಗಿರುವುದಕ್ಕೆ ನಾನು ಲಕ್ಕಿ. ಯಾಕೆಂದರೆ ಬೇರೆಯವರ ಗಂಡಂದಿರಂತೆ ಚಿತ್ರೀಕರಣ ಮುಗಿಸಿದ ಸುಸ್ತು ಅಥವಾ ಕಚೇರಿಯ ಕೆಲಸ ಮುಗಿಸಿದ ತಲೆನೋವಿನೊಂದಿಗೆ ಮರಳುವವರಲ್ಲ. ಎಷ್ಟೇ ಕೆಲಸವಾದರೂ ಅಲ್ಲಿ ಸಂಗೀತ ಮತ್ತು ಕ್ರಿಯೇಟಿವ್ ವ್ಯಕ್ತಿತ್ವಗಳಷ್ಟೇ ಇರುತ್ತವೆ. ಅದೊಂದು ರೀತಿ ಸುಗಂಧದೊಂದಿಗೆ ಗುದ್ದಾಡಿದಂತೆ. ಅವರ ಸಂಗೀತದಲ್ಲಿ ನನಗೇನೂ ಪಾತ್ರವಿಲ್ಲ. ಮಲ್ಲಿಗೆಯಾದರೆ ನಾನು ಬರೇ ನಾರು. ನಾನು ಮಕ್ಕಳತ್ತ ಗಮನಹರಿಸುತ್ತೇನೆ. ಅವರಿಗೆ ಸ್ಪೂರ್ತಿ ನೀಡುವುದಕ್ಕಿಂತಲೂ ಅವರ ಸ್ಟ್ರೆಸ್ಸನ್ನು ಹಂಚಿಕೊಳ್ಳಲು ಮತ್ತು ಮನೆಯ ಕಡೆಯ ತಲೆನೋವನ್ನು ಅವರಿಗೆ ನೀಡದಿರಲು ಪ್ರಯತ್ನಿಸುತ್ತೇನೆ. ಅವರ ಕೆಲಸದ ಕ್ರಿಯೇಟಿವ್ ವಿಭಾಗ ನನಗೆ ಗೊತ್ತಿಲ್ಲ. ಆದರೆ ಅಕೌಂಟ್ಸ್‌ಗೆ ಸಂಬಂಧಿಸಿದಂತೆ ನೋಡಿಕೊಳ್ಳುತ್ತೇನೆ.
ನಿಮ್ಮಿಬ್ಬರಿಗೆ ಪದೇಪದೆ ಯಾವ ವಿಚಾರಕ್ಕೆ ಜಗಳವಾಗುತ್ತಿರುತ್ತದೆ?
ನಮ್ಮಲ್ಲಿ ಜಗಳ ತೀರಾ ಕಡಿಮೆ. ನನಗೆ ಭಿನ್ನಾಭಿಪ್ರಾಯವಿರುವ ಒಂದು ಸಂಗತಿಯೆಂದರೆ, ಅವರಿಗೆ ಮಿತ್ರವರ್ಗ ಹೆಚ್ಚು. ಅದರಿಂದ ನನಗೆ ವೈಯಕ್ತಿವಾಗಿ ತೊಂದರೆಗಳೇನಿಲ್ಲ. ಆದರೆ ಕೆಲವರು ಸ್ನೇಹದ ಹೆಸರಲ್ಲಿ ಇವರ ಒಳ್ಳೆಯತನವನ್ನು ದುರುಪಯೋಗಪಡಿಸುವುದನ್ನು ಕಂಡಿದ್ದೇನೆ. ಅದನ್ನು ಇವರಿಗೆ ತಿಳಿಸಲು ಪ್ರಯತ್ನಿಸಿದಾಗೆಲ್ಲ ಸ್ವಲ್ಪ ವಾಕ್ಸಮರ ನಡೆದದ್ದಿದೆ. ಹಾಗಂತ ನಾನು ಖಂಡಿತ ಸ್ನೇಹಕ್ಕೆ ವಿರೋಧಿಯೇನಲ್ಲ. ಈಗ ನನಗಿರುವ ಫ್ರೆಂಡ್ಸ್‌ಗಳಲ್ಲಿ ಅವರ ಸ್ನೇಹಿತರ ಪಾಲೇ ಹೆಚ್ಚು.

ಗುರು ಟಾಕ್
ನಿಮ್ಮ ಪತ್ನಿಯ ಬಗ್ಗೆ ಹೇಳಿ...

ಅವಳು ನನ್ನನ್ನು ಚೆನ್ನಾಗಿ ಅರ್ಥೈಸಿಕೊಳ್ಳುತ್ತಾಳೆ. ಅವಳದೇ ನಡೆಯಬೇಕೆಂಬ ಹಠವಿಲ್ಲ. ಉದಾಹರಣೆಗೆ 'ಎ' ಸೂಪರ್ ಹಿಟ್ ಆದಾಗ ಆಕೆಯೂ ನನ್ನೊಂದಿಗೆ ಬೆಂಗಳೂರು ಸೇರಲು ಬಯಸಿದಳು. ಆದರೆ, ಯಾಕೋ ನನಗೆ ಅದರ ಯಶಸ್ಸು ಹೊಸ ಅವಕಾಶಗಳನ್ನು ನೀಡದೇ ಹೋಯಿತು. 'ಉಪೇಂದ್ರ'ದ ಬಳಿಕ ಚಿತ್ರದ ಹಾಡುಗಳು ಯಶಸ್ವಿಯಾದ ಮೇಲೆ ಅವಕಾಶಗಳ ಸುರಿಮಳೆಯಾಯಿತು. ಅಲ್ಲಿಯವರೆಗೆ ನಾನು ಪತ್ನಿಗೆ ಕಾಯುವಂತೆ ಹೇಳಿದಾಗ ಸಂದೇಹಿಸದೆ, ಸತಾಯಿಸದೆ ಸಹನೆಯಿಂದ ಕಾದಳು. ಅದರ ಫಲವಾಗಿ ಇಂದು ಮನೆಯಲ್ಲೇ ಸ್ಟುಡಿಯೋ ಮಾಡಿಕೊಂಡು ನೆಮ್ಮದಿಯಿಂದ ಇದ್ದೇವೆ. ಆಕೆ ಸಣ್ಣಸಣ್ಣ ವಿಚಾರಗಳಲ್ಲಿ ಸಂತಸ ಕಾಣುತ್ತಾಳೆ. 'ಮಜ್ನೂ' ಚಿತ್ರದ 'ಐ ಲವ್ ಯು ಡಾರ್ಲಿಂಗ್...' ಹಾಡು ರೆಕಾರ್ಡಿಂಗ್ ನಡೆಯಬೇಕಾದರೆ ಆಕೆ ನನ್ನೆದುರು ಕುಳಿತಿದ್ದಳು.
ನಿಮ್ಮ ಮುಂದಿನ ಕನಸುಗಳೇನು?
ಬಾಲ್ಯದಿಂದಲೇ ನನಗೆ ನಾಳಿನ ಬಗ್ಗೆ ಕನಸುಗಳಿಲ್ಲ. ಕಾಲೇಜು ದಿನಗಳವರೆಗೆ ಮ್ಯೂಸಿಕ್ ಕಲಿಯುವ ಬಗ್ಗೆ ಗಮನವಿರಲಿಲ್ಲ. ಚಿತ್ರಗಳನ್ನು ಬಿಡಿಸುತ್ತಿದ್ದೆ. ಗಾಯಕನಾಗಲೆಂದು ಬೆಂಗಳೂರಿಗೆ ಹೋದೆ. ನಟನೆಗೆ ಕರೆದು ನಾಯಕನಾಗಿಯೂ ಅವಕಾಶ ಕೊಟ್ಟರು. ಸಂಗೀತ ನಿರ್ದೇಶಕನಾದ ಮೇಲೆ ಖುದ್ದು ಹಾಡಿದೆ, ಸಾಹಿತ್ಯ ಬರೆದೆ. ಸದ್ಯಕ್ಕೆ ಸಂಗೀತ ನಿರ್ದೇಶಕನಾಗಿಯೇ ಮುಂದುವರಿದಿದ್ದೇನೆ. ಮುಂದೇನು ಎಂಬ ಬಗ್ಗೆ ಈಗಲೂ ಕನಸುಗಳನ್ನು ಇಟ್ಟುಕೊಂಡಿಲ್ಲ.
ದೇಶದ ರಾಜಕೀಯದ ಬಗ್ಗೆ...
ನಮ್ಮಲ್ಲಿ ರಾಜಕೀಯವೆಂಬುದು ಇನ್ನೊಬ್ಬರ ವಿರುದ್ಧದ ಆರೋಪ ಮತ್ತು ಪ್ರತಿಭಟನೆಗೆ ಮಾತ್ರ ಮೀಸಲಾಗಿದೆ. ಸಂಪೂರ್ಣವಾಗಿ ಭ್ರಷ್ಟಾಚಾರ ರಹಿತ ಸರ್ಕಾರದ ಕಲ್ಪನೆಯೂ ಸಾಧ್ಯವಾಗದ ಕಾಲವಿದು. ಇರುವುದರಲ್ಲಿ ಇತ್ತೀಚೆಗೆ ಆಪ್ ಬಗ್ಗೆ ನನಗೆ ತುಂಬಾ ಹೋಪ್ ಇತ್ತು. ಆದರೆ, ಅಧಿಕಾರಕ್ಕೆ ಬಂದ ಮೇಲೆಯೂ ಅವರು ಪ್ರತಿಭಟನೆಯಲ್ಲಿ ನಿರತರಾಗಿದ್ದು ಮಾತ್ರ ನಿರಾಶಾದಾಯಕ. ಮೊದಲು ಪ್ರತಿಯೊಬ್ಬ ಪ್ರಜೆಯೂ ನಮ್ಮನಮ್ಮ ಕೆಲಸವನ್ನು ಸಿನ್ಸಿಯರಾಗಿ ಮಾಡಲು ಕಲಿತರೆ ಅದೇ ಸಮಾಜಸೇವೆ.

ಪೊಣ್ಣು, ಕಣನಿ, ಕಿನ್ನಿ ಮತ್ತು ಡಿತ್ತು!
ಮೂಲತಃ ಮಂಗಳೂರು ಭಾಗದ ಪಲ್ಲವಿಯನ್ನು ತವರಲ್ಲಿ ಎಲ್ಲರೂ ಪೊಣ್ಣು ಎಂದೇ ಕರೆಯುವುದಂತೆ. ಇದೀಗ ಪತಿ ಗುರುಕಿರಣ್ ಕೂಡ ಅದೇ ರೀತಿ ಕರೆಯುತ್ತಾರೆ. 'ಪೊಣ್ಣು' ಎಂದರೆ, ತುಳುವಿನಲ್ಲಿ 'ಹುಡುಗಿ' ಎಂದರ್ಥ. ಅದಕ್ಕೆ ಪ್ರತಿಯಾಗಿ ಪಲ್ಲವಿ ತಮ್ಮ ಪತಿಯನ್ನು ಮುದ್ದಿನಿಂದ ಹೇಳುವುದು 'ಕಣನಿ' ಎಂದು. ಹಾಗಂದರೆ, ತುಳುವಿನಲ್ಲಿ ಗಂಡ ಎಂದರ್ಥ. ಆದರೆ ಅದನ್ನೂ ಮುದ್ದಾಗಿ ಕಣ್ಮಣಿ ಎಂಬ ಭಾವದೊಂದಿಗೆ ಪತಿಯನ್ನು ಕಣನೀ ಎಂದು ಕರೆಯುವುದಾಗಿ ಹೇಳಿ ನಾಚುತ್ತಾರೆ ಪಲ್ಲವಿ. ಮಗ ಹೃದಯಕಿರಣ್‌ನನ್ನು 'ಡಿತ್ತು' ಎಂದು ಕರೆಯುವ ಈ ದಂಪತಿಗೆ ಮಗಳು ಶ್ರಾವ್ಯ ಅಂದರೆ ಕಿನ್ನಿ (ಮರಿ).
ಮದುವೆಯಾದ ತಿಂಗಳಲ್ಲೇ ಗುರು ಹೇಗೆ 'ಎ' ಚಿತ್ರದ ಮೂಲಕ ಸುದ್ದಿಯಾದರೋ ಅದೇ ರೀತಿ ಮಕ್ಕಳಾದ ಸಂದರ್ಭವೂ ಗುರುವಿಗೆ ಶುಕ್ರದೆಸೆಯನ್ನೇ ತಂದಿತ್ತು. ಯಾಕೆಂದರೆ 'ಚಿತ್ರ' ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ಹಿಟ್ ಹಾಡುಗಳ ಸುರಿಮಳೆ ನೀಡತೊಡಗಿದರಲ್ಲ ಅದು ಪುತ್ರ ಹೃದಯಕಿರಣ್ ಹುಟ್ಟಿದ ಬಳಿಕದ ಶುಭ ಘಳಿಗೆಯಾಗಿತ್ತು. ಅದೇರೀತಿ ಜೋಗಿ ಹಾಡುಗಳು ಬ್ಲ್ಯಾಕ್‌ಬಸ್ಟರ್ ಅನಿಸುವ ಹೊತ್ತಿಗೆ ಹೃದಯನಿಗೊಬ್ಬಳು ಸಿಸ್ಟರ್ ಹುಟ್ಟಿಕೊಂಡಿದ್ದಳು. ಹಾಗಾಗಿ ಗುರುವಿನ ಪ್ರೀತಿಯೊಳಗೆ ಪ್ರತಿಸಂಬಂಧವೂ ಯಶಸ್ವಿ ಸಂಗೀತದಂತೆ ಎನ್ನಬಹುದು.

- ಶಶಿಕರ ಪಾತೂರು
shashishashi82@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com