ಬುಡ್ಡಿ ದೀಪದ ಬೆಳಕು

ಬುಡ್ಡಿ ದೀಪದ ಬೆಳಕು
Updated on: 

ನನ್ನ ಪ್ರಕಾರ ಇದೊಂದು ಲಲಿತ ಪ್ರಬಂಧಗಳ ಮಾಲಿಕೆ. ಇಂಗ್ಲಿಷಿನ ಎಸ್ಸೆ ಎಂಬ ಇದು ಇಂದು ಕಾಣೆಯಾಗುತ್ತಿರುವ ಪ್ರಕಾರಕ್ಕೆ ಸಂವಾದಿಯಾದುದು. ಯಾಕೆಂದರೆ ಈ ಪ್ರಕಾರವನ್ನು ಡಾ. ಜಾನ್ಸನ್ ಆ ಟ್ಟ್ಟಡಜ ಡಛಟಟಣ ್ಟಜಿ ಟ್ಝಟಿಜ ಎಂದು ನಿರ್ವಚಿಸಿದ್ದ. ಅಂದರೆ 'ಮನಸ್ಸಿನ ಹಗುರವಾದ ಬಿರಿಯುವಿಕೆ'. ಇದಕ್ಕೊಂದು ನಿರ್ದಿಷ್ಟವಾದ ವಸ್ತುವಿನ ಜರೂರಿ ಇಲ್ಲ. ಶ್ರೀಮದ್ಗಾಂಭೀರ್ಯದ ಸೋಗಿಲ್ಲ. ತರ್ಕ, ತಕರಾರುಗಳ ಸೋಂಕಿಲ್ಲ. ಕತೆ ಹೇಳಬೇಕೆಂಬ ಹಟವಿಲ್ಲ. ಇದೊಂದು ಬಗೆಯ ಗಟ್ಟಿ ಆಲೋಚನೆ, ಇತರರ ಮುಂದೆ ತನಗೆ ತಾನೇ ಮಾತಾಡಿಕೊಳ್ಳುವ ಮಾತಿನ ಒಂದು ಬಗೆ. ಇಂಗ್ಲಿಷಿನಲ್ಲಿ ಆಡಿಸನ್, ಸ್ಟೀಲ್, ಚಾರ್ಲ್ಸ್ ಲ್ಯಾಂಬ್, ಜಿ.ಕೆ. ಚೆಸ್ಟರ್ಸನ್ ಮುಂತಾದವರು ಈ ಪ್ರಕಾರವನ್ನು ತಮ್ಮ ಉಕ್ತಿ ಮತ್ತು ವ್ಯಕ್ತಿತ್ವ ವಿಶೇಷಗಳಿಂದ ಸಿರಿವಂತಗೊಳಿಸಿದರು.
ನವೋದಯ ಕಾಲದಲ್ಲಿ ಭಾವಗೀತೆಯಂತೆ ಕನ್ನಡಕ್ಕೆ ತಡವಾಗಿ ಬಂದ ಈ ಪ್ರಕಾರವನ್ನು ಎ.ಎನ್. ಮೂರ್ತಿರಾಯರು, ಪುತಿನ ಅವರು ವಿಶೇಷವಾಗಿ ಬೆಳಗಿದರು. ನವ್ಯಯುಗದಲ್ಲಿ ಮರೆಯಾಗತೊಡಗಿದ ಈ ಪ್ರಕಾರ ಅಂಕಣಗಳ ರೂಪ ತಳೆದಾಗ ಲಂಕೇಶರು ಇದಕ್ಕೊಂದು ಹೊಸ ಹರಹು, ತೆರಹುಗಳನ್ನು ಕೊಟ್ಟರು.
ಮಲ್ಲಿಕಾರ್ಜುನಸ್ವಾಮಿ ಈ ಪ್ರಕಾರವನ್ನು ತಮ್ಮದೇ ಆದ ಬಗೆಯಲ್ಲಿ ಕಟ್ಟಲು ಪ್ರಯತ್ನಿಸುತ್ತಿದ್ದಾರೆ. ಇಲ್ಲಿ ಮೂರ್ತಿರಾಯರ ಅಥವಾ ಪುತಿನರವರ ಕ್ಲಾಸಿಕಲ್ ಸ್ಪರ್ಶವಿಲ್ಲ. ಅಥವಾ ಲಂಕೇಶರ ನುಡಿಯ ಬೆಡಗು, ಬೆರಗುಗಳಿಲ್ಲ. ಬದಲಿಗೆ ಹಮ್ಮಿರದೆ ಬಿಮ್ಮಿರದೆ ಆದದ್ದನ್ನು, ಅನಿಸುವುದನ್ನು ಆದ, ಅನಿಸಿದ ಹಾಗೆ ಇತರರಿಗೆ ತಲುಪಿಸುವ ಪ್ರಜಾಸತ್ತಾತ್ಮಕವಾದ ತವಕವಿದೆ, ನಿಕಟತೆಯಿದೆ. ವರ್ಣನೆ, ಅನಿಸುವಿಕೆ, ನೆನಪುಗಳ ಮರುಕಳಿಕೆ, ಘಟನಾ ನಿರೂಪಣೆ, ವ್ಯಕ್ತಿಚಿತ್ರಣಗಳ ಪಾಕವಿದೆ. ಕೆಲವು ಸಲ ಕ್ಲೀಷಾಮಯ ಹೇಳಿಕೆಗಳ ಸರಮಾಲೆಯಾಗುತ್ತಿದೆಯಲ್ಲಾ ಎಂಬ ಅನುಮಾನ ಬರತೊಡಗುವುದರಲ್ಲಿ ಸಾಧಾರಣತೆಯಲ್ಲಿ ಹಾಸುಹೊಕ್ಕಾಗಿರುವ ಅಸಾಧಾರಣವಾದುದರ ಮಿಂಚಿನ ಗೆರೆಗಳು ಹಠಾತ್ ಮೂಡುತ್ತವೆ. ಸ್ವರ್ಣಾಂಬಾಳ ಮೂಕ ದುರಂತದ ಮಾರ್ದವತೆಯಿದೆ. ಅಯ್ಯಪ್ಪನಾಗಿ ಕ್ರೈಸ್ತ ತಾಯಿಯ ಜೊತೆ ಮತಾಂಧ ಜಗಳಕ್ಕಿಳಿಯುವ ಜಾನ್ ನಾಗರಾಜನ ವಿಕಟ ಹಾಸ್ಯವಿದೆ. ಕಣ್ಮರೆಯಾದ ತನ್ನ ಮಕ್ಕಳ ನೆನಪಿನ ಶೋಕಗ್ರಸ್ತ ನಿವೇದನೆಯಿದೆ. ಹಳ್ಳಿಯ ಬೆಳದಿಂಗಳ ಮನೋಜ್ಞ ವಿವರಣೆಯಿದೆ. ದಿ. ಎಂ.ಪಿ. ಪ್ರಕಾಶ್‌ರ ಕೊನೆಯ ದಿನಗಳ ಹೃದಯಸ್ಪರ್ಶಿ ವರದಿಯಿದೆ. ಇತ್ಯಾದಿಗಳ ಜೊತೆಗೆ ಇತ್ತೀಚಿನ ದಿನಗಳ ಕನ್ನಡ ಸಾಹಿತ್ಯ ಮತ್ತು ರಂಗಭೂಮಿಗೆ ಸಂಬಂಧಿಸಿದ ಘಟನಾವಳಿಗಳ, ವ್ಯಕ್ತಿವಿಶೇಷಗಳ ಪರಿಚಯ ಮತ್ತು ದಾಖಲಾತಿಗಳಿವೆ. ಈ ಹಲವು ಸಾಮಗ್ರಿಗಳ ಬಹುಮುಖತೆಯಿಂದ, ನೇರ ಮತ್ತು ಸರಳ ನಿರೂಪಣೆಯಿಂದ ಮಲ್ಲಿಕಾರ್ಜುನಸ್ವಾಮಿ ಅವರ ಬರಹಗಳು ನನಗೆ ಮೆಚ್ಚುಗೆಯಾಗಿವೆ.


- ಡಾ. ಎಚ್.ಎಸ್. ಶಿವಪ್ರಕಾಶ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com