ಮತ್ತೊಂದು ಮುಖಾಮುಖಿ

Updated on: 

ಅಡುಗೆ ಮನೆಯಿಂದ ಹೊರಬಂದು ಹಾಲ್‌ನ ಮೂಲಕ ವೆರಾಂಡದತ್ತ ಹೋಗುತ್ತಿದ್ದೆ. ಈಗಷ್ಟೇ ಹಾಲು ಕುಡಿದಿದ್ದೆ. ಹೊಟ್ಟೆ ತುಂಬಿತ್ತು. ಕೆಲವೊಮ್ಮೆ ಹಾಲ್‌ನಲ್ಲಿ ಹಾಕಿದ ರತ್ನಗಂಬಳಿಯನ್ನು ಮುಂಗಾಲುಗಳಿಂದ ಪರಚಿ ಕೆರೆದು ಗುರುತು ಮಾಡಿ ಹೋಗುವುದುಂಟು. ಅದು ನಿದ್ದೆಯಿಂದ ಎದ್ದಾಗಷ್ಟೇ ನಾನು ಮಾಡುವ ಕೆಲಸ.
ಅದ್ಯಾರು, ಕುರ್ಚಿಯಲ್ಲಿ ಕುಳಿತು ನನ್ನತ್ತ ನೋಡುತ್ತಿರುವುದು? ಕನ್ನಡಕ ಧರಿಸಿ, ಪೇಪರು ಹಿಡಿದಿದ್ದಾನೆ. ಈತನನ್ನು ಈ ಹಿಂದೆಯೂ ಈ ಮನೆಯಲ್ಲಿ ನಾನು ನೋಡಿದ್ದುಂಟು. ಆದರೆ ಪ್ಯಾಂಟು ಕೋಟು ಟೈ ಧರಿಸಿದ್ದಾಗ ಮಾತ್ರ. ಅಥವಾ ಟಿವಿಯ ಬೆಳಕಿನಲ್ಲಿ ಬೆಳಗುವ ಆತನ ಮುಖ. ಈತ ಈ ಹಿಂದೆ ಯಾವತ್ತೂ ನನ್ನನ್ನು ನೋಡಿದಂತಿಲ್ಲ. ಅದಕ್ಕೇ ಇಷ್ಟೊಂದು ದುರುಗುಟ್ಟಿ ನೋಡುತ್ತಿದ್ದಾನೆ ಎನಿಸುತ್ತಿದೆ. ಅಥವಾ ನನ್ನನ್ನು ಪರಿಚಯ ಮಾಡಿಕೊಳ್ಳಲು ಯತ್ನಿಸುತ್ತಿದ್ದಾನೋ? ಇರಲಿಕ್ಕಿಲ್ಲ. ಆತ ತನ್ನ ಮಕ್ಕಳನ್ನೂ ಇದೇ ಅಪರಿಚಿತ ಭಾವನೆಯಿಂದ ನೋಡುವುದನ್ನು ನಾನು ಕಂಡಿದ್ದೇನೆ. ಆಗ ಅವರು ಶಾಲೆಗೆ ಹೋಗುತ್ತಿರುತ್ತಾರೆ ಅಥವಾ ಈತ ಆಫೀಸಿಗೆ ಹೋಗುತ್ತಿರುತ್ತಾನೆ.
ಹಾಲು ಕದ್ದದ್ದಕ್ಕಾಗಿ ನನ್ನನ್ನು ಶಿಕ್ಷಿಸಲು ಬಯಸಿರುವಂತೆಯೂ ಈತ ಕಾಣುತ್ತಿಲ್ಲ. ಈತ ಯಾರನ್ನೂ ಶಿಕ್ಷಿಸಿದ್ದು ಬಿಡಿ, ಮುದ್ದು ಮಾಡಿದ್ದನ್ನೂ ನಾನು ಕಂಡಿಲ್ಲ. ನಾವು ಮೃಗಗಳು, ನಮ್ಮಲ್ಲಿ ಕೋಪ ಮುದ್ದು ಜಗಳ ಪ್ರೇಮ ಎಲ್ಲ ಇದ್ದದ್ದೇ. ನೀವೇಕೆ ಹಾಗಿಲ್ಲ ಎಂದು ಕೇಳುವ ಮನಸಾಗುತ್ತಿದೆ ಈತನನ್ನು ನೋಡಿದಾಗ. ಅಥವಾ ಅದೆಲ್ಲವೂ  ಬೇರೆ ಥರವೋ?
ಅಯ್ಯಾ ಮನುಷ್ಯ ಜೀವಿಯೇ, ನೀನು ನನ್ನನ್ನು ಯಾವತ್ತೂ ನೋಡಿರದ ಜೀವಿಯೊಂದರಂತೆ ನೋಡಬಹುದೀಗ. ನನಗೇನಡ್ಡಿಯಿಲ್ಲ. ನಾನೂ ನಿನ್ನನ್ನು ಹಾಗೇ ನೋಡುತ್ತಿದ್ದೇನೆ. ನೀನು ಅದ್ಯಾಕೆ ಹಾಗೆ ಎಲ್ಲೂ ಇಲ್ಲದ, ನಿನ್ನನ್ನು ನೀನೇ ಇನ್ನಷ್ಟೇ ಅರ್ಥ ಮಾಡಿಕೊಳ್ಳಬೇಕಾದ ಜೀವಿಯಂತೆ ಕೂತಿದ್ದೀಯ? ನಿನ್ನ ದೃಷ್ಟಿಯೇಕೆ ನನ್ನನ್ನು ನೋಡುತ್ತಿದ್ದರೂ ನನ್ನನ್ನು ಭೇದಿಸಿ ಬೇರೆಲ್ಲೋ ನೆಟ್ಟಿವೆ? ನೀನು ನನಗಿಂತ ತುಂಬಾ ಬೇರೆ ರೀತಿಯ ಮೃಗವೇ? ನಿನ್ನ ಜತೆಗಿರುವ ಇತರ ಮನುಷ್ಯರಂತೆಯೂ ನೀನಿಲ್ಲವೇ?
(ಕೆ.ವಿ.ತಿರುಮಲೇಶರ 'ಮುಖಾಮುಖಿ' ಕವಿತೆಯ ಒಂದು 'ಪ್ರತಿಫಲನ'. ಆ ಕವಿತೆಯಲ್ಲಿ ಬೆಕ್ಕನ್ನು ನೋಡಿ ನಿರೂಪಕ 'ಚರಿತ್ರಪೂರ್ವ ಯುಗಗಳ ಹಿಂದಿನ ಮೃಗ'ಕ್ಕೆ ಸ್ಪಂದಿಸುತ್ತಾನೆ. ಇಲ್ಲಿ ಬೆಕ್ಕು 'ಆಧುನಿಕೋತ್ತರ ಮೃಗ'ಕ್ಕೆ ಸ್ಪಂದಿಸಿದೆ.)


-  ಹರೀಶ್ ಕೇರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com