ಈಗಿನ ಸುದ್ದಿ

ಮಿಲಿಟರಿ ಗಡುವು ಅಂತ್ಯ: ಅಧ್ಯಕ್ಷ ಮೋರ್ಸಿಗೆ ಗೃಹ ಬಂಧನ

ಮಿಲಿಟರಿ ಗಡುವು ಅಂತ್ಯ: ಅಧ್ಯಕ್ಷ ಮೋರ್ಸಿಗೆ ಗೃಹ ಬಂಧನ
Published On :

ಕೈರೋ: ಅಧ್ಯಕ್ಷ ಮಹಮದ್ ಮೋರ್ಸಿ ಅಧಿಕಾರದಿಂದ ಕೆಳಗಿಳಿಯುವಂತೆ ಮಿಲಿಟರಿ ನೀಡಿದ್ದ ಗಡುವು ಮುಗಿದ ಹಿನ್ನಲೆಯಲ್ಲಿ ಈಜಿಪ್ಟ್ ಅಧ್ಯಕ್ಷ ಮಹಮದ್ ಮೋರ್ಸಿ ಅವರಿಗೆ ಈಜಿಪ್ಟ್ ಮಿಲಿಟರಿ ಅಧಿಕಾರಿಗಳು ಗೃಹ ಬಂಧನ ವಿಧಿಸಿದ್ದಾರೆ.

ಮೋರ್ಸಿ ಅವರ ದುರಾಡಳಿತ ಮತ್ತು ಅಸಂವಿಧಾನಿಕ ನಡವಳಿಕೆಯನ್ನು ಖಂಡಿಸಿ ಈಜಿಪ್ಟ್‌ನಲ್ಲಿ ನಡೆಯುತ್ತಿರುವ ಸತತ ಹೋರಾಟಕ್ಕೆ ಮಣಿದಿದ್ದ ಮಿಲಿಟರಿ, ಅಧಿಕಾರದಿಂದ ಕೆಳಗಿಳಿಯುವಂತೆ ಅಧ್ಯಕ್ಷ ಮೋರ್ಸಿ ಅವರಿಗೆ 48 ಗಂಟೆಗಳ ಕಾಲಾವಕಾಶ ನೀಡಿತ್ತು. ಆದರೆ ಮಿಲಿಟರಿ ಎಚ್ಚರಿಕೆಯನ್ನು ಅಲ್ಲಗಳೆದಿದ್ದ ಮೋರ್ಸಿ ಅವರು ಅಧಿಕಾರದಿಂದ ಕೆಳಗಿಳಿಯಲು ನಕಾರ ವ್ಯಕ್ತಪಡಿಸಿದ್ದರು. ಹೀಗಾಗಿ ಮಿಲಿಟರಿ ಅಧಿಕಾರಿಗಳು ಮೋರ್ಸಿ ಅವರನ್ನು ಬಂಧಿಸುವ ಸಾಧ್ಯತೆ ಇತ್ತು. ಬಂಧನ ವಿಚಾರ ತಿಳಿಯುತ್ತಿದ್ದಂತೆಯೇ ಮೋರ್ಸಿ ಅವರು ನಾಪತ್ತೆಯಾಗಿದ್ದು, ತಮ್ಮ ಬೆಂಬಲಿಗರ ಮೂಲಕ ಸರ್ಕಾರದೊಂದಿಗೆ ವ್ಯವಹರಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

ಆದರೆ ಇಂದು ಅಧ್ಯಕ್ಷ ಮೋರ್ಸಿ ಅವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಈಜಿಪ್ಟ್ ಮಿಲಿಟರಿ ಅಧಿಕಾರಿಗಳು ಮೋರ್ಸಿ ಅವರನ್ನು ಕೈರೋದಲ್ಲಿರುವ ಅವರ ನಿವಾಸದಲ್ಲಿಯೇ ಗೃಹ ಬಂಧನದಲ್ಲಿರಿಸಿದ್ದಾರೆ. ಮೂಲಗಳ ಪ್ರಕಾರ ಮಿಲಿಟರಿ ಅಧಿಕಾರಿಗಳು ಮೋರ್ಸಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ನಡುವೆ ಅಧ್ಯಕ್ಷ ಮೋರ್ಸಿ ಅವರು, ಮಿಲಿಟರಿ ನಿರ್ಧಾರವನ್ನು ಖಂಡಿಸಿದ್ದು, ಮಿಲಿಟರಿ ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಟ್ವೀಟರ್‌ನಲ್ಲಿ ಟ್ವೀಟ್ ಮಾಡಿರುವ ಅಧ್ಯಕ್ಷ ಮೋರ್ಸಿ, ಮಿಲಿಟರಿ ತನ್ನ ನಿರ್ಧಾರವನ್ನು ಕೂಡಲೇ ಹಿಂತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದೇಶದಲ್ಲಿ ಉಂಟಾಗುವ ಅಪಾರ ಪ್ರಮಾಣದ ಹಿಂಸಾಚಾರಕ್ಕೆ ಮಿಲಿಟರಿಯೇ ಕಾರಣವಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.

ಈ ನಡುವೆ ಅಧ್ಯಕ್ಷ ಮೋರ್ಸಿ ಅವರ ಸಾವಿರಾರು ಬೆಂಬಲಿಗರು ಕೈರೋದಲ್ಲಿ ರ್ಯಾಲಿ ನಡೆಸುತ್ತಿದ್ದು, ಇವರ ವಿರುದ್ಧ ಇಸ್ಲಾಮಿಕ್ ಪ್ರತಿಭಟನಾಕಾರರು ಶಸ್ತ್ರಾಸ್ತ್ರಗಳನ್ನು ಹಿಡಿದು ತಿರುಗಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ರಾಜಧಾನಿ ಕೈರೋ ಸುತ್ತಮುತ್ತ ಮಿಲಿಟರಿ ಪಡೆಗಳು ತೀವ್ರಾ ನಿಗಾವಹಿಸಿದ್ದು, ಸಾವಿರಾರು ಸೈನಿಕರನ್ನು ಜಮಾಗೊಳಿಸಿದ್ದಾರೆ. ರಾಜಧಾನಿ  ಕೈರೋದಲ್ಲಿ ಅಕ್ಷರಶಃ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಅಧ್ಯಕ್ಷರ ಭವನದ ಸುತ್ತಮುತ್ತ ಹತ್ತಾರು ಯುದ್ಧ ಟ್ಯಾಂಕರ್‌ಗಳನ್ನು ಮತ್ತು ನೂರಾರು ಸೈನಿಕರನ್ನು ಜಮಾಗೊಳಿಸಲಾಗಿದೆ. ಈಜಿಪ್ಟ್‌ನ ಮಾಜಿ ಅಧ್ಯಕ್ಷ ಹೋಸ್ನಿ ಮುಬಾರಕ್ ಅವರು ಕೂಡ ತಮ್ಮ ದುರಾಡಳಿತದಿಂದಾಗಿ ಕುಖ್ಯಾತಿ ಗಳಿಸಿ, ಈಜಿಪ್ಟ್ ಪ್ರಜೆಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಕೊನೆಗೆ ಮಿಲಿಟರಿ ಅಧಿಕಾರಗಳು ಅವರನ್ನು ಅಧಿಕಾರದಿಂದ ವಜಾಗೊಳಿಸಿ ಬಂಧಿಸಿದ್ದರು. ತದ ನಂತರ ಅಸ್ತಿತ್ವಕ್ಕೆ ಬಂದಿದ್ದ ಈಜಿಪ್ಟ್‌ನ ಪ್ರಥಮ ಪ್ರಜಾಪ್ರಭುತ್ವ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮೋರ್ಸಿ ಅವರ ನೇತೃತ್ವದ ಸರ್ಕಾರ ಕೂಡ ತನ್ನ ದುರಾಡಳಿತದಿಂದಾಗಿ ಪ್ರಜೆಗಳ ಆಕ್ರೋಶಕ್ಕೆ ತುತ್ತಾಗಿ ಇದೀಗ ಅಳಿವಿನಂಚಿನಲ್ಲಿದೆ.

ಪ್ರತಿಭಟನಾಕಾರರ ಹರ್ಷೋದ್ಘಾರ:
ಇತ್ತ ಅಧ್ಯಕ್ಷ ಮಹಮದ್ ಮೋರ್ಸಿ ಅವರನ್ನು ಮಿಲಿಟರಿ ಪದಚ್ಯುತಗೊಳಿಸಿದ ವಿಚಾರ ತಿಳಿಯುತ್ತಿದ್ದಂತೆ ಅಧ್ಯಕ್ಷರ ಭವನದ ಸುತ್ತಮುತ್ತ ನೆರೆದಿದ್ದ ಲಕ್ಷಾಂತರ ಪ್ರತಿಭಟನಾಕಾರರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಪಟಾಕಿ ಸಿಡಿಮದ್ದುಗಳನ್ನು ಸಿಡಿಸುವ ಮೂಲಕ ಸಂಭ್ರಮವನ್ನು ಆಚರಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.