'ಮುಷ್' ವಿರುದ್ಧ ವಿಚಾರಣೆ: ಎಫ್ಐಎ ವಕೀಲನ ಹತ್ಯೆ

ಕರಾಚಿ: ಮಾಜಿ ಪ್ರಧಾನಿ ಬೆನ್ಜೀರ್ ಭುಟ್ಟೋ ಅವರ ಹತ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಫೆಡರಲ್ ತನಿಖಾ ಸಂಸ್ಥೆಯ ವಕೀಲ ಚೌದರಿ ಜುಲ್ಫೀಕರ್ ಅಲಿ ಅವರನ್ನು ಶುಕ್ರವಾರ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿದ್ದಾರೆ.
ವಕೀಲ ಚೌದರಿ ಜುಲ್ಫೀಕರ್ ಅಲಿ ಅವರು, ಇಂದು ಬೆಳಗ್ಗೆ 7:30ರ ಸಮಯದಲ್ಲಿ ಕರಾಚಿ ಕಂಪನಿ ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರನ್ನು ಡ್ರೈವ್ ಮಾಡುತ್ತಿದ್ದ ವಕೀಲ ಅಲಿ ಅವರ ಮೇಲೆ ಸತತ ಗುಂಡಿನ ದಾಳಿ ನಡೆಸಿದ್ದರ ಪರಿಣಾಮವಾಗಿ ಕಾರಿನ ನಿಯಂತ್ರಣ ಕಳೆದುಕೊಂಡ ಅವರು, ಪಾದಚಾರಿ ಮಾರ್ಗದಲ್ಲಿ ಚಲಿಸುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಿಸದೆ ಆಕೆಯೂ ಕೂಡ ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ ಅಲಿ ಅವರ ಅಂಗರಕ್ಷಕನಿಗೆ ಗುಂಡೇಟು ತಗುಲಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಅಲಿ ಅವರ ಮೇಲೆ ನಡೆದ ದಾಳಿಯ ನೇತೃತ್ವವನ್ನು ಇದುವರೆಗೂ ಯಾವುದೇ ಉಗ್ರ ಸಂಘಟನೆ ಹೊತ್ತಿಕೊಳ್ಳದೇ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಅಲಿ ಅವರ ಸ್ನೇಹಿತರ ಪ್ರಕಾರ ಅಲಿ ಅವರಿಗೆ ಕೆಲವು ಪ್ರಮುಖ ಉಗ್ರ ಸಂಘಟನೆಗಳು ಪ್ರಾಣಬೆದರಿಕೆ ಹಾಕಿದ್ದವು. ಅಲ್ಲದೆ ಮುಷರಫ್ ವಿರುದ್ಧದ ವಿಚಾರಣೆಯನ್ನು ಕೈ ಬಿಡುವಂತೆ ಒತ್ತಾಯಿಸಿ ಕೆಲವು ಅನಾಮಧೇಯ ಕರೆಗಳು ಬರುತ್ತಿವೆ ಎಂದು ಸ್ವತಃ ಅಲಿ ಅವರು ಹೇಳಿದ್ದರು ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ.
ಮೃತ ವಕೀಲ ಚೌದರಿ ಜುಲ್ಫೀಕರ್ ಅಲಿ ಅವರು, ಮುಷರಫ್ ವಿರುದ್ಧ ತನಿಖೆ ನಡೆಸುತ್ತಿರುವ ಸರ್ಕಾರಿ ಸಂಸ್ಥೆ ಎಫ್ಐಎ ಪರ ವಕೀಲರಾಗಿದ್ದರು. ಪಾಕ್ ಮಾಜಿ ಪ್ರಧಾನಿ ಭುಟ್ಟೋ ಅವರ ಹತ್ಯೆ ಮತ್ತು 26/11 ಮುಂಬೈ ದಾಳಿ ಪ್ರಕರಣದಲ್ಲಿ ಪಾಕ್ ಮಾಜಿ ಅಧ್ಯಕ್ಷ ಮುಷರಫ್ ಅವರ ಕೈ ವಾಡದ ಕುರಿತು ಅವರು ವಿಚಾರಣೆ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಕರಾಚಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


