ಈಗಿನ ಸುದ್ದಿ

ಗುಜರಾತ್ ಬಂದ್: 600 'ಕೈ' ಕಾರ್ಯಕರ್ತರ ಬಂಧನ

Published On :

ಅಹ್ಮದಾಬಾದ್: ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ರಾಜಿನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಗುಜರಾತ್ ಬಂದ್ ವೇಳೆ ಸುಮಾರು 600ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಗುಜರಾತ್ ಹಿರಿಯ ಪೊಲೀಸ್ ಅಧಿಕಾರಿ ಡಿಜಿ ವಂಜಾರಾ ಅವರು ಈ ಹಿಂದೆ ಬರೆದಿದ್ದ ಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ. ಕಾಂಗ್ರೆಸ್ ಕರೆ ನೀಡಿರುವ ಇಂದಿನ ಬಂದ್‌ಗೆ ಗುಜರಾತ್‌ನಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾಜಧಾನಿ ಅಹ್ಮದಾಬಾದಿನಲ್ಲಿ ಪ್ರಮುಖ ರಸ್ತೆಗಳು, ಮಾರ್ಕೆಟ್‌ಗಳು, ಎಪಿಎಂಸಿಗಳು ಮತ್ತು ಶಾಲೆಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ.

ಭದ್ರತಾ ದೃಷ್ಟಿಯಿಂದ ಗುಜರಾತ್‌ನಾದ್ಯಂತ ಭಾರಿ ಪೊಲೀಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆದ ಕುರಿತು ವರದಿಯಾಗಿಲ್ಲ. ಅಹ್ಮದಾಬಾದಿನಲ್ಲಿ ಬಸ್ ಸಂಚಾರವನ್ನು ತಡೆಯಲು ಯತ್ನಿಸಿದ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಮುಂದಾದಾಗ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಅಲ್ಲದೆ ಹಲವು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಗುಜರಾತ್ ಹಿರಿಯ ಪೊಲೀಸ್ ಅಧಿಕಾರಿ ಡಿಜಿ ವಂಜಾರಾ ಅವರು ಪ್ರಸ್ತುತ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಸಿಲುಕಿ ಸಿಬಿಐ ವಿಚಾರಣೆ ಎದುರಿಸುತ್ತಿದ್ದಾರೆ. ಈ ಹಿಂದೆ ವಂಜಾರಾ ಅವರು ನರೇಂದ್ರ ಮೋದಿ ಅವರಿಗೆ ಬರೆದಿದ್ದ ಪತ್ರದಲ್ಲಿ ಮೋದಿ ಮತ್ತು ಅವರ ಆಪ್ತ ಮಾಜಿ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಅಲ್ಲದೆ ಅಂದು ವಂಜಾರಾ ಮತ್ತು ಅವರ ತಂಡ ನಡೆಸಿದ್ದ ಎನ್‌ಕೌಂಟರ್‌ಗೆ ಮೋದಿ ಅವರೇ ಪರೋಕ್ಷ ಕಾರಣ ಎನ್ನುವಂತಹ ಅರ್ಥ ಬರುವಂತೆ ವಂಜಾರಾ ಅವರು ಮೋದಿ ಮತ್ತು ಅಮಿತ್ ಶಾ ಅವರನ್ನು ಟೀಕಿಸಿದ್ದರು.

ಒಟ್ಟಾರೆ ವಂಜಾರಾ ಪತ್ರ ಪ್ರಕರಣವನ್ನು ರಾಜಕೀಯ ಅಸ್ತ್ರವಾಗಿ ಬಳಸುತ್ತಿರುವ ಕಾಂಗ್ರೆಸ್‌ಗೆ 'ಗುಜರಾತ್ ಬಂದ್‌' ಅಲ್ಪ ಯಶಸ್ಸನ್ನು ಮಾತ್ರ ತಂದುಕೊಟ್ಟಿದೆ ಎಂದು ಹೇಳಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.