ಈಗಿನ ಸುದ್ದಿ

ರುಪಾಯಿ ಮೌಲ್ಯ ಚೇತರಿಕೆ: ಸೆನ್ಸೆಕ್ಸ್ 250 ಅಂಕ ಏರಿಕೆ

Published On :

ನವದಹೆಲಿ: ಸತತ ಎರಡನೇ ದಿನವೂ ಡಾಲರ್ ಎದುರು ರುಪಾಯಿ ಮೌಲ್ಯ ಚೇತರಿಕೆ ಕಂಡಿದ್ದು, ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 250 ಅಂಕಗಳನ್ನು ಗಳಿಸಿಕೊಂಡಿದೆ.

ರಿಸರ್ವ್ ಬ್ಯಾಂಕಿನ ನೂತನ ಗವರ್ನರ್ ಆಗಿ ರಘುರಾಮ್ ರಾಜನ್ ಅವರು ಅಧಿಕಾರ ಸ್ವೀಕರಿಸಿದ ನಂತರ ಭಾರತೀಯ ಷೇರು ಮಾರುಕಟ್ಟೆ ಚೇತರಿಕೆ ಕಾಣುತ್ತಿದ್ದು, ಇಂದು ಕೂಡ ಸೆನ್ಸೆಕ್ಸ್ 250 ಅಂಕಗಳ ಚೇತರಿಕೆ ಕಾಣುವ ಮೂಲಕ ರುಪಾಯಿ ಮೌಲ್ಯ ಏರಿಕೆಯಾಗಿದೆ. ನಿನ್ನೆ ಪ್ರತಿ ಡಾಲರ್‌ನ ಬೆಲೆ 66.24 ಇದ್ದ ರುಪಾಯಿ ಮೌಲ್ಯ ಇಂದು 65.1ಕ್ಕೆ ಏರಿಕೆಯಾಗಿದೆ.

ಷೇರು ಮಾರುಕಟ್ಟೆಯ ಚೇತರಿಕೆಗೆ ನೂತನ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಅವರ ಮಾರುಕಟ್ಟೆ ಪ್ರೋತ್ಸಾಹಕ ನೀತಿಗಳು ಕಾರಣ ಎಂದು ಹೇಳಲಾಗುತ್ತಿದೆ. ಅಲ್ಲದೆ ನೂತನ ಗವರ್ನರ್ ಅವರು ನೀಡಿರುವ ಆಶ್ವಾಸನೆಯಿಂದಾಗಿ ಹೂಡಿಕೆದಾರರು ರುಪಾಯಿ ಮೇಲೆ ಹೆಚ್ಚಾಗಿ ಹೂಡಿಕೆ ಮಾಡುತ್ತಿದ್ದು ಇದು ಕೂಡ ರುಪಾಯಿ ಮೌಲ್ಯ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ಆದರೆ ರಷ್ಯಾದಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯು ಭಾರತ ಮಟ್ಟಿಗೆ ನಿರ್ಣಾಯಕವಾಗಿದ್ದು, ಶೃಂಗಸಭೆಯಲ್ಲಿ ಮೂಡಿಬರುವ ಪ್ರತಿಯೊಂದು ದೇಶದ ಅಭಿಪ್ರಾಯಗಳು ಭಾರತದ ಪಾಲಿಗೆ ಮಹತ್ವವಾಗಲಿದೆ.

ಏಕೆಂದರೆ ಭಾರತದಂತೆಯೇ ಹಲವು ಅಭಿವೃದ್ಧಿ ಶೀಲ ರಾಷ್ಟ್ರಗಳು ಆರ್ಥಿಕ ಕುಸಿತ ಕಂಡಿದ್ದು, ಈ ಎಲ್ಲ ರಾಷ್ಟ್ರಗಳು ಶೃಂಗಸಭೆಯಲ್ಲಿ ಆರ್ಥಿಕ ಚೇತರಿಕೆ ಕುರಿತಂತೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಅಲ್ಲದೆ ಸಿರಿಯಾ ವಿರುದ್ಧ ಯುದ್ಧಕ್ಕೆ ಮುಂದಾಗಿರುವ ಅಮೆರಿಕದ ನಿರ್ಧಾರದ ಕುರಿತು ಸಹ ಸಭೆಯಲ್ಲಿ ಚರ್ಚೆನಡೆಯುವ ಸಾಧ್ಯತೆ ಇದೆ. ಅಮೆರಿಕ ಕೈಗೊಂಡಿರುವ ನಿರ್ಧಾರ ಭಾರತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದ್ದು, ಅಮೆರಿಕ ತನ್ನ ನಿಲುವು ಬದಲಿಸುವಂತೆ ಭಾರತ ಮನವಿ ಮಾಡುವ ಸಾಧ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.