ಈಗಿನ ಸುದ್ದಿ

ಬಂಧನವಾಗಿರದಿದ್ದರೆ ಆತ್ಮಹತ್ಯಾ ದಾಳಿ: ಉಗ್ರ ಅಖ್ತರ್

ಬಂಧನವಾಗಿರದಿದ್ದರೆ ಆತ್ಮಹತ್ಯಾ ದಾಳಿ: ಉಗ್ರ ಅಖ್ತರ್
Published On :

ನವದಹೆಲಿ: ಅಧಿಕಾರಿಗಳು ತನ್ನನ್ನು ಬಂಧಿಸಿರದಿದ್ದರೆ ಭಾರತದಲ್ಲಿ ಅತ್ಮಾಹತ್ಯಾ ಬಾಂಬ್ ಸ್ಫೋಟ ನಡೆಸುತ್ತಿದ್ದೆ ಎಂದು ಬಂಧಿತ ಉಗ್ರ ಅಸಾದುಲ್ಲಾ ಅಖ್ತರ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.

ಪ್ರಸ್ತುತ ಎನ್‌ಐಎ ಅಧಿಕಾರಿಗಳ ವಶದಲ್ಲಿರುವ ಉಗ್ರ ಯಾಸಿನ್ ಭಟ್ಕಳ್ ಸಹಚರ ಅಸಾದುಲ್ಲಾ ಅಖ್ತರ್, ವಿಚಾರಣೆ ವೇಳೆ ಹಲವು ಸ್ಪೋಟಕ ಮಾಹಿತಿಗಳನ್ನು ಹೊರಹಾಕುತ್ತಿದ್ದಾನೆ. ಭಾರತದಲ್ಲಿ ಅತ್ಮಹತ್ಯಾ ದಾಳಿ ನಡೆಸಲು ಅಸಾದುಲ್ಲಾನನ್ನು ನೇಮಿಸಲಾಗಿದ್ದು, ಆತನನ್ನು ಬಂಧಿಸಿರದಿದ್ದರೆ ಇನ್ನು ಕೆಲವೇ ಕೆಲವು ದಿನದಲ್ಲಿ ಭಾರತದಲ್ಲಿ ಮೊದಲ ಆತ್ಮಹತ್ಯಾ ದಾಳಿ ನಡೆಯುತ್ತಿತ್ತು ಎಂದು ಅಖ್ತರ್ ಹೇಳಿಕೆ ನೀಡಿದ್ದಾನೆ.

ಉಗ್ರರ ಬಂಧನ ಅವಧಿ ವಿಸ್ತರಣೆ

ಉಗ್ರ ಯಾಸಿನ್ ಭಟ್ಕಳ್ ಮತ್ತು ಅಸಾದುಲ್ಲಾ ಅಖ್ತರ್ ಬಂಧನ ಅವಧಿಯನ್ನು 1 ವಾರಗಳ ಕಾಲ ನ್ಯಾಯಾಲಯ ವಿಸ್ತರಣೆ ಮಾಡಿದ್ದು, ಭಟ್ಕಳ್ ಡಿಎನ್‌ಎ ಪರೀಕ್ಷೆಗೆ ನ್ಯಾಯಾಲಯ ಸಮ್ಮತಿ ಸೂಚಿಸಿದೆ. ಇಂಡೋ-ನೇಪಾಳ ಗಡಿಯಲ್ಲಿ ಬಂಧಿತರಾದ ಉಗ್ರ ಯಾಸಿನ್ ಭಟ್ಕಳ್ ಮತ್ತು ಆತನ ಸಹಚರ ಅಸಾದುಲ್ಲಾ ಅಖ್ತರ್‌ನ ಬಂಧನದ ಅವಧಿಯನ್ನು ಮತ್ತೆ 1 ವಾರಗಳ ಕಾಲ ನ್ಯಾಯಾಲಯ ವಿಸ್ತರಿಸಿದ್ದು, ಸೆಪ್ಟೆಂಬರ್ 17ರವರೆಗೆ ವಶಕ್ಕೆ ಪಡೆಯುವಂತೆ ಎನ್‌ಐಎಗೆ ನ್ಯಾಯಾಲಯ ಸೂಚಿಸಿದೆ.

ಬಂಧಿತ ಉಗ್ರರಾದ ಯಾಸಿನ್ ಭಟ್ಕಳ್ ಮತ್ತು ಅಸಾದುಲ್ಲಾ ಅಖ್ತರ್ ಅವರ ಬಂಧನದ ಅವಧಿ ಇಂದಿಗೆ ಅಂತ್ಯಗೊಂಡ ಹಿನ್ನಲೆಯಲ್ಲಿ, ಇಂದು ಇಬ್ಬರು ಉಗ್ರರನ್ನು ದೆಹಲಿಯ ಪಾಟಿಯಾಲಾ ಹೌಸ್ ಕೋರ್ಟ್‌ಗೆ ಹಾಜರು ಪಡಿಸಲಾಗಿತ್ತು. ಉಗ್ರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಎನ್‌ಐಎ ಅಧಿಕಾರಿಗಳು, ಹೆಚ್ಚಿನ ವಿಚಾರಣೆಗಾಗಿ ಮತ್ತೆ 15 ದಿನಗಳ ಕಾಲ ಉಗ್ರರನ್ನು ತಮ್ಮ ವಶಕ್ಕೆ ನೀಡವಂತೆ ಮನವಿ ಮಾಡಿದ್ದರು. ಆದರೆ ನ್ಯಾಯಾಲಯ ಕೇವಲ 7 ದಿನಗಳ ಕಾಲ ವಶಕ್ಕೆ ಅನುಮತಿ ನೀಡಿದೆ.

ಅಲ್ಲದೆ ಬಂಧಿತ ಉಗ್ರ ಯಾಸಿನ್ ಭಟ್ಕಳನೇ ಅಲ್ಲ ಎಂದು ವಾದಿಸಿರುವ ಉಗ್ರರ ಪರ ವಕೀಲರ ವಾದವನ್ನು ಆಲಿಸಿದ ನ್ಯಾಯಾಲಯ, ಬಂಧಿತನನ್ನು ಯಾಸಿನ್ ಭಟ್ಕಳನೇ? ಎಂದು ಸ್ಪಷ್ಟಪಡಿಸಿಕೊಳ್ಳಲು ಮುಂದಾಗಿದೆ. ಇದಕ್ಕಾಗಿ ಯಾಸಿನ್ ಭಟ್ಕಳ್ ಮತ್ತು ಕರ್ನಾಟಕದ ಭಟ್ಕಳದಲ್ಲಿರುವ ಆತನ ತಂದೆಯ ಡಿಎನ್‌ಎ ಪರೀಕ್ಷೆ ಮಾಡಿಸುವಂತೆ ಎನ್‌ಐಎ ಅಧಿಕಾರಿಗಳಿಗೆ ಸೂಚಿಸಿದೆ. ಅಲ್ಲದೆ ಬಂಧಿತ ಉಗ್ರ ಯಾಸಿನ್ ಭಟ್ಕಳ್‌ನ ಕೈ ಬರಹವನ್ನು ಕೂಡ ಸಂಗ್ರಹಿಸುವಂತೆ ನ್ಯಾಯಾಲಯ ಅಧಿಕಾರಿಗಳಿಗೆ ಸಲಹೆ ನೀಡಿದೆ.

ಅಂತೆಯೇ ಉಗ್ರ ಯಾಸಿನ್ ಭಟ್ಕಳ್‌ನನ್ನು ತನಿಖೆಗೊಳಪಡಿಸಿರುವ ಅಧಿಕಾರಿಗಳು ಹಲವು ಪ್ರಮುಖ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಬಂಧಿತ ಉಗ್ರ ಯಾಸಿನ್ ಭಟ್ಕಳ್‌ಗೆ ಮಂಗಳೂರು ನಂಟಿರುವ ಕುರಿತು 2008ರಲ್ಲೇ ಬಹಿರಂಗಗೊಂಡಿದ್ದರೂ, ಆ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಇದಕ್ಕಾಗಿ ಮಂಗಳೂರಿನ ಉಲ್ಲಾಳಕ್ಕೆ ಭೇಟಿ ನೀಡಲು ಅಧಿಕಾರಿಗಳು ಸಜ್ಜಾಗಿದ್ದಾರೆ.

ಅಧಿಕಾರಿಗಳನ್ನೇ ಗೊಂದಲಕ್ಕೀಡುಮಾಡಿದ ಭಟ್ಕಳ್
ವಿಚಾರಣೆ ವೇಳೆ ಬಂಧಿತ ಉಗ್ರ ಯಾಸಿನ್ ಭಟ್ಕಳ್ ಎನ್‌ಐಎ ಅಧಿಕಾರಿಗಳನ್ನು ಪೇಚಿಗೆ ಸಿಲುಕಿಸಿದ್ದ ಮಾಹಿತಿ ಬಹಿರಂಗಗೊಂಡಿದೆ. ಪುಣೆ ಸ್ಪೋಟ ಕುರಿತಂತೆ ಮಾಹಿತಿ ನೀಡಿರುವ ಭಟ್ಕಳ್, ಆ ಸ್ಫೋಟವನ್ನು ನಡೆಸಿದ್ದು ತಾನೇ. ಕರ್ನಲ್‌ಗಳ ಸೂಚನೆ ಮೇರೆಗೆ ಪುಣೆಯಲ್ಲಿ ಸ್ಪೋಟ ಮಾಡಿದ್ದೆ ಎಂದು ಹೇಳಿಕೆ ನೀಡಿದ್ದಾನೆ. ಆದರೆ ಪುಣೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐಎಂನ ಮತ್ತೋರ್ವ ಉಗ್ರ ಹಿಮಾಯತ್ ಬೇಗ್ ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಒಟ್ಟಾರೆ ಬಂಧಿತ ಉಗ್ರರು ಹಲವು ಸ್ಫೋಟಕ ಮಾಹಿತಿಗಳನ್ನು ಹೊರಹಾಕುತ್ತಿದ್ದರೂ, ತನಿಖಾಧಿಕಾರಿಗಳ ಹಾದಿತಪ್ಪಿಸುವ ಕೆಲಸವನ್ನು ಕೂಡ ಮಾಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.