ಕೇಜ್ರಿವಾಲ್ ಗೆ ಜೆಡಿಯು ಬೆಂಬಲ

ನವದೆಹಲಿ: ವಾರಣಾಸಿ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು ಬೆಂಬಲ ಘೋಷಿಸಿದ್ದಾರೆ.
ದೇಶದ ಪ್ರಮುಖ ರಾಜಕೀಯ ಕ್ಷೇತ್ರಗಳಲ್ಲಿ ಒಂದಾಗಿರುವ ವಾರಣಾಸಿ ಲೋಕಸಭಾ ಕ್ಷೇತ್ರ ಇದೀಗ ಮತ್ತಷ್ಟು ಕಳೆಕಟ್ಟಿದ್ದು, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧ ಸ್ಪರ್ಧಿಸಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ಜೆಡಿಯು ಪಕ್ಷ ಬೆಂಬಲ ಘೋಷಿಸಿದೆ. ಜೆಡಿಯು ಪಕ್ಷದ ಮುಖ್ಯಸ್ಥ ಶರದ್ ಯಾದವ್ ಅವರೇ ಈ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಾರಣಾಸಿ ಕ್ಷೇತ್ರದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಪರವಾಗಿ ತಮ್ಮ ಪಕ್ಷ ಪ್ರಚಾರ ನಡೆಸಲಿದೆ ಎಂದು ಶರದ್ ಯಾದವ್ ಅವರು ಘೋಷಿಸಿದ್ದಾರೆ. ಆ ಮೂಲಕ ಶತ್ರುವಿನ ಶತ್ರು ಮಿತ್ರನೆಂಬ ಗಾದೆಯನ್ನು ಜೆಡಿಯು ಪಾಲಿಸಲು ಮುಂದಾಗಿದೆ. ಕಳೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಫಲಿತಾಂಶ ನೀಡಿದ್ದ ಅರವಿಂದ್ ಕೇಜ್ರಿವಾಲ್ ಅವರು ಅದೇ ಹುಮ್ಮಸ್ಸಿನಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಸ್ಪರ್ಧಿಸುತ್ತಿರುವ ವಾರಣಾಸಿ ಕ್ಷೇತ್ರದಿಂದ ಕಣಕ್ಕಿಳಿದಿದ್ದರು.
ಪುಣ್ಯಕ್ಷೇತ್ರಗಳ ನೆಲೆವೀಡಾಗಿರುವ ವಾರಣಾಸಿ ಮೋದಿ ಮತ್ತು ಕೇಜ್ರಿವಾಲ್ ಸ್ಪರ್ಧೆಯಿಂದಾಗಿಯೇ ಇಡೀ ದೇಶದ ಗಮನ ಸೆಳೆದಿತ್ತು. ಇದೀಗ ಜೆಡಿಯು ರಂಗಪ್ರವೇಶದಿಂದಾಗಿ ವಾರಣಾಸಿ ಕ್ಷೇತ್ರಕ್ಕೆ ಮತ್ತಷ್ಟು ಕಳೆಕಟ್ಟಿದೆ.
ವಾರಣಾಸಿಯಲ್ಲಿ ಶೇ.18ರಷ್ಟು ಮುಸ್ಲಿಂ ಮತದಾರರಿದ್ದು, ಇವರೇ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಲಿದ್ದಾರೆ. ಹೀಗಾಗಿ ಜೆಡಿಯು ಮತ್ತು ಆಮ್ ಆದ್ಮಿ ಪಕ್ಷಗಳು ಅಲ್ಪ ಸಂಖ್ಯಾತ ಮತಗಳ ಮೇಲೆ ಕಣ್ಣಿಟ್ಟಿದ್ದು, ಹೇಗಾದರೂ ನರೇಂದ್ರ ಮೋದಿ ಅವರನ್ನು ಸೋಲಿಸಲು ಹವಣಿಸುತ್ತಿವೆ. ಅಲ್ಲದೆ ಗುಜರಾತ್ ಗೋದ್ರಾ ಹತ್ಯಾಕಾಂಡವನ್ನು ತಮ್ಮ ಚುನಾವಣಾ ಪ್ರಚಾರದ ಮುಖ್ಯ ಅಂಶವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ.
ಬಿಜೆಪಿಯೊಂದಿಗಿನ ಸತತ 17 ವರ್ಷಗಳ ಮೈತ್ರಿಯನ್ನು ಕಡಿದುಕೊಂಡಿದ್ದ ಜೆಡಿಯು, ಬಿಜೆಪಿಯ ಬದ್ಧವೈರಿ ಎನ್ನುವ ರೀತಿಯಲ್ಲಿ ಆ ಪಕ್ಷದ ವಿರುದ್ಧ ಹರಿಹಾಯ್ದಿತ್ತು. 17 ವರ್ಷಗಳ ಕಾಲ ಸೌಹಾರ್ಧಯುತವಾಗಿದ್ದ ಕಾರ್ಯಕರ್ತರು, ಮೈತ್ರಿ ಕಡಿದು ಬೀಳುತ್ತಿದ್ದಂತೆಯೇ ಬದ್ಧ ಶತ್ರುಗಳಾಗಿ ಮಾರ್ಪಟ್ಟಿದ್ದರು. ಬಿಹಾರದ ಗಲ್ಲಿಗಲ್ಲಿಗಳಲ್ಲಿ ಪರಸ್ಪರ ಬಡಿದಾಡಿಕೊಳ್ಳುವ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದರು. ಆದರೆ ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುವಲ್ಲ, ಯಾರೂ ಶಾಶ್ವತ ಮಿತ್ರರೂ ಅಲ್ಲ ಎಂಬುದನ್ನು ಮತದಾರರು ಮರೆಯಬಾರದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


