ಈಗಿನ ಸುದ್ದಿ

ಹಳ್ಳಿಗಳಿಗೆ ವಿದ್ಯುತ್ ನೀಡಿದರೆ ಅದೇ ದೊಡ್ಡ ಸುದ್ದಿ: ಮೋದಿ

ಹಳ್ಳಿಗಳಿಗೆ ವಿದ್ಯುತ್ ನೀಡಿದರೆ ಅದೇ ದೊಡ್ಡ ಸುದ್ದಿ: ಮೋದಿ
Published On :

ಮೀರತ್: ರಾಜ್ಯ ಸರ್ಕಾರ ಹಳ್ಳಿಗಳಿಗೆ ವಿದ್ಯುತ್ ನೀಡಿದರೆ ಅದೇ ದೊಡ್ಡ ವಿಚಾರ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರಮೋದಿ ಹೇಳಿದರು.

ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆಯುತ್ತಿರುವ ವಿಜಯ ಶಂಖಾನಾದ ರ್ಯಾಲಿಯಲ್ಲಿ ಪಾಲ್ಗೊಂಡಿರುವ ನರೇಂದ್ರ ಮೋದಿ ಅವರು ಆಡಳಿತಾರೂಢ ಸಮಾಜವಾದಿ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. 'ಉತ್ತರ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆ ತೀವ್ರ ಹದಗೆಟ್ಟಿದ್ದು, ಹೆಣ್ಣು ಮಕ್ಕಳಿಗೆ ಯಾವುದೇ ಭದ್ರತೆ ಇಲ್ಲದಂತಾಗಿದೆ. ರಾತ್ರಿಯಾದರೆ ಹೆಣ್ಣು ಮಕ್ಕಳ ಮನೆಯಿಂದ ಹೊರಬರಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ'.

'ಉತ್ತರ ಪ್ರದೇಶವನ್ನು ಹಿಂಸೆಯಿಂದ ಮುಕ್ತಿ ಮಾಡಬೇಕಿದೆ. ಬಿಜೆಪಿ ಶಾಂತಿ ಸದ್ಭಾವನೆಯಲ್ಲಿ ವಿಶ್ವಾಸ ಇಡುತ್ತದೆ. ಉತ್ತರ ಪ್ರದೇಶ ಸಾಕಷ್ಟ ಹಳ್ಳಿಗಳಿಗೆ ಇದುವರೆವಿಗೂ ವಿದ್ಯುತ್ ಸಂಪರ್ಕವೇ ಇಲ್ಲ. ಅಲ್ಲಿನ ಜನ ಇನ್ನೂ ಕತ್ತಲೆಯಲ್ಲಿಯೇ ಜೀವನ ಕಳೆಯುತ್ತಿದ್ದಾರೆ. ಉತ್ತರ ಪ್ರದೇಶ ಸರ್ಕಾರ ಇನ್ನೂ ವಿದ್ಯುತ್ ಸಂಪರ್ಕವನ್ನೇ ಕಲ್ಪಿಸಿಲ್ಲ. ಹಳ್ಳಿಗಳಿಗೆ ವಿದ್ಯುತ್ ನೀಡಿದರೆ ಅದೇ ದೊಡ್ಡ ಸುದ್ದಿ. ಸಮಾಜವಾದಿ ಪಕ್ಷಕ್ಕೆ ರೈತರ ಬಗ್ಗೆ ಎಳ್ಳಷ್ಟು ಕಾಳಜಿಯೂ ಇಲ್ಲ. ಎಸ್‌ಪಿ ಎಂದರೆ ಸಮಾಜವಾದಿ ಪಕ್ಷ ಅಲ್ಲ. ಅದು ಸಮಾಜವಿರೋಧಿ ಪಕ್ಷ' ಎಂದು ಮೋದಿ ಕಿಡಿಕಾರಿದರು.

ಅಂತೆಯೇ 'ಮೀರತ್ ಸ್ವಾತಂತರ್ಯ ಯೋಧರ ಪುಣ್ಯಾ ಭೂಮಿ. ಮೀರತ್ ಸ್ವಾತಂತ್ರ್ಯ ಸಂಗ್ರಾಮದ ಪ್ರೇರಣೆಯ ಸ್ಥಳ. 1857ರ ಸ್ವಾತಂತ್ರ್ಯ ಸಂಗ್ರಾಮ ದೇಶದ ಪ್ರತಿಯೊಬ್ಬ ನಾಗರೀಕನೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಂಗತಿಯಾಗಿದೆ. ಮೀರತ್ ದಯಾನಂದ ಸರಸ್ವತಿ ಅವರ ಪುಣ್ಯ ಭೂಮಿಯಾಗಿದ್ದು, ದಯಾನಂದ ಸರಸ್ವತಿ ಕೂಡ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಸೇವೆ ಸಲ್ಲಿಸಿದ್ದರು. ಕಾಂಗ್ರೆಸ್ ಸರ್ಕಾರ ಬಲಿದಾನಿಗಳಿಗೆ ಯಾವುದೇ ಗೌರವ ನೀಡಿಲ್ಲ. ದೇಶದ ವಿಕಾಸಕ್ಕೆ ಕೇವಲ ಭರವಸೆ ನೀಡಿದರೆ ಸಾಲದು. ಲಕ್ಷ್ಯವನ್ನು ನೀಡಬೇಕು' ಎಂದು ಮೋದಿ ಹೇಳಿದರು.

ಚುನಾವಣೆಗೂ ಮೊದಲೇ ಸೋಲನ್ನೋಪ್ಪಿಕೊಂಡ ಕಾಂಗ್ರೆಸ್: ರಾಜನಾಥ್ ಸಿಂಗ್
ಇದಕ್ಕೂ ಮೊದಲು ಸಭೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು, ಕಾಂಗ್ರೆಸ್ ಪಕ್ಷ ಇಲ್ಲಿಯವರೆಗೂ ತನ್ನ ಪ್ರಧಾನಿ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ. ಆ ಮೂಲಕ ಚುನಾವಣೆಗೂ ಮೊದಲೇ ಕಾಂಗ್ರೆಸ್ ತನ್ನ ಸೋಲನ್ನೊಪ್ಪಿಕೊಂಡಿದೆ. ಬಿಜೆಪಿ ನರೇಂದ್ರಮೋದಿ ಅವರು ಸೇನಾಧಿಪತಿ ಇದ್ದಂತೆ ಅವರೊಡನೆ ಸ್ಪರ್ಧಿಸಲಾಗದೇ ಕಾಂಗ್ರೆಸ್ ಸೋಲನ್ನು ಒಪ್ಪಿಕೊಂಡಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.