ಲೋಕಸಭೆ ಚುನಾವಣೆಗೆ 'ಮಸೂದ್' ಕಂಟಕ..?

ನವದೆಹಲಿ: ಜೈಷ್-ಇ-ಮಹಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್, ಲೋಕಸಭೆ ಚುನಾವಣೆ ವೇಳೆ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯ ನಡೆಸಲು ಯೋಜನೆ ರೂಪಿಸಿದ್ದಾನೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಪಾಕ್ ಆಕ್ರಮಿತ ಕಾಶ್ಮಿರದ ಮುಜಾಫರ್ನಗರದಲ್ಲಿ ಹಮ್ಮಿಕೊಂಡಿದ್ದ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಮಸೂದ್, ಪತ್ರಕರ್ತರೊಬ್ಬರಿಗೆ ದೂರವಾಣಿಯಲ್ಲಿ ಈ ಕುರಿತು ಹೇಳಿಕೆ ನೀಡಿದ್ದನು. 'ನಮ್ಮ ಬಳಿ ಈಗಾಗಲೇ ಸುಮಾರು 313ಕ್ಕೂ ಅಧಿಕ 'ಫಿದಾಯಿನ್' (ಸಾಯಲೆಂದೇ ಬದುಕುತ್ತಿರುವ ಯೋಧ)ಗಳಿದ್ದು, ನಾವು ಒಂದು ಮಾತು ಹೇಳಿದರೆ ಫಿದಾಯಿನ್ಗಳ ಸಂಖ್ಯೆ 3000ಕ್ಕೆ ಏರಿಕೆಯಾಗುತ್ತದೆ' ಎಂದು ಮಸೂದ್ ಹೇಳಿದ್ದಾನೆ.
ಆದರೆ ಇದೀಗ ಮಸೂದ್ ದೂರವಾಣಿ ಸಂಭಾಷಣೆ ಬಹಿರಂಗವಾಗಿದ್ದು, ಗುಪ್ತಚರ ಇಲಾಖೆಯ ಅಧಿಕಾರಿಗಳು ಮಸೂದ್ ಯೋಜನೆಯನ್ನು ಭೇದಿಸಿದ್ದಾರೆ. ಇದಕ್ಕೂ ಮೊದಲು ಅಂದರೆ ಈ ಮಾನವ ಬಾಂಬ್ ದಾಳಿಗೂ ಮುನ್ನ ಗುಜರಾತ್ ಮುಖ್ಯಮಂತ್ರಿ ಮತ್ತು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಕೊಲ್ಲುವುದು ಅವರ ಯೋಜನೆಯಾಗಿದೆ. ಇದಕ್ಕಾಗಿ ಆತ ಸುಮಾರು 40 ಜನರ ಉಗ್ರ ತಂಡವನ್ನು ರಚಿಸಿದ್ದು, ಈ ತಂಡದಲ್ಲಿ ಭಾರತದ ವಿವಿಧೆಡೆ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸೇರಿದ್ದಾರೆ ಎನ್ನಲಾಗುತ್ತಿದೆ.
1994ರಲ್ಲಿ ನಕಲಿ ಪೋರ್ಚುಗೀಸ್ ಪಾಸ್ಪೋರ್ಟ್ ಮೂಲಕ ಅಕ್ರಮವಾಗಿ ಕಾಶ್ಮೀರದಿಂದ ಆಫ್ಗಾನಿಸ್ತಾನಕ್ಕೆ ಪ್ರಯಾಣಿಸುತ್ತಿದ್ದ ಮಸೂದ್ನನ್ನು ಭಯೋತ್ಪಾದನಾ ನಿಗ್ರಹ ದಳದ ವಿಶೇಷ ಅಧಿಕಾರಿಗಳು ಬಂಧಿಸಿದ್ದರು. ನಂತರ 1999ರಲ್ಲಿ ನಡೆದ ಕಂದಾಹಾರ್ ವಿಮಾನ ಅಪರಹರಣ ಪ್ರಕರಣದಲ್ಲಿ ವಿಮಾನದಲ್ಲಿದ್ದ ಸುಮಾರು 155 ಪ್ರಯಾಣಿಕರನ್ನು ಸುರಕ್ಷಿತವಾಗಿ ಬಿಡಿಸಿಕೊಳ್ಳಲು ಮಸೂದ್ ಸೇರಿದಂತೆ ಇತರೆ ಮೂವರು ಉಗ್ರರನ್ನು ಭಾರತ ಸರ್ಕಾರ ಬಿಡುಗಡೆಗೊಳಿಸಿತ್ತು.
ಬಿಡುಗಡೆಯಾದ ನಂತರ ಮಸೂದ್ ಭಾರತದ ವಿರುದ್ಧ ಹೋರಾಡಲು ತನ್ನದೇ ಆದ ಜೈಷ್-ಇ-ಮಹಮದ್ ಉಗ್ರ ಸಂಘಟನೆಯನ್ನು ಸ್ಥಾಪಿಸಿದ್ದು, ಅದರ ಮೂಲಕವೇ ಇದೀಗ ಯುದ್ಧಕ್ಕೆ ಅಣಿಯಾಗುತ್ತಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


