ಈಗಿನ ಸುದ್ದಿ

'ತೆಲಂಗಾಣ' ಕ್ರೆಡಿಟ್ ಗಾಗಿ ಪಕ್ಷಗಳ ಮುಸುಕಿನ ಗುದ್ದಾಟ

'ತೆಲಂಗಾಣ' ಕ್ರೆಡಿಟ್ ಗಾಗಿ ಪಕ್ಷಗಳ ಮುಸುಕಿನ ಗುದ್ದಾಟ
Published On :

ಹೈದರಾಬಾದ್: ಆಂಧ್ರ ವಿಭಜನೆಯ ನಂತರ ಇದೀಗ ಅದರ ಲಾಭಕ್ಕಾಗಿ ರಾಜಕೀಯ ಪಕ್ಷಗಳಲ್ಲಿ ತೀವ್ರ ಪೈಪೋಟಿ ನಡೆಯುತ್ತಿದ್ದು, ಟಿಆರ್ ಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ನೂತನ ತೆಲಂಗಾಣ ರಾಜ್ಯ ರಚನೆಯ ಕೀರ್ತಿ ತಮಗೇ ಸಲ್ಲಬೇಕು ಎಂದು ಹೇಳಿಕೊಳ್ಳುತ್ತಿವೆ.

ಸಂಸತ್ತಿನ ರಾಜ್ಯಸಭೆಯಲ್ಲಿ ತೆಲಂಗಾಣ ಮಸೂದೆ ಅಂಗೀಕಾರವಾಗಿದ್ದು, ದೇಶದ 29ನೇ ರಾಜ್ಯವಾಗಿ ತೆಲಂಗಾಣ ರಾಜ್ಯ ಉದಯವಾಗಿದೆ. ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಇದನ್ನೇ ತಮ್ಮ ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳಲು ಮುಂದಾಗಿವೆ. ಪ್ರತ್ಯೇಕ ರಾಜ್ಯ ರಚನೆಗಾಗಿಯೇ ಉದಯವಾದ ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷವು ತನ್ನಿಂದಲೇ ತೆಲಂಗಾಣ ರಚನೆಯಾಯಿತು ಎಂದು ಬೀಗುತ್ತಿದ್ದರೆ, ಇತ್ತ ಕಾಂಗ್ರೆಸ್ ಪಕ್ಷಕೂಡ ತಾನೇ ತೆಲಂಗಾಣ ರಾಜ್ಯವನ್ನು ರಚನೆ ಮಾಡಿದ್ದು ತಾನೇ ಎಂದು ಬೀಗುತ್ತಿದೆ. ಈ ನಡುವೆ ಬಿಜೆಪಿ ಪಕ್ಷ ಕೂಡ ತೆಲಂಗಾಣ ರಾಜ್ಯರಚನೆ ಪ್ರಕ್ರಿಯೆಯಲ್ಲಿ ತನ್ನದು ಪ್ರಮುಖ ಪಾತ್ರವಿದೆ ಎಂದು ಹೇಳಿಕೊಳ್ಳುತ್ತಿದೆ.

ಲೋಕಕಸಭೆ ಮತ್ತು ರಾಜ್ಯಸಭೆಯಲ್ಲಿ ಬಿಜೆಪಿಯ ಬೆಂಬಲವಿರದಿದ್ದರೆ ತೆಲಂಗಾಣ ಮಸೂದೆ ಅಂಗೀಕಾರವಾಗಲು ಸಾಧ್ಯವೇ ಇರಲಿಲ್ಲ. ತೆಲಂಗಾಣ ಭಾಗದ ಪ್ರತಿಯೊಬ್ಬ ನಾಗರೀಕನೂ ಇದನ್ನು ಮನಗಾಣಬೇಕು. ತೆಲಂಗಾಣ ರಾಜ್ಯ ರಚನೆಯಲ್ಲಿ ಬಿಜೆಪಿ ಶ್ರಮ ಕೂಡ ಇದೆ ಎಂದು ಬಿಜೆಪಿ ಮುಖಂಡರೊಬ್ಬರು ಇತ್ತೀಚೆಗೆ ಖಾಸಗಿ ಸುದ್ದಿವಾಹಿನಿಯಲ್ಲಿ ಹೇಳಿಕೆ ನೀಡಿದ್ದರು.

ತೆಲಂಗಾಣ ಭಾಗದಲ್ಲಿಯಂತೂ ಸೋನಿಯಾ ಗಾಂಧಿ ಅವರ ದೇವಾಲಯವನ್ನೇ ನಿರ್ಮಿಸುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಸೀಮಾಂಧ್ರ ಭಾಗದ ಓರ್ವ ಕಾರ್ಯಕರ್ತ ಹೇಳುವಂತೆ 'ಸೋನಿಯಾ ಗಾಂಧಿ ಅವರು ನಡೆದಾಡುವ ದೇವಂತೆ. ತೆಲಂಗಾಣ ರಾಜ್ಯ ರಚನೆಗಾಗಿ ಅವರು ಆಂಧ್ರಪ್ರದೇಶದ ಮತದಾರರನ್ನೇ ತ್ಯಾಗ ಮಾಡಿದ್ದಾರೆ' ಎಂದು ಹೇಳಿದ್ದಾನೆ. ಅಂತೆಯೇ ನ್ಯೂಯಾರ್ಕ್ನಲ್ಲಿ ವಾಸ ಮಾಡುತ್ತಿರುವ ವರಂಗಲ್ ಪ್ರಾಂತ್ಯದ ಅನಿವಾಸಿ ಭಾರತೀಯನೊಬ್ಬ ಸಾಮಾಜಿಕ ಜಾಲತಾಣದಲ್ಲಿ 'ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಟಿ ಆರ್ ಎಸ್ ಮುಖಂಡ ಕೆ.ಚಂದ್ರಶೇಖರ ರಾವ್ ಮತ್ತು ಬಿಜೆಪಿ ಮುಖಂಡೆ ಸುಷ್ಮಾ ಸ್ವರಾಜ್ ಅವರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ತ್ರಿಮೂರ್ತಿಗಳು ನಮ್ಮ ಬಹುವರ್ಷದ ಕನಸನ್ನು ನನಸು ಮಾಡಿದ್ದಾರೆ' ಎಂದು ಬರೆದಿದ್ದಾರೆ. ಆ ಮೂಲಕ ತೆಲಂಗಾಣ ರಚನೆ ಕೀರ್ತಿಯನ್ನು ಅವರು ಮೂರು ಪಕ್ಷಗಳಿಗೆ ನೀಡಿದ್ದಾರೆ.

ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟ ಕೆಸಿಆರ್
ಇತ್ತ ಟಿಆರ್ ಎಸ್ ಮುಖಂಡ ಕೆ.ಚಂದ್ರಶೇಖರ ರಾವ್ ಅವರು ತೆಲಂಗಾಣ ರಾಜ್ಯರಚನೆ ಶ್ರೇಯವನ್ನು ತಮ್ಮ ಪಕ್ಷದ ಶ್ರೇಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಆ ಮೂಲಕ ನೂತನ ತೆಲಂಗಾಣ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಬೇಕು ಎನ್ನುವ ಮಹದಾಸೆಯೊಂದಿಗೆ ತಮ್ಮ ಕಾರ್ಯಕರ್ತರಿಂದ ಪರೋಕ್ಷವಾಗಿ ಪ್ರಚಾರ ಮಾಡಿಸುತ್ತಿದ್ದಾರೆ. ಇದಕ್ಕಾಗಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಓಲೈಸುವ ಕಾರ್ಯಕ್ಕೂ ಕೆಸಿಆರ್ ಮುಂದಾಗಿದ್ದು, ತಮ್ಮ ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷವನ್ನು ಕಾಂಗ್ರೆಸ್ನೊಂದಿಗೆ ವಿಲೀನ ಮಾಡಲು ಸಹ ಅವರು ಸಿದ್ಧರಿದ್ದಾರೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆ ಪ್ರತಿಯೊಂದು ರಾಜಕೀಯ ಪಕ್ಷವೂ ತೆಲಂಗಾಣ ರಚನೆಯ ಕೀರ್ತಿಯನ್ನು ತನ್ನ ರಾಜಕೀಯ ಸ್ವಹಿತಾಸಕ್ತಿಗೆ ಬಳಸಿಕೊಳ್ಳುತ್ತಿದೆ. ಇಲ್ಲಿ ಮೇಲೆ ಹೇಳಿದ ಪ್ರತಿಯೊಬ್ಬ ವ್ಯಕ್ತಿಯೂ ನೇರವಾಗಿ ಅಥವಾ ಪರೋಕ್ಷವಾಗಿ ರಾಜಕೀಯ ಪಕ್ಷವೊಂದನ್ನು ಪ್ರತಿನಿಧಿಸುತ್ತಿದ್ದಾನೆ. ಆದರೆ ಇಲ್ಲಿ ಸತ್ಯಾಂಶವೆಂದರೆ ತೆಲಂಗಾಣ ರಾಜ್ಯ ರಚನೆಯಾಗಿದ್ದು, ಯಾವುದೇ ರಾಜಕೀಯ ಪಕ್ಷಗಳಿಂದಲ್ಲ. ತೆಲಂಗಾಣ ಭಾಗದ ಜನರ ಮತ್ತು ವಿಧ್ಯಾರ್ಥಿಗಳ ಬಲಿದಾನ ಮತ್ತು ಪ್ರತ್ಯೇಕ ರಾಜ್ಯ ಪಡೆಯಲೇಬೇಕೆನ್ನುವ ಆ ಭಾಗದ ಮಹತ್ವಾಕಾಂಕ್ಷೆಯಿಂದಷ್ಟೇ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.